ಟ್ರೈವ್ಯಾಲಿ-ಮೋಸದ ಮಾದರಿ

7

ಟ್ರೈವ್ಯಾಲಿ-ಮೋಸದ ಮಾದರಿ

Published:
Updated:

ಅಟ್ಲಾಂಟಾ: ಅಮೆರಿಕಾದಲ್ಲಿ ಈಗ ಹಿಂದೆಂದೂ ಇರದಷ್ಟು ಹೆಚ್ಚಿನ ನಿರುದ್ಯೋಗವಿದೆ. ಅಮೆರಿಕನ್ನರಿಗೆ ಕೆಲಸ ಸೃಷ್ಟಿಸಲು, ಇರುವ ಕೆಲಸಗಳನ್ನು ಒದಗಿಸಲು ಒಬಾಮಾ ಸರ್ಕಾರ ಶತ ಪ್ರಯತ್ನಮಾಡುತ್ತಿದೆ. ಭಾರತ, ಚೀನಾ ಇತ್ಯಾದಿ ಏಷ್ಯದ ರಾಷ್ಟ್ರಗಳಿಂದ ನಿಪುಣ ತಂತ್ರಜ್ಞ ರನ್ನು ಇಲ್ಲಿಗೆ ಕರೆತಂದು ಅವರಿಗೆ ಒಬ್ಬ ಅಮೆರಿಕನ್ ತಂತ್ರಜ್ಞನಿಗೆ ಕೊಡುವುದಕ್ಕಿಂತ ಕಡಿಮೆ ಸಂಬಳ ಕೊಟ್ಟು ಕೆಲಸ ಮಾಡಿಸಿಕೊಳ್ಳಲು ನೂರಾರುಕಂಪೆನಿಗಳು ತಯಾರಿವೆ. ಅವುಗಳಿಗೆ ತಂತ್ರಜ್ಞರನ್ನು ಸರಬರಾಜು ಮಾಡಲು ‘ಬಾಡಿ ಶಾಪಿಂಗ್’ ಕನ್ಸಲ್ಟೆನ್ಸಿ ಬಿಸಿನೆಸ್‌ಗಳಿವೆ.ಒಬಾಮ ಸರ್ಕಾರ ಅಮೆರಿಕನ್ ಪ್ರಜೆಗಳಿಗೆ ಕೆಲಸ ಗಟ್ಟಿ ಮಾಡಿಸಲು ಮೊದಲು ಪ್ರಶ್ನಿಸತೊಡಗಿದ್ದು ಈ ಬಾಡಿ ಶಾಪ್‌ಗಳನ್ನೇ. ಹೀಗೆ ತಂತ್ರಜ್ಞರನ್ನು ಕರೆಸಿಕೊಂಡು ಅವರನ್ನು ಬೇರೊಂದು ಕಂಪೆನಿಗೆ ದುಡಿಯಲು ಬಿಟ್ಟು, ಅವರ ಪ್ರತೀ ತಿಂಗಳ ಸಂಬಳದಲ್ಲಿ ಪಾಲು ತೆಗೆದುಕೊಂಡು, ಅವರ ಪಾಸ್‌ಪೋರ್ಟ್, ವೀಸಾಗಳನ್ನು ಅಡವಿಟ್ಟುಕೊಂಡು ಗೋಳಾಡಿಸುತ್ತಿದ್ದ ಈ ಬಗೆಯ ಹಲವಾರು ಕನ್ಸಲ್ಟೆನ್ಸಿಗಳನ್ನು ಸರ್ಕಾರ ತರಾಟೆಗೆ ತೆಗೆದುಕೊಂಡಿತ್ತು. ಇದೇ ಬಾಡಿ ಶಾಪಿಂಗ್‌ನ ಮತ್ತೊಂದು ಅವತಾರ ಈ ಟ್ರೈವ್ಯಾಲಿ ಯೂನಿವರ್ಸಿಟಿಯದು.ಐಸಿಇ ಟ್ರೈವ್ಯಾಲಿ ಯೂನಿವರ್ಸಿಟಿಯ ಮೇಲೆ ಕಳೆದ ವರ್ಷ ಮೇ ತಿಂಗಳಿಂದ ಕಣ್ಣಿಟ್ಟಿತ್ತು. ಭಾರತದಿಂದ ಇಲ್ಲಿಗೆ ಬರುತ್ತಿದ್ದ ವಿದ್ಯಾರ್ಥಿಗಳು ಕೋರ್ಸುಗಳಿಗೆ ದಾಖಲಾಗಿ ಅಮೆರಿಕದಾದ್ಯಂತದ ಗ್ಯಾಸ್ ಸ್ಟೇಷನ್‌ಗಳಲ್ಲೋ, ಭಾರತೀಯರ ಒಡೆತನದ ಹೋಟೆಲ್-ಮೋಟೆಲ್‌ಗಳಲ್ಲೋ, ದಿನಸಿ ಅಂಗಡಿಗಳಲ್ಲೋ, ಗಂಟೆಗೆ ಆರು ಡಾಲರ್ ದುಡಿಯುವ ‘ಅಗ್ಗ’ದ ನೌಕರರಾಗಿ ಕೆಲಸ ಮಾಡಿಕೊಂಡಿರುತ್ತಿದ್ದರು.ಟ್ರೈವ್ಯಾಲಿಯಿಂದ ಸಿಪಿಟಿ, ಒಪಿಟಿ ಪಡೆದಿದ್ದವರು ಬೇರೆ ಬೇರೆ ಕಂಪೆನಿಗಳಲ್ಲಿ ಕೆಲಸ ಮಾಡುತ್ತಾ ಆ ಕಂಪೆನಿಗಳ ಮೂಲಕವೇ ಎಚ್1 ವೀಸಾ ಪಡೆಯುತ್ತಿದ್ದರು ಅಥವಾ ವಿದ್ಯಾರ್ಥಿ-ವೀಸಾದಲ್ಲಿದ್ದುಕೊಂಡೇ ವರ್ಷಗಟ್ಟಲೆ ಕೆಲಸ ಮಾಡುತ್ತಿದ್ದರು. ಇದನ್ನು ಸುಮಾರು ದಿನದಿಂದ ಗಮನಿಸುತ್ತಿದ್ದ ಐಸಿಇ, ಮೂರು ವಾರಗಳ ಹಿಂದೆ ವಿದ್ಯಾರ್ಥಿಗಳ ಮಾರುವೇಷದಲ್ಲಿ ಡಾಕ್ಟರ್ ಸೂ ಬಳಿಗೆ ಹೋಗಿ ತಮಗೆ ವಿದ್ಯಾರ್ಥಿ-ವೀಸಾ ಬೇಕು, ಕೆಲಸ ಮಾಡುವ ಅವಕಾಶವಿರಬೇಕು ಮತ್ತು ಕ್ಲಾಸುಗಳನ್ನು ಅಟೆಂಡ್ ಮಾಡಲು ತಮಗೆ ಯಾವ ಆಸಕ್ತಿಯೂ ಇಲ್ಲವೆಂದು ಹೇಳಿದ್ದಾರೆ. ಯಾವುದೇ ತಕರಾರಿಲ್ಲದೆ ಅದಕ್ಕೆ ಒಪ್ಪಿಕೊಂಡ ಸೂ ಅವರಿಂದ ಹಣ ಪಡೆದು ಐ-20 ಎಂಬ ವಿದ್ಯಾರ್ಥಿ-ವೀಸಾದ ದಾಖಲೆಯೊಂದನ್ನು ಕೊಟ್ಟಿದ್ದಾರೆ. ತಕ್ಷಣ ಅವರನ್ನು ಕಾನೂನಿನ ಸುಪರ್ದಿಗೆ ತೆಗೆದುಕೊಂಡು ಟ್ರೈವ್ಯಾಲಿ ಮತ್ತವರ ಎಲ್ಲ ಆಸ್ತಿಯನ್ನು ಮುಟ್ಟುಗೋಲು ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ.ವಿದ್ಯಾರ್ಥಿಗಳ ತಪ್ಪಾ?: ಮೊದಲನೆಯದಾಗಿ, ಟ್ರೈವ್ಯಾಲಿಯ ವೆಬ್‌ಸೈಟ್‌ನ, ಪ್ರತಿಯೊಂದು ವಾಕ್ಯದಲ್ಲಿಯೂ ಕಣ್ಣಿಗೆ ರಾಚುವಂತಿರುವ ವ್ಯಾಕರಣದ ಮತ್ತು ಕಾಗುಣಿತದ ತಪ್ಪುಗಳನ್ನು ನೋಡಿಯೇ ಯಾರಿಗಾದರೂ ಅನುಮಾನ ಬರಬೇಕಿತ್ತು.ಟ್ರೈವ್ಯಾಲಿಯ ವಿದ್ಯಾರ್ಥಿಗಳ ಪಟ್ಟಿಯಲ್ಲಿರುವ 1,555 ಭಾರತೀಯರಲ್ಲಿ 170 ಜನ ಮಾತ್ರ ಭಾರತದಿಂದಲೇ ಎಫ್1 ವೀಸಾ ಪಡೆದು ಬಂದಿರುವವರು. ಇವರಿಗೆ ಈ ಸಂಸ್ಥೆ ನಕಲಿ ಎಂದು ಗೊತ್ತಿಲ್ಲದೆ ಇದ್ದಿರಬಹುದು; ಕಡಿಮೆ ದುಡ್ಡಿಗೆ ಡಿಗ್ರಿ ಪಡೆಯುವ ಆಸೆಯಿಂದ ಇಲ್ಲಿಗೆ ಅರ್ಜಿ ಸಲ್ಲಿಸಿದ ಅಮಾಯಕರಿರಬಹುದು. ಆದರೆ ಉಳಿದ ವಿದ್ಯಾರ್ಥಿಗಳಲ್ಲಿ ಬಹುಪಾಲು ಜನ ಟ್ರೈವ್ಯಾಲಿಯ ಆನ್‌ಲೈನ್ ಕ್ಲಾಸಿನ ಆಮಿಷಕ್ಕೆ ಬಿದ್ದು ಅಮೆರಿಕಾದ ಬೇರೆ ಬೇರೆ ಅಕ್ರೆಡಿಟೆಡ್ ವಿಶ್ವವಿದ್ಯಾಲಯಗಳಿಂದ ಟ್ರೈವ್ಯಾಲಿಗೆ ವರ್ಗಾವಣೆ ಪಡೆದುಕೊಂಡಿದ್ದರು. ಮತ್ತಷ್ಟು ಜನ ವಿದ್ಯಾರ್ಥಿ-ವೀಸಾ, ಸಿಪಿಟಿ, ಓಪಿಟಿಗಳ ಸಲುವಾಗಿಯೇ ಇಲ್ಲಿಗೆ ಸೇರಿದ್ದವರಿದ್ದರು.ಇಡೀ ಟ್ರೈವ್ಯಾಲಿ ಎಂಬ ಯೂನಿವರ್ಸಿಟಿ ಒಂದು ಸಣ್ಣ ರೂಮಿನಲ್ಲಿ ಹದಿಮೂರು ಕಂಪ್ಯೂಟರ್ ಮತ್ತು ಕೆಲವು ಕುರ್ಚಿ-ಮೇಜುಗಳ ಸಹಾಯದಿಂದ ನಡೆಯುತ್ತಿತ್ತು. ಈ ಬಗ್ಗೆ ಯಾವ ವಿದ್ಯಾರ್ಥಿಯೂ ಎಲ್ಲಿಯೂ ದೂರು ದಾಖಲಿಸಿರಲಿಲ್ಲ. ತಕರಾರು ಮಾಡಿರಲಿಲ್ಲ!ಒಬ್ಬ ವಿದ್ಯಾರ್ಥಿ ಮತ್ತೊಬ್ಬ ವಿದ್ಯಾರ್ಥಿಯನ್ನು ರೆಫರ್ ಮಾಡಿ ಅವರನ್ನು ಟ್ರೈವ್ಯಾಲಿಗೆ ಸೇರಿಕೊಳ್ಳುವಂತೆ ಮಾಡಿದರೆ ಆ ವಿದ್ಯಾರ್ಥಿಗೆ ತನ್ನ ಶುಲ್ಕದಲ್ಲಿ ಕಡಿತ ಅಥವಾ ಪ್ರೋತ್ಸಾಹಧನ (ಇನ್ಸೆಂಟಿವ್) ಸಿಗುತ್ತಿತ್ತು ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ತಾವು ಕಲಿಯುತ್ತಿದ್ದ ಇತರೆ ಯೂನಿವರ್ಸಿಟಿಗಳನ್ನು ಬಿಟ್ಟು ತಂಡೋಪತಂಡವಾಗಿ ಟ್ರೈವ್ಯಾಲಿ ಸೇರಿದ್ದರು ಎನ್ನಲಾಗಿದೆ. ಇದಲ್ಲದೆ, ಎಫ್1 ವೀಸಾ ಇದ್ದಾಗ ಯೂನಿವರ್ಸಿಟಿಯ ಕ್ಯಾಂಪಸ್‌ಗಳಲ್ಲಿ ಅಥವಾ ಯೂನಿವರ್ಸಿಟಿಯ ಸುತ್ತಮುತ್ತಲಿನ ಪರಿಸರದಲ್ಲಿ ಕೆಲಸ ಮಾಡಲು ಅನುಮೋದನೆ ಇದೆಯೇ ಹೊರತು ಬೇರೆ ಬೇರೆ ಊರುಗಳಲ್ಲಲ್ಲ. ಇದು ವಿದ್ಯಾರ್ಥಿಗಳಿಗೆ ಗೊತ್ತಿರುವಂಥ ನಿಯಮವೇ. ಇದೆಲ್ಲಾ ಗೊತ್ತಿದ್ದೂ ಟ್ರೈವ್ಯಾಲಿ ಸೇರಿದವರನ್ನು ಏನೆಂದು ಕರೆಯಬೇಕು?ಟ್ರೈವ್ಯಾಲಿ ಒಂದೇ ಅಲ್ಲ!: ಈಗ ಆಗಿರುವ ದಾಳಿ ನೂರಾರು ವಿದ್ಯಾರ್ಥಿಗಳಿಗೆ, ಅವರ ಪೋಷಕರಿಗೆ ಆಗಿರುವ ಸಣ್ಣ ಶಾಕ್ ಅಷ್ಟೇ. ಚೀನಾ ಮೂಲದ ವಲಸಿಗರೇ ನಡೆಸುತ್ತಿರುವ, ಕ್ಯಾಲಿಫೋರ್ನಿಯದಲ್ಲೇ ಇರುವ ಹೆರ್ಗ್ಯುಆನ್ ಮತ್ತು ಇಂಟರ್‌ನ್ಯಾಷನಲ್ ಟೆಕ್ನಲಾಜಿಕಲ್ ಯೂನಿವರ್ಸಿಟಿ (ಐಖಿ) ಇತರೆ ಸಂಸ್ಥೆಗಳೂ ಟ್ರೈವ್ಯಾಲಿಯ ಕೆಲಸವನ್ನೇ ಮಾಡುತ್ತಿರುವುದರಿಂದ ಇವುಗಳ ಮೇಲೂ ಹೋಮ್‌ಲಾ ್ಯಂಡ್ ಸೆಕ್ಯುರಿಟಿಯ ಕಣ್ಣುಬಿದ್ದಾಗಿದೆ ಎನ್ನಲಾಗಿದೆ. ಆದರೆ ಈ ಎರಡೂ ಯೂನಿವರ್ಸಿಟಿಗಳಲ್ಲಿರುವ ಅಂತರರಾಷ್ಟ್ರೀಯ (ಇಲ್ಲೂ ಹೆಚ್ಚಿನವರು ಭಾರತೀಯರು!) ವಿದ್ಯಾರ್ಥಿಗಳ ಮೇಲೆ ಯಾವ ಕ್ರಮ ಕೈಗೊಳ್ಳಬೇಕು? ಇಷ್ಟೊಂದು ಹೆಚ್ಚಿನ ಸಂಖ್ಯೆಯ ವಿದೇಶಿ ಅಪರಾಧಿ ವಿದ್ಯಾರ್ಥಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದು ಹೋಮ್ ಲ್ಯಾಂಡ್ ಸೆಕ್ಯುರಿಟಿಯವರಿಗೂ ತಲೆನೋವಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸುವ ಕ್ರಮ ಖಚಿತವಾದ ನಂತರ ಅವುಗಳನ್ನೂ ಬಂದ್ ಮಾಡಿಸಲಾಗುತ್ತದೆ ಎನ್ನಲಾಗಿದೆ.ಅಮೆರಿಕದ ಉದ್ದೇಶ: ಈ ಕಾನೂನುಬಾಹಿರ ಜಾಲದಲ್ಲಿ ಸೇರಿದ್ದವರ ಪ್ರತಿಯೊಬ್ಬರ ಪ್ರಕರಣವನ್ನು ಪ್ರತ್ಯೇಕವಾಗಿ ಪರಿಗಣಿಸುವುದಾಗಿ ಅಮೆರಿಕಾದ ಹೋಮ್ ಲ್ಯಾಂಡ್ ಸೆಕ್ಯುರಿಟಿ ತಿಳಿಸಿದೆ. ಒಳ್ಳೆಯ ಅಂಕಗಳನ್ನಿಟ್ಟುಕೊಂಡು ಕಡಿಮೆ ಶುಲ್ಕ ಎಂಬ ಕಾರಣಕ್ಕಾಗಿಯೇ ಟ್ರೈ ವ್ಯಾಲಿಗೆ ಬಂದ ವಿದ್ಯಾರ್ಥಿಗಳನ್ನು ಅವರವರ ದೇಶಗಳಿಗೆ ವಾಪಸು ಕಳಿಸುವ (ಡಿಪೋರ್ಟ್ ಮಾಡುವ) ಉದ್ದೇಶ ಸರ್ಕಾರಕ್ಕಿದ್ದಂತಿಲ್ಲ. ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ತಮ್ಮ ಅರ್ಹತೆಯ ಆಧಾರದ ಮೇಲೆ ಬೇರೆ ಯೂನಿವರ್ಸಿಟಿಗಳಲ್ಲಿ ದಾಖಲಾತಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳ ಅಂಕಗಳು, ಹಿಂದಿನ ಅಕಾಡೆಮಿಕ್ ರೆಕಾರ್ಡ್ ಚೆನ್ನಾಗಿದ್ದರೆ ಅವರಿಗೆ ಓದು ಮುಂದುವರಿಸಲು ಅನುವು ಮಾಡಿಕೊಡಲಾಗುತ್ತದೆ ಎನ್ನಲಾಗಿದೆ.

 

ಆದರೆ ಈಗ ಇಲ್ಲಿನ ಸ್ಪ್ರಿಂಗ್ ಸೆಮಿಸ್ಟೆರ್ ಆರಂಭವಾಗಿದ್ದು, ಯೂನಿವರ್ಸಿಟಿಗಳ ಸೆಮಿಸ್ಟರ್ ಕೋಟಾ ಮುಗಿದಿರುವುದರಿಂದ ಹೊಸ ವಿದ್ಯಾರ್ಥಿಗಳ ಸೇರ್ಪಡೆಯಾಗುವಂತಿಲ್ಲ. ತರಗತಿಗಳೂ ಇಲ್ಲದೆ, ವೀಸಾ ಸ್ಟೇಟಸ್ ಕೂಡಾ ಇಲ್ಲದೆ ಜನ ಅಮೆರಿಕಾದಲ್ಲಿ ಉಳಿಯುವಂತಿಲ್ಲ. ಉಳಿದರೂ ಕಾನೂನಿನ ಅಧೀನದಲ್ಲಿ ಅಂದರೆ ಜೈಲಿನಲ್ಲಿ ಇರಬೇಕಾಗುತ್ತದೆ. ಅದನ್ನು ತಡೆಯಲು ಈಗ ಹಲವಾರು ಟ್ರೈವ್ಯಾಲಿ ವಿದ್ಯಾರ್ಥಿಗಳ ಕಾಲುಗಳಿಗೆ ರೇಡಿಯೋ ಮಾನಿಟರ್‌ಗಳನ್ನು ಅಳವಡಿಸಲಾಗಿದೆ.

 ‘ಈ ವಿದ್ಯಾರ್ಥಿಗಳು ಸರ್ಕಾರದ ಕಣ್ಣಿಗೆ ಮಣ್ಣೆರಚಿ ಅಮೆರಿಕಾದೊಳಗೆ ಅನಧಿಕೃತ, ಅನ್ ಡಾಕ್ಯುಮೆಂಟೆಡ್ ವಲಸೆಗಾರರಾಗಿ ಮರೆಯಾಗದಿರಲಿ ಎಂದು ಈ ಕ್ರಮ’ ಎಂದು ಸರ್ಕಾರ ಹೇಳಿಕೆ ನೀಡಿದೆ. ಈಗಾಗಲೇ ಹಲವಾರು ವಿದ್ಯಾರ್ಥಿಗಳನ್ನು ಪ್ರಶ್ನಿಸಿ ಅವರಿಂದ ಟ್ರೈವ್ಯಾಲಿ ಕುರಿತ ಮಾಹಿತಿಯನ್ನು ತೆಗೆದುಕೊಂಡು ಅವರನ್ನು ಟ್ರೈವ್ಯಾಲಿ ಮತ್ತು ಡಾಕ್ಟರ್ ಸೂ ವಿರುದ್ಧ ಸಾಕ್ಷಿಯನ್ನಾಗಿಸಿಕೊಳ್ಳುವ ಉದ್ದೇಶದಿಂದ ಅವರಿಗೆ ಜಾಮೀನು ನೀಡಿ,  ಮಾನಿಟರ್ ಅಳವಡಿಸಿ ಬಿಡಲಾಗಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry