ಭಾನುವಾರ, ಜನವರಿ 19, 2020
23 °C

ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ: ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಶನಿವಾರ ಮಧ್ಯಾಹ್ನ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸುರೇಶ್ ರಾಜ್ (40) ಮತ್ತು ಜಯಪ್ರಕಾಶ್ (32) ಎಂಬುವರು ಸಾವನ್ನಪ್ಪಿದ್ದಾರೆ.ತಮಿಳುನಾಡು ಮೂಲದವರಾದ ಸುರೇಶ್ ಮತ್ತು ಜಯಪ್ರಕಾಶ್ ಎರಡು ವರ್ಷಗಳಿಂದ ಅತ್ತಿಬೆಲೆಯಲ್ಲಿ ವಾಸವಾಗಿದ್ದರು. ಸುರೇಶ್, ವೊಲ್ವೊ ಕಂಪೆನಿಯ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಜಯಪ್ರಕಾಶ್, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆಟೊಮೊಬೈಲ್ ಅಂಗಡಿ ಇಟ್ಟುಕೊಂಡಿದ್ದರು. ಸ್ನೇಹಿತರಾದ ಇಬ್ಬರು ಪ್ರತಿದಿನ ಮಧ್ಯಾಹ್ನ ಒಟ್ಟಿಗೇ ಹೋಟೆಲ್‌ಗೆ ಊಟಕ್ಕೆ ಹೋಗುತ್ತಿದ್ದರು. ಎಂದಿನಂತೆ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಇಬ್ಬರು ಬೈಕ್‌ನಲ್ಲಿ ಹೋಟೆಲ್‌ಗೆ ಹೋಗುವಾಗ ಈ ದುರ್ಘಟನೆ ನಡೆದಿದೆ.ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಟ್ರ್ಯಾಕ್ಟರ್ ಕೆಟ್ಟು ನಿಂತಿತ್ತು. ಅದರ ಚಾಲಕ ಟ್ರ್ಯಾಕ್ಟರ್ ರಿಪೇರಿ ಕಾರ್ಯದಲ್ಲಿ ತೊಡಗಿದ್ದ. ಈ ವೇಳೆ ವೇಗವಾಗಿ ಬೈಕ್ (ಟಿಎನ್28 ಕ್ಯೂ 5588) ಓಡಿಸಿಕೊಂಡು ಬಂದ ಸುರೇಶ್, ಹಿಂಬದಿಯಿಂದ ಟ್ರ್ಯಾಕ್ಟರ್‌ಗೆ ವಾಹನ ಗುದ್ದಿಸಿದರು. ಘಟನೆಯಲ್ಲಿ ಕೆಳಗೆ ಬಿದ್ದ ಅವರ ಮೇಲೆ ಕಾರಿನ (ಕೆಎ 19ಪಿ 7299) ಚಕ್ರ ಹರಿದ ಪರಿಣಾಮ ಸುರೇಶ್ ಸ್ಥಳದಲ್ಲೇ ಸಾವನ್ನಪ್ಪಿದರು. ಗಾಯಗೊಂಡಿದ್ದ ಜಯಪ್ರಕಾಶ್ ಅವರನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮಾರ್ಗ ಮಧ್ಯೆಯೇ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮತ್ತೊಂದು ಪ್ರಕರಣ, ಯುವಕ ಸಾವು: ಯಲಹಂಕ ಸಮೀಪದ ಕೋಗಿಲು ಜಂಕ್ಷನ್ ಬಳಿ ಶನಿವಾರ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಜಗನ್ನಾಥ್ (25) ಎಂಬ ಯುವಕ ಸಾವನ್ನಪ್ಪಿದ್ದು, ಹರೀಶ್ (22) ಎಂಬುವರು ಗಾಯಗೊಂಡಿದ್ದಾರೆ.

ದೇವನಹಳ್ಳಿ ನಿವಾಸಿಗಳಾದ ಜಗನ್ನಾಥ್ ಮತ್ತು ಹರೀಶ್, ಕೆಲಸದ ಹುಡುಕಾಟದಲ್ಲಿದ್ದರು.

ಮಧ್ಯಾಹ್ನ 12.40ಕ್ಕೆ ದೇವನಹಳ್ಳಿ ಕಡೆಯಿಂದ ನಗರದ ಕಡೆಗೆ ಬೈಕ್‌ನಲ್ಲಿ ಬರುವಾಗ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಓಡಿಸುತ್ತಿದ್ದ ಜಗನ್ನಾಥ್ ಅವರ ಮೇಲೆ ವಾಹನದ ಚಕ್ರ ಹರಿದಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹರೀಶ್, ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಯಲಹಂಕ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)