ಬುಧವಾರ, ಮೇ 12, 2021
20 °C

ಟೈಟಾನಿಕ್ ದುರಂತಕ್ಕೆ ನೂರು ವರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಲಿಫಾಕ್ಸ್ (ಕೆನಡಾ), (ಎಎಫ್‌ಪಿ): ಕೆಲವರಿಗೆ ಕರಾಳ ನೆನಪು... ಮತ್ತೆ ಕೆಲವರಿಗೆ ಅಧ್ಯಯನ ವಸ್ತು...!

ಹೀಗೆ ಕಲಾವಿದರು, ವಿಜ್ಞಾನಿಗಳು, ಇತಿಹಾಸಕಾರರು ಹಾಗೂ ಸಾರ್ವಜನಿಕರ ತೀವ್ರ ಕುತೂಹಲಕ್ಕೆ ಕಾರಣವಾದ ಟೈಟಾನಿಕ್ ಹಡಗು ದುರಂತಕ್ಕೆ ಈಗ ಶತಮಾನ.
ಮಹಿಳೆಯರೇ ಹೆಚ್ಚು

ಲಂಡನ್ (ಐಎಎನ್‌ಎಸ್): ಬಹುಶಃ ಟೈಟಾನಿಕ್ ದುರಂತ ಪ್ರಕರಣದಲ್ಲಿ ಮಾತ್ರ ಹೀಗಾಗಿರಬೇಕು. ಮುಳುಗುತ್ತಿದ್ದ ಹಡಗಿನಲ್ಲಿದ್ದ ಪುರುಷರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಮೊದಲು ಮಹಿಳೆಯರು ಹಾಗೂ ಮಕ್ಕಳನ್ನು ರಕ್ಷಿಸಿದ್ದರು.

1852 ರಿಂದ 2011ರವರೆಗೆ ನಡೆದ 18 ಹಡಗು ದುರಂತ ಪ್ರಕರಣಗಳಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇನ್ನು ಬದುಕುಳಿದವರಲ್ಲಿ ಶೇ 17.8 ರಷ್ಟು ಮಹಿಳೆಯರು ಹಾಗೂ ಶೇ 34.5 ರಷ್ಟು ಪುರುಷರು ಇದ್ದಾರೆ. ಆದರೆ ಟೈಟಾನಿಕ್ ದುರಂತದಲ್ಲಿ ಶೇ 70ರಷ್ಟು ಮಹಿಳೆಯರು ಹಾಗೂ ಶೇ 20ರಷ್ಟು ಪುರುಷರು ಬದುಕುಳಿದಿದ್ದರು ಎಂದು ಅರ್ಥಶಾಸ್ತ್ರಜ್ಞರಾದ ಮೈಕೆಲ್ ಎಲಿಂಡಲ್ ಹಾಗೂ ಆಸ್ಕರ್ ಎರಿಕ್ಸನ್ ಅವರು ಹೇಳುತ್ತಾರೆ.

ಟೈಟಾನಿಕ್ ಸ್ಮರಣಾರ್ಥ ನಿರ್ಮಿಸಿರುವ ಅಮೆರಿಕ ಹಾಗೂ ಬ್ರಿಟನ್‌ನ ಹಡಗುಗಳು ಟೈಟಾನಿಕ್ ಜಲಸಮಾಧಿಯಾದ ಸ್ಥಳಕ್ಕೆ ಯಾನ ಬೆಳೆಸಿವೆ.ಬ್ರಿಟನ್, ಕೆನಡಾ, ಐರ್ಲೆಂಡ್, ಅಮೆರಿಕದಲ್ಲಿ ಟೈಟಾನಿಕ್ ಸ್ಮರಣಾರ್ಥ ನಡೆದ ಕಾರ್ಯಕ್ರಮಗಳಿಗೆ ಕಲಾವಿದರು, ವಿಜ್ಞಾನಿಗಳು ಸಾಕ್ಷಿಯಾದರು.ಬೆಲ್‌ಫಾಸ್ಟ್‌ನಲ್ಲಿ ನಿರ್ಮಾಣಗೊಂಡಿದ್ದ ಟೈಟಾನಿಕ್, ಸೌತ್ ಆ್ಯಮ್ಟನ್‌ನಿಂದ ನ್ಯೂಯಾರ್ಕ್ ಕಡೆ ಪಯಣಿಸುತ್ತಿದ್ದಾಗ 1912ರ ಏಪ್ರಿಲ್ 15ರಂದು ಹಿಮಗುಡ್ಡಕ್ಕೆ ಡಿಕ್ಕಿ ಹೊಡೆದು ಮುಳುಗಿತ್ತು.

ಇದೀಗ ಸೌತ್‌ಆ್ಯಮ್ಟನ್‌ನಿಂದ ಹೊರಟಿರುವ `ದಿ ಎಂಎಸ್ ಬಲ್‌ಮೊರಲ್~ ಹಾಗೂ ನ್ಯೂಯಾರ್ಕ್ ನಗರದಿಂದ ಹೊರಟ `ಅಜಮರಾ ಜರ್ನಿ~ ಹಡಗುಗಳಲ್ಲಿ 1,700 ಕ್ಕೂ ಹೆಚ್ಚು ಪ್ರಯಾಣಿಕರು ಇದ್ದು, ಇವರೆಲ್ಲ ಐಶಾರಾಮಿ ಹಡಗು ಜಲಸಮಾಧಿಯಾದ ಸ್ಥಳಕ್ಕೆ ತೆರಳುತ್ತಿದ್ದಾರೆ.ಹಲಿಫಾಕ್ಸ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಆಗಮಿಸಿರುವ ಬ್ರಿಟಿಷ್ ಕೊಲಂಬಿಯಾ ನಿವಾಸಿ ವೆಂಡಿ ಬರ್ಖರ್ಟ್, 1997ರಲ್ಲಿ ತೆರೆಕಂಡ ಜೇಮ್ಸ ಕೆಮರಾನ್ ಅವರ `ಟೈಟಾನಿಕ್~ ಸಿನಿಮಾ ತಮ್ಮ ಮದುವೆಗೆ ಮುನ್ನುಡಿ ಬರೆದ ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ.`ನನ್ನ ಸಂಗಾತಿ ಜೆರ‌್ರಿ ಇವಾನ್ಸ್ ಟೈಟಾನಿಕ್ ಚಿತ್ರದ ನಾಯಕ ಲಿಯೊನಾರ್ಡೊ ಡಿ ಕೆಪ್ರಿಯೊ ಅವರನ್ನು ಹೋಲುತ್ತಾರೆ~ ಎನ್ನುತ್ತಾರೆ ಬರ್ಖರ್ಟ್. ಅಂದಹಾಗೆ ನೂರು ವರ್ಷಗಳ ಹಿಂದೆ ಇವರ ಸಂಬಂಧಿಕರು ಕೂಡ ಟೈಟಾನಿಕ್ ಹಡಗಿನಲ್ಲಿ ಪ್ರಯಾಣ ಮಾಡಬೇಕಿತ್ತು. ಆದರೆ ಅದೃಷ್ಟವಶಾತ್ ಆ ದುರಂತ ಯಾನವನ್ನು ಅವರು ತಪ್ಪಿಸಿಕೊಂಡಿದ್ದರು.

 
`ಮಾನವ ದೇಹದ ಅವಶೇಷಗಳು~

ನ್ಯೂಯಾರ್ಕ್ (ಎಪಿ): 1500 ಕ್ಕೂ ಹೆಚ್ಚು  ಪ್ರಯಾಣಿಕರೊಂದಿಗೆ ಟೈಟಾನಿಕ್ ಜಲಸಮಾಧಿಯಾದ ಉತ್ತರ ಅಟ್ಲಾಂಟಿಕ್‌ನಲ್ಲಿ ಮಾನವ ದೇಹದ ಅವಶೇಷಗಳು ಮಣ್ಣಲ್ಲಿ ಹೂತಿರಬಹುದು ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.

`ಹಡಗು ಒಡೆದ ಸ್ಥಳದಲ್ಲಿ ಮಾನವನ ದೇಹದ ಅವಶೇಷಗಳು ಇರುವುದನ್ನು ವಿಧಿವಿಜ್ಞಾನದ ಪುರಾವೆಗಳು ತೋರಿಸುತ್ತವೆ. ಕೋಟು ಹಾಗೂ ಬೂಟುಗಳು ಮಣ್ಣಿನಲ್ಲಿರುವುದನ್ನು 2004ರ ಛಾಯಾಚಿತ್ರಗಳು ತೋರಿಸಿವೆ~ ಎಂದು ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲ ಆಡಳಿತ ನಿರ್ವಹಣೆ ಸಂಸ್ಥೆಯ ನಿರ್ದೇಶಕ ಜೇಮ್ಸ ಡೆಲ್‌ಗಡೊ ಶನಿವಾರ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.