ಟೋನಿಯ ಬೆಳಗು ಬೈಗು

7

ಟೋನಿಯ ಬೆಳಗು ಬೈಗು

Published:
Updated:

ಪಟಾಕಿಗಳ ಮೊರೆತದ ನಡುವೆ ಗೆಳೆಯರ ಶುಭಾಶಯಗಳ ಸುರಿಮಳೆ. ಅದು `ಟೋನಿ~ ಚಿತ್ರದ ಮುಹೂರ್ತ. ಚಿತ್ರದ ನಾಯಕ ಮತ್ತು ನಿರ್ಮಾಪಕರಾಗಿ ಕಂಗೊಳಿಸುತ್ತಿದ್ದ ಶ್ರೀನಗರ ಕಿಟ್ಟಿ, ತಮ್ಮದು ಹಣ ಮಾಡುವ ಉದ್ದೇಶವಿಲ್ಲದ ಸಿನಿಮಾ ಎಂದರು.`ದಿಢೀರ್ ಶ್ರೀಮಂತನಾಗಬೇಕೆಂದು ಹೊರಡುವ ವ್ಯಕ್ತಿಯ ಕತೆ ಇದು. ಅವತ್ತಿನ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಹೊರಡುವ ನಾಯಕ ಸಣ್ಣ ಸಣ್ಣ ಸೂಕ್ಷ್ಮಗಳು ಮತ್ತು ಸುಖಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತಾನೆ. ಏನನ್ನು ಕಳೆದುಕೊಳ್ಳುತ್ತಾನೆ? ಏನನ್ನು ಪಡೆಯುತ್ತಾನೆ? ಎಂಬುದು ಚಿತ್ರದ ತಿರುಳು.

 

ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ಕತೆಯಲ್ಲಿ ಹಿನ್ನೋಟದ ತಂತ್ರಗಳಿರುತ್ತವೆ. ನಾಯಕನ ಬದುಕಿಗೆ ಪ್ರೇರಣೆಯಾಗುವ ನಾಯಕಿಯೂ ಇರುತ್ತಾಳೆ~ ಎಂದರು ಕಿಟ್ಟಿ. ಒಟ್ಟಾರೆ ಇದು `ಆಸೆ-ದುರಾಸೆಗಳ ನಡುವಿನ ವ್ಯತ್ಯಾಸವನ್ನು ತಿಳಿಸುವ ಸಿನಿಮಾ~ ಎಂಬುದೂ ಅವರ ಮಾತೇ.ತಮ್ಮ ಚಿತ್ರ ನಿರ್ಮಾಣದ ಹಿಂದೆ ಸಾಮಾಜಿಕ ಕಳಕಳಿ ಪ್ರಮುಖವಾಗಿರುವುದಾಗಿ ಹೇಳಿಕೊಂಡ ಕಿಟ್ಟಿ, `ಟೋನಿ~ಯಲ್ಲಿ ಸಕಾರಾತ್ಮಕ ಭಾವನೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.`ಟೋನಿ~ಯನ್ನು ಈ ಮೊದಲು `ಒಲವೇ ಮಂದಾರ~ ಸಿನಿಮಾ ನಿರ್ದೇಶಿಸಿದ್ದ ಜಯತೀರ್ಥ ಕತೆ, ಚಿತ್ರಕತೆ ಬರೆದು ನಿರ್ದೇಶಿಸುತ್ತಿದ್ದಾರೆ. `ಓಟದ ಲಯಕ್ಕೆ ಮಾರು ಹೋಗಿ ಗುರಿಯನ್ನೇ ಮರೆತವರು ತಮ್ಮ ಚಿತ್ರದಲ್ಲಿ ಇರುತ್ತಾರೆ. ವಾಸ್ತವಕ್ಕೆ ಹತ್ತಿರವಾದ ಕತೆ ಇದು. ಪ್ರೇಕ್ಷಕರಿಗಾಗಿ ನಿಮಿಷಕ್ಕೊಂದು ಥ್ರಿಲ್ ಇರುವಂತೆ ಚಿತ್ರಕತೆ ರೂಪಿಸಿದ್ದೇನೆ~ ಎಂದು ಇಮ್ಮಡಿ ಆತ್ಮವಿಶ್ವಾಸದಲ್ಲಿ ಹೇಳಿಕೊಂಡರು ಜಯತೀರ್ಥ.`ಪತ್ರಿಕೆಯೊಂದರಲ್ಲಿ ಬಂದ ನುಡಿಚಿತ್ರ ನನ್ನ ಕತೆಗೆ ಸ್ಫೂರ್ತಿ. ಆದರೆ ಆ ಲೇಖನಕ್ಕೂ ಕತೆಗೂ ಸಂಬಂಧ ಇಲ್ಲ. ರೊಮಾನ್ಸ್, ಕಾಮಿಡಿ, ಭಾವುಕತೆ, ರೋಚಕತೆ ಎಲ್ಲವೂ ಚಿತ್ರದಲ್ಲಿ ಮಿಳಿತವಾಗಿದೆ. ಚಿತ್ರದ ಅಲ್ಲಲ್ಲಿ ಲಂಕೇಶ್ ಅವರ ನೀಲು ಕಾವ್ಯಗಳನ್ನು ಮತ್ತು ಜನಪದ ದ್ವಿಪದಿಗಳನ್ನು ಬಳಸಿಕೊಳ್ಳುತ್ತಿದ್ದೇವೆ. 60 ದಿನ ಚಿತ್ರೀಕರಣ ಮಾಡುವ ಯೋಜನೆ ಇದೆ. ಬೆಂಗಳೂರಿನಲ್ಲಿಯೇ ಶೇ 90ರಷ್ಟು ಚಿತ್ರೀಕರಣ ನಡೆಯಲಿದೆ.ಉಳಿದಂತೆ ಗುಲ್ಬರ್ಗ ಮತ್ತು ಕನಕಪುರದಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗುವುದು. ಸಿನಿಮಾ ವೀಕ್ಷಿಸಿದ ಪ್ರೇಕ್ಷಕ ಆರೋಗ್ಯಕರ ಮನಸ್ಥಿತಿಯಿಂದ ಹೊರಬರಬೇಕು ಆಗ ನನ್ನ ಸಿನಿಮಾ ಸಾರ್ಥಕವಾದಂತೆ~ ಎಂದರು.`ಟೋನಿ~ಗೆ ನಾಯಕಿ ಐಂದ್ರಿತಾ ರೇ. ಆಕೆ ದುಬೈನಲ್ಲಿ ನಡೆಯುತ್ತಿರುವ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಹೋಗಿದ್ದ ಕಾರಣ, ಪತ್ರಿಕಾಗೋಷ್ಠಿಗೆ ಬಂದಿರಲಿಲ್ಲ. `ನನ್ನ ಚಿತ್ರದ ನಾಯಕಿ ಅನಾಥೆ. ಮುಗ್ಧೆ. ಆದರೆ ಆಧುನಿಕ ಪ್ರಜ್ಞೆ ಇರುವವಳು. ಜೊತೆಗೆ ಅವಳಿಗೆ ಸಣ್ಣ ಸಣ್ಣ ಆಸೆಗಳು ಇರುತ್ತವೆ. ಹಕ್ಕಿಗಳ ಇಂಚರ ಕೇಳುವುದು, ಮಲ್ಲಿಗೆಯ ಘಮ ಅನುಭವಿಸುವುದು, ಪುಸ್ತಕ ಓದುತ್ತಾ ಮೈಮರೆಯುವುದು ಅವಳ ಗುಣ~ ಎಂದು ಜಯತೀರ್ಥ ಹೇಳಿದರು.`ಸಿನಿಮಾ ಸಂಪೂರ್ಣ ವೇಗವಾಗಿರುತ್ತದೆ. ಹೆಗಲ ಮೇಲೆ ಕ್ಯಾಮೆರಾ ಇಟ್ಟುಕೊಂಡು ಚಿತ್ರೀಕರಿಸುವ ಯೋಜನೆ ಇದೆ~ ಎಂದವರು ಛಾಯಾಗ್ರಾಹಕ ಜ್ಞಾನಮೂರ್ತಿ.ಕಿಟ್ಟಿ ಅವರೊಂದಿಗೆ ಚಿತ್ರಕ್ಕೆ ಹಣ ಹೂಡಿರುವ ಸಹ ನಿರ್ಮಾಪಕ ಇಂದ್ರಕುಮಾರ್ ಅವರಿಗೆ ಜಯತೀರ್ಥ ಅವರ `ಒಲವೇ ಮಂದಾರ~ ಸಿನಿಮಾ ಇಷ್ಟವಾಗಿತ್ತಂತೆ.ಉದ್ಯಮಿಯಾದ ಅವರು ಸಿನಿಮಾ ಮಾಡುವ ಹಂಬಲಕ್ಕೆ ಬಿದ್ದು ಗೆಳೆಯ ಕಿಟ್ಟಿಯ ಬೆಂಬಲದಿಂದ ನಿರ್ಮಾಪಕರಾಗಿದ್ದಾರೆ.ಕೊಳಕು ರ‌್ಯಾಪರ್!

`ಟೋನಿ~ ಚಿತ್ರದ ಪೋಸ್ಟರ್‌ನಲ್ಲಿ ನಾಯಕ ಸಿಗರೇಟು ಸುಡುತ್ತಿರುವ ಚಿತ್ರ ಇದೆ. ಇದು ತಪ್ಪು ಸಂದೇಶ ರವಾನಿಸುತ್ತದಲ್ಲವೇ? ಈ ಪ್ರಶ್ನೆಗೆ ಜಯತೀರ್ಥ ಹೇಳಿದ್ದು-

`ಚಿತ್ರದ ಒಂದು ದೃಶ್ಯದಲ್ಲಿ ನಾಯಕಿ ನಾಯಕನಿಗೆ ಉಡುಗೊರೆ ಕೊಡುತ್ತಾಳೆ. ಅದು ಅವನಿಗೆ ಪ್ರಿಯವಾದ ಸಿಗರೇಟ್ ಪ್ಯಾಕ್. ಅದರೊಳಗೆ ಸಿಗರೇಟಿಗೆ ಬದಲು `ನಿನ್ನ ಸಿಗರೇಟು ನನ್ನ ಆರೋಗ್ಯವನ್ನೂ ಹಾಳು ಮಾಡುತ್ತಿದೆ~ ಎಂಬ ಹೇಳಿಕೆ ಇರುತ್ತದೆ.ಒಳ್ಳೆಯ ಸಂದೇಶವನ್ನು ಈ ರೀತಿ ತಲುಪಿಸುವ ಉದ್ದೇಶ ನನ್ನದು. ನನ್ನ ಮೊದಲ ಸಿನಿಮಾದಿಂದ ನಾನೊಂದು ಪಾಠ ಕಲಿತೆ. ಸದಭಿರುಚಿಯ ಕತೆಯನ್ನು ಅಷ್ಟೇ ಶುದ್ಧವಾಗಿ ಮಾಡಿಕೊಟ್ಟರೆ ಜನ ನೋಡುವುದಿಲ್ಲ. ಅದಕ್ಕೆ ಒಳ್ಳೆಯ ವಿಚಾರ ಇರುವ ಚಾಕ್ಲೇಟನ್ನು ಕೊಳಕು ರ‌್ಯಾಪರ್‌ನಲ್ಲಿ ಸುತ್ತಿ ತಿನ್ನಿಸಬೇಕೆಂದಿದ್ದೇನೆ. ಈ ಪೋಸ್ಟರ್ ನೋಡಿ ಜನ ಥಿಯೇಟರ್‌ಗೆ ಬರಲಿ ಎಂಬ ಆಸೆ ನನ್ನದು. ಅದಕ್ಕೆ ಸೆನ್ಸಾರ್‌ನವರು ತಕರಾರು ತೆಗೆದು ಯು/ಎ ಪ್ರಮಾಣಪತ್ರ ನೀಡಿದರೂ ತೊಂದರೆ ಇಲ್ಲ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry