ಟ್ರೇಗಳಲ್ಲಿ ಭತ್ತದ ನೇಜಿಬೆಳೆಸುವ ಹೊಸ ವಿಧಾನ

7

ಟ್ರೇಗಳಲ್ಲಿ ಭತ್ತದ ನೇಜಿಬೆಳೆಸುವ ಹೊಸ ವಿಧಾನ

Published:
Updated:

ಕಾರ್ಮಿಕರ ಕೊರತೆಯಿಂದ ಭತ್ತದ ನಾಟಿ, ಕೊಯ್ಲು ಇತ್ಯಾದಿ ಕೆಲಸಗಳಲ್ಲಿ ಯಂತ್ರಗಳನ್ನು ಬಳಸುವುದು ರೈತರಿಗೆ ಅನಿವಾರ್ಯವಾಗುತ್ತಿದೆ. ಕೇರಳದಲ್ಲಿ ನಿಗದಿತ ಶುಲ್ಕಕ್ಕೆ ಭತ್ತದ ಯಾಂತ್ರಿಕ ಪುನರ್ನಾಟಿ ಮಾಡಿಕೊಡುವುದನ್ನು  ವೃತ್ತಿಯನ್ನಾಗಿ ಮಾಡಿಕೊಂಡವರಿದ್ದಾರೆ.ಕೇರಳ ಕೃಷಿ ವಿಶ್ವವಿದ್ಯಾಲಯ ತರಬೇತಿ ಕೊಟ್ಟು ಮುನ್ನಡೆಸಿದ ಈ ಪಡೆಗೆ ‘ಆಹಾರ ಸುರಕ್ಷಾ ಸೇನೆ’ ಎಂದೇ ಹೆಸರು.ತ್ರಿಶೂರು ಜಿಲ್ಲೆಯಲ್ಲಿ ಈ ಸೇನೆ ವರ್ಷಕ್ಕೆ ಸುಮಾರು 9,000 ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಿಕೊಡುತ್ತಿದೆ.ಆಂಧ್ರ ಪ್ರದೇಶದ ರೈತ ಕುಟುಂಬವೊಂದು ಯಾಂತ್ರೀಕರಣದಲ್ಲಿ ಇನ್ನೂ ಮುಂದೆ ಹೋಗಿದೆ. ವಿಜಯವಾಡದ ಬೊಗಾಲ ರಾಮಕೃಷ್ಣ ಎಂಬ ರೈತರು ತಮ್ಮ  ಪತ್ನಿ ಹಾಗೂ ಸೋದರ ಅನಿಲ್ ಅವರ ನೇತೃತ್ವದಲ್ಲಿ ಇಂತಹ ತಂಡವೊಂದನ್ನು (ಅನಿಲ್ ಅಗ್ರೋಸ್)ಕಟ್ಟಿದ್ದಾರೆ. ಎರಡು ವರ್ಷಗಳಿಂದ ಅವರು ಇದೇ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಹೂಡಿದ ಬಂಡವಾಳ ಒಂದು ಕೋಟಿ ರೂ!ಯಾಂತ್ರಿಕ ಪುನರ್ನಾಟಿಗೆ ವಿಶಿಷ್ಟ ರೀತಿಯಲ್ಲಿ ಸಸಿ ಬೆಳೆಸಿಕೊಳ್ಳಬೇಕು. ಅನಿಲ್ ಅಗ್ರೋಸ್ ಟ್ರೇಗಳಲ್ಲಿ ನೇಜಿ (ಸಸಿ) ಬೆಳೆಸುತ್ತಿದೆ. ನೇಜಿ ತಯಾರಿಕೆಗೆ ಈ ಪದ್ಧತಿ ಉತ್ತಮ. ಇದಕ್ಕಾಗಿ ಕೊರಿಯಾದಿಂದ ಮಣ್ಣನ್ನು ಪುಡಿಮಾಡುವ ಪಲ್ವರೈಸರ್ ಹಾಗೂ ಸೀಡ್‌ಲಿಂಗ್ ಯಂತ್ರ ಆಮದು ಮಾಡಿಕೊಂಡಿದ್ದಾರೆ. ಸೀಡ್ಲಿಂಗ್ ಯಂತ್ರದಲ್ಲಿ ಪುಡಿ ಮಣ್ಣನ್ನು ತಟ್ಟೆಗೆ ಹಾಕುವ, ನಿಗದಿತ ಪ್ರಮಾಣದಲ್ಲಿ ನೀರು ಹನಿಸುವ, ಸಮನಾಗಿ ಬೀಜ ಬಿತ್ತುವ ಹಾಗೂ ಕೊನೆಗೆ ಮೇಲ್ಮಣ್ಣಿನ್ನೂ ಪದರವಾಗಿ ಉದುರಿಸಿಕೊಡುವ ಉಪ ಯಂತ್ರಗಳಿವೆ. ಮೋಟರ್‌ಗೆ ಜೋಡಿಸಿದ ಕನ್ವೆಯರ್ ಬೆಲ್ಟ್ ಸಹಾಯದಿಂದ ತಟ್ಟೆಗಳು ಒಂದಾದ ನಂತರ ಇನ್ನೊಂದು ಮುಂದಕ್ಕೆ ಸಾಗುತ್ತವೆ.ಬಿತ್ತನೆ ಮಾಡಿದ ದಿನವೇ ಟ್ರೇಗಳನ್ನು ರೈತನ ವಶಕ್ಕೆ ಕೊಡುತ್ತಾರೆ. ಅವುಗಳಿಗೆ ಹದಿನಾರು ದಿನಗಳ ಕಾಲ ನೀರುಣಿಸುವುದು ರೈತನ ಕೆಲಸ. 16ನೇ ದಿನ ಪುನರ್ನಾಟಿ ಮಾಡಬಹುದು. ಖಾಲಿ ಟ್ರೇಗಳನ್ನು ಅವರೇ ಹಿಂದಕ್ಕೆ  ಒಯ್ಯುತ್ತಾರೆ. ಈ ಸೇವೆಗಾಗಿಯೇ ‘ಅನಿಲ್ ಅಗ್ರೋಸ್’ 14 ಲಕ್ಷ ರೂ ಬಂಡವಾಳ ಹೂಡಿ 14,000 ಟ್ರೇಗಳನ್ನು ಖರೀದಿಸಿದೆ.ಚಾಪೆ ನೇಜಿಯಲ್ಲಿ ಕಿತ್ತು ನೆಡುವಾಗ ಒಂದು ತಾಸಿಗಿಂತ ತಡವಾದರೆ ನಾಟಿಯ ಕೆಲಸ ಸಮರ್ಪಕವಾಗುವುದಿಲ್ಲ; ಅಲ್ಲಲ್ಲಿ ಬಾಕಿ ಇರುತ್ತದೆ. ಯಂತ್ರ ಸಹಾಯದಿಂದ ತಯಾರಿಸಿದ ಟ್ರೇ ನೇಜಿ ನಾಟಿ ಮಾಡಲು ಒಂದು ದಿನ ತಡವಾದರೂ ತೊಂದರೆ ಇಲ್ಲವಂತೆ.ವಿಜಯವಾಡದಲ್ಲಿರುವ ಅನಿಲ್ ಅಗ್ರೋಸ್ ಕೇಂದ್ರದಲ್ಲೇ ಟ್ರೇ (ತಟ್ಟೆ) ನೇಜಿ ತಯಾರಿಸಿ ಪುನರ್ನಾಟಿಗಾಗಿ ರೈತರ ಹೊಲಕ್ಕೆ ಸಾಗಿಸುತ್ತಿದ್ದರು. ಆದರೆ ಹಳ್ಳಿ ರಸ್ತೆಗಳಲ್ಲಿ ಸಾಗಿಸುವಾಗ ನೇಜಿಗೆ ಹೆಚ್ಚು ಹಾನಿಯಾಗುತ್ತಿತ್ತು. ಕೇಂದ್ರೀಕೃತ ನರ್ಸರಿ ಮಾಡಿದಾಗ ಬೆಳೆಗೆ ಹಾನಿಯಾದರೆ ಸಸಿ ಬೆಳೆಸಿದ  ಕ್ರಮದಲ್ಲಿ ಲೋಪವಾಗಿದೆ ಎಂದು ರೈತರು ಭಾವಿಸಲು ಅವಕಾಶವಿರುತ್ತದೆ. ಬಿತ್ತನೆ ನಂತರ ಟ್ರೇಗಳನ್ನು ರೈತರಿಗೆ ಕೊಟ್ಟರೆ ಅವರೇ ಬೆಳೆಸಿಕೊಂಡ ತೃಪ್ತಿ ಇರುತ್ತದೆ ಎನ್ನುತ್ತಾರೆ ರಾಮಕೃಷ್ಣ.ರೈತರೇ ಬೀಜ ತಂದು ಕೊಟ್ಟರೆ ಅಷ್ಟು ಶುಲ್ಕ ಕಡಿಮೆ. ಇಲ್ಲವಾದರೆ ಅವರು ಇಷ್ಟಪಡುವ ತಳಿಯ ಬೀಜಗಳನ್ನೇ ಖರೀದಿಸಿ ಬಿತ್ತನೆ ಮಾಡಿಕೊಡುತ್ತಾರೆ. ನರ್ಸರಿ ತಯಾರಿ, ಪಡ್ಲಿಂಗ್ ಮತ್ತು ನೇಜಿ ಪುನರ್ನಾಟಿ ಸೇರಿದಂತೆ ಒಂದು ಎಕರೆಗೆ ಶುಲ್ಕ 5,000 ರೂ. ಇದರಲ್ಲಿ ಕೊಯ್ಲಿನ ವೆಚ್ಚ ಸೇರಿಲ್ಲ. ಅನಿಲ್ ಅಗ್ರೋಸ್ ಸಂಸ್ಥೆಯ ಮೊಬೈಲ್ ನಂಬರ್- 098668 85844

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry