ಟ್ರೈವ್ಯಾಲಿ ; ನ್ಯಾಯಯುತ ತೀರ್ಮಾನಕ್ಕೆ ಟಿಮತಿ ಭರವಸೆ

7

ಟ್ರೈವ್ಯಾಲಿ ; ನ್ಯಾಯಯುತ ತೀರ್ಮಾನಕ್ಕೆ ಟಿಮತಿ ಭರವಸೆ

Published:
Updated:

ನವದೆಹಲಿ (ಐಎಎನ್‌ಎಸ್): ಕ್ಯಾಲಿಫೋರ್ನಿಯಾ ಮೂಲದ ಟ್ರೈವ್ಯಾಲಿ ವಿಶ್ವವಿದ್ಯಾಲಯದ ಮುಚ್ಚುವಿಕೆಯಿಂದಾಗಿ ಅತಂತ್ರರಾದ ಸುಮಾರು 1,500 ಭಾರತೀಯ ವಿದ್ಯಾರ್ಥಿಗಳ ವಿಷಯದಲ್ಲಿ ‘ಸೂಕ್ತ ಹಾಗೂ ನ್ಯಾಯಯುತ’ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಭಾರತದಲ್ಲಿನ ಅಮೆರಿಕದ ರಾಯಭಾರಿ ಟಿಮತಿ ರೋಮರ್ ಭರವಸೆ ನೀಡಿದರು.‘ಟ್ರೈ ವ್ಯಾಲಿ ವಿವಿಗೆ ಸಂಬಂಧಿಸಿದಂತೆ ಅಮೆರಿಕ ಭಾರತದೊಂದಿಗೆ ನಿರಂತರ ಚರ್ಚೆ ನಡೆಸುತ್ತಿದ್ದು ಭಾರತೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸೂಕ್ತ ಹಾಗೂ ನ್ಯಾಯಯುತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು. ವೀಸಾ ವಂಚನೆಯಿಂದ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಅಮೆರಿಕ ಬದ್ಧವಾಗಿದೆ’ ಎಂದರು.‘ವೀಸಾ ವಂಚನೆ ಎಲ್ಲೇ ನಡೆಯಲಿ, ಭಾರತೀಯರೇ ನಡೆಸಲಿ ಅಥವಾ ಅಮೆರಿಕದವರೇ ನಡೆಸಲಿ ಅದು ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಂಥ ಪ್ರಕರಣಗಳು ಉನ್ನತ ವ್ಯಾಸಂಗ ಬಯಸುವ ವಿದ್ಯಾರ್ಥಿಗಳ ಅವಕಾಶವನ್ನೇ ಕಸಿದುಕೊಳ್ಳುತ್ತದೆ. ಹಣಕ್ಕಾಗಿ ವಿದ್ಯಾರ್ಥಿಗಳ ಕನಸುಗಳನ್ನು ನುಚ್ಚುನೂರು ಮಾಡುವುದು ಸರಿಯಲ್ಲ’ ಎಂದು ಹೇಳಿದರು.ಭಾರತದ ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಜೊತೆ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ಟಿಮತಿ ಅವರಿಂದ ಭರವಸೆಯ ಮಾತುಳು ಕೇಳಿಬಂದಿವೆ. ಅಮೆರಿಕದ ರಾಯಭಾರ ಕಚೇರಿ ಭಾರತದಾದ್ಯಂತ ನಡೆಸುತ್ತಿರುವ ಉಚಿತ ‘ಮಾಹಿತಿ ಸೆಮಿನಾರ್’ಗಳ ಕುರಿತು ಪ್ರಸ್ತಾಪಿಸಿದ ಅವರು, ಅಮೆರಿಕದಲ್ಲಿ ವ್ಯಾಸಂಗ ನಡೆಸಲು ಆಸಕ್ತಿ ಹೊಂದಿದ ಎಲ್ಲಾ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry