ಟ್ರೈವ್ಯಾಲಿಯ ವಂಚನೆ ವೃತ್ತಾಂತ

7

ಟ್ರೈವ್ಯಾಲಿಯ ವಂಚನೆ ವೃತ್ತಾಂತ

Published:
Updated:

ಅಟ್ಲಾಂಟಾ (ಅಮೆರಿಕ): ಕ್ಯಾಲಿಫೋರ್ನಿಯದ ಪ್ಲೆಸೆಂಟಾನ್‌ನಲ್ಲಿ ಇರುವುದಾಗಿ ಘೋಷಿಸಿಕೊಂಡಿದ್ದ ಟ್ರೈವ್ಯಾಲಿ ಯೂನಿವರ್ಸಿಟಿಯ ಮೇಲೆ ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಗೆ ಒಳಪಡುವ ಐಸಿಇ (ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್) ಜನವರಿ 19ರಂದು ದಾಳಿ ನಡೆಸಿತ್ತು. ಈ ಯೂನಿವರ್ಸಿಟಿ ವಿದ್ಯಾರ್ಥಿ-ವೀಸಾಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಜನರಿಗೆ ಅಮೆರಿಕಕ್ಕೆ ಬರಲು, ವಲಸಿಗರಾಗಿ ಇದ್ದುಕೊಂಡು ಕೆಲಸ ಮಾಡಲು ಸಾಧ್ಯವಾಗುವಂತೆ ಕಾನೂನು    ಬಾಹಿರವಾಗಿ ವೀಸಾ ಪಡೆಯಲು ನೆರವಾಗುವ ಅರ್ಜಿಗಳನ್ನು ವಿತರಿಸುತ್ತಿದೆ ಎಂದು ದೂರು ದಾಖಲಿಸಿ, ಯೂನಿವರ್ಸಿಟಿ ಎಂದು ಕರೆದುಕೊಳ್ಳುತ್ತಿದ್ದ ಈ ‘ಡಿಪ್ಲೊಮಾ ಕಾರ್ಖಾನೆ’ಯನ್ನು ತುರ್ತಾಗಿ ಬಂದ್ ಮಾಡಿಸಿತ್ತು. ಆ ಸಮಯಕ್ಕೆ ಅಲ್ಲಿ ವಿದ್ಯಾರ್ಥಿಗಳೆಂದು ದಾಖಲಾಗಿದ್ದ 1,555 ಜನ ಭಾರತೀಯರಲ್ಲಿ ಆಂಧ್ರದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು,  ಆನಂತರ ಉತ್ತರ ಭಾರತದವರು.ಯೂನಿವರ್ಸಿಟಿಯೇ ಬಂದ್ ಆದ ಮೇಲೆ ವಿದ್ಯಾರ್ಥಿಗಳು ಏನು ಮಾಡುತ್ತಾರೆ? ದೊಡ್ಡ ಹುಯಿಲೆದ್ದಿತು. ನಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ಅಮೆರಿಕಾ ತ್ರಿಶಂಕು ಸ್ಥಿತಿಗೆ ತಳ್ಳಿದೆ ಎಂದು ಭಾರತದ ಮಾಧ್ಯಮಗಳಲ್ಲಿ ಭಾವನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು. ಪೋಷಕರು ದಿಗ್ಬ್ರಾಂತರಾದರು, ವಿದ್ಯಾರ್ಥಿಗಳು ದಿಕ್ಕೆಟ್ಟು ಹೋದರು. ಆದರೀಗ ವಿಷಯದ ಎಲ್ಲ ಮಜಲುಗಳೂ ಹೊರಬರುತ್ತಿವೆ. ಈ ಪರಿಸ್ಥಿತಿ ಎದುರಾಗಲು ಅಮೆರಿಕಾ ಸರ್ಕಾರ ಕಾರಣವೋ? ಟ್ರೈವ್ಯಾಲಿಯಂಥ ನಕಲಿ ವಿಶ್ವವಿದ್ಯಾನಿಲಯಗಳು ಕಾರಣವೋ? ಕಡಿಮೆ ಖರ್ಚಿಗೆ ಕಷ್ಟಪಟ್ಟು ಓದುವ ಅಗತ್ಯವಿಲ್ಲದೆ, ಅಮೆರಿಕಾ ಎಂಬ ಮಾಯಾಲೋಕದಲ್ಲಿ ಒಂದು ಡಿಗ್ರಿ ಗಳಿಸಬೇಕೆಂದು ಆಸೆಪಡುವ ವಿದ್ಯಾರ್ಥಿಗಳು ಕಾರಣರೋ? ಅಥವಾ ಏನಾದರೂ ಮಾಡು.. ಒಟ್ಟು ವಿದೇಶದಲ್ಲಿ ಓದು ಎಂದು ಕೂಡಿಟ್ಟ ಗಂಟನ್ನು ಕೊಟ್ಟು, ಹಿಂದೆ ಮುಂದೆ ವಿಚಾರಿಸದೆ ಮಕ್ಕಳನ್ನು ವಿಮಾನ ಹತ್ತಿಸುವ ಪೋಷಕರ ಆತುರ-ಅಮಾಯಕತೆ ಕಾರಣವೋ?ಹಿನ್ನೆಲೆ: ಟ್ರೈವ್ಯಾಲಿ ಯೂನಿವರ್ಸಿಟಿಯ ಮಾಸ್ಟರ್ ಪ್ಲಾನ್, ಸಂಸ್ಥಾಪನೆ, ಒಡೆತನ ಎಲ್ಲವೂ ಡಾಕ್ಟರ್ ಸೂಸನ್ ಸೂ ಅವರದ್ದು. ಚೀನಾ ಮೂಲದ ಈಕೆ ಕ್ಯಾಲಿಫೋರ್ನಿಯದ ಬರ್ಕ್ಲಿ ಯೂನಿವರ್ಸಿಟಿಯಲ್ಲಿ ಡಾಕ್ಟರೇಟ್ ಪದವೀಧರೆ! ಬಹಳ ಜಾಣೆ. ಕೆಲವು ವರ್ಷಗಳ ಹಿಂದೆ ಅಮೆರಿಕ ಸರ್ಕಾರ ನಿಪುಣ ಕೆಲಸಗಾರರಿಗೆ (ಸ್ಕಿಲ್ಡ್ ವರ್ಕರ್) ಕೊಡುತ್ತಿದ್ದ ಎಚ್1 ವೀಸಾಗಳ ಸಂಖ್ಯೆಯನ್ನು ಕಡಿಮೆ ಮಾಡಿತ್ತು. ಅಮೆರಿಕಾದ ಪ್ರಜೆಗಳಿಗಿಂತ ಕಡಿಮೆ ವೇತನಕ್ಕೆ ಸಂತೋಷವಾಗಿಯೇ ದುಡಿಯುತ್ತಿದ್ದ ಎಚ್ 1 ನೌಕರರ ಸಂಖ್ಯೆ ಅನಾಮತ್ ಕಡಿಮೆಯಾಗಿದ್ದು ಹಲವಾರು ಸಣ್ಣ ಕಂಪೆನಿಗಳಿಗೆ ಭಾರೀ ತಲೆಬಿಸಿಯಾಗಿತ್ತು. ವಲಸಿಗರಾಗಿ ಅಮೆರಿಕಾಗೆ ಬರುವವರಿಗೆ ಈ ವೀಸಾಗಳೇ ಸಕಲ ಅಸ್ತಿತ್ವ. ಎಚ್1 ನೌಕರರ ಸಂಗಾತಿಗಳಿಗೆ ಕೊಡುವ ಎಚ್4 ವೀಸಾದಲ್ಲಿಯೂ ಕೆಲಸ ಮಾಡುವಂತಿಲ್ಲ. ಆದರೆ ವಿದ್ಯಾರ್ಥಿ ವೀಸಾದಲ್ಲಿ (ಓದುತ್ತಲೇ ಪಾರ್ಟ್ ಟೈಮ್) ಕೆಲಸ ಮಾಡಲು ಅವಕಾಶವಿದೆ.ಕೆಲಸಗಾರರ ಕೊರತೆ ಮತ್ತು ಬೇಡಿಕೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ, ಸ್ವತಃ ವಲಸಿಗರಾಗಿದ್ದ ಡಾಕ್ಟರ್ ಸೂ, 2008ರಲ್ಲಿ ಇಂಟರ್ನೆಟ್ ಡೊಮೇನ್ ಒಂದನ್ನು ಖರೀದಿಮಾಡಿ ಅದಕ್ಕೆ ಟ್ರೈವ್ಯಾಲಿ ಎಂದು ಹೆಸರಿಟ್ಟು ವ್ಯವಹಾರ ಶುರು ಮಾಡಿದರು; ಹೇಗಾದರೂ ಅಮೆರಿಕಾಗೆ ಬರಬೇಕೆನ್ನುವವರ ಕಾತರ ಮತ್ತು ದುಡಿದು ಹಣ ಮಾಡಬೇಕೆನ್ನುವವರ ತುರ್ತನ್ನು ತಮ್ಮ ವ್ಯವಹಾರದ ಯಶಸ್ಸಿಗೆ ಬಂಡವಾಳವನ್ನಾಗಿಟ್ಟುಕೊಂಡರು.ತಮ್ಮ ಯೂನಿವರ್ಸಿಟಿಗೆ ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಆಫ್ ಬೈಬಲ್ ಕಾಲೇಜಸ್ ಅಂಡ್ ಸೆಮಿನರೀಸ್ (IABCS) ಎಂಬ ಜಾರ್ಜಿಯ ರಾಜ್ಯದಲ್ಲಿನ ಚಿಕ್ಕ ಧಾರ್ಮಿಕ ಸಂಸ್ಥೆಯೊಂದರಿಂದ ಅಕ್ರೆಡಿಟೇಶನ್ ಮಾಡಿಕೊಂಡು ಅದನ್ನೇ ದೊಡ್ಡದಾಗಿ ಪ್ರಚುರಪಡಿಸಿದರು. ‘ಟ್ರೈವ್ಯಾಲಿ ಒಂದು ಕ್ರೈಸ್ತ ಧಾರ್ಮಿಕ-ಶಿಕ್ಷಣ ಸಂಸ್ಥೆ. ಉತ್ತಮ ಕ್ರೈಸ್ತ ವೈದ್ಯರು, ತಂತ್ರಜ್ಞರು, ಇಂಜಿನಿಯರುಗಳು, ವಿಜ್ಞಾನಿಗಳನ್ನು ತಯಾರು ಮಾಡುವುದು ನಮ್ಮ ಉದ್ದೇಶ...’ ಎಂದೆಲ್ಲಾ ತನ್ನ ವೆಬ್‌ಸೈಟಿನಲ್ಲಿ ಬರೆದುಕೊಂಡರು. ಧರ್ಮದ ಹೆಸರು ಕೊಟ್ಟರೆ ಸಂಸ್ಥೆಯ ತಂಟೆಗೆ ಯಾರೂ ಸುಲಭವಾಗಿ ಬರುವುದಿಲ್ಲ ಎಂದು ಆಕೆ ಭಾವಿಸಿರಲೂಬಹುದು.ಹಾಗೇ, ಸುಳ್ಳು ದಾಖಲೆಗಳನ್ನು ಒದಗಿಸಿ ಟ್ರೈ ವ್ಯಾಲಿಗೆ ಸ್ಟೂಡೆಂಟ್ ಅಂಡ್ ಎಕ್ಸ್‌ಚೇಂಜ್ ವಿಸಿಟರ್ ಇನ್ಫರ್ಮೇಶನ್ ಸಿಸ್ಟೆಮ್ (SEVIS) ಎನ್ನುವ ಕೇಂದ್ರದ ಕಾನೂನಿನಡಿ ಗುರುತು ಪಡೆದುಕೊಂಡರು. 2001ರ ಸೆಪ್ಟೆಂಬರ್ 11ರಂದು (9/11) ಅಮೆರಿಕಾ ಮೇಲೆ ದಾಳಿ ಮಾಡಿದ ಮಂದಿ ವಿದ್ಯಾರ್ಥಿ-ವೀಸಾದಲ್ಲಿದ್ದರೂ ಯಾವ ಸಂಸ್ಥೆಯಲ್ಲಿಯೂ ಓದುತ್ತಿರಲಿಲ್ಲ. ಇಂತಹವರನ್ನು ಪತ್ತೆ ಮಾಡಲು ಸೆಪ್ಟೆಂಬರ್ 11ರ ನಂತರ ಅಮೆರಿಕಾ ಮಾಡಿದ್ದ ಸಣ್ಣದೊಂದು ಮಾರ್ಪಾಡು ಈ ಎಸ್‌ಇವಿಐಎಸ್ ಜನರ ನಂಬಿಕೆಗಳಿಸಲು ಇದು ಸಾಕಾಗಿತ್ತು.

ಟ್ರೈವ್ಯಾಲಿಯ ವೆಬ್ ಸೈಟ್ ಮೇಲುನೋಟಕ್ಕೆ ವಿಶ್ವವಿದ್ಯಾನಿಲಯದ ವೆಬ್ ಸೈಟ್‌ಗಳನ್ನು ಹೋಲುತ್ತಿತ್ತಾದರೂ, ವಿಶ್ವವಿದ್ಯಾಲಯವೊಂದಕ್ಕೆ ಬೇಕೇ ಬೇಕಾಗಿದ್ದ, ಅಮೆರಿಕಾದ ಡಿಪಾರ್ಟ್‌ಮೆಂಟ್ ಆಫ್ ಎಜುಕೇಷನ್‌ನಿಂದ ಅಕ್ರೆಡಿಟೇಷನ್ ಅಥವಾ ಗುರುತು ಟ್ರೈವ್ಯಾಲಿಗೆ ಸಿಕ್ಕಿರಲಿಲ್ಲ.ಸಾಧಾರಣ ವಿಶ್ವವಿದ್ಯಾಲಯವೊಂದರಲ್ಲಿ ಕೋರ್ಸ್ ಒಂದಕ್ಕೆ ಕನಿಷ್ಠ 20,000 ಡಾಲರ್ ಖರ್ಚಾಗುತ್ತದೆ, ಆದರೆ ಟ್ರೈವ್ಯಾಲಿ, ಮಾಸ್ಟರ್ಸ್ ಆಗಿರಲಿ, ಡಾಕ್ಟರೇಟ್ ಆಗಿರಲಿ (ವೆಬ್ ಸೈಟ್‌ನಲ್ಲಿ ಕೋರ್ಸ್ ಒಂದಕ್ಕೆ 20,000 ಡಾಲರ್ ಎಂದು ಹೇಳಿಕೊಂಡರೂ), ಒಂದು ಕೋರ್ಸ್ ಅನ್ನು 5,500 ಡಾಲರ್‌ಗೆ ಮುಗಿಸುತ್ತಿತ್ತು. ಇಲ್ಲಿ ವಿದ್ಯಾರ್ಥಿಗಳು ಯಾವುದೇ ತರಗತಿಗಳಿಗೂ ಹಾಜರಾಗುವ ಅಗತ್ಯವಿರಲಿಲ್ಲ.ಎಲ್ಲ ಕೋರ್ಸ್‌ಗಳನ್ನು ಆನ್‌ಲೈನ್ ಮಾಡಿ ಮುಗಿಸಬಹುದಿತ್ತು! ಎಫ್1 (ವಿದ್ಯಾರ್ಥಿ-ವೀಸಾ) ನಿಯಮದ ಪ್ರಕಾರ ಅಂತರರಾಷ್ಟ್ರೀಯ ಫುಲ್ ಟೈಮ್ ವಿದ್ಯಾರ್ಥಿಯೊಬ್ಬ ತನ್ನ ಇಡೀ ಕೋರ್ಸ್‌ನಲ್ಲಿ ಒಂದು ಅಥವಾ ಎರಡು ಆನ್‌ಲೈನ್ ತರಗತಿಗಳನ್ನಷ್ಟೇ ತೆಗೆದುಕೊಳ್ಳಬಹುದು. ಆದರೆ ಟ್ರೈವ್ಯಾಲಿಯಲ್ಲಿ ಎಲ್ಲವೂ ಆನ್‌ಲೈನ್. ಅಂದರೆ ವಿದ್ಯಾರ್ಥಿಗಳು ಕ್ಲಾಸಿಗೆ ಬರುವುದು ಬೇಡ, ಮೇಷ್ಟರು ಕ್ಲಾಸಿಗೆ ಬರುವುದೂ ಬೇಡ. ಎಲ್ಲರೂ ಅವರವರ ಮನೆಯಲ್ಲೋ, ಕಾಫಿ ಶಾಪ್‌ನಲ್ಲೋ ಕುಳಿತು ಇಂಟರ್‌ನೆಟ್ ಸಹಾಯದಿಂದ ಕ್ಲಾಸ್ ನಡೆಸಬಹುದಿತ್ತು!ಟ್ರೈವ್ಯಾಲಿಗೆ ಸೇರಲ್ಪಟ್ಟ ವಿದ್ಯಾರ್ಥಿಗೆ ವಿದ್ಯಾರ್ಥಿ-ವೀಸಾ ಮತ್ತು ಫುಲ್ ಟೈಮ್ ಕೆಲಸ ಮಾಡಲು ಅಗತ್ಯವಿರುವ ಓಪಿಟಿ (Optional Practical Training) ಮತ್ತು ಸಿಪಿಟಿ (Curricular Practical Training) ದಾಖಲೆಗಳನ್ನು ತಕ್ಷಣವೇ ವಿತರಿಸಲಾಗುತ್ತಿತ್ತು. ಅವರು ತಮ್ಮ ವೀಸಾ, ಸಿಪಿಟಿ, ಒಪಿಟಿಗಳನ್ನಿಟ್ಟುಕೊಂಡು ಅಮೆರಿಕಾದ ಯಾವುದೇ ಭಾಗದಲ್ಲಿರುವ ಯಾವುದೇ ಕಂಪೆನಿಗಾದರೂ ಕೆಲಸ ಮಾಡಬಹುದಿತ್ತು. ಒಟ್ಟಿನಲ್ಲಿ ಸಮಯಕ್ಕೆ ಸರಿಯಾಗಿ ಡಾಕ್ಟರ್ ಸೂ ಗೆ ಫೀಜ್ ಕಟ್ಟಿದರೆ ಸಾಕಿತ್ತು! ವಾಸ್ತವವಾಗಿ, ವಿದ್ಯಾರ್ಥಿಯೊಬ್ಬ (ಉದಾಹರಣೆಗೆ) ಕಂಪ್ಯೂಟರ್ ಚಿಪ್‌ಗಳ ಕುರಿತಾಗಿ ತರಗತಿ ತೆಗೆದುಕೊಂಡಾಗ ಅದನ್ನು ಪ್ರಾಕ್ಟಿಕಲ್ ಆಗಿ ಅರ್ಥ ಮಾಡಿಕೊಳ್ಳಲು ಅನುಕೂಲವಾಗುವಂತೆ ಆ ಸೆಮಿಸ್ಟರಿನ ಕಾಲಾವಧಿಗೆ ಸಿಪಿಟಿ ಎಂಬ ದಾಖಲೆಯನ್ನೂ, ವಿದ್ಯಾರ್ಥಿಯೊಬ್ಬ ತನ್ನ ಕೋರ್ಸನ್ನು ಮುಗಿಸಿ-ಡಿಗ್ರಿ ಪಡೆದು ಅಮೆರಿಕಾದ ಯಾವುದಾದರೂ ಕಂಪೆನಿಯಲ್ಲಿ ಕೆಲಸ ಮಾಡಲು ಇಚ್ಛಿಸಿದರೆ ಒಂದು ವರ್ಷ ಆತ ಕೆಲಸ ಮಾಡಿ ಅನುಭವ ಪಡೆಯಲು ಅನುಕೂಲವಾಗುವಂತೆ ಒಪಿಟಿ ಎಂಬ ದಾಖಲೆಯನ್ನೂ ವಿದ್ಯಾರ್ಥಿ-ವೀಸಾದವರಿಗೆ ಕೊಡಲಾಗುತ್ತದೆ. ಆದರೆ ಟ್ರೈವ್ಯಾಲಿಯಲ್ಲಿ ವಿದ್ಯಾರ್ಥಿಗಳು ದಾಖಲಾಗಿ ಫೀಜು ಕಟ್ಟಿದ ತಕ್ಷಣವೇ ಇವುಗಳ ವ್ಯವಸ್ಥೆ ಮಾಡುತ್ತಿದ್ದರು! ಇಲ್ಲಿಗೆ ದಾಖಲಾಗಲು ಒಳ್ಳೆಯ ಜಿಆರ್‌ಇ ಅಥವಾ ಜಿ-ಮ್ಯಾಟ್ ಅಂಕಗಳೂ ಬೇಕಿರಲಿಲ್ಲ. ಬೇರೆ ಯಾವ ವಿಶ್ವವಿದ್ಯಾಲಯದಲ್ಲಿ ಸೀಟು ಸಿಗದಿದ್ದರೂ ಟ್ರೈವ್ಯಾಲಿಯಲ್ಲಿ ತ್ರಾಸವಿಲ್ಲದೆ ಸಿಗುತ್ತಿತ್ತು.ಸುಳ್ಳು ದಾಖಲೆಗಳನ್ನು ಒದಗಿಸಿ 2009ರ ಫೆಬ್ರುವರಿಯಲ್ಲಿ ತನ್ನ ನಕಲಿ ಸಂಸ್ಥೆಯ ಮೂಲಕ ವೀಸಾ ಪಡೆಯಲು ಅವಶ್ಯಕವಾದ ಅರ್ಜಿ ವಿತರಿಸುವ ಹಕ್ಕನ್ನೂ ಸೂ ಪಡೆದುಕೊಂಡರು.

 ಆಗ 30 ಜನಕ್ಕೆ ಎಫ್1 ವೀಸಾ ಕೊಡಲಾಗಿತ್ತು. ಮೇ 2009ರಲ್ಲಿ 11 ಜನಕ್ಕೆ ಎಫ್1 ವಿತರಿಸಲಾಗಿತ್ತು. ಮೇ 2010ರಷ್ಟರಲ್ಲಿ ಇಲ್ಲಿ 939 ಜನ ವಿದ್ಯಾರ್ಥಿಗಳಿದ್ದರು! ಒಂದೇ ವರ್ಷಕ್ಕೆ ಟ್ರೈವ್ಯಾಲಿಯ ವಿದ್ಯಾರ್ಥಿಗಳ ಸಂಖ್ಯೆ ಆಕಾಶಕ್ಕೇರಿತ್ತು. ಟ್ರೈವ್ಯಾಲಿ ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿತ್ತು. ಇಲ್ಲಿಗೆ ದಾಖಲಾಗಿದ್ದವರಲ್ಲಿ ಹೆಚ್ಚಿನವರು ಭಾರತದವರು.ಅಮೆರಿಕದಲ್ಲೇ ಇದ್ದುಕೊಂಡು ಉದ್ಯೋಗ ಮಾಡಲು ಸರ್ಕಾರದಿಂದ ಅನುಮೋದನೆಗೆ ಕಾಯುತ್ತಿದ್ದ ಎಚ್ 4 ಇನ್ನಿತರೆ ವೀಸಾದವರೂ ಈ ಯೂನಿವರ್ಸಿಟಿಗೆ ದುಡ್ಡು ಕೊಟ್ಟು ತಮ್ಮ ವೀಸಾಗಳನ್ನು ವಿದ್ಯಾರ್ಥಿ-ವೀಸಾಗೆ ಬದಲಾಯಿಸಿಕೊಳ್ಳತೊಡಗಿದರು.ಕೆಲವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಎರಡೆರಡು ಮಾಸ್ಟರ್ಸ್ ಕೋರ್ಸು, ಡಾಕ್ಟರೇಟ್ ಕೋರ್ಸುಗಳಿಗೆ ದಾಖಲು ಮಾಡಿಕೊಂಡು ಅತ್ಯಂತ ತ್ವರಿತ ಗತಿಯಲ್ಲಿ ಗ್ರೀನ್ ಕಾರ್ಡ್ ಸಿಗುವ ಇಬಿ1 ಕ್ಯಾಟಗರಿಗೆ ಸೇರಿಕೊಳ್ಳತೊಡಗಿದ್ದರು (ಈಇಬಿ1 ಕ್ಯಾಟಗರಿಯಲ್ಲಿ ವಿಶೇಷ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಿರುವ, ಅತ್ಯಂತ ಪ್ರಕಾಂಡ ಪಂಡಿತರೆನಿಸುವಷ್ಟು ಓದಿದವರಿಗೆ, ‘ಅಸಾಮಾನ್ಯ ಸಾಮರ್ಥ್ಯ’ ಇರುವವರಿಗೆ ತುರ್ತಾಗಿ ಗ್ರೀನ್ ಕಾರ್ಡ್ ಸಿಗುತ್ತದೆ).ಟ್ರೈವ್ಯಾಲಿಗೆ ದಾಖಲಾತಿ ಪಡೆದು 30,000 ಡಾಲರ್ ಖರ್ಚು ಮಾಡಿ ಎರಡು ಎಮ್‌ಎ, ಎಮ್‌ಎಸ್ ಗಳನ್ನೋ, ಒಂದು ಡಾಕ್ಟರೇಟನ್ನೋ ಖರೀದಿ ಮಾಡಿದರೆ ಎರಡು ವರ್ಷದಲ್ಲಿ ಗ್ರೀನ್ ಕಾರ್ಡ್ ಮತ್ತು ಕೆಲವೇ ತಿಂಗಳಲ್ಲಿ ಹಾಕಿದ ಹಣ ವಾಪಸ್!

 (ಮುಂದುವರಿಯುವುದು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry