ಗುರುವಾರ , ಮೇ 19, 2022
24 °C

ಟೋಲ್ ದರ ಹೆಚ್ಚಳಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್: ರಾಷ್ಟ್ರೀಯ ಹೆದ್ದಾರಿ 7ರ ಎಲೆಕ್ಟ್ರಾನಿಕ್ ಸಿಟಿ ಬಳಿಯ ಬಿಇಟಿಎಲ್ ಸಂಸ್ಥೆಯ ಟೋಲ್‌ನಲ್ಲಿ ವಾಹನಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಿದ್ದಾರೆ ಎಂದು ಆರೋಪಿಸಿ ಪ್ರಜಾ ವಿಮೋಚನಾ ಚಳವಳಿ (ಮಾನವತವಾದ) ಸಂಘಟನೆಯ ಕಾರ್ಯಕರ್ತರು ಟೋಲ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.`ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾಗರಾಜು ಮಾತನಾಡಿ, ಕಂಪೆನಿ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ. ವರ್ಷದಲ್ಲಿ 5 ಬಾರಿ ದರವನ್ನು ಏರಿಸುವ ಮೂಲಕ ಸಾರ್ವಜನಿಕರಿಗೆ ಹೊರೆಯಾಗಿದ್ದಾರೆ. ದರ ಏರಿಕೆಯನ್ನು ಇಳಿಕೆ ಮಾಡಬೇಕು ಇಲ್ಲವಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು' ಎಂದರು.`ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆದೂರು ಪ್ರಕಾಶ್ ಮಾತನಾಡಿ, ರೂ. 40 ಇದ್ದ ಟೋಲ್ ಶುಲ್ಕವನ್ನು ರೂ. 60ಕ್ಕೆ ಏರಿಸಲಾಗಿದೆ. ಪದೇ ಪದೇ ದರ ಏರಿಕೆ ಮಾಡುವುದರಿಂದ ಸಾರ್ವಜನಿಕರು ತೊಂದರೆಗೆ ಸಿಲುಕಿದ್ದಾರೆ. ಯಾವುದೇ ಸಮಸ್ಯೆಗಳನ್ನು ಸಿಬ್ಬಂದಿಯ ಗಮನಕ್ಕೆ ತಂದರೆ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದೇ ಅವರ ವಿರುದ್ಧವೇ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ' ಎಂದು ಆರೋಪಿಸಿದರು.ಸಂಘಟನೆಯ ರಾಜ್ಯ ಉಪಾಧ್ಯಕ್ಷ ಡಿ.ಮುನಿಯಲ್ಲಪ್ಪ ಮಾತನಾಡಿ, `ಟೋಲ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು. ದರ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು' ಎಂದರು.ಸಂಘಟನೆಯ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮಟೆಗಳನ್ನು ಬಾರಿಸಿ ಪ್ರತಿಭಟನೆ ನಡೆಸಿದರು.ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ತೂಬರಹಳ್ಳಿ ಸೋಮಸುಂದರ್, ಸಂಘಟನೆಯ ಪದಾಧಿಕಾರಿಗಳಾದ ರುದ್ರೇಶ್, ಬೆಟ್ಟಪ್ಪ, ತಾಲ್ಲೂಕು ಅಧ್ಯಕ್ಷ ನಾಗರಾಜು, ಕಾರ್ಮಿಕ ಘಟಕ ಅಧ್ಯಕ್ಷ ಮಂಜುನಾಥ್, ಹೊಂಪಲಘಟ್ಟ ರವಿ, ಯಲ್ಲಪ್ಪ, ಎಂ.ಐ.ಮುನಿರಾಜು, ಹಾರಗದ್ದೆ ರವಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.