`ಟೆಸ್ಟ್ ಆಡುವ ಕನಸು ಸಾಕಾರಗೊಂಡಿದೆ'

7
ಸಚಿನ್ ಕ್ಯಾಪ್ ನೀಡಿದರು: ಜಡೇಜಾ

`ಟೆಸ್ಟ್ ಆಡುವ ಕನಸು ಸಾಕಾರಗೊಂಡಿದೆ'

Published:
Updated:

ನಾಗಪುರ: `ಕ್ರಿಕೆಟ್ ಆಡುವ ಪ್ರತಿಯೊಬ್ಬರ ಕನಸು ದೇಶವನ್ನು ಪ್ರತಿನಿಧಿಸಬೇಕು ಎಂಬುದು. ಆ ನನ್ನ ಕನಸು ಈಗ ಸಾಕಾರಗೊಂಡಿದೆ. ಸಚಿನ್ ಅವರಿಂದ ಟೆಸ್ಟ್ ಕ್ಯಾಪ್ ಪಡೆದ ಕ್ಷಣ ಅವಿಸ್ಮರಣೀಯ. ಅವರು ನನಗೆ ಏಕದಿನ ಕ್ಯಾಪ್ ಕೂಡ ನೀಡಿದ್ದರು' ಎಂದು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಆಲ್‌ರೌಂಡರ್ ರವೀಂದ್ರ ಜಡೇಜಾ ನುಡಿದಿದ್ದಾರೆ.`ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ವಿಷಯ ಪ್ರಕಟಿಸಿದಾಗ ನಾನು ರಣಜಿ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದೆ. ಸಹ ಆಟಗಾರರೊಬ್ಬರು ನನಗೆ ಈ ಖುಷಿಯ ವಿಷಯ ಮುಟ್ಟಿಸಿದರು. ಮೊದಲ ತಮಾಷೆ ಮಾಡುತ್ತಿದ್ದಾರೆ ಎನಿಸಿತು. ಸ್ಥಾನ ಸಿಕ್ಕಿರುವುದು ನಿಜ ಎಂಬುದು ಗೊತ್ತಾದಾಗ ತುಂಬಾ ಸಂತೋಷವಾಯಿತು' ಎಂದು ಅವರು ಹೇಳಿದರು.`ಈ ಟೆಸ್ಟ್‌ನಲ್ಲಿ ಆಡಲು ಕಣಕ್ಕಿಳಿದಾಗ ಖುಷಿಯೂ ಇತ್ತು, ಜೊತೆಗೆ ಸ್ವಲ್ಪ ಒತ್ತಡಕ್ಕೂ ಒಳಗಾದೆ. ಆದರೆ ಹಿರಿಯ ಆಟಗಾರರ ಪ್ರೋತ್ಸಾಹದ ಮಾತುಗಳು ಸ್ಫೂರ್ತಿ ನೀಡಿದವು. ಟೆಸ್ಟ್‌ನಲ್ಲಿ ಲಭಿಸಿದ ಮೊದಲ ವಿಕೆಟ್‌ನ ಆ ಕ್ಷಣವನ್ನು ಮರೆಯಲಾರೆ' ಎಂದು ರಾಜ್‌ಕೋಟ್‌ನ ಆಲ್‌ರೌಂಡರ್ ಜಡೇಜಾ ತಿಳಿಸಿದರು.

ಇಲ್ಲಿನ ಪಿಚ್ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಈ ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ತಿರುವು ಲಭಿಸುತ್ತಿಲ್ಲ.ವೇಗಿಗಳಿಗೂ ನೆರವು ಸಿಗುತ್ತಿಲ್ಲ. ಈ ಪಿಚ್‌ಗಿಂತ ರಣಜಿ ಕ್ರಿಕೆಟ್ ಆಡುವ ಪಿಚ್‌ಗಳು ಚೆನ್ನಾಗಿರುತ್ತವೆ. ಹಾಗಾಗಿ ನಾವು ರನ್ ನಿಯಂತ್ರಿಸುವ ಮೂಲಕ ಒತ್ತಡ ಹೇರಲು ಪ್ರಯತ್ನಿಸಿದೆವು. ಪ್ರವಾಸಿ ತಂಡವನ್ನು ನಾವು 300 ರನ್‌ನೊಳಗೆ ನಿಯಂತ್ರಿಸಬೇಕು. ನಾಲ್ಕನೇ ದಿನ ಈ ಪಿಚ್‌ನಲ್ಲಿ ಬ್ಯಾಟ್ ಮಾಡುವುದು ಕಷ್ಟವಾಗಲಿದೆ' ಎಂದರು.ಯುವರಾಜ್ ಸಿಂಗ್ ಬದಲಿಗೆ ಸ್ಥಾನ ಪಡೆದಿರುವ ಜಡೇಜಾ ರಣಜಿ ಕ್ರಿಕೆಟ್‌ನಲ್ಲಿ 13 ತಿಂಗಳ ಅವಧಿಯಲ್ಲಿ ಮೂರು ತ್ರಿಶತಕ ಬಾರಿಸಿದ್ದಾರೆ. ಆ ಸಾಧನೆ ತಂಡದಲ್ಲಿ ಸ್ಥಾನ ಸಿಗಲು ಪ್ರಮುಖ ಕಾರಣವಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry