ಟ್ಯಾಗೋರರ ಸಹಕಾರ ಚಳವಳಿ

6

ಟ್ಯಾಗೋರರ ಸಹಕಾರ ಚಳವಳಿ

Published:
Updated:

ರವೀಂದ್ರನಾಥ ಟ್ಯಾಗೋರರು ಕವಿಯಾಗಿ, ಕಾದಂಬರಿಕಾರರಾಗಿ, ಕಥೆಗಾರರಾಗಿ ಮತ್ತು ಚಿಂತಕರಾಗಿ ಹಾಗೂ ಕಲಾವಿದರಾಗಿ ನಮ್ಮ ಮನಸ್ಸಿನಲ್ಲಿ ಆವರಿಸಿಕೊಂಡಿರುವಂಥವರು. ಆದರೆ ಅವರು ಸುಮಾರು ನಾಲ್ಕು ದಶಕಗಳ ಕಾಲ ರೈತರ ನಡುವೆ, ಇತರೆ ಗ್ರಾಮೀಣ ಜನರ ನಡುವೆ ಮಾಡಿರುವ ಕೆಲಸ ಅಪೂರ್ವವಾದದ್ದು. ಗ್ರಾಮಾಂತರ ಪ್ರದೇಶದ ಜನತೆಯ ಬವಣೆಯನ್ನು ತುಂಬ ಹತ್ತಿರದಿಂದ ನೋಡಿದವರು.ಅದಕ್ಕೆ ಪರಿಹಾರವೆಂಬಂತೆ ಕಂಡ ಕಂಡವರಲ್ಲಿ ಪ್ರಸ್ತಾಪಿಸುತ್ತ ಹೋದವರು. ಕೊನೆಗೆ ತಮ್ಮ ಹಿರಿಯ ಮಗ ರತೀಂದ್ರನಾಥ ಟ್ಯಾಗೋರು ಹಾಗೂ ತಮ್ಮ ಸೋದರ ಸಂಬಂಧಿಗಳಾದ ಇಬ್ಬರನ್ನು ಪುಸಲಾಯಿಸಿ ಮಗನ ಜೊತೆಯಲ್ಲಿ ಕೃಷಿಯಲ್ಲಿ ವಿಜ್ಞಾನ ಪದವಿಯನ್ನು ಪಡೆದು ಬರಲು ಅಮೇರಿಕಾಗೆ ಕಳಿಸಿಕೊಟ್ಟವರು. ಆದರೆ ಮಗ ಅಧ್ಯಯನ ಮಾಡಿ ಬರುವವರೆಗೆ ರವೀಂದ್ರರು ಕೈಕಟ್ಟಿ ಕೂಡಲಿಲ್ಲ. ರೈತರ ನಡುವೆಯೇ ‘ಹಿತೈಷಿ’ ಸಭಾಗಳನ್ನು ರಚಿಸಿ ಸಣ್ಣಪುಟ್ಟ ಪ್ರಮಾಣದಲ್ಲಿ ಆಂತರಿಕ ಸಹಕಾರ ಬೆಳೆಯುವ ವಾತಾವರಣವನ್ನು ಸೃಷ್ಟಿಸಿದರು.ಮಗ ರತೀಂದ್ರನಾಥ ಟ್ಯಾಗೋರರು 1909ರಲ್ಲಿ ಅಮೆರಿಕದಿಂದ ಕೈರೊ ವಿಜ್ಞಾನದಲ್ಲಿ ಪದವಿಯನ್ನು ಪಡೆದು ಬಂದರು. ಬಂದ ತಕ್ಷಣ ರವೀಂದ್ರರು ಮಗನನ್ನು ಮನೆ ಬಳಕೆಗೆ ಇದ್ದ ನಾವೆಯಲ್ಲಿ ತಮ್ಮ ಎಸ್ಟೇಟಿಗೆ ಕರೆದುಕೊಂಡು ಹೋದರು. ಅಲ್ಲಿ ನದಿಯ ದಡದಲ್ಲಿ ಕೂತು ಗ್ರಾಮಾಂತರ ಜನರ ಬದುಕಿನ ಬವಣೆಯನ್ನು ಕುರಿತು ಸುದೀರ್ಘವಾಗಿ ಚರ್ಚಿಸಿದರು. ನಾವು ಈ ಜನಕ್ಕೆ ಏನು ಮಾಡಿದರೂ ಅದು ಅವರಿಗೆ ತಲುಪುವಂತಿರಬೇಕು. ಮತ್ತು ಇವರಿಗೆ ನಾವೇನೋ ಮಹತ್ತರವಾದದ್ದನ್ನು ಮಾಡುತ್ತಿದ್ದೇವೆ ಎಂಬುದನ್ನು ಎಂದೂ ನಾವು ತಿಳಿಯಬಾರದು.ರೈತಾಪಿ ಜನಕ್ಕೆ ಎಷ್ಟು ತಲುಪಿದರೂ ಅದು ಸಾರ್ಥಕವಾಗಿ ಉಳಿಯುತ್ತದೆ. ಒಂದು ದೃಷ್ಟಿಯಿಂದ ಮಗನೂ ಇದರ ಬಗ್ಗೆ ಕಳಕಳಿಯನ್ನು ತೋರಿಸುವುದು ಕಂಡು ಸಂತೋಷಗೊಂಡರು. ರತೀಂದ್ರನಾಥ ಟ್ಯಾಗೋರರೂ ಅಷ್ಟೇ, ತಮ್ಮ ತಂದೆಯಿಂದ ನೇರವಾದ ಅನುಭವದ ಮೂಲಕ ಈ ಜನರ ಬಗ್ಗೆ ಎಂತೆಂಥ ಮಾಹಿತಿಯನ್ನು ದೊರಕಿಸಿಕೊಡುತ್ತಿದ್ದಾರೆ ಎಂದು ಭಾವಿಸಿದರು. ವಿಶ್ವವಿದ್ಯಾಲಯದ ಓದು ಈ ಅನುಭವದ ಮುಂದೆ ಏನೇನೂ ಅಲ್ಲ ಎಂಬ ಮನವರಿಕೆ ದಟ್ಟವಾಗತೊಡಗಿತು. ಹೀಗೆ ನೇರವಾಗಿ ತಂದೆಯೊಡನೆ ಎಂದೂ ಮಾತಾಡಿಲ್ಲವಲ್ಲ ಎಂಬ ಆಪ್ತಭಾವ ಮನದಲ್ಲಿ ಮೂಡತೊಡಗಿತು. ಇಷ್ಟು ದೊಡ್ಡ ಹೆಸರು ಮಾಡಿರುವ ತಂದೆಯವರು ಗ್ರಾಮೀಣ ಜನತೆಯ ಬದುಕನ್ನು ಕುರಿತು ಇಷ್ಟು ತಾದಾತ್ಮ್ಯದಿಂದ ನೋಡುತ್ತಿದ್ದಾರಲ್ಲ ಎಂದು ಅಭಿಮಾನಗೊಂಡರು. ಈ ದೃಷ್ಟಿಯಿಂದ ತಂದೆ ಏನು ಕೆಲಸ ವಹಿಸಿದರೂ ನಿಷ್ಠೆಯಿಂದ ಅದನ್ನು ನಿರ್ವಹಿಸಬೇಕು ಎಂಬ ಅಭಿಪ್ರಾಯವನ್ನು ತಾಳಿದರು.ರವೀಂದ್ರರು ಮುಖ್ಯವಾಗಿ ರಾಜಷಾಹಿ ಮತ್ತು ನಡಿಯಾ ಜಿಲ್ಲೆಯ ಹಳ್ಳಿ ಜನರ ಬದುಕಿನಲ್ಲಿ ನೇರವಾಗಿ ಪ್ರವೇಶಿಸಿದರು. ಗ್ರಾಮೀಣ ಪುನರ್ ನಿರ್ಮಾಣಕ್ಕಾಗಿ ‘ಶ್ರೀನಿಕೇತನ’ ಸಂಸ್ಥೆಯನ್ನು ಪ್ರಾರಂಭಿಸಿದರು. ಈಗಾಗಲೇ ಜನರ ಮಧ್ಯೆ ಕೆಲಸ ಮಾಡುತ್ತಿದ್ದರೂ; ಅದು ಏನೇನೂ ಸಾಲದು ಎಂಬ ಅರಿವಿನಿಂದ ‘ಶ್ರೀನಿಕೇತನ’ ಹೆಚ್ಚು ವ್ಯಾಪ್ತಿಯನ್ನು ಪಡೆಯತೊಡಗಿತ್ತು. ಕೃಷಿಯ ವಿಷಯದಲ್ಲಿ ಹಾಗೂ ತಮ್ಮ ನೆಲೆಯನ್ನು ಸ್ಪಷ್ಟಪಡಿಸಲು ಈ ಸಂಸ್ಥೆಯನ್ನು ರಚನಾತ್ಮಕವಾಗಿ ಬಳಸಿಕೊಳ್ಳತೊಡಗಿದರೂ ಇದೇ ಸಮಯದಲ್ಲಿ ರವೀಂದ್ರರು ‘ಬಂಗದರ್ಶನ’ ಎಂಬ ತಿಂಗಳ ಪತ್ರಿಕೆಯನ್ನು ಸಂಪಾದಿಸತೊಡಗಿದರು. ಅದರಲ್ಲಿ ಸಾಹಿತ್ಯಕ್ಕಿಂತ ಮಿಗಿಲಾಗಿ ಜನಸಾಮಾನ್ಯರ ಬದುಕಿನ ಚಿತ್ರಣವನ್ನು ಪರಿಚಯಿಸುತ್ತ ಹೋದರು. ಇದರಲ್ಲಿ ಸಣ್ಣ ಪ್ರಮಾಣದಲ್ಲಿ ರಾಜಕೀಯ ಚಿಂತನೆಯನ್ನು ಕುರಿತದ್ದು ಇರುತ್ತಿತ್ತು.ಇದಕ್ಕಾಗಿಯೇ ವಯಸ್ಕರ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು. ಸಾಕ್ಷರತೆ ಪ್ರಮುಖವಾದ ಅಸ್ತ್ರ ಎಂಬುದನ್ನು ‘ಶ್ರೀನಿಕೇತನ’ದ ಮೂಲಕ ‘ಹಿತೈಷಿ’ ಸಭಾಗಳಲ್ಲಿ ಮನದಟ್ಟು ಮಾಡುತ್ತ ಹೋದರು. ಜನರ ಸಮಸ್ಯೆಗೆ ಆಳವಾಗಿ ಸ್ಪಂದಿಸುತ್ತ ಹೋದರು. ಹಾಗೆ ನೋಡಿದರೆ 1921ರಲ್ಲಿ ಹುಟ್ಟಿಕೊಂಡ ‘ವಿಶ್ವಭಾರತಿ’ ಪ್ರಾರಂಭದಲ್ಲಿ ‘ಶ್ರೀನಿಕೇತನ’ದ ಮುಖೇನ ಗ್ರಾಮೀಣ ಜನರ ಬದುಕಿನಲ್ಲಿ ಸುಧಾರಣೆಯನ್ನು ತರುವುದಕ್ಕಾಗಿಯೇ ದುಡಿಯತೊಡಗಿದ್ದು. ‘ಹಿತೈಷಿ’ ಸಭಾಗಳು ಇದರಿಂದ ಹೆಚ್ಚು ರಚನಾತ್ಮಕತೆಯನ್ನು ಪಡೆಯತೊಡಗಿದವು. ಪ್ರತಿಯೊಂದು ಹಳ್ಳಿಯಲ್ಲಿಯೂ ಒಬ್ಬ ಚುನಾಯಿತ ಮುಖ್ಯಸ್ಥನನ್ನು ಕಂಡುಕೊಳ್ಳುವಂತೆ ಮಾಡಿದರು. ಇಂಥ ಹತ್ತು ಹಳ್ಳಿಯ ಮುಖ್ಯಸ್ಥರಿಗೆ ಒಬ್ಬ ಚುನಾಯಿತ ಪ್ರಧಾನ ಬರುವಂತೆ ನೋಡಿಕೊಂಡರು. ನಿಜವಾದ ಅರ್ಥದಲ್ಲಿ ಪಂಚಾಯತ್‌ರಾಜ್ ಪರಿಕಲ್ಪನೆ ಬೇರೂರತೊಡಗಿತು. ಇದರ ಮುಂದುವರಿದ ಭಾಗವಾಗಿ ‘ವಿಭಾಗ’ಗಳು ರೂಪುಗೊಂಡವು. ಇದರಿಂದ ‘ಹಿತೈಷಿ’ ಸಭಾಗಳು ವರ್ಷಕ್ಕೊಮ್ಮೆ ಸೇರಿ ಇಡೀ ವರ್ಷದ ಸಾಧನೆಗಳನ್ನು ಅವಲೋಕಿಸಿಕೊಳ್ಳುವಂತೆ ನೋಡಿಕೊಳ್ಳುತ್ತಿದ್ದರು.ಗ್ರಾಮಾಂತರ ಪ್ರದೇಶದ ಜನ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಪಗಡೆಯಾಟದಲ್ಲಿ ನರಳುತ್ತ ಬಂದವರು, ನಾನಾ ರೀತಿಯ ಕ್ಷಾಮಗಳನ್ನು ಕಂಡವರು. (ಇದಕ್ಕೆ ಸತ್ಯಜಿತ್ ರೇ ಅವರ ‘ಆಶಾನಿಸಂಕೇತ್’ ಚಲನಚಿತ್ರವೇ ಒಂದು ಮಾರ್ಮಿಕ ಸಾಕ್ಷಿ ಚಿತ್ರವಾಗಿದೆ. 1973ರಲ್ಲಿ ಬಂದ ಈ ಚಿತ್ರಕ್ಕೆ ಬಾಂಗ್ಲಾದೇಶದ ಪ್ರಸಿದ್ಧ ನಟಿ ‘ಬಬಿತಾ’ರವರನ್ನು ನಾಯಕಿಯಾಗಿ ಬಳಸಿಕೊಂಡಿದ್ದಾರೆ) ಇಂಥ ಸಮಯದಲ್ಲೆಲ್ಲ ಲೇವಾದೇವಿಯವರು ತಮ್ಮೆಲ್ಲ ಕುತಂತ್ರಗಳನ್ನು ನಡೆಸುತ್ತಲೇ ಬಂದಿದ್ದಾರೆ. ಇದನ್ನು ಟ್ಯಾಗೂರರು ಒಬ್ಬ ಅರ್ಥಪೂರ್ಣ ಸಾಹಿತಿಯಾಗಿ ಅದರ ಸೂಕ್ಷ್ಮತೆಗಳನ್ನು ಅರಿತವರು. ಆದ್ದರಿಂದ ಈಗಾಗಲೇ ಜನರು ‘ಹಿತೈಷಿ’ ಸಭಾಗಳ ಮೂಲಕ ಒಂದು ರೀತಿಯಲ್ಲಿ ಸಂಘಟನೆಯ ಮನಸ್ಸನ್ನು ಬೆಳೆಸಿಕೊಂಡಿದ್ದರು. ಇವರ ಹಣಕಾಸಿನ ಸಮಸ್ಯೆಯನ್ನು ಸಣ್ಣ ಪ್ರಮಾಣದಲ್ಲಿ ಯಾದರೂ ನಿವಾರಿಸಬೇಕು ಎಂದು ಯೋಚಿಸಿದರು. ಇದನ್ನು ಮಗ ರತೀಂದ್ರನಿಗೂ ತಿಳಿಸಿದರು.ಇದಕ್ಕಾಗಿ ತಮಗೆ ಗೊತ್ತಿರುವ ಎಲ್ಲ ಸ್ನೇಹಿತರ ಮುಂದೆ ಹೋಗಿ ಸಹಾಯಧನ ಬೇಡತೊಡಗಿದರು. ಒಂದು ರೀತಿಯ ಅವಮಾನವನ್ನು ಎದುರಿಸಿದರೂ; ಕೆಲವರ ಬಳಿ ಸಾಲ ಪಡೆದರು. ಇದರ ಜೊತೆಗೆ ಆ ಬಡಜನತೆಗೆ ತೊಂದರೆಯಾಗದಂತೆ ‘ಸಾಧಾರಣ್’ ಚೆಸ್ ಸಂಗ್ರಹಿಸತೊಡಗಿದರು. ಈ ಕಾರಣಕ್ಕಾಗಿಯೇ ಗ್ರೈನ್ ಬ್ಲ್ಯಾಂಕ್, ಕೃಷಿ ಬ್ಯಾಂಕ್‌ಗಳನ್ನು ಪ್ರಾರಂಭಿಸಿದರು. ಉತ್ತಮ ಗೊಬ್ಬರ ಮತ್ತು ಉತ್ತಮ ಬಿತ್ತನೆ ಬೀಜ ದೊರಕುವಂತೆ ನೋಡಿಕೊಂಡರು. ಇದು ಅಚ್ಚುಕಟ್ಟಾಗಿ ನಡೆಯಲು ತಾವು ಮತ್ತು ತಮ್ಮ ಮಗ ಹಿಂದೆ ನಿಂತು ಅತ್ಯಂತ ಶಿಸ್ತುಬದ್ಧವಾಗಿ ಮೋಟಿವೇಟ್ ಮಾಡುತ್ತ ಬಂದರು. ಇದರಿಂದ ಈ ಜನಕ್ಕೆ ಎಲ್ಲಿಲ್ಲದ ಆಂತರಿಕ ಚೈತನ್ಯ ಪ್ರವಹಿಸತೊಡಗಿತು.

 

ಯಾಕೆಂದರೆ ಬಡ್ಡಿ ಮತ್ತು ಚಕ್ರಬಡ್ಡಿಯಿಂದ ಬಿಡಿಸಿಕೊಂಡು ತಮ್ಮ ಕೈಯಲ್ಲಿ ಒಂದಷ್ಟು ಕಾಸು ಓಡಾಡುತ್ತಿದ್ದುದನ್ನು ಕಂಡು ಎಲ್ಲಿಲ್ಲದ ಉತ್ಸಾಹ ತುಂಬಿಕೊಂಡರು. ಈ ಜನಕ್ಕೆ ಟ್ಯಾಗೋರರು ತಮ್ಮ ಪಾಲಿನ ಆರಾಧ್ಯ ದೈವವಾಗಿ ಕಂಡರು. ಇದೇ ಸಮಯಕ್ಕೆ ಟ್ಯಾಗೋರರು ಸಾಮಾಜಿಕ ಸಮಸ್ಯೆ ಕುರಿತಂತೆ ಗೀತೆಗಳನ್ನು ರಚಿಸಿ; ತಮ್ಮ ಜನರ ಕೈಯಿಂದಲೇ ಹಾಡಿಸಿ ಕುಣಿಸಿದರು. ಸಮಸ್ಯೆ ಮತ್ತಷ್ಟು ಸೂಕ್ಷ್ಮವಾಗಿ ಅರ್ಥವಾಗಲು ನಾಟಕಗಳನ್ನು ರಚಿಸಿದರು. ‘ಶ್ರೀನಿಕೇತನ್’ ಮತ್ತು ‘ಹಿತೈಷಿ’ ಸಭಾಗಳು ಇಲ್ಲೆಲ್ಲ ತುಂಬ ಸಂಘಟನೆಯ ಸಂಸ್ಥೆಗಳಾಗಿ ಕೆಲಸ ಮಾಡಿವೆ. ಹೀಗೆ ಮಾಡಿದ್ದರಿಂದ ಶಾಲೆಗಳನ್ನು ತೆರೆಸಲು, ಅಬಲಾಶ್ರಮಗಳನ್ನು ತೆರೆಸಲು ಸಾಧ್ಯವಾಗಿದ್ದು. ಇದರೊಟ್ಟಿಗೆ ‘ಹಿತೈಷಿ’ ಸಭಾಗಳು ರಸ್ತೆ ನಿರ್ಮಾಣದಲ್ಲಿ ತೊಡಗಿದವು.ಟ್ಯಾಗೋರರು ಇಂಥ ರಚನಾತ್ಮಕ ಕಾರ್ಯಗಳನ್ನು ಮಾಡುವಾಗ ಸಾಕಷ್ಟು ಜಮೀನ್ದಾರರ ಮತ್ತು ಲೇವಾದೇವಿಯವರ ಕೆಂಗಣ್ಣಿಗೆ ಪಾತ್ರರಾದರು. ಆದರೂ ಯಾರೂ ಇವರನ್ನು ಎದುರುಹಾಕಿಕೊಳ್ಳಲು ಶಕ್ತರಾಗಿರಲಿಲ್ಲ. ಅಷ್ಟರಮಟ್ಟಿಗೆ ಪ್ರಭಾವಪೂರ್ಣ ಸಂಪರ್ಕ ಸೇತುವೆಯನ್ನು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಬೆಳೆಸಿಕೊಂಡಿದ್ದರು. ಇದರ ಮಿತಿಗಳು ಗೊತ್ತಿದ್ದರಿಂದ ‘ಹಿತೈಷಿ’ ಸಭಾಗಳು ತಮ್ಮ ಆಶಾವಾದದಿಂದ ಹಿಂದೆ ಸರಿಯದಂತೆ ಎಚ್ಚರಿಕೆ ವಹಿಸಿದ್ದರು. ಇಲ್ಲೆಲ್ಲ ತಮ್ಮ ಮಗ ಒಬ್ಬ ಪ್ರಾಮಾಣಿಕ ಕಾರ್ಯಕರ್ತನಾಗಿ ದುಡಿಯಲು ಸಿದ್ಧಗೊಳಿಸಿದ್ದರು. ಇದೇ ಸಮಯದಲ್ಲಿ ಟ್ಯಾಗೋರರಿಗೆ 1913ರಲ್ಲಿ ನೊಬೆಲ್ ಪ್ರಶಸ್ತಿ ಬಂದಾಗ; ಈ ಜನ ಸಾಮಾನ್ಯರೆಲ್ಲ ಕುಣಿದು ಕುಪ್ಪಳಿಸಿದರು. ತಮ್ಮ ‘ಆರಾಧ್ಯದೈವ’ದ ಗೈರುಹಾಜರಿಯಲ್ಲಿ ಸಭೆ ಸಮಾರಂಭಗಳನ್ನು ಆಚರಿಸಿ ಸಂಭ್ರಮಪಟ್ಟರು. ಇಲ್ಲಿ ಮತ್ತೊಂದು ಮಹತ್ತರ ಸಂಗತಿಯೆಂದರೆ: ತಮ್ಮ ನೊಬೆಲ್ ಪ್ರಶಸ್ತಿಯ ಮೂಲಕ ಬಂದ ಸುಮಾರು 1,15,000 ರೂ.ಗಳನ್ನು ತಮ್ಮ ‘ಹಿತೈಷಿ’ ಸಭಾದ ಕೃಷಿ ಬ್ಯಾಂಕ್‌ನಲ್ಲಿಟ್ಟರು.ಆ ಕಾಲಕ್ಕೆ ಇದು ಅತ್ಯಂತ ದೊಡ್ಡ ಮೊತ್ತ. ಈ ಸಮಯದಲ್ಲಿ ಕೆಲವು ಸಾಹಿತ್ಯದ ಮಿತ್ರರು ಬುದ್ಧಿಯನ್ನು ಹೇಳಲು ಪ್ರಯತ್ನಿಸಿದ್ದರು. ಆದರೆ ಟ್ಯಾಗೋರರು ಅವರ ಮಾತನ್ನು ಕೇಳಲಿಲ್ಲ. ತಾವೇ ಪ್ರಾರಂಭಿಸಿದ ಸಂಸ್ಥೆಯನ್ನು ಗುಮಾನಿಯಿಂದ ನೋಡುವಷ್ಟು ಸಿನಿಕರಾಗಿರಲಿಲ್ಲ. ಯಾಕೆಂದರೆ ಇವೆಲ್ಲವನ್ನು ಪ್ರಾರಂಭಿಸಿದ್ದು ಆಳವಾದ ಕಳಕಳಿ (ಡೀಪ್ ಕನ್‌ಸರ್ನ್)ಯಿಂದ ಅಲ್ಲವೇ? ಈ ಕಾಲಘಟ್ಟದಲ್ಲಿಯೇ ಯಾವಾಗಲೂ ರೈತರು ಒಂದೇ ಬೆಳೆಯನ್ನು (ಬತ್ತ) ಬೆಳೆಯುತ್ತ ಬಂದಿದ್ದರಿಂದ ಅವರ ಆರ್ಥಿಕ ಸುಧಾರಣೆಯಾಗುವುದು ಕಷ್ಟ ಎಂದು ತಿಳಿದರು. ಇದರಿಂದ ಗದ್ದೆ ಪ್ರದೇಶದ ಬೇರೆ ಬೇರೆ ದಿಣ್ಣೆ ಪ್ರದೇಶಗಳನ್ನು ಸಮತಟ್ಟು ಮಾಡಿ ಅಲ್ಲೆಲ್ಲ; ಬಾಳೆ, ಪಪಾಯಿ ಮತ್ತು ಅನಾನಸ್ ಬೆಳೆಯಲು ಪ್ರೇರಣಕರ್ತರಾದರು. ಇಲ್ಲಿ ಮತ್ತೊಂದು ಸ್ವಾರಸ್ಯವೆಂದರೆ: ಇಂಥ ದಿಣ್ಣೆ ಪ್ರದೇಶವನ್ನು ಸಮಮಾಡಲು ಟ್ರ್ಯಾಕ್ಟರ್ ಬಳಸಿದಾಗ ರೈತರು ವಿರೋಧಿಸಿದರು.ರವೀಂದ್ರನಾಥ ಟ್ಯಾಗೋರರು ತಮ್ಮ ಬೆನ್ನಿಗೆ ಕೇವಲ ‘ಶಾಂತಿನಿಕೇತನ’ವನ್ನು ಮಾತ್ರ ಕಟ್ಟಿಕೊಂಡಿರಲಿಲ್ಲ. ಈ ರೀತಿಯ ‘ಹಿತೈಷಿ’ ಸಭಾಗಳನ್ನು ಕಟ್ಟಿಕೊಂಡಿದ್ದರು. ತಮ್ಮ ನೊಬೆಲ್ ಪ್ರಶಸ್ತಿಯ ಹಣದಿಂದ ಕೃಷಿಕ ಬ್ಯಾಂಕ್ ಕೂಡ ಗಟ್ಟಿಯಾಗಲು ಸಾಧ್ಯವಾಯಿತು. ಹಾಗೆಯೇ ವಾರ್ಷಿಕ ಎಂಟು ಸಾವಿರ ಆದಾಯವೂ ‘ಶಾಂತಿನಿಕೇತನ್’ ಸಂಸ್ಥೆಗೆ ಬರುವಂತಾಯಿತು. ಇದಕ್ಕಾಗಿಯೇ ಹೆಚ್ಚು ಹೆಚ್ಚು ಬರೆಯತೊಡಗಿದರು. ಈ ಬರವಣಿಗೆಯ ಜೊತೆಯಲ್ಲಿಯೇ ದೇಶ ವಿದೇಶಗಳನ್ನು ಸುತ್ತಿದರು. ಅಲ್ಲೆಲ್ಲ ತಮ್ಮ ಉಪನ್ಯಾಸಗಳ ಮೂಲಕ ಹಣ ಸಂಗ್ರಹಿಸಿದರು. ಈ ಹಣದ ಸ್ವಲ್ಪ ಭಾಗವನ್ನು ಕೃಷಿ ಬ್ಯಾಂಕ್‌ಗಳ ಮೂಲಕ ‘ಹಿತೈಷಿ’ ಸಭಾಗಳು ಆರೋಗ್ಯಪೂರ್ಣವಾಗಿ ಬೆಳೆಯುವಂತೆ ನೋಡಿಕೊಂಡರು. ಇಷ್ಟೊತ್ತಿಗೆ ತಮ್ಮ ಮಗ ರತೀಂದ್ರನಾಥ ಟ್ಯಾಗೋರ್ ಎಲ್ಲವನ್ನು ಕ್ರಮಬದ್ಧವಾಗಿ ನೋಡಿಕೊಂಡು ಹೋಗುತ್ತಿದ್ದರು. 1939ರವರೆವಿಗೆ ಟ್ಯಾಗೋರರು ‘ಹಿತೈಷಿ’ ಸಭಾಗಳ ಜೊತೆ ತೊಡಗಿಸಿಕೊಂಡಿದ್ದರು. ನಂತರ ನಿಧಾನವಾಗಿ ಹಿಂದೆ ಸರಿದು ಮಗನಿಗೆ ಮಾರ್ಗದರ್ಶಕರಾಗಿರಲು ಬಯಸಿದರು. ಪಾಬ್ಲೋ ನೆರುಡನಂಥ ಮಹಾನ್‌ಕವಿ ಟ್ಯಾಗೋರನ್ನು ‘ಪೀಪಲ್ಸ್ ಪೊಯೆಟ್’ ಎಂದು ಕರೆದದ್ದು ಈ ಕಾರಣಕ್ಕಾಗಿಯೇ. ಇಂಥ ಸನ್ನಿವೇಶದಿಂದಲೇ ಪಶ್ಚಿಮ ಬಂಗಾಳದುದ್ದಕ್ಕೂ ಜನಮನದಲ್ಲಿ ರಬೀಂದ್ರ ಸಂಗೀತ ಗುನುಗುನಿಸಲು ಸಾಧ್ಯವಾಗಿದ್ದು.ಭಾರತದ ವಿಭಜನೆಯ ನಂತರವೂ ಈಸ್ಟ್ ಪಾಕಿಸ್ತಾನ (ಪಶ್ಚಿಮ ಬಂಗಾಳದಿಂದ ಬೇರ್ಪಟ್ಟ) ಪ್ರದೇಶದಲ್ಲಿ ‘ಹಿತೈಷಿ’ ಸಭಾಗಳನ್ನು ಉಳಿಸಿಕೊಂಡರು; ಸ್ಮರಿಸಿಕೊಂಡರು. ಕೃಷಿಕ ಬ್ಯಾಂಕ್‌ಗಳನ್ನು ಮತ್ತಷ್ಟು ಗಟ್ಟಿಗೊಳಿಸಿದರು. ಇಂದು ಬಾಂಗ್ಲಾದೇಶದ ಉದ್ದಗಲಕ್ಕೂ ಕ್ರೆಡಿಟ್ ಸಹಕಾರಿ ಬ್ಯಾಂಕ್‌ಗಳು ಕ್ರಿಯಾಶೀಲವಾಗಿದ್ದರೆ; ಟ್ಯಾಗೋರರು ಹಾಕಿಕೊಟ್ಟ ತಳಹದಿ ಪ್ರಾಮಾಣಿಕವಾದ ಕೆಲಸ ಮಾಡಿದೆ. ಈ ಎಲ್ಲ ಸಹಕಾರಿ ಬ್ಯಾಂಕ್‌ಗಳಲ್ಲಿ ಸಕ್ರಿಯರಾಗಿರೋರು ಮಹಿಳೆಯರು. ಅಮರ್ತ್ಯಸೇನ್‌ರಂಥ ಶ್ರೇಷ್ಠ ಅರ್ಥಶಾಸ್ತ್ರಜ್ಞರು ತಮಗೆ ನೊಬೆಲ್ ಪ್ರಶಸ್ತಿ ಬಂದ ನಂತರ ಪಶ್ಚಿಮ ಬಂಗಾಳದಲ್ಲಿ ಮತ್ತು ಬಾಂಗ್ಲಾದೇಶದಲ್ಲಿ ಶಿಕ್ಷಣ ಮತ್ತು ಆರ್ಥಿಕ ಬೆಳವಣಿಗೆ ಬಗ್ಗೆ ತೊಡಗಿಸಿಕೊಂಡಿದ್ದರೆ; ಅದಕ್ಕೆ ಟ್ಯಾಗೋರರ ಹೋರಾಟದ ಫಲ ಎಂದು ಹೇಳಬಹುದು. ಇದನ್ನು ಅಮರ್ತ್ಯಸೇನ್‌ರವರೂ ಸ್ಮರಿಸಿಕೊಂಡಿದ್ದಾರೆ.ಇತ್ತೀಚೆಗೆ ಖ್ಯಾತ ಚಿಂತಕರಾದ ಅಶೀಶ್ ನಂದಿಯವರು ಹಾಗೂ ‘ವಿಶ್ವಭಾರತಿ’ಯ ಪ್ರೊ.ನೈಸ್‌ಬಿಟ್ಸ್‌ಲರ್ ಆದ     ಪ್ರೊ. ಉದಯ ನಾರಾಣಸಿಂಗ್‌ರವರು ಬೆಂಗಳೂರಿಗೆ ಬಂದಿದ್ದರು. ಅವರ ಬಳಿ ಖಾಸಗಿಯಾಗಿ ಟ್ಯಾಗೋರರ ಸಾಹಿತ್ಯೇತರ ಚಟುವಟಿಕೆ ಕುರಿತು ಪ್ರಸ್ತಾಪಿಸಿದಾಗ; ಭಾವಪೂರ್ಣವಾಗಿ ಪ್ರತಿಕ್ರಿಯಿಸಿದ್ದರು. ಟ್ಯಾಗೋರರ ಒಂದೂವರೆ ಶತಮಾನದ ದೀರ್ಘಕಾಲದ ನಂತರವೂ ಅವರ ಅಪರೂಪದ ಕಾದಂಬರಿ ‘ಗೋರಾ’ (2010ಕ್ಕೆ ಸರಿಯಾಗಿ ಈ ಕಾದಂಬರಿ ಪ್ರಕಟವಾಗಿ ನೂರು ವರ್ಷವಾಗಿದೆ.) ಮತ್ತು ಇತರೆ ಶ್ರೇಷ್ಠ ಸಾಹಿತ್ಯ ಹಾಗೂ ಕಲೆಯ ಜೊತೆಗೆ ಸಹಕಾರ ಚಳವಳಿಯನ್ನು ನೆನಪಿಸಿಕೊಳ್ಳಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry