ಟ್ಯೂಷನ್ ಹಾವಳಿ ನಿಲ್ಲಿಸಿ

ಬುಧವಾರ, ಜೂಲೈ 17, 2019
30 °C

ಟ್ಯೂಷನ್ ಹಾವಳಿ ನಿಲ್ಲಿಸಿ

Published:
Updated:

ಟ್ಯೂಷನ್ ಹಾವಳಿ ಬಗ್ಗೆ ನಮ್ಮ ಶಿಕ್ಷಣ ತಜ್ಞರು ಆಗಾಗ ವ್ಯಕ್ತಪಡಿಸುತ್ತಾ ಬಂದಿರುವ ಆತಂಕವನ್ನು ಏಷ್ಯಾ ಅಭಿವೃದ್ಧಿ ಸಂಸ್ಥೆ (ಎಡಿಬಿ) ಕೂಡಾ ದೃಢೀಕರಿಸಿದೆ.ಭಾರತದಲ್ಲಿ ಮನೆಪಾಠ ಮತ್ತು ಟ್ಯುಟೋರಿಯಲ್‌ಗಳ ಒಟ್ಟು ಹಣಕಾಸು ವಹಿವಾಟು ವರ್ಷಕ್ಕೆ  ಸುಮಾರು 35ಸಾವಿರ ಕೋಟಿ ರೂಪಾಯಿಗಳಾಗಿದೆ ಮತ್ತು ಈ ಕ್ಷೇತ್ರ ಶೇಕಡಾ ಹದಿನೆಂಟರ ದರದಲ್ಲಿ ಬೆಳೆಯುತ್ತಿದೆ ಎನ್ನುವುದನ್ನು ಎಡಿಬಿ ನಡೆಸಿರುವ ಸಮೀಕ್ಷೆ ಬಹಿರಂಗಗೊಳಿಸಿದೆ.

 

ಎಲ್‌ಕೆಜಿಯಿಂದಲೇ ಪ್ರಾರಂಭವಾಗುವ ಟ್ಯೂಷನ್ ಹಾವಳಿ ಐಐಟಿ-ಐಐಎಂಗಳನ್ನೂ ಬಿಟ್ಟಿಲ್ಲ. ಪರೀಕ್ಷೆ ಎನ್ನುವುದು ಅಂಕಗಳಿಗಾಗಿ ನಡೆಯುವ ಪೈಪೋಟಿಯಾಗಿರುವ ಇಂದಿನ ದಿನಗಳಲ್ಲಿ ಹಣ ಇದ್ದು ಬಿಟ್ಟರೆ ಎಂತಹ ಕಠಿಣ ಪರೀಕ್ಷೆಗಳನ್ನು ಸುಲಭದಲ್ಲಿ ಎದುರಿಸಿ ಅಂಕಗಳನ್ನು ಗಳಿಸಬಹುದು ಎಂಬಂತಾಗಿದೆ.ಎಷ್ಟೋ ಸಂದರ್ಭಗಳಲ್ಲಿ ಇದು ವಿದ್ಯಾರ್ಥಿಗಳ ಅವಶ್ಯಕತೆಗಿಂತ ಹೆಚ್ಚಾಗಿ ಹೆತ್ತವರ ಪಾಲಿನ ಪ್ರತಿಷ್ಠೆಯಾಗಿದೆ. ಈ ಕಾಯಿಲೆ ಕೇವಲ ಶ್ರಿಮಂತ ಕುಟುಂಬಗಳ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗಿಲ್ಲ. ಅನುಕರಣೆಯ ವ್ಯಸನಕ್ಕೆ ಬಿದ್ದ ಮಧ್ಯಮ ಮತ್ತು ಬಡ ವರ್ಗಕ್ಕೆ ಸೇರಿದ ಪಾಲಕರು ಟ್ಯೂಷನ್‌ನ ಮೋಹಪಾಶದಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ.ಆಳವಾಗಿ ನೋಡಿದರೆ ಇದು ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಹತ್ತಿರುವ ರೋಗದ ಲಕ್ಷಣಗಳು ಅಷ್ಟೆ ಎಂಬುದು ಗೊತ್ತಾಗುತ್ತದೆ. ರೋಗದ ಮೂಲ ಶಿಕ್ಷಣದ ವ್ಯಾಪಾರೀಕರಣದಲ್ಲಿದೆ. ಇಂದಿನ ಶಿಕ್ಷಣದ ಮುಖ್ಯ ಉದ್ದೇಶ ಜ್ಞಾನಸಂಪಾದನೆಯಲ್ಲ, ಅದು ಜೀವನೋಪಾಯದ ಮಾರ್ಗವನ್ನು ಕಂಡುಕೊಳ್ಳುವ ಸಾಧನ.

 

ಇದಕ್ಕಾಗಿ ಜ್ಞಾನಕ್ಕಿಂತಲೂ ಹೆಚ್ಚಾಗಿ ಬೇಕಾಗಿರುವುದು ಪರೀಕ್ಷೆಯಲ್ಲಿ ಅಂಕಗಳು. ವಿದ್ಯಾರ್ಥಿಗಳ  ಈ ಅಗತ್ಯವನ್ನು ಪೂರೈಸುವುದಕ್ಕಾಗಿಯೇ  ಖಾಸಗಿ ಮನೆ ಪಾಠ ಹೇಳುವವರು ಮತ್ತು ಟ್ಯುಟೋರಿಯಲ್‌ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವುದು.ಸಮಾನ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಸಮಾನತೆಯ ತಳಹದಿಯ ಮೇಲೆ ಸಮಾಜವನ್ನು ಕಟ್ಟಲು ಸಾಧ್ಯ. ಆದರೆ  ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಖಾಸಗಿಯವರಿಗೆ ಬಿಟ್ಟುಕೊಟ್ಟು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾ ಬರುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುವ ಶಕ್ತಿಯನ್ನು ಕೂಡಾ ಅದು ಕಳೆದುಕೊಂಡಿದೆ.ಕನಿಷ್ಠ ತನ್ನ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿಯಾದರೂ ಟ್ಯೂಷನ್ ಹಾವಳಿಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯ ಇದೆ.  ರಾಜ್ಯದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಅಧ್ಯಾಪಕರು ಟ್ಯೂಷನ್ ತರಗತಿಗಳನ್ನು ನಡೆಸುವುದು ಕಾನೂನು ಪ್ರಕಾರ ಅಪರಾಧ. ಆದರೆ ಬಹುಪಾಲು ಟ್ಯುಟೋರಿಯಲ್‌ಗಳಲ್ಲಿ ಬೋಧಿಸುತ್ತಿರುವವರು ಸರ್ಕಾರದಿಂದ ಸಂಬಳ ಪಡೆಯುವ ಅಧ್ಯಾಪಕರೇ ಆಗಿರುತ್ತಾರೆ.  ಮನೆಪಾಠ ಮಾಡುವುದು ಸಾಬೀತಾದರೆ ಅಮಾನತುಗೊಳಿಸುವುದು ಸೇರಿದಂತೆ ಅಧ್ಯಾಪಕರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಕಾನೂನು ನೀಡಿದ್ದರೂ ಸರ್ಕಾರ ಇದನ್ನು ಪ್ರಯೋಗ ಮಾಡಿರುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಖಾಸಗಿಯವರು ಟ್ಯುಟೋರಿಯಲ್‌ಗಳನ್ನು ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇರುವುದರಿಂದ ಅದನ್ನು ಮುಚ್ಚಿಸುವುದು ಸರ್ಕಾರಕ್ಕೆ ಸಾಧ್ಯ ಇಲ್ಲ.ಆದರೆ ಕನಿಷ್ಠ ತನ್ನ ನಿಯಂತ್ರಣದಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಅಧ್ಯಾಪಕರು ಟ್ಯೂಷನ್ ದಂಧೆಯಲ್ಲಿ ತೊಡಗಿರುವುದನ್ನಾದರೂ ಕಾನೂನುಕ್ರಮದ ಮೂಲಕ ನಿಯಂತ್ರಿಸಲು ಸಾಧ್ಯ. ಈ ಕರ್ತವ್ಯವನ್ನು ಸರ್ಕಾರ ಮೊದಲು ನಿರ್ವಹಿಸಲಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry