ಟ್ರಿಮ್ ಚಿಟ್ಟೆ!

ಶುಕ್ರವಾರ, ಜೂಲೈ 19, 2019
24 °C

ಟ್ರಿಮ್ ಚಿಟ್ಟೆ!

Published:
Updated:

`ಬಿ3', `ಲೂಸ್‌ಗಳು', `ಸೆಂಟ್ರಲ್ ಜೈಲ್'... ಹೀಗೆ ಬಿಡುಗಡೆಯಾಗಬೇಕಾದ ಚಿತ್ರಗಳ ಸಾಲೇ ಇದೆ. ಆದರೂ `ಒಲವೇ ಮಂದಾರ' ಖ್ಯಾತಿಯ ಶ್ರೀಕಿ (ಶ್ರೀಕಾಂತ್) ಸುಮ್ಮನೆ ಕುಳಿತಿಲ್ಲ. ಈಗ ಅವರು `ಪಾತರಗಿತ್ತಿ'ಯ ಬೆನ್ನೇರಿದ್ದಾರೆ.ಚಿತ್ರದ ಮುಹೂರ್ತ ಇದೇ ಐದರಂದು ಆರಂಭವಾಗಿದೆ. ಅದನ್ನು ತಿಳಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀಕಿ ಹೊಸ ಪೋಷಾಕಿನೊಂದಿಗೆ ಕಾಣಿಸಿಕೊಂಡರು. `ಒಲವೇ ಮಂದಾರ'ದ ಕಾಲದಿಂದಲೂ ಉದ್ದ ಕೇಶರಾಶಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಅವರೀಗ ಟ್ರಿಮ್ ಹುಡುಗ. ಇವರೇನಾ ಶ್ರೀಕಿ ಎನ್ನುವಷ್ಟು ಚಹರೆ ಬದಲಾಗಿದೆ. ಈ ಸುಧಾರಣೆಗೆ ಕಾರಣ `ಪಾತರಗಿತ್ತಿ'ಯ ಕತೆಯಂತೆ. ಚಿತ್ರದಲ್ಲಿ ಪ್ರೇಮ ಭಿಕ್ಷೆ ಬೇಡುವ ಡೀಸೆಂಟ್ ಹುಡುಗನ ಪಾತ್ರ ಅವರದು. ಅಲ್ಲದೆ ಅದೊಂದು ಪ್ರಬುದ್ಧ ಪಾತ್ರ ಎಂದು ಹೇಳಲೂ ಮರೆಯಲಿಲ್ಲ. ಡೀಸೆಂಟುತನ, ಪ್ರಬುದ್ಧತೆಗೆ ತಕ್ಕಂತೆ ಒಪ್ಪವಾಗಿದ್ದಾರೆ ಶ್ರೀಕಿ.ಚಿತ್ರದ ನಿರ್ದೇಶಕ ಕೆ. ಈಶ್ವರ್. ಅವರು ಅದರ ನಿರ್ಮಾಪಕ ಕೂಡ. ನಿರ್ಮಾಪಕನ ಜವಾಬ್ದಾರಿ ಹೊತ್ತಾಗ ಮಾತ್ರ ಅವರ ಹೆಸರು ಈಶ್ವರಪ್ಪ ಎಂದು ಬದಲಾಗುತ್ತದೆ. ಹತ್ತು ವರ್ಷಗಳಿಂದ ಗಾಂಧಿನಗರದ ದಿಗ್ಗಜರೊಂದಿಗೆ ದುಡಿದ ಅನುಭವ ಅವರ ಬತ್ತಳಿಕೆಯಲ್ಲಿದೆ. ಕತೆಗೆಂದೇ ಎಂಟು ಒಂಬತ್ತು ತಿಂಗಳು ಸವೆಸಿದ್ದಾರೆ. ನಂತರ ಅದಕ್ಕೆ ತಕ್ಕಂತೆ ಪಾತ್ರಧಾರಿಗಳನ್ನು ಹೊಂದಿಸಿದ್ದಾರೆ. ಅಂದಹಾಗೆ ನಿರ್ದೇಶನದ ಜೊತೆಗೆ ಕತೆ ಚಿತ್ರಕತೆ, ಸಾಹಿತ್ಯ, ಸಂಭಾಷಣೆಯ ಹೊಣೆ ಹೊತ್ತಿರುವ ಅವರು ಸಾಹಿತ್ಯದ ವಿದ್ಯಾರ್ಥಿ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ನೇರ ಚಿತ್ರರಂಗಕ್ಕೆ ಧುಮುಕಿದ್ದಾರೆ.ಒಂದೆಡೆ ಕೂರುವ ಸ್ವಭಾವ ಪಾತರಗಿತ್ತಿಯದಲ್ಲ. ಅದರದು ಚಂಚಲ ಚಿತ್ತ. ಇದುವರೆಗೆ ಹೆಣ್ಣನ್ನು ಪಾತರಗಿತ್ತಿ ಎಂದೆಲ್ಲಾ ಕರೆದಿರುವುದುಂಟು. ಆದರೆ ಹೆಣ್ಣಿಗಷ್ಟೇ ಚಂಚಲಚಿತ್ತವಿದೆಯೇ ಎನ್ನುವುದು ನಿರ್ದೇಶಕರ ಪ್ರಶ್ನೆ. ಆ ಪ್ರಶ್ನೆಯನ್ನಿಟ್ಟುಕೊಂಡು ಹೆಣೆದ ಕತೆ `ಪಾತರಗಿತ್ತಿ'ಯದು. ಹಾಗಾಗಿ ಪ್ರೇಕ್ಷಕರಿಗೆ ನಿಜವಾದ ಪಾತರಗಿತ್ತಿಯನ್ನು ಹುಡುಕುವ ಕೆಲಸ ನೀಡಿದ್ದಾರೆ.ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ಪ್ರಜೂ ಪೂವಯ್ಯ ಅವರಿಗೆ ಇದು ಎರಡನೇ ಸಿನಿಮಾ. ಅಣಜಿ ನಾಗರಾಜ ಅವರ `ಕಿತ್ತೋದ್ ಲವ್‌ಸ್ಟೋರಿ'ಯಲ್ಲಿ ನಟಿಸಿದ್ದರೂ ಅದಿನ್ನೂ ಬಿಡುಗಡೆಯ ಭಾಗ್ಯ ಪಡೆದಿಲ್ಲ. ಭೂಮಿ ಎಂಬ ಹುಡುಗಿಯಾಗಿ ನಟಿಸುತ್ತಿರುವ ಅವರಿಗೆ ಪಾತ್ರ ಸವಾಲಿನದಾಗಿ ಕಂಡಿದೆ. ಕಾರಣ ಪಾತ್ರಕ್ಕಿರುವ ಸಂಕೀರ್ಣತೆ. 21ನೇ ಶತಮಾನದ ಹುಡುಗಿಯ ತುಮುಲಗಳು, ಆಸೆ ಆಕಾಂಕ್ಷೆಗಳನ್ನೆಲ್ಲಾ ಪಾತ್ರ ಹೊಂದಿದೆಯಂತೆ.ಇನ್ನು ಸಂಗೀತದ ತೇರು ಎಳೆದಿರುವುದು ವೆಂಕಟಸ್ವಾಮಿ ಹಾಗೂ ಸಮೀರ್ ಕುಲಕರ್ಣಿ. ಆದರೆ ನಾದದ ಎಳೆಗಳನ್ನು ಪೂರ್ಣ ಹೊಸೆಯುವ ಮುನ್ನವೇ ವೆಂಕಟಸ್ವಾಮಿ ಮರಳಿ ಬಾರದ ಲೋಕಕ್ಕೆ ತೆರಳಿದರು. ನಾಲ್ಕೈದು ತಿಂಗಳ ಹಿಂದೆ ಸಂಭವಿಸಿದ ಅಪಘಾತವೊಂದು ಅವರ ಪ್ರಾಣ ಕಸಿದಿತ್ತು. ಕೀಬೋರ್ಡ್ ಕಲಾವಿದನಾಗಿ ದುಡಿಯುತ್ತಿದ್ದ ಸಮೀರ್ ಅರ್ಧಕ್ಕೇ ನಿಂತ ಪಲ್ಲವಿಯನ್ನು ಪೂರ್ಣಗೊಳಿಸುತ್ತಿದ್ದಾರೆ. `ಶ್ರೀಹರಿಕಥೆ' ಚಿತ್ರದಲ್ಲಿ ದುಡಿದ ಅನುಭವ ಅವರದು. ಒಟ್ಟು ಐದು ಹಾಡುಗಳು ಚಿತ್ರದಲ್ಲಿವೆ. ಎಲ್ಲದರಲ್ಲೂ ಮಾಧುರ್ಯಕ್ಕೆ ಹೆಚ್ಚು ಪ್ರಾಶಸ್ತ್ಯವಂತೆ.ಛಾಯಾಗ್ರಾಹಕ ರಾಕೇಶ್ ಸಿ. ತಿಲಕ್ ಅವರಿಗೆ ಇದು ಮೊದಲನೇ ಚಿತ್ರ. ಅವರು ಛಾಯಾಗ್ರಾಹಕ ಏಳುಕೋಟೆ ಚಂದ್ರು ಅವರರ ಪುತ್ರ. ತಂದೆಯೊಂದಿಗೆ ದುಡಿದ ಅನುಭವ ಅವರ ಹೊಸ ಸಾಹಸಕ್ಕೆ ಪೂರಕವಾಗಿದೆ. ಬೆಂಗಳೂರಿನಲ್ಲೇ ಕಥಾಭಾಗದ ಚಿತ್ರೀಕರಣ ನಡೆಯಲಿದ್ದು ಹಾಡುಗಳಿಗಾಗಿ ಬೇರೆಡೆಗೆ `ಪಾತರಗಿತ್ತಿ' ಹಾರಲಿದೆ. ಚಿತ್ರೀಕರಣಕ್ಕೆ ಮೂವತ್ತು ದಿನಗಳನ್ನು ಮೀಸಲಿಡಲಾಗಿದೆ. ಸಹ ನಿರ್ಮಾಪಕ ಎಂ.ಸಿ. ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry