ಟ್ರಾಫಿಕ್‌ಪಾರ್ಕ್

7

ಟ್ರಾಫಿಕ್‌ಪಾರ್ಕ್

Published:
Updated:
ಟ್ರಾಫಿಕ್‌ಪಾರ್ಕ್

ಬೆಂಗಳೂರಿನಲ್ಲಿ ವಾಹನ ಸಂಖ್ಯೆ 38 ಲಕ್ಷ ಮುಟ್ಟಿದೆ. ಹೀಗಾಗಿ ಈ ಮಹಾನಗರದಲ್ಲಿ ರಸ್ತೆ ಮೇಲೆ ಕಾಲಿಡುವಾಗ ಮೈಯೆಲ್ಲ ಕಣ್ಣಾಗಿರಬೇಕು. ನಡೆದಾಡಬೇಕಾದರೆ ಸಂಚಾರಿ ನಿಯಮಗಳ ಪ್ರಾಥಮಿಕ ತಿಳಿವಳಿಕೆ ಬೇಕೇಬೇಕು.ಮಕ್ಕಳಲ್ಲೇ ಈ ಅರಿವು ಮೂಡಿಸಿದರೆ ಭವಿಷ್ಯದಲ್ಲಿ ಹೆಚ್ಚು ಪ್ರಯೋಜನಕಾರಿ ಎಂಬ ಉದ್ದೇಶದಿಂದ ಬಾಲಭವನ ಈಗ ಟ್ರಾಫಿಕ್ ಪಾರ್ಕ್ ನಿರ್ಮಿಸಿದೆ.ಕಬ್ಬನ್ ಪಾರ್ಕ್ ಬೆಂಗಳೂರು ಮಹಾನಗರದ ಪ್ರಮುಖ ಉದ್ಯಾನಗಳಲ್ಲೊಂದು. ಈ ಉದ್ಯಾನ ಮಕ್ಕಳ ಆಕರ್ಷಣೆಯ ತಾಣವೂ ಹೌದು. ಪುಟಾಣಿ ರೈಲು, ಹಲವು ಬಗೆಯ ಆಟಿಕೆಗಳು, ಪ್ರಶಾಂತವಾದ ವಾತಾವರಣ, ನಗುವ ಹೂಗಳು, ಕಣ್ಮನ ಸೆಳೆಯುವ ಮರ ಗಿಡಗಳು ಎಲ್ಲವನ್ನು ತುಂಬಿಕೊಂಡ ಕಬ್ಬನ್ ಪಾರ್ಕ್ ಬಾಲಭವನದ ಆಸು ಪಾಸು ಹಕ್ಕಿಗಳ ಕಲರವದ ಜೊತೆಗೆ ಮಕ್ಕಳ ನಗು ಮುಖಗಳು ಸದಾ ಕಾಣಸಿಗುತ್ತವೆ.ವಾಹನ ಹಾಗೂ ಸಂಚಾರ ನಿಯಮ ಎಳೆಯ ವಯಸ್ಸಿನಿಂದಲೇ ಮಕ್ಕಳಿಗೆ ತಿಳಿಯಬೇಕೆಂಬ ಮಹತ್ವದ ಉದ್ದೇಶದಿಂದ ಬಾಲಭವನವು ಸಂಚಾರಿ ಪಾರ್ಕ್ ಅಣಿಗೊಳಿಸಿ ಅವರ ಉಪಯೋಗಕ್ಕಾಗಿ ಅರ್ಪಣೆ ಮಾಡಿದೆ.ಚುಕು ಬುಕು ರೈಲು, ಗಗನಚುಂಬಿ ವೃಕ್ಷಗಳ ನೆರಳಿನಲ್ಲಿ ವಿಜ್ಞಾನದ ಆಟ ಪಾಠಗಳು ಹತ್ತು ಹಲವು ಆಟೋಟಗಳು ಮಕ್ಕಳನ್ನು ರಂಜಿಸುತ್ತಿದ್ದು, ಈಗ ಸಂಚಾರಿ ನಿಯಮಗಳನ್ನು ತಿಳಿಯುವ ಅವಕಾಶವನ್ನು ಬೋನಸ್ ರೂಪದಲ್ಲಿ ಒದಗಿಸಿಕೊಟ್ಟಂತಾಗಿದೆ.ಜನಸಂಖ್ಯಾ ಸ್ಫೋಟದಿಂದ ವಾಹನ ದಟ್ಟಣೆ ಹೆಚ್ಚುತ್ತಿದ್ದು ಪರಿಸರದ ಮೇಲೆಯೂ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ನಿಯಮಗಳನ್ನು ತಿಳಿ ಹೇಳುವ ಈ ಪ್ರಾಯೋಗಿಕ ಪಾರ್ಕ್ ಮಕ್ಕಳಿಗಂತೂ ಉಪಯುಕ್ತ. ಪರಿಸರ ಮಾಲಿನ್ಯ ತಡೆಗಟ್ಟಲು ರಸ್ತೆಗಳಲ್ಲಿ ಸೈಕಲ್‌ಗಳನ್ನು ಬಳಸುವ ಬಗ್ಗೆ ಅವರಲ್ಲಿ ಅರಿವು ಮೂಡಿಸುವ ಯೋಜನೆಯೂ ಇಲ್ಲಿದೆ.ಈ ಟ್ರಾಫಿಕ್ ಪಾರ್ಕ್‌ನಲ್ಲಿ ಸಾರಿಗೆ ಇಲಾಖೆ ಹಾಗೂ ಸಂಚಾರಿ ಪೋಲಿಸರು ನಿಗದಿತ ಸಮಯಕ್ಕೆ ಬಂದು ಮಕ್ಕಳಿಗೆ ಸಾರಿಗೆ ನಿಯಮ ಕುರಿತು ಮಾರ್ಗದರ್ಶನ ನೀಡುತ್ತಾರೆ. ಜತೆಗೆ ಪರಿಸರ ರಕ್ಷಣೆ ಕುರಿತಾಗಿಯೂ ಅರಿವು ಮೂಡಿಸುವ ವಿವಿಧ ಚಟುವಟಿಕೆ ನಡೆಸುತ್ತಾರೆ.ಬಾಲಭವನ ಎಲ್ಲ ಮಕ್ಕಳಿಗೂ ಮುಕ್ತ. ಸರ್ಕಾರಿ ಹಾಗೂ ಮಹಾನಗರ ಪಾಲಿಕೆಯ ಶಾಲಾ ಮಕ್ಕಳಿಗೆ ವಿಶೇಷ ಪ್ಯಾಕೇಜ್ ವ್ಯವಸ್ಥೆ ಮೂಲಕ ವಿವಿಧ ಆಟಿಗೆ, ಮನರಂಜನೆ, ಜ್ಞಾನ ವಿಜ್ಞಾನದ ಸೌಕರ್ಯ ಕಲ್ಪಿಸಿದೆ. ವಿಕಲಾಂಗ ಹಾಗೂ ಕಾರ್ಮಿಕ ಇಲಾಖೆಯ ವಿಶೇಷ ಶಾಲೆಗಳ ಮಕ್ಕಳಿಗೂ ಅನುಕೂಲ ಒದಗಿಸುತ್ತಿದೆ.ಮಕ್ಕಳ ಶೈಕ್ಷಣಿಕ ಜ್ಞಾನ ಹೆಚ್ಚಿಸುವುದರ ಜೊತೆಗೆ ಸಾಂಸ್ಕೃತಿಕ ಹಾಗೂ ಸೃಜನಾತ್ಮಕ ಚಟುವಟಿಕೆಗಳ ಮೂಲಕ ಅವರ ರಿವಿನ ಹರಿವು ಬೆಳೆಸುವ ಉದ್ದೇಶದ ಬಾಲಭವನ 1967ರಲ್ಲಿ ಕಬ್ಬನ್‌ಪಾರ್ಕ್‌ನಲ್ಲಿ ಆರಂಭವಾಗಿತ್ತು. ಇದೀಗ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತ ರಾಜ್ಯದ ಹಲವೆಡೆ ಶಾಖೆಗಳನ್ನು ಹೊಂದಿದೆ.ಚಿಣ್ಣರಿಗೆ ಮನೋಲ್ಲಾಸ ಒದಗಿಸುವುದರ ಜೊತೆಗೆ ಪರಿಸರ ಪ್ರೀತಿಯನ್ನು ಬೆಳೆಸಲು ಅಗತ್ಯವಾದ ವಿವಿಧ ಆಧುನಿಕ ಆಟೋಟ ಉಪಕರಣಗಳು ಇಲ್ಲಿವೆ.ಈ ಉಪಕರಣಗಳಿಗೆ ಹಾಗೂ ವಿಜ್ಞಾನ ಉದ್ಯಾನದ ಯಂತ್ರಗಳಿಗೆ ಸೀಸ ರಹಿತ ಬಣ್ಣಗಳನ್ನು ಉಪಯೋಗಿಸುವುದರ ಮೂಲಕ ಪರಿಸರ ಹಾಗೂ ಮಕ್ಕಳ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮಗಳಾಗದಂತೆ ಕ್ರಮ ಕೈಗೊಂಡಿರುವುದು ಬಾಲಭವನದ ಹೆಗ್ಗಳಿಕೆ, ಅಲ್ಲದೆ ಇಡೀ ದೇಶದಲ್ಲಿಯೇ ಇದೊಂದು ಮಾದರಿ.ವೈಜ್ಞಾನಿಕ ಮನೋಭಾವ ಬೆಳೆಸುವ, ಕುತೂಹಲ ತಣಿಸುವ, ಮನರಂಜನೆ ಒದಗಿಸುವ ಚಟುವಟಿಕೆಗಳ ಜತೆಗೆ ಮಹಾನಗರದ ಸುಗಮ ಸಂಚಾರಕ್ಕೆ ಉಪಯೋಗವಾಗುವ ಸಂಚಾರಿ ನಿಯಮಗಳನ್ನು ಪರಿಚಯ ಮಾಡಿಕೊಡುವ ಕಾರ್ಯಕ್ಕೂ ಬಾಲಭವನ ಕೈಹಾಕುವುದರ ಮೂಲಕ ಹೊಸ ಹೆಜ್ಜೆಗಳನ್ನು ಇಟ್ಟಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry