ಶನಿವಾರ, ಮೇ 8, 2021
26 °C
ಸಣ್ಣ ಕೈಗಾರಿಕೆ ಉಳಿವಿಗೆ ಮನವಿ

ಟ್ರೇಡ್ ಲೈಸನ್ಸ್ ಶುಲ್ಕ ರದ್ದುಪಡಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಿತಿಮೀರಿದ ಟ್ರೇಡ್ ಲೈಸನ್ಸ್ ಶುಲ್ಕದ ಮೂಲಕ ಸಣ್ಣ ಕೈಗಾರಿಕೆಗಳ ಮೇಲೆ ಗದಾಪ್ರಹಾರ ನಡೆಸಿದ್ದು, ಈ ಶುಲ್ಕವನ್ನು ಕೂಡಲೇ ರದ್ದುಗೊಳಿಸಬೇಕು' ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಒಕ್ಕೂಟದ (ಅಸೋಚಾಮ್) ದಕ್ಷಿಣ ವಲಯದ ಸಹ ಅಧ್ಯಕ್ಷ ಜೆ. ಕ್ರಾಸ್ಟಾ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, `ಸಣ್ಣ ಪ್ರಮಾಣದ ಉದ್ದಿಮೆಗಳಿಗೂ ್ಙ35,000ದಿಂದ 40,000 ಶುಲ್ಕ ವಿಧಿಸಲಾಗುತ್ತಿದೆ. ಹೀಗಾಗಿ ಹೊಸ ಉದ್ದಿಮೆ ಸ್ಥಾಪಿಸಲು ಯಾರೂ ಮುಂದೆ ಬರುತ್ತಿಲ್ಲ' ಎಂದು ದೂರಿದರು.`ಬೆಂಗಳೂರಿನಲ್ಲಿ ಶೇ 93ರಷ್ಟು ಸಣ್ಣ ಉದ್ದಿಮೆಗಳು ಖಾಸಗಿ ಕೈಗಾರಿಕಾ ಪ್ರದೇಶದಲ್ಲೇ ಇವೆ. ಶೇ 7ರಷ್ಟು ಉದ್ದಿಮೆಗಳು ಮಾತ್ರ ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ನಿವೇಶನದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಖಾಸಗಿ ಕೈಗಾರಿಕಾ ಪ್ರದೇಶದಲ್ಲಿ ಏನೊಂದೂ ಸೌಲಭ್ಯ ಇಲ್ಲ. ಕಸ ವಿಲೇವಾರಿ ಸಹ ಆಗುತ್ತಿಲ್ಲ. ಅವುಗಳೆಲ್ಲ ಕೊಳಚೆ ಪ್ರದೇಶಗಳಾಗಿ ಮಾರ್ಪಟ್ಟಿವೆ' ಎಂದು ಹೇಳಿದರು.`ಬಿಬಿಎಂಪಿ ತೆರಿಗೆ ಪಡೆದರೂ ಸೌಲಭ್ಯಗಳನ್ನು ನೀಡಿಲ್ಲ. 1-2 ಎಕರೆಯಷ್ಟು ಸರ್ಕಾರಿ ಪ್ರದೇಶಗಳು ನಗರದ ಹಲವೆಡೆ ಇವೆ. ಆ ಪ್ರದೇಶದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಿ, ಅವುಗಳನ್ನು ಉದ್ದಿಮೆಗಳಿಗೆ ಗುತ್ತಿಗೆ ನೀಡಬೇಕು. ಕೈಗಾರಿಕೆಗಳಿಗೆ ಗುಣಮಟ್ಟದ ಹಾಗೂ ಅನಿರ್ಬಂಧಿತವಾದ ವಿದ್ಯುತ್ ಪೂರೈಕೆ ಮಾಡಬೇಕು' ಎಂದು ಆಗ್ರಹಿಸಿದರು.`ಹೊಸ ಸರ್ಕಾರಕ್ಕೆ ಅಭಿವೃದ್ಧಿ ಕಾರ್ಯಸೂಚಿ' ಕೈಪಿಡಿಯನ್ನು ಬಿಡುಗಡೆ ಮಾಡಿದ ಅಸೋಚಾಮ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ.ಎಸ್. ರಾವತ್, `2004-07ರ ಅವಧಿಯಲ್ಲಿ ಕರ್ನಾಟಕದ ವಾರ್ಷಿಕ ಅಭಿವೃದ್ಧಿ ದರ ಶೇ 11ರಷ್ಟಿತ್ತು. 2008-11ರ ಅವಧಿಯಲ್ಲಿ ಅದರ ಪ್ರಮಾಣ ಶೇ 6.8ಕ್ಕೆ ಕುಸಿದಿದೆ.ದಕ್ಷಿಣದ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದ್ದ ಕರ್ನಾಟಕ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಅಭಿವೃದ್ಧಿ ಯೋಜನೆಗಳ ಕಡೆಗೆ ಸರ್ಕಾರ ತುರ್ತು ಗಮನಹರಿಸುವುದು ಅಗತ್ಯವಾಗಿದೆ' ಎಂದು ವಿವರಿಸಿದರು.`ಸಾವಯವ ಕೃಷಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದು, ವಾರ್ಷಿಕ ್ಙ12 ಲಕ್ಷ ಕೋಟಿಯಷ್ಟು ಜಾಗತಿಕ ಮಾರುಕಟ್ಟೆ ಹೊಂದಿದೆ. ಉಳಿದ ಬೆಳೆಗಳಿಗಿಂತ ಸಾವಯವ ಕೃಷಿ ಉತ್ಪನ್ನಗಳಿಗೆ ಶೇ 250ರಷ್ಟು ಅಧಿಕ ಆದಾಯ ಸಿಗುತ್ತಿದೆ. ಸರ್ಕಾರ ಈ ಕೃಷಿ ಪದ್ಧತಿಗೆ ಆದ್ಯತೆ ಮೇರೆಗೆ ಉತ್ತೇಜನ ನೀಡಬೇಕು' ಎಂದು ಸಲಹೆ ನೀಡಿದರು.`ಆಡಳಿತ ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿ, ಕೌಶಲ ಅಭಿವೃದ್ಧಿ ತರಬೇತಿ, ತೆರಿಗೆಯಲ್ಲಿ ವಿನಾಯ್ತಿ ಸೇರಿದಂತೆ ಅಗತ್ಯವಾದ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವ ಮೂಲಕ ಕೈಗಾರಿಕೆಗೆ ಮರುಚೇತನ ನೀಡಬೇಕು' ಎಂದು ಆಗ್ರಹಿಸಿದರು. ಅಸೋಚಾಮ್ ದಕ್ಷಿಣ ವಲಯ ಅಧ್ಯಕ್ಷ ಆರ್. ಸಣ್ಣರೆಡ್ಡಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.