ಶನಿವಾರ, ಮೇ 8, 2021
26 °C

ಟ್ಯಾಗೋರ್‌ರ ಅಪೂರ್ವ ಕಲಾಕೃತಿಗಳ ವಿಶ್ವ ಪರ್ಯಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕವಿ ರವೀಂದ್ರನಾಥ ಟ್ಯಾಗೋರ್‌ರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಅವರ ಹಲವು ಅಪೂರ್ವ ಕಲಾಕೃತಿಗಳ ವಿಶ್ವ ಪರ್ಯಟನೆ ಆರಂಭವಾಗಲಿದೆ. ಈ ಕಲಾಕೃತಿಗಳು ಮುಂದಿನ ಏಳೆಂಟು ತಿಂಗಳುಗಳ ಕಾಲ ವಿಶ್ವದ ಅನೇಕ ದೇಶಗಳಲ್ಲಿ `ದಿ ಲಾಸ್ಟ್ ಹಾರ್ವಿಸ್ಟ್~ ಹೆಸರಿನಲ್ಲಿ ಪ್ರದರ್ಶನವಾಗಲಿದೆ.ನವದೆಹಲಿ ರಾಷ್ಟ್ರೀಯ ಸಂಗ್ರಹಾಲಯ, ಶಾಂತಿನಿಕೇತನ ಮತ್ತಿತರ ಚಿತ್ರಕಲಾ ಗ್ಯಾಲರಿಗಳಲ್ಲಿರುವ ಟ್ಯಾಗೋರ್‌ರ ವಿಶೇಷ ಕಲಾಕೃತಿಗಳನ್ನು ಈ ವಿಶ್ವ ಪರ್ಯಟನೆಗೆ ಆಯ್ಕೆ ಮಾಡಲಾಗಿದೆ. `ಶಾಂತಿ ಮತ್ತು ಪ್ರೇಮ~ ಸಂದೇಶವನ್ನು ಸಾರಲು ವಿಶ್ವದ ಅನೇಕ ನಗರಗಳಲ್ಲಿ ಪ್ರದರ್ಶಿತಗೊಳ್ಳುವ ಈ ಕಲಾಕೃತಿಗಳು ಚಿತ್ರಕಲಾ ಪ್ರೇಮಿಗಳ ಮನತಣಿಸಲಿದೆ.ಟ್ಯಾಗೋರ್ ಅವರು ಭೇಟಿ ನೀಡಿದ್ದ ವಿವಿಧ ದೇಶಗಳ ಸ್ಥಳಗಳು ಇಲ್ಲವೆ ಅವರಿಗೆ ಒಂದಲ್ಲಾ ಒಂದು ವಿಧದಲ್ಲಿ ನಂಟು ಹಾಕಿಕೊಂಡ ನಗರಗಳಲ್ಲಿ ಈ ಕಲಾಕೃತಿಗಳು ಮಾರ್ಚ್ 2012ರ ವರೆಗೆ ಪ್ರದರ್ಶಿತವಾಗಲಿವೆ.|ಬರ್ಲಿನಿನ ಎಂಟು ಚಿತ್ರಕಲಾ ಸಂಗ್ರಹಾಲಯ, ನೆದರ್‌ಲೆಂಡ್, ಫ್ರಾನ್ಸ್, ರೋಮ್, ನ್ಯೂಯಾರ್ಕ್, ಷಿಕಾಗೊ, ಸೋಲ್, ಲಂಡನ್ ಮತ್ತಿತರ ನಗರಗಳಲ್ಲಿ ಮೂರು ಹಂತದಲ್ಲಿ ಈ ಪ್ರದರ್ಶನ ನಡೆಯಲಿದೆ.

ಮೊದಲ ಹಂತದಲ್ಲಿ ಬರ್ಲಿನ್, ಲಂಡನ್, ಪ್ಯಾರಿಸ್ ಮತ್ತು ರೋಮ್‌ಗಳಲ್ಲಿ, ಎರಡನೇ ಹಂತದಲ್ಲಿ ನ್ಯೂಯಾರ್ಕ್ ಷಿಕಾಗೊ ಹಾಗೂ ಸೋಲ್‌ನಲ್ಲಿ ಮತ್ತು ಮೂರನೇ ಹಂತದಲ್ಲಿ ಲಂಡನ್ನಿನ ವಿಕ್ಟೋರಿಯಾ ಮತ್ತು ಅಲ್ಬರ್ಟ್ ಮ್ಯೂಸಿಯಂಗಳಲ್ಲಿ ಈ ಪ್ರದರ್ಶನ ಜರುಗಲಿದೆ.ಇವುಗಳು ಸ್ವದೇಶಕ್ಕೆ ವಾಪಸಾದ ನಂತರ, ಮೇ 2012ರ ಹೊತ್ತಿಗೆ ವರ್ಷವಿಡೀ ಆಚರಿಸಲಾಗುತ್ತಿರುವ ಟ್ಯಾಗೋರ್‌ರ 150ನೇ ಜನ್ಮ ದಿನಾಚರಣೆ ಸಂಭ್ರಮದ ನಿಮಿತ್ತ ಕೇಂದ್ರ ಸಂಸ್ಕೃತಿ ಸಚಿವಾಲಯ ಕಾರ್ಯಕ್ರಮವೊಂದನ್ನು ಆಯೋಜಿಸಲಿದೆ.ವಿವಿಧ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ರವೀಂದ್ರರ ಪುತ್ಥಳಿ ಸ್ಥಾಪಿಸಲು ಉದ್ದೇಶಿಸಿದ್ದು, ಇದಕ್ಕಾಗಿ `ವಿಶ್ವ ಭಾರತಿ~ ಮೂಲಕ ಸಂಸ್ಕೃತಿ ಸಚಿವಾಲಯಕ್ಕೆ ಅವರ 15 ಪುತ್ಥಳಿಗಳನ್ನು ಒದಗಿಸುವಂತೆ ಮನವಿ ಸಲ್ಲಿಸಿವೆ. ಸಚಿವಾಲಯವು ರೂ 37.5 ಲಕ್ಷ ವೆಚ್ಚದಲ್ಲಿ ರವೀಂದ್ರರ ಸುಂದರ ಪುತ್ಥಳಿಯನ್ನು ಸಿದ್ಧಪಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.