ಸೋಮವಾರ, ಏಪ್ರಿಲ್ 19, 2021
29 °C

ಟೆಲಿಕಾಂ ಲೈಸೆನ್ಸ್: ಸುಪ್ರೀಂಕೋರ್ಟ್ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾಜಿ ಕೇಂದ್ರ ಸಚಿವ ಎ. ರಾಜಾ ಅಧಿಕಾರಾವಧಿಯಲ್ಲಿ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡು ಗುಪ್ತಚರ ಸಂಸ್ಥೆಗಳ ವರದಿಗಳಿಗೆ ವ್ಯತಿರಿಕ್ತವಾಗಿ ಟೆಲಿಕಾಂ ಕಂಪೆನಿಗಳಿಗೆ ಲೈಸೆನ್ಸ್ ಮಂಜೂರು ಮಾಡಿರುವ ಸಾಧ್ಯತೆಯ ಬಗ್ಗೆ ಸುಪ್ರೀಂಕೋರ್ಟ್ ಬುಧವಾರ ಕಳವಳ ವ್ಯಕ್ತಪಡಿಸಿದೆ.“ಮುಖ್ಯವಾಗಿ ಎರಡು ಪ್ರಕರಣಗಳಲ್ಲಿ ಭದ್ರತಾ ದೃಷ್ಟಿಕೋನವನ್ನು ತನಿಖೆ ಮಾಡಲಾಗುತ್ತಿದೆ. ಕೆಲವು ಟೆಲಿಕಾಂ ಕಂಪೆನಿಗಳ ವಿರುದ್ಧ ಗೃಹ ಸಚಿವಾಲಯ ಎತ್ತಿರುವ ಆಕ್ಷೇಪಗಳು ಗಂಭೀರವಾಗಿವೆ. ಈ ಕಂಪೆನಿಗಳು ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಬೆದರಿಕೆಯೊಡ್ಡಿವೆ. ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿರುವುದಕ್ಕೆ ಭಾರಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಪಡೆಯಲಾಗಿದೆ” ಎಂದು ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ಎ.ಜಿ. ಗಂಗೂಲಿ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.ನ್ಯಾಯಪೀಠವು ಯಾವುದೇ ಕಂಪೆನಿಗಳ ಹೆಸರನ್ನು ಬಹಿರಂಗಪಡಿಸದಿದ್ದರೂ. ಗೃಹ ಸಚಿವಾಲಯ ಆಕ್ಷೇಪ ಸೂಚಿಸಿರುವ ಸೇವಾ ಪೂರೈಕೆದಾರರಾದ ಎಟಿಸಲಾಟ್ ಡಿಬಿ ಟೆಲಿಕಾಂ ಮತ್ತು ಎಸ್-ಟೆಲ್ ಬಗ್ಗೆ ಪ್ರಸ್ತಾಪಿಸಿದೆ.‘ಇದಕ್ಕೆ ಭದ್ರತಾ ದೃಷ್ಟಿಕೋನವಿದ್ದು ಇದು ನಿಜವಾದಲ್ಲಿ ಭದ್ರತಾ ಅಂಶಗಳನ್ನು ರಾಜಿ ಮಾಡಿಕೊಂಡಿರುವುದು ಖಚಿತವಾಗುತ್ತದೆ. ಈ ವಿಷಯಗಳಲ್ಲಿ ನಾವು ಪರಿಣತರಲ್ಲ. ಆದರೆ ಈ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ದೇಶದ ಸೇನಾ ಕಾರ್ಯನಿರ್ವಹಣೆಯನ್ನು ಅವು ತಿಳಿಯಲಿವೆ’ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.ರಾಜಾ ಅಧಿಕಾರಾವಧಿಯಲ್ಲಿ ಸೇವಾ ಪೂರೈಕೆದಾರರಿಗೆ ಮಂಜೂರು ಮಾಡಿರುವ ಎಲ್ಲ ಲೈಸೆನ್ಸ್‌ಗಳನ್ನು ರದ್ದು ಪಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಹಲವು ನಾಗರಿಕ ಸಂಸ್ಥೆಗಳು ಮತ್ತು ಗಣ್ಯರು ಸಲ್ಲಿಸಿರುವ ಅರ್ಜಿಗಳ ಬಗ್ಗೆ ನ್ಯಾಯಪೀಠ ದಿನವಿಡೀ ವಿಚಾರಣೆ ನಡೆಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.