ಮಂಗಳವಾರ, ಮೇ 11, 2021
26 °C

ಟ್ಯಾಗೋರ್ ವೃತ್ತದ ಕೆಳ ಸೇತುವೆ ಉದ್ಘಾಟನೆ:ಸಂಚಾರ ದಟ್ಟಣೆ ಮುಕ್ತ ನಗರ-ಡಿವಿಎಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವಾಹನ ಸಂಚಾರ ದಟ್ಟಣೆ ತಪ್ಪಿಸಲು ಮುಂದಿನ ಎರಡು ವರ್ಷಗಳಲ್ಲಿ ಬೆಂಗಳೂರನ್ನು ಸಂಚಾರ ದಟ್ಟಣೆ ಮುಕ್ತ ನಗರವನ್ನಾಗಿ ಪರಿವರ್ತಿಸುವುದು ಸರ್ಕಾರದ ಗುರಿಯಾಗಿದೆ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಶನಿವಾರ ಇಲ್ಲಿ ಹೇಳಿದರು.ನಗರದ ಟ್ಯಾಗೋರ್ ವೃತ್ತದ ಕೆಳ ಸೇತುವೆಯನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದ ನಂತರ ಮಾತನಾಡಿದ ಅವರು, `ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಇಪ್ಪತ್ತಾರು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕೆಳಸೇತುವೆಯನ್ನು ನಿರ್ಮಿಸಲಾಗಿದೆ. ಇದರಿಂದ ಸಂಚಾರ ಪರಿಸ್ಥಿತಿ ಸಾಕಷ್ಟು ಸುಧಾರಿಸಲಿದೆ~ ಎಂದು ಹೇಳಿದರು.`ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಅನುಗುಣವಾಗಿ ನಗರದಲ್ಲಿ ಒಟ್ಟು 26 ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈ ಪೈಕಿ ಈಗಾಗಲೇ 8 ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಿವೆ. 11 ಸೇತುವೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ 7 ಸೇತುವೆಗಳ ಕಾಮಗಾರಿ ಕೈಗೊಳ್ಳಲು ಟೆಂಡರ್ ಪ್ರಕಿಯೆ ಜಾರಿಯಲ್ಲಿದೆ~ ಎಂದು ವಿವರಿಸಿದರು.`ನಗರದಲ್ಲಿ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ವಾಹನಗಳ ಸಂಖ್ಯೆಯೂ ಮಿತಿಮೀರಿದೆ. ಹಾಗಾಗಿ 426 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ವಿವಿಧೆಡೆ ಒಟ್ಟು ಐದು ಸಿಗ್ನಲ್ ಮುಕ್ತ ಕಾರಿಡಾರ್‌ಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ~ ಎಂದರು.`ಬೇಸಿಗೆಯಲ್ಲಿ ಹೆಚ್ಚುತ್ತಿರುವ ನೀರಿನ ಸಮಸ್ಯೆಗೆ ಒಟ್ಟು 100 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಜಲಮಂಡಳಿಗೆ 50 ಕೋಟಿ ರೂಪಾಯಿ ನೀಡಲಾಗಿದೆ. ಸದ್ಯದಲ್ಲೇ ನೀರಿನ ಕೊರತೆಯನ್ನು ನೀಗಿಸುವತ್ತ ದಾಪುಗಾಲು ಹಾಕಲಿದ್ದೇವೆ~ ಎಂದು ಹೇಳಿದರು.ಟ್ಯಾಗೋರ್ ವೃತ್ತದ ಕೆಳಸೇತುವೆಯ ಕಾಮಗಾರಿ ಪ್ರಾರಂಭಗೊಂಡು 4 ವರ್ಷಗಳೇ ಕಳೆದಿತ್ತು.

ಕುಂಟುತ್ತಾ ಸಾಗಿದ್ದ ಕಾಮಗಾರಿ ಕೊನೆಗೂ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಯಿತು. ಪ್ರಾರಂಭಿಕ ಹಂತದಲ್ಲಿ ಕಾಮಗಾರಿಯ ವೆಚ್ಚ 18 ಕೋಟಿ ರೂಪಾಯಿಯೆಂದು ಅಂದಾಜಿಸಲಾಗಿತ್ತು. ಪರಿಷ್ಕೃತ ವೆಚ್ಚ 26 ಕೋಟಿ ರೂಪಾಯಿಗಳಿಗೇರಿತು.ಗ್ರೇಡ್ ಸಪರೇಟರ್‌ಗಳ ಸಮರ್ಪಣೆನಗರದ ವೀರಣ್ಣನಪಾಳ್ಯ ಮತ್ತು ಕಲ್ಯಾಣ ನಗರ ಜಂಕ್ಷನ್‌ಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ  ಮೇಲುಸೇತುವೆಗಳನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಶನಿವಾರ ಉದ್ಘಾಟಿಸಿದರು.ನಗರದ ಹೊರವರ್ತುಲ ರಸ್ತೆಯಲ್ಲಿ ಕೇಂದ್ರ ರೇಷ್ಮೆ ಮಂಡಳಿಯಿಂದ ಹೆಬ್ಬಾಳ ಮೇಲುಸೇತುವೆವರೆಗಿನ ಹೊರವರ್ತುಲ ರಸ್ತೆಯನ್ನು ಯಾವುದೇ ಅಡೆತಡೆಯಿಲ್ಲದೆ ವಾಹನ ಸಂಚಾರಕ್ಕೆ ಸಿದ್ಧಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಒಂದೇ ಬಾರಿಗೆ ಎಂಟು ಜಂಕ್ಷನ್‌ಗಳಲ್ಲಿ ಗ್ರೇಡ್ ಸೆಪರೇಟರ್ ನಿರ್ಮಾಣ ಕಾಮಗಾರಿಗಳನ್ನು  2009ರ ನವೆಂಬರ್ ತಿಂಗಳಲ್ಲಿ ಕೈಗೆತ್ತಿಕೊಂಡಿತ್ತು.ಬೆಂಗಳೂರು ನಗರದ ಮೂಲಭೂತ ಸೌಲಭ್ಯಗಳನ್ನು ಉನ್ನತ ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಾಧಿಕಾರವು ಕಲ್ಯಾಣನಗರ ಜಂಕ್ಷನ್ ಮತ್ತು ವೀರಣ್ಣನಪಾಳ್ಯ ಜಂಕ್ಷನ್‌ನಲ್ಲಿ ಗ್ರೇಡ್ ಸೆಪರೇಟರ್‌ಗಳನ್ನು ನಿರ್ಮಿಸಲಾಗಿದೆ.

550 ಮೀಟರ್ ಉದ್ದದ ಕಲ್ಯಾಣನಗರ ಜಂಕ್ಷನ್ ಗ್ರೇಡ್ ಸೆಪರೇಟರ್‌ನ  ನಿರ್ಮಾಣ ಮಾಡಲು 37.65 ಕೋಟಿ  ಹಣವನ್ನು ವ್ಯಯ ಮಾಡಲಾಗಿದೆ.

 

ಅದೇ ರೀತಿಯಲ್ಲಿ ವೀರಣ್ಣನಪಾಳ್ಯ ಜಂಕ್ಷನ್‌ನ ಗ್ರೇಡ್ ಸೆಪರೇಟರ್ ನಿರ್ಮಾಣ ಮಾಡಲು  36.28 ಕೋಟಿ ಹಣ ಖರ್ಚು ಮಾಡಲಾಗಿದೆ. ಸೇತುವೆಯು ಒಟ್ಟು 670 ಮೀಟರ್ ಉದ್ದ ಇದೆ. ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ್, ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ, ಬಿಬಿಎಂಪಿ ಸದಸ್ಯ ಎಂ.ಪದ್ಮನಾಭ ರೆಡ್ಡಿ ಬಿಡಿಎ ಆಯುಕ್ತ ಭರತ್‌ಲಾಲ್‌ಮೀನಾ ಉಪಸ್ಥಿತರಿದ್ದರು.ಕೆಳಸೇತುವೆ ಅಗತ್ಯವಿರಲಿಲ್ಲ* `ಈ ರಸ್ತೆಗೆ ಕೆಳಸೇತುವೆ ಅಗತ್ಯವೇ ಇರಲಿಲ್ಲ. ಕಾಮಗಾರಿಯಿಂದ ಪ್ರತಿದಿನ ದೂಳು ಕುಡಿಯುವುದನ್ನು ರೂಢಿಸಿಕೊಂಡಿದ್ದೆವು. ಆದರೆ ಕೊನೆಗೂ ಮುಗಿಯಿತಲ್ಲಾ ಎಂಬುದೇ ಖುಷಿ~

ಆರ್. ಚಂದ್ರಶೇಖರ್- ಸ್ಥಳೀಯರು

* ಕಾಮಗಾರಿಯ ನೆಪದಲ್ಲಿ ವಿನಾಕಾರಣ ಗಿಡಗಳನ್ನು ಕತ್ತರಿಸಿ ಹಾಕಲಾಗಿದೆ. ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಮುಂದಾದರೂ ಈ ಭಾಗದಲ್ಲಿ ಸರ್ಕಾರ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು

ಸ್ಥಳೀಯ ಆರ್ಪಾಟ್‌ಮೆಂಟ್ ನಿವಾಸಿ- ಶೀಲಾ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.