ಮಂಗಳವಾರ, ನವೆಂಬರ್ 12, 2019
24 °C
ಗಾಯಾಳು ಚೇತರಿಕೆ

ಟ್ಯಾಂಕರ್ ಅಪಘಾತ: ದುಃಸ್ವಪ್ನದಲ್ಲಿ ಕನಲುತಿದೆ ಪೆರ್ನೆ

Published:
Updated:

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಎಲ್‌ಪಿಜಿ ಸಾಗಣೆ ಮಾಡುತ್ತಿದ್ದ ಬುಲೆಟ್ ಟ್ಯಾಂಕರ್ ಅಪಘಾತ ಸಂಭವಿಸಿ 8 ಮಂದಿ  ಕಳೆದುಕೊಂಡ ದುಃಸ್ವಪ್ನದಿಂದ ಪುಟ್ಟ ಊರು ಪೆರ್ನೆ ಇನ್ನೂ ಹೊರಬಂದಿಲ್ಲ.ಆದರೆ, ಟ್ಯಾಂಕರ್ ಸಮೀಪ ಜನರಿದ್ದ ಬಸ್ ಸಾಗುತ್ತಿದ್ದಲ್ಲಿ ಮತ್ತು ಟ್ಯಾಂಕರ್ ಸೋರಿಕೆಯ ಬದಲು ಸ್ಫೋಟಗೊಂಡಿದ್ದಲ್ಲಿ  ಸಾವು ನೋವಿನ ಸಂಖ್ಯೆ ಇನ್ನೂ ಅಧಿಕವಾಗುತ್ತಿತ್ತು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.ಟ್ಯಾಂಕರ್‌ನಲ್ಲಿ 16 ಸಾವಿರ ಕಿಲೋ ಲೀಟರ್‌ನಷ್ಟು ಎಲ್‌ಪಿಜಿ ಇತ್ತು. ಕೇವಲ ಅನಿಲ ಸೋರಿಕೆಯೇ ಎಂಟು ಮಂದಿ ಬಲಿತೆಗೆದುಕೊಂಡಿತು.ಒಂದು ವೇಳೆ ಟ್ಯಾಂಕರ್ ಸ್ಫೋಟಗೊಂಡಿದ್ದರೆ ಊರಿಗೆ ಊರೇ ಹೊತ್ತಿ ಉರಿಯುವ ಅಪಾಯ ಇತ್ತು. ಬೆಂಕಿ ನಿಯಂತ್ರಿಸುವುದು ಸಹ ಕಷ್ಟಕರವಾಗುತ್ತಿತ್ತು. ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದರೂ, ಅಪಘಾತ ಸಂಭವಿಸಿದ ಸಮಯದಲ್ಲಿ ಹೆಚ್ಚಿನ ವಾಹನಗಳ ಸಂಚಾರ ಇಲ್ಲದ ಕಾರಣ ಸಾವು-ನೋವಿನ ಪ್ರಮಾಣ ಕಡಿಮೆಯಾಯಿತು.ಘಟನೆಯಲ್ಲಿ ಗಾಯಗೊಂಡು ಮಂಗಳೂರು, ಪುತ್ತೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಂದಿರಾ, ಅಣ್ಣು ನಾಯ್ಕ ಎಂಬವರ ಪುತ್ರಿ, ಅಂಗನವಾಡಿ ಕಾರ್ಯಕರ್ತೆ ವಿಮಲಾ,  ಅಬೂಬಕ್ಕರ್ ಎಂಬವರ ಪತ್ನಿ ಸಫಿಯಾ, ಅವರ ತಾಯಿ ಹಾಜಿಮ್ಮ  ಚೇತರಿಸಿಕೊಳ್ಳುತ್ತಿದ್ದಾರೆ.ಅಡುಗೆಗೂ ನಿಷೇಧ: ಪೆರ್ನೆ ಸುತ್ತಮುತ್ತ 3 ಕಿ.ಮೀ. ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿಯವರೆಗೆ ಅಡುಗೆ ಮಾಡುವುದಕ್ಕೂ ನಿಷೇಧ ವಿಧಿಸಲಾಗಿತ್ತು. ಸೋರಿಕೆಯಾದ ಅನಿಲವನ್ನು ಗಾಳಿ ಎತ್ತ ಸಾಗಿಸುತ್ತದೋ, ಅಲ್ಲೆಲ್ಲ ಬೆಂಕಿಯ ಕೆನ್ನಾಲಿಗೆ ಹಬ್ಬುವ ಭೀತಿಯಲ್ಲಿ ಜನ ತತ್ತರಿಸಿ ಹೋಗಿದ್ದರು.ಸ್ಥಳಕ್ಕೆ ಧಾವಿಸಿದ ಎಚ್‌ಪಿಸಿಎಲ್ ಅಧಿಕಾರಿಗಳು ಸೋರಿಕೆಯಾದ ಟ್ಯಾಂಕರ್‌ನ ಒಂದು ವಿಭಾಗವನ್ನು ಫೋಮ್‌ನೊಂದಿಗೆ ಸಂಪೂರ್ಣ ಬರಿದುಗೊಳಿಸಿ ಉಳಿದ ಟ್ಯಾಂಕರ್‌ನ ಭಾಗವನ್ನು ಮಂಗಳೂರಿನತ್ತ ಸಾಗಿಸಿದರು. ಊರಿನ ಜನ ನೆಮ್ಮದಿಯ ನಿಟ್ಟಿಸಿರು ಬಿಟ್ಟದ್ದು ಆ ಬಳಿಕವೇ.ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವ ಕಾರ್ಯ ಆರಂಭಗೊಂಡಿದ್ದು, ಕಂದಾಯ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟು ಮಾಹಿತಿ ಸಂಗ್ರಹಿಸಿದರು. ಪಶ್ಚಿಮ ವಲಯದ ಐಜಿಪಿ ಪ್ರತಾಪ್ ರೆಡ್ಡಿ ಸಹಿತ ಹಲವು ಹಿರಿಯ ಅಧಿಕಾರಿಗಳು ಸಹ ಬುಧವಾರ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು.ತುಂಡಾದ ವಿದ್ಯುತ್ ಕಂಬಗಳನ್ನು ಮತ್ತೆ ಅಳವಡಿಸುವ ಕಾರ್ಯ, ಊರಿನಲ್ಲಿ ಕುಡಿಯುವ ನೀರು ಪೂರೈಸುವ ಕಾರ್ಯವೂ ಭರದಿಂದ ಸಾಗಿತು. ಸ್ಥಳೀಯರು ಸ್ವಯಂ ಪ್ರೇರಣೆಯಿಂದ ತಮ್ಮ ವಾಹನಗಳಲ್ಲೇ ನೀರು ತರಿಸಿ ಅಗತ್ಯ ಇದ್ದವರಿಗೆ ಪೂರೈಸುತ್ತಿದ್ದುದು ಸಹ ಕಂಡುಬಂತು.ಒಂದು ಕೋಟಿ ಹಾನಿ

ಪೆರ್ನೆ ಟ್ಯಾಂಕರ್ ಅಪಘಾತದಲ್ಲಿ ಕನಿಷ್ಠ ರೂ. 1 ಕೋಟಿ ರೂಪಾಯಿ ಹಾನಿ ಸಂಭವಿಸಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ವಿಪತ್ತು ನಿರ್ವಹಣಾ ಸಮಿತಿ ಅಂದಾಜಿಸಿದೆ.

ಮೃತಪಟ್ಟವರ ಕುಟುಂಬದವರಿಗೆ ತಲಾ ರೂ. 25 ಲಕ್ಷ  ಮತ್ತು ಗಾಯಗೊಂಡವರಿಗೆರೂ. 5ರಿಂದರೂ. 10 ಲಕ್ಷ   ಪರಿಹಾರ ನೀಡಬೇಕು ಎಂದು ಎಚ್‌ಪಿಸಿಎಲ್ ಕಂಪೆನಿಗೆ ಮನವಿ ಸಲ್ಲಿಸಿದೆ. ಈ ಸಂಬಂಧ ಸಮಿತಿಯ ಅಧ್ಯಕ್ಷ ಯತೀಶ್ ಬೈಕಂಪಾಡಿ ಅವರು ನಷ್ಟದ ವಿವರವಾದ ಪಟ್ಟಿಯನ್ನು ಎಚ್‌ಪಿಸಿಎಲ್‌ನ ಮುಖ್ಯ ಕಾರ್ಯಾಚರಣೆ ವ್ಯವಸ್ಥಾಪಕ ಕೃಷ್ಣನ್ ಕುಟ್ಟಿ ಅವರಿಗೆ ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)