ಟ್ರೈ ವ್ಯಾಲಿ: ವೀಸಾ ಪಡೆದವರ ಭವಿಷ್ಯ?

7

ಟ್ರೈ ವ್ಯಾಲಿ: ವೀಸಾ ಪಡೆದವರ ಭವಿಷ್ಯ?

Published:
Updated:

ಅಟ್ಲಾಂಟ: ಅಮೆರಿಕದಲ್ಲಿ ಬೇರೆ ವೀಸಾಗಳಿಂದ ವಿದ್ಯಾರ್ಥಿ-ವೀಸಾಕ್ಕೆ ವರ್ಗಾಯಿಸಿಕೊಂಡವರಿಗೆ ಮತ್ತೆ ತಮ್ಮ ಹಿಂದಿನ ವೀಸಾಗೇ ಮರಳಬಹುದು ಎಂದೂ ಹೇಳಲಾಗಿದೆ. ಟ್ರೈ ವ್ಯಾಲಿ ಯೂನಿವರ್ಸಿಟಿಯ ಎಲ್ಲ ಕಾನೂನುಬಾಹಿರ  ಚಟುವಟಿಕೆಗಳು ಗೊತ್ತಿದ್ದೂ ಅದಕ್ಕೆ ದಾಖಲಾದ ನೂರಾರು ವಿದ್ಯಾರ್ಥಿಗಳನ್ನು ಅಮೆರಿಕಾದಿಂದ ಶಾಶ್ವತವಾಗಿ ಗಡೀಪಾರು ಮಾಡಬೇಕೋ ಅಥವಾ ಕ್ರಿಮಿನಲ್ ಕೇಸುಗಳನ್ನು ಹಾಕಿ ಜೈಲು ಶಿಕ್ಷೆ ವಿಧಿಸಬೇಕೋ ಎಂಬ ತೀರ್ಮಾನ ಸರ್ಕಾರದ ಕೈಯಲ್ಲಿದೆ. ಈ ವಂಚನೆಯಲ್ಲಿ ಗೊತ್ತಿದ್ದೂ ಪಾಲ್ಗೊಂಡವರ ಮೇಲೆ ಫೆಡರಲ್ ಮೇಲ್ (ಅಂಚೆ) ಫ್ರಾಡ್, ವೈರ್ ಫ್ರಾಡ್, ವೀಸಾ ಉಲ್ಲಂಘನೆ ಇತ್ಯಾದಿ ಕೇಸ್‌ಗಳನ್ನು ಹಾಕಲಾಗುತ್ತದೆ ಎನ್ನಲಾಗಿದೆ.  ಗಡೀಪಾರು ಮಾಡುವುದೇ ಅತ್ಯಂತ ಸೌಮ್ಯ ಶಿಕ್ಷೆಯಾಗಿರುವುದರಿಂದ ಅದರ ಸಾಧ್ಯತೆಗಳು ಎದ್ದು ಕಾಣುತ್ತಿವೆ.ಭಾರತೀಯ ವಿದ್ಯಾರ್ಥಿಗಳ ಪ್ರಸ್ತುತ ಪರಿಸ್ಥಿತಿ: ಟ್ರೈವ್ಯಾಲಿ ವಿತರಿಸಿದ್ದ ಎಲ್ಲ ವಿದ್ಯಾರ್ಥಿ-ವೀಸಾ, ಸಿಪಿಟಿ, ಒಪಿಟಿಗಳು ಈಗ ನಿರರ್ಥಕ. ಇವುಗಳನ್ನಿಟ್ಟುಕೊಂಡು ಕೆಲಸ ಮಾಡುತ್ತಿರುವ ಎಲ್ಲರೂ ತಕ್ಷಣದಿಂದಲೇ ಕೆಲಸ ನಿಲ್ಲಿಸಬೇಕಾಗುತ್ತದೆ ಮತ್ತು ತಮ್ಮ ಸ್ಥಾನಮಾನವನ್ನು ಬೇರೆ ವೀಸಾಗಳಿಗೆ ವರ್ಗಾವಣೆ ಮಾಡಿಕೊಳ್ಳಬೇಕಾಗುತ್ತದೆ.ಏಪ್ರಿಲ್ 27ಕ್ಕೆ ಸ್ಯಾನ್ ಫ್ರಾನ್ಸಿಸ್ಕೋದ ಜಿಲ್ಲಾ ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆ ನಿಗದಿಯಾಗಿದೆ. ಅಷ್ಟರಲ್ಲಿ ಟ್ರೈವ್ಯಾಲಿ ಪ್ರಕರಣದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸೇರಿರುವ ಎಲ್ಲರೂ ಸಮರ್ಥ ಇಮಿಗ್ರೇಷನ್ ವಕೀಲರೊಂದಿಗೆ ಮಾತಾಡಿ ಮುಂದೇನು ಮಾಡಬೇಕೆಂದು ತೀರ್ಮಾನಿಸಬೇಕಾಗುತ್ತದೆ. ಜಿಆರ್‌ಇ, ಜಿ-ಮ್ಯಾಟ್‌ಗಳಲ್ಲಿ ಒಳ್ಳೆಯ ಅಂಕವಿರುವ ವಿದ್ಯಾರ್ಥಿಗಳು ಬೇರೆ ಯೂನಿವರ್ಸಿಟಿಗಳಿಗೆ ತಮ್ಮ ಕ್ರೆಡಿಟ್‌ಗಳನ್ನು ವರ್ಗಾವಣೆ ಮಾಡಿಕೊಳ್ಳಬೇಕಾಗುತ್ತದೆ. ಹೊಸದಾಗಿ ಫೀಜು ಕಟ್ಟಿ, ಹೊಸ ವಿದ್ಯಾರ್ಥಿ-ವೀಸಾ ಪಡೆಯಬೇಕಾಗುತ್ತದೆ. ವಿಚಾರಣೆ ಮುಗಿದು ಆಯಾ ವಿದ್ಯಾರ್ಥಿಗಳ ಕೇಸಿನ ತೀರ್ಮಾನ ಆಗುವವರೆಗೂ ಅವರು ಕಾನೂನಿನ ಸುಪರ್ದಿನಲ್ಲಿ ಇರಬೇಕಾಗುತ್ತದೆ.ರೇಡಿಯೋ ಮಾನಿಟರ್: ಅಮೆರಿಕ ಸರ್ಕಾರ ವಿದ್ಯಾರ್ಥಿಗಳ ಕಾಲಿಗೆ ರೇಡಿಯೋ ಮಾನಿಟರ್ ಹಾಕಿ ಅವರೊಂದಿಗೆ ಅಮಾನವೀಯವಾಗಿ ವರ್ತಿಸುತ್ತಿದೆ ಎಂಬ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ರೇಡಿಯೋ ಕಾಲರ್ ಅಥವಾ ಮಾನಿಟರ್‌ಗಳನ್ನು ಕಾಡು ಪ್ರಾಣಿಗಳ ನಡೆಯನ್ನು ಗಮನದಲ್ಲಿಟ್ಟುಕೊಳ್ಳಲು ಹಾಕುತ್ತಾರೆಂದು ನಮಗೆ ಗೊತ್ತು. ಆದರೆ ಅಮೆರಿಕಾದಲ್ಲಿ ಇದು ಮನುಷ್ಯರಿಗೆ ಅಪರೂಪವಾದದ್ದೇನಲ್ಲ. ವಿಚಾರಣೆಗೆ ಬೇಕಾಗಿರುವ ವ್ಯಕ್ತಿ ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳಲು, ಅಪರಾಧವೊಂದರಲ್ಲಿ ಭಾಗಿಯಾಗಿರುವ ವ್ಯಕ್ತಿ ಮತ್ತೊಬ್ಬನೊಂದಿಗೆ ಸೇಡು ತೀರಿಸಿಕೊಳ್ಳಲು ಹೋಗದಂತೆ ತಡೆಯಲು, ಅತಿ ಮುಖ್ಯ ಅಪರಾಧಗಳಲ್ಲಿ ಸಾಕ್ಷಿಯಾದವರಿಗೆ, ಅಪರಾಧಿಯೊಬ್ಬ ಚಟಕ್ಕೆ ಬಿದ್ದವನಂತೆ ತನ್ನ ಅಪರಾಧ ಮಾಡುವ ಚಾಳಿಯನ್ನು ಮುಂದುವರೆಸಿಕೊಂಡು ಹೋಗುತ್ತಾನೋ ಎಂದು ಗಮನಿಸಿ ಪ್ರಕರಣವನ್ನು ಬಲಪಡಿಸಲು ಅಥವಾ ಮಕ್ಕಳನ್ನು ಲೈಂಗಿಕವಾಗಿ ಪೀಡಿಸುವ ವ್ಯಕ್ತಿಗಳಿಗೆ (ಅವರು ಶಾಲೆ-ವಸತಿಯಿರುವ ಜಾಗಗಳತ್ತ ಹೋಗದಂತೆ ತಡೆಯಲು), ಇಲ್ಲಿ ರೇಡಿಯೋ ಮಾನಿಟರ್‌ಗಳನ್ನು ಅಳವಡಿಸುತ್ತಾರೆ.    ವಿಚಾರಣೆಯಾಗುವವರೆಗೂ ಜೈಲಿನಲ್ಲಿಡುವ ಬದಲು ಸಮಾಜದಲ್ಲಿ ಬಿಟ್ಟು ಆಗಾಗ ಅವರನ್ನು ಮಾನಿಟರ್ ಮಾಡುವ ಇಲ್ಲಿನ ವಿಧಾನ ಇದು. ಕೆಲವೊಮ್ಮೆ ಅಪರಾಧಿಗಳ ಪ್ರಾಣಕ್ಕೆ ಅಪಾಯವಿರುವಂತಹ ಸಂದರ್ಭಗಳಲ್ಲಿಯೂ ರೇಡಿಯೋ ಮಾನಿಟರ್‌ಗಳನ್ನು ಅಳವಡಿಸುತ್ತಾರೆ. ಭಾರತದ ವಿದ್ಯಾರ್ಥಿಗಳು ಅಪರಾಧಿಗಳ ಪೈಕಿಗೆ ಸೇರುವುದಿಲ್ಲ. ಆದರೆ ಅವರು ಅಪರಾಧಿಗಳೋ-ಸಂಪೂರ್ಣ ನಿರಪರಾಧಿಗಳೋ ಎಂದು ಸಾಬೀತಾಗುವ ತನಕವೂ ಅವರನ್ನು ಹಾಗೇ ಬಿಟ್ಟಿದ್ದರೆ ಅವರು ಮತ್ತೆ ಕೈಗೆ ಸಿಗದಂತೆ ಅಮೆರಿಕದಲ್ಲಿ ವಿಲೀನವಾಗಿಬಿಡಬಹುದು ಎಂಬುದು ಅಮೆರಿಕದ ವಾದ.    ಒಟ್ಟಿನಲ್ಲಿ ಅಮೆರಿಕ ಸೇರಿಕೊಂಡು ಅಲ್ಲಿ ಕಾನುಬದ್ದವಾಗಿಯೋ, ಅಕ್ರಮವಾಗಿಯೋ ನೆಲೆಸಬೇಕು ಎನ್ನುವವರಿಗೆ ಟ್ರೈವ್ಯಾಲಿ ಯೂನಿವರ್ಸಿಟಿ ವರವಾಗಿತ್ತು. ಇಲ್ಲಿನ ಬೋಧಕ ವರ್ಗ, ಪ್ರೊಫೆಸರ್‌ಗಳ ಪಟ್ಟಿಯಲ್ಲಿ ಅನೇಕ ಚೀನೀ ಹೆಸರುಗಳೂ, ಬಹಳಷ್ಟು ಮಂದಿ ಭಾರತೀಯ, ಆಂಧ್ರ ಮೂಲದ ಪ್ರೊಫೆಸರ್‌ಗಳ ಹೆಸರೂ ಇರುವುದನ್ನು ನೋಡಿದರೆ ವಿದ್ಯಾರ್ಥಿಗಳಿಗೆ ಈ ಯೂನಿವರ್ಸಿಟಿಯ ಬಂಡವಾಳ ಮುಂಚೆಯೇ ಗೊತ್ತಿರಬಹುದು ಎನ್ನಿಸುತ್ತದೆ. ಸಾಕಷ್ಟು ತೆಲುಗು ಪ್ರೊಫೆಸರ್‌ಗಳು ಇದ್ದಾರೆ ಎಂದು ಆಂಧ್ರದ ವಿದ್ಯಾರ್ಥಿಗಳು ಮರುಳಾಗಿದ್ದರೂ ಇರಬಹುದು. ಈ ಪಟ್ಟಿಯಲ್ಲಿ ಧಾರವಾಡದ ಕರ್ನಾಟಕ ಯೂನಿವರ್ಸಿಟಿಯಲ್ಲಿ ಪದವೀಧರರಾದ ಒಬ್ಬ ಪ್ರೊಫೆಸರ್ ಕೂಡಾ ಇದ್ದಾರೆ.ಇವರೆಲ್ಲರ ಹೆಸರುಗಳನ್ನು ಅವರಿಗೆ ತಿಳಿಯದೆ ಅಥವಾ ತಿಳಿಸಿಯೇ ಬಳಸಿಕೊಳ್ಳಲಾಗಿತ್ತೋ ಅಥವಾ ಇವರೆಲ್ಲರೂ ಈ ಮಾನವ ಸಾಗಾಣಿಕೆಯ ಅಪರಾಧದಲ್ಲಿ ಸಮಾನ ಪಾಲುಗಾರರೋ ಎಂಬುದು ಸದ್ಯದಲ್ಲಿಯೇ ತಿಳಿದುಬರಲಿದೆ.ಯಶಸ್ಸು-ಸುಖ ಎಲ್ಲವೂ ಸುಲಭವಾಗಿ ದೊರಕಿಬಿಡಬೇಕೆಂದು ಪೋಷಕರನ್ನು ಸುಧಾರಿಸಿಕೊಳ್ಳಲಾಗದಂತೆ ಘಾಸಿ ಮಾಡಿ, ಅಡ್ಡ ದಾರಿ ಹಿಡಿದು ನಂತರ ನಮಗೇನೂ ಗೊತ್ತಿರಲಿಲ್ಲ ಎಂದು ಸಂಪೂರ್ಣ ಅಮಾಯಕರಾಗಹೊರಟಿರುವ ಈ ವಿದ್ಯಾರ್ಥಿಗಳ ಕುರಿತು ಅಮೆರಿಕಾದಲ್ಲಿರುವ ಭಾರತೀಯರಿಗೆ ಅನುಕಂಪವೆಷ್ಟಿದೆಯೋ ಅಷ್ಟೇ ಬೇಸರವೂ ಇದೆ. ಈ ವಿದ್ಯಾರ್ಥಿಗಳ ಸಹಾಯಕ್ಕೆಂದು ಭಾರತೀಯ ಮೂಲದ ಇಮಿಗ್ರೇಷನ್ ವಕೀಲರು ಸಹಾಯ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಹಲವಾರು ಭಾರತೀಯ ಸಂಸ್ಥೆಗಳು ವಿಚಾರಣೆ ಮುಗಿಯುವವರೆಗೂ ನೆರವು ನೀಡಲು ಮುಂದೆ ಬಂದಿವೆ. ಅಮೆರಿಕಾದ ತೆಲುಗು ಸಂಘವೂ ಧಾರಾಳವಾಗಿ ಸಹಾಯ ಮಾಡಲು ಮುಂದೆ ಬಂದಿದೆ.ಆದರೂ...ಆಟಗಳಲ್ಲಿ ಪಾಲ್ಗೊಳ್ಳದೆ, ಕಷ್ಟಪಟ್ಟು ಓದಿ, ಜಿಆರ್‌ಇ, ಜಿ-ಮ್ಯಾಟ್ ನಂತಹ ಪರೀಕ್ಷೆ ಬರೆದು, ಒಳ್ಳೆಯ ಅಂಕಗಳನ್ನು ಪಡೆದು, ಅಮೆರಿಕದ ಉತ್ತಮೋತ್ತಮ ಯೂನಿವರ್ಸಿಟಿಗಳಲ್ಲಿ ದಾಖಲಾಗಿ, ಅಪ್ಪ ಅಮ್ಮಂದಿರ ಹತ್ತಿರ ಹಣ ಪೀಡಿಸದೆ, ಇಲ್ಲಿನ ರೆಸ್ಟೋರೆಂಟ್‌ಗಳಲ್ಲೋ, ಮಾಲ್‌ಗಳಲ್ಲೋ ಸಣ್ಣ ಪುಟ್ಟ ಕೆಲಸ ಮಾಡಿ, ಮೈಮುರಿದು ಓದಿ ಡಿಗ್ರಿ ಪಡೆದು, ಬುದ್ಧಿವಂತರು-ಕಷ್ಟಪಡುವವರು ಎಂದು ಹೆಸರು ಗಳಿಸಿ, ವಿಶ್ವದೆಲ್ಲೆಡೆ ಒಳ್ಳೆಯ-ಹೆಮ್ಮೆಯ ಬದುಕು ಬದುಕುತ್ತಿರುವ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳಿಗೆ ಈ ಘಟನೆ ನಿಜಕ್ಕೂ ತಲೆತಗ್ಗಿಸುವಂತೆ ಮಾಡಿದೆ.

 (ಮುಗಿಯಿತು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry