ಟ್ರೈವ್ಯಾಲಿ ವಿವಿ ವಿದ್ಯಾರ್ಥಿಗಳಿಗೆಬೇರೆ ವಿವಿಗಳಲ್ಲಿ ಸ್ಥಳಾವಕಾಶ: ಕೃಷ್ಣ ಮನವಿ

7

ಟ್ರೈವ್ಯಾಲಿ ವಿವಿ ವಿದ್ಯಾರ್ಥಿಗಳಿಗೆಬೇರೆ ವಿವಿಗಳಲ್ಲಿ ಸ್ಥಳಾವಕಾಶ: ಕೃಷ್ಣ ಮನವಿ

Published:
Updated:

ನ್ಯೂಯಾರ್ಕ್ (ಪಿಟಿಐ): ಸಾಮೂಹಿಕ ವೀಸಾ ವಂಚನೆ ಆರೋಪದ ಮೇಲೆ ಮುಚ್ಚಿರುವ ಕ್ಯಾಲಿಫೋರ್ನಿಯಾ ಮೂಲದ ‘ಟ್ರೈವ್ಯಾಲಿ’ ವಿಶ್ವವಿದ್ಯಾಲಯದ ಭಾರತೀಯ ವಿದ್ಯಾರ್ಥಿಗಳನ್ನು ಬಲಿಪಶು ಮಾಡದೆ, ಅಮೆರಿಕದ ಬೇರೆ ಬೇರೆ ವಿವಿಗಳಲ್ಲಿ ಸ್ಥಳಾವಕಾಶ ಕಲ್ಪಿಸಬೇಕು ಎಂದು ಭಾರತ ಒತ್ತಾಯಿಸಿದೆ.

‘ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಒಳ್ಳೆಯ ಭಾವನೆ ಮತ್ತು ವಿಶ್ವಾಸದಿಂದ ಅಮೆರಿಕಕ್ಕೆ ಆಗಮಿಸಿದ ಈ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ತೊಂದರೆ ಆಗಬಾರದು. ಹೀಗಾಗಿ ಅವರ ಅಧ್ಯಯನಕ್ಕೆ ತೊಂದರೆ ಆಗದಂತೆ ಬೇರೆ ವಿವಿಗಳಲ್ಲಿ ಅವಕಾಶ ಕಲ್ಪಿಸಬೇಕು’ ಎಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಶನಿವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಆಗ್ರಹಪಡಿಸಿದರು.

‘ವಿದ್ಯಾರ್ಥಿಗಳು ಅಧಿಕೃತ ವೀಸಾ ಪಡೆದುಕೊಂಡೇ ಟ್ರೈವ್ಯಾಲಿ ವಿವಿಗೆ ಬಂದಿದ್ದು, ಆದರೆ ಶಿಕ್ಷಣ ಒದಗಿಸುವವರು ಅವರನ್ನು ವಂಚಿಸಿದ್ದಾರೆ. ಆದ್ದರಿಂದ ಅಮೆರಿಕ ಸರ್ಕಾರ ಇಂತಹ ಬೋಗಸ್ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಿ, ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಬೇಕು’ ಎಂದು ಅವರು ಮನವಿ ಮಾಡಿದರು

ವಂಚನೆಗೊಳಗಾದ ವಿದ್ಯಾರ್ಥಿಗಳಿಗೆ ‘ರೇಡಿಯೊ ಕಾಲರ್ ಟ್ಯಾಗ್’ ಅಳವಡಿಸಿರುವುದನ್ನು ‘ಅಮಾನವೀಯ ಕ್ರಮ’ ಎಂದು ಈ ಹಿಂದೆ ಟೀಕಿಸಿದ್ದ ಕೃಷ್ಣ, ತಾವು ಇಂತಹ ಪದ್ಧತಿ ವಿರುದ್ಧ ಆ ರೀತಿ ಅಸಮಾಧಾನ ವ್ಯಕ್ತಪಡಿಸಿದ್ದಾಗಿ ತಿಳಿಸಿದರು.

ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಮೀರಾ ಶಂಕರ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್‌ನ ಕಾನ್ಸುಲ್ ಜನರಲ್ ಸುಷ್ಮಿತಾ ಗಂಗೂಲಿ ಸಚಿವರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry