ಟೇಬಲ್ ಟೆನಿಸ್: ಉದಯೋನ್ಮುಖರ ಪಾರುಪತ್ಯ

7

ಟೇಬಲ್ ಟೆನಿಸ್: ಉದಯೋನ್ಮುಖರ ಪಾರುಪತ್ಯ

Published:
Updated:

ಭಾರತೀಯ ಟೇಬಲ್ ಟೆನಿಸ್ ಕ್ಷೇತ್ರದಲ್ಲಿ ಈಗ ಹೊಸ ನೀರು ಹರಿವ ಕಾಲ. ಉದಯೋನ್ಮುಖ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ  ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪದಕಗಳ ಬೇಟೆಯಾಡುತ್ತಿದ್ದಾರೆ. ಸೌಮ್ಯಜಿತ್ ಘೋಷ್, ಅಭಿಷೇಕ್ ಯಾದವ್, ಅಂಕಿತಾ ದಾಸ್, ಮನಿಕಾ ಭಾತ್ರ, ನೇಹಾ  ಅಗರವಾಲ್.... ಇವರೆಲ್ಲ ಟೇಬಲ್ ಟೆನಿಸ್ ಕ್ಷೇತ್ರದ ಪ್ರತಿಭಾನ್ವಿತ ಮುಖಗಳು.

ಕಳೆದ ವರ್ಷ ನಡೆದ ಲಂಡನ್ ಒಲಿಂಪಿಕ್ಸ್‌ನಲ್ಲಿ ಘೋಷ್ ಮತ್ತು ಅಂಕಿತಾ ಭಾರತವನ್ನು ಪ್ರತಿನಿಧಿಸಿದ್ದರೆ, ಅಭಿಷೇಕ್ ಇದೇ ತಿಂಗಳು ಚೀನಾದಲ್ಲಿ ನಡೆದ ಯುವ ಕ್ರೀಡಾಕೂಟದಲ್ಲಿ ಕಂಚು ಪದಕ ಗೆಲ್ಲುವ ಮೂಲಕ ಭರವಸೆ ಮೂಡಿಸಿದವರು. ಮನಿಕಾ ಫ್ರೆಂಚ್ ಓಪನ್ ಗೆಲ್ಲುವ ಮೂಲಕ ಭರವಸೆ ಆಟಗಾರ್ತಿಯಾಗಿ ಹೊರಹೊಮ್ಮಿದವರು. ಈ ಎಲ್ಲ ಆಟಗಾರ-ಆಟಗಾರ್ತಿಯರು ಹದಿನೆಂಟು-ಇಪ್ಪತ್ತರ ಆಸುಪಾಸಿನ ವಯಸ್ಸಿನವರು ಎಂಬುದು ವಿಶೇಷ.ಇದೇ ಆಗಸ್ಟ್ 22ರಿಂದ 27ರವರೆಗೆ ಧಾರವಾಡದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ಮಟ್ಟದ 43ನೇ ಅಂತರ ಸಂಸ್ಥೆಗಳ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್ ಈ ಯುವ ಪ್ರತಿಭೆಗಳ ಆರ್ಭಟಕ್ಕೆ ವೇದಿಕೆಯಾಯಿತು. ಹಿರಿಯ ಆಟಗಾರರರಿಗೆ ಮನೆಯ ಹಾದಿ ತೋರಿಸುತ್ತ ಮುನ್ನಡೆದ ಆಟಗಾರರು ಪ್ರಶಸ್ತಿ ಗೆಲ್ಲುವಲ್ಲೂ ಯಶಸ್ಸು ಕಂಡರು.ತುಸು ಕುಳ್ಳಗಿರುವ, ದುಂಡನೆಯ ದೇಹದ ಸೌಮ್ಯಜಿತ್ ಘೋಷ್ ಮುಂದೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರ ಗೆಲ್ಲುವ ಕನಸು ಕಟ್ಟಿಕೊಂಡಿರುವವರು. ಕನಸಿನ ಸಾಕಾರಕ್ಕೆ ನಡೆಸಿದ ಪೂರ್ವಸಿದ್ಧತೆಯಂತೆ ಇತ್ತು ಚಾಂಪಿಯನ್‌ಷಿಪ್‌ನಲ್ಲಿ ಅವರು ನೀಡಿದ ಪ್ರದರ್ಶನ. `ರಾಷ್ಟ್ರೀಯ ಚಾಂಪಿಯನ್ ಆಗಲಿಕ್ಕಾಗಿ ಸಾಕಷ್ಟು ಬೆವರು ಹರಿಸಿದ್ದೇನೆ. ಅಲ್ಲಿಂದ ಉತ್ತಮ ಫಾರ್ಮ್ ನಲ್ಲಿದ್ದೇನೆ. ಎದುರಾಳಿ ಯಾರೆಂಬುದು ಮುಖ್ಯವಲ್ಲ.

ನನ್ನ ಆಟ ಉತ್ತಮವಾಗಿ ಮೂಡಿಬರಬೇಕು ಎಂದು ನಂಬಿದವನು ನಾನು. ಅದನ್ನೇ ಪಾಲಿಸುತ್ತಾ ಬಂದಿದ್ದೇನೆ. ಮುಂಬರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಡಿಮೆ ಎಂದರೂ ಎರಡು ಚಿನ್ನ ಗೆಲ್ಲಬೇಕು ಎಂಬ ಗುರಿ ನನ್ನದು. ಅಲ್ಲಿಂದ ಒಲಿಂಪಿಕ್ಸ್‌ಗೆ ಗಮನ ಹರಿಸುತ್ತೇನೆ..' ಹೀಗೆ ಭವಿಷ್ಯದ ಕನಸು ಬಿಚ್ಚಿಟ್ಟರು ಪಶ್ಚಿಮ ಬಂಗಾಳದ ಪ್ರತಿಭೆ ಘೋಷ್.ಉತ್ತರ ಪ್ರದೇಶದ ಕಾನ್ಪುರದವರಾದ ಅಭಿಷೇಕ್ ಯಾದವ್ ಅವರದ್ದೂ ಇದೇ ಬಯಕೆ. ಇಂದಲ್ಲ ನಾಳೆ ಏಷ್ಯನ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಗೆದ್ದೇ ತೀರುವ ಉತ್ಸಾಹ ಅವರದ್ದು. 18 ವರ್ಷದ ಒಳಗಿನವರ ವಿಭಾಗದಲ್ಲಿ ಯಾದವ್ ಸದ್ಯ ದೇಶದ ಅಗ್ರ ರ‍್ಯಾಂಕ್ ನ ಆಟಗಾರ. ಜೂನಿಯರ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಕೂಡ.`2003-04ರಿಂದ ಟೇಬಲ್ ಟೆನಿಸ್ ಆಡುತ್ತಿದ್ದೇನೆ. ಎತ್ತರಕ್ಕೆ ತಲುಪಬೇಕೆಂಬ ಕನಸು ಇತ್ತು. ಸದ್ಯ ಸಿಂಗಲ್ಸ್, ಡಬಲ್ಸ್ ಎರಡರಲ್ಲೂ ಅಗ್ರಸ್ಥಾನ ದೊರಕಿದೆ. ಆದರೆ ಇಷ್ಟಕ್ಕೆ ನನ್ನ ಕನಸು ನಿಲ್ಲದು. ಒಲಿಂಪಿಕ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದು ನನ್ನ ಮುಂದಿನ ಗುರಿ' ಎಂದು ಅಭಿ ಕನಸು ತೆರೆದಿಟ್ಟರು. `ಇತ್ತೀಚಿನ ದಿನಗಳಲ್ಲಿ ಟೇಬಲ್ ಟೆನಿಸ್‌ನಲ್ಲಿ ಯುವಜನರೇ ಹೆಚ್ಚು ಮಿಂಚುತ್ತಿದ್ದೀರಲ್ಲಾ' ಎಂಬ ಪ್ರಶ್ನೆಗೆ ಅಂಕಿತಾ ದಾಸ್ ` ಯಾವುದೇ ಆಟವಿರಲಿ, ಅಲ್ಲಿ ಫಿಟ್-ಫಾರ್ಮ್‌ನಲ್ಲಿ ಇದ್ದವರಿಗೆ ಹೆಚ್ಚು ಅವಕಾಶ.

ಆಕ್ರಮಣಕಾರಿ ಆಟಕ್ಕೆ ಗೆಲುವು ಸಿಗುವುದು ಜಾಸ್ತಿ. ಯುವಜನರಲ್ಲಿ ಈ ಎರಡೂ ಅಂಶಗಳು ಹೆಚ್ಚಿರುತ್ತವೆ. ಇಂದಿನ ಯಶಸ್ಸಿಗೆ ಅದೇ ಕಾರಣವಿರಬಹುದು'. ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಸಿಲಿಗುರಿಯವರಾದ 20 ವರ್ಷದ ಅಂಕಿತಾ ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್. ವಿಶ್ವ ಜೂನಿಯರ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್, ದಕ್ಷಿಣ ಆಫ್ರಿಕಾ, ಕೆನಡಾ, ನ್ಯೂಜಿಲೆಂಡ್ ಹಾಗೂ ಈಚೆಗೆ ನಡೆದ ಫ್ರೆಂಚ್ ಓಪನ್‌ನ ಜೂನಿಯರ್ ವಿಭಾಗದಲ್ಲಿ ಅವರು ಪಾಲ್ಗೊಂಡಿದ್ದಾರೆ.

ಆದರೆ ಸೀನಿಯರ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಬೇಕೆನ್ನುವ ಅವರ ಕನಸು ಇನ್ನೂ ಈಡೇರಿಲ್ಲ. `ಸೀನಿಯರ್ ಚಾಂಪಿಯನ್ ಪಟ್ಟಕ್ಕಾಗಿ ಮೂರು ವರ್ಷಗಳಿಂದ ಸಿದ್ಧತೆ ನಡೆಸುತ್ತಲೇ ಬಂದಿದ್ದೇನೆ. ಕಳೆದೆರಡು ವರ್ಷಗಳಲ್ಲಿ ಸೆಮಿಫೈನಲ್ ತನಕ ಬಂದು ಮುಗ್ಗರಿಸಿದ್ದೇನೆ. ಹಾಗೆಂದು ನನ್ನ ಆತ್ಮವಿಶ್ವಾಸ ಕಳೆದುಕೊಳ್ಳಲಾರೆ. ಖಂಡಿತ ಪ್ರಯತ್ನ ಮಾಡುತ್ತೇನೆ' ಎಂದು ಅವರು ಆತ್ಮವಿಶ್ವಾಸದಿಂದ ನುಡಿದರು.ಅಂಕಿತಾರಷ್ಟೇ ಗಮನ ಸೆಳೆಯುವ ಮತ್ತಿಬ್ಬರು ಆಟಗಾರ್ತಿಯರು ದೆಹಲಿಯ ಮನಿಕಾ ಭಾತ್ರ ಮತ್ತು ನೇಹಾ ಅಗರ್‌ವಾಲ್.  ಪೆಟ್ರೋಲಿಯಂ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ ತಂಡವನ್ನು ಪ್ರತಿನಿಧಿಸುವ ಈ ಆಟಗಾರ್ತಿಯರು ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನದ ಮೂಲಕ ಭರವಸೆ ಮೂಡಿಸಿದರು.

ಆಟದಲ್ಲಿ ಅನುಭವದ ಜೊತೆಗೆ ವಯಸ್ಸೂ ಮುಖ್ಯ.

ಕಿರಿಯರಿಗೆ ಅವಕಾಶ ಜಾಸ್ತಿ ಎಂಬುದು ಮಹಿಳಾ ವಿಭಾಗದ ಚಾಂಪಿಯನ್ ಕೆ. ಶಾಮಿನಿ ಅಭಿಪ್ರಾಯವಾಗಿತ್ತು. ಮಹಿಳೆಯರ ಸಿಂಗಲ್ಸ್‌ನಲ್ಲಿ ಏಳು ಬಾರಿಯ ರಾಷ್ಟ್ರೀಯ ಚಾಂಪಿಯನ್ ಪೌಲಮಿ ಘಟಕ್‌ರನ್ನು ಮಣಿಸಿದ ಬಳಿಕ ಶಾಮಿನಿ `ನಾನು, ಪೌಲಮಿ ಹತ್ತು ವರ್ಷದಿಂದ ಒಟ್ಟಿಗೆ ಆಡುತ್ತಿದ್ದೇವೆ. ವರ್ಷಗಳ ಹಿಂದೆ ಆಕೆ ಚಾಂಪಿಯನ್. ನಾನಾಗ ಇನ್ನೂ ಚಿಕ್ಕವಳಿದ್ದೆ. ಈಗ ನನ್ನ ಸರದಿ' ಎಂದು ಪ್ರತಿಕ್ರಿಯಿಸಿದ್ದರು.

ಟಿ.ಟಿ. ಅಂಗಳದಲ್ಲಿ ದಂಪತಿ

ಧಾರವಾಡದಲ್ಲಿ ನಡೆದ ಅಂತರ ಸಂಸ್ಥೆಗಳ ಟೇಬಲ್ ಟೆನಿಸ್ ಟೂರ್ನಿ ಕೆಲವು ವಿಶೇಷಗಳಿಗೆ ಸಾಕ್ಷಿಯಾಯಿತು. ಟೂರ್ನಿಯುದ್ದಕ್ಕೂ ಗಮನ ಸೆಳೆದದ್ದು ಸೌಮ್ಯದೀಪ್ ರಾಯ್-ಪೌಲಮಿ ದಂಪತಿ ಜೋಡಿ. ಈ ಇಬ್ಬರೂ ಪ್ರಸ್ತುತ ರಾಷ್ಟ್ರೀಯ ರ‍್ಯಾಂಕಿಂಗನಲ್ಲಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇಬ್ಬರೂ ಅರ್ಜುನ ಪ್ರಶಸ್ತಿ ಪುರಸ್ಕೃತರು ಹೌದು.ಎರಡು ವರ್ಷಗಳ ಹಿಂದೆ ವಿವಾಹವಾಗಿರುವ ರಾಯ್-ಪೌಲಮಿ ಪೆಟ್ರೋಲಿಯಂ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ ತಂಡವನ್ನು  ಪ್ರತಿನಿಧಿಸುತ್ತಿದ್ದಾರೆ. ಪಂದ್ಯದ ಸಂದರ್ಭ ರಾಯ್ ತಮ್ಮ ಮಡದಿಗೆ ಸಲಹೆ ನೀಡುತ್ತಿದ್ದರೆ ನೋಡುಗರ ಕಣ್ಣೆಲ್ಲ ಈ ದಂಪತಿ ಮೇಲೆಯೇ ಇತ್ತು!

ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಸುಬಾಜಿತ್ ಸಹಾ-ನಂದಿತಾ ದಂಪತಿ ಜೊತೆಯಾಗಿ ಆಡಿ ಗಮನ ಸೆಳೆದರು.-ಆರ್.ಜಿತೇಂದ್ರ.  ಚಿತ್ರಗಳು: ಬಿ.ಎಂ. ಕೇದಾರನಾಥ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry