ಟ್ರ್ಯಾಕ್ಟರ್ ಜಪ್ತಿ: ಬ್ಯಾಂಕ್ ಎದುರು ಧರಣಿ

7

ಟ್ರ್ಯಾಕ್ಟರ್ ಜಪ್ತಿ: ಬ್ಯಾಂಕ್ ಎದುರು ಧರಣಿ

Published:
Updated:

ಚಿಕ್ಕನಾಯಕನಹಳ್ಳಿ: ರೈತರ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಿದ ಬ್ಯಾಂಕ್ ಅಧಿಕಾರಿಗಳ ಕ್ರಮ ಖಂಡಿಸಿ ಗುರುವಾರ ರೈತಸಂಘ, ಹಸಿರು ಸೇನೆ ಹಾಗೂ ದಲಿತ ಸಂಘದ ಕಾರ್ಯಕರ್ತರು ಪ್ರತಿಭಟಿಸಿದರು.ಕೆನರಾ ಬ್ಯಾಂಕ್ ಅಧಿಕಾರಿಗಳು ಬ್ಯಾಂಕ್‌ನಿಂದ ಸಾಲ ಪಡೆದ ತಾಲ್ಲೂಕಿನ ಇಬ್ಬರು ರೈತರ ಟ್ರ್ಯಾಕ್ಟರ್‌ಗಳನ್ನು ಕಳೆದ ವಾರ ಜಪ್ತಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಗುರುವಾರ ತಾಲ್ಲೂಕು ರೈತಸಂಘ, ಹಸಿರುಸೇನೆ ಹಾಗೂ ದಲಿತ ಸಂಘದ ಕಾರ್ಯಕರ್ತರು ಬ್ಯಾಂಕ್‌ನ ಮುಂದೆ ಧರಣಿ ನಡೆಸಿ ಪ್ರತಿಭಟಿಸಿದರು.ಹಸಿರುಸೇನೆ ಕಾರ್ಯದರ್ಶಿ ಕೆಂಕೆರೆ ಸತೀಶ್ ಮಾತನಾಡಿ, ಯಾವುದೇ ನೋಟಿಸ್ ನೀಡದೆ ಬ್ಯಾಂಕ್ ಅಧಿಕಾರಿಗಳು ಏಕಾಏಕಿ ರೈತರ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಿದ್ದಾರೆ. ಸಾಲ  ವಸೂಲಾತಿಗಾಗಿ ರೈತರಿಂದ ಯಾವುದೇ ವಸ್ತುಗಳನ್ನು ಜಪ್ತಿ ಮಾಡಬಾರದೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದರೂ ಬ್ಯಾಂಕ್ ಅಧಿಕಾರಿಗಳು ಜಪ್ತಿಗೆ ಮುಂದಾಗಿದ್ದಾರೆ.

 

ಜಪ್ತಿ ಮಾಡಿದ ಟ್ರ್ಯಾಕ್ಟರ್ ವಾಪಸ್ ಕೊಡಬೇಕು, ಇಲ್ಲವೆ ಜಪ್ತಿ ಕುರಿತು ದಾಖಲಾತಿ ನೀಡಬೇಕು. ಇಲ್ಲದಿದ್ದರೆ ವಿಷ ಕುಡಿದು ಪ್ರಾಣ ಬಿಡುತ್ತೇನೆ ಎಂದು ಬೆದರಿಕೆ ಹಾಕಿದರು. ಸ್ಥಳಕ್ಕೆ ಆಗಮಿಸಿದ ಶಾಖಾ ವ್ಯವಸ್ಥಾಪಕ ಮುರಳೀಧರ್ ಮಾತನಾಡಿ ಮೇಲಧಿಕಾರಿ ಸೂಚನೆಯಂತೆ ಜಪ್ತಿ ಮಾಡಿರುವ ಟ್ರ್ಯಾಕ್ಟರ್ ಮರಳಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

 

ಪ್ರತಿಭಟನೆಯಲ್ಲಿ ರೈತ ಸಂಘದ ಮಲ್ಲಿಕಾರ್ಜುನಯ್ಯ, ಮಲ್ಲಪ್ಪ, ಶನಿದೇವರು, ಗಂಗಾಧರ್, ಗಂಗಣ್ಣ, ಶಿವಣ್ಣ, ಶಾಂತಣ್ಣ, ಹಾಗೂ ದಲಿತ ಸಂಘದ ಲಿಂಗರಾಜು ಮುಂತಾದವರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry