ಮಂಗಳವಾರ, ನವೆಂಬರ್ 12, 2019
28 °C

ಟ್ರ್ಯಾಕ್ಟರ್ ಹರಿದು ಮಗು ಸಾವು

Published:
Updated:

ಬೆಂಗಳೂರು: ಎಲೆಕ್ಟ್ರಾನಿಕ್‌ಸಿಟಿ ಸಮೀಪದ ವಿಟ್ಟಸಂದ್ರದಲ್ಲಿ ಗುರುವಾರ ಸಂಜೆ ಟ್ರ್ಯಾಕ್ಟರ್ ಹರಿದು ಎರಡೂವರೆ ವರ್ಷದ ಕೀರ್ತಿರಾಜ್ ಎಂಬ ಮಗು ಮೃತಪಟ್ಟಿದೆ.ಕೀರ್ತಿರಾಜ್, ಆಟೊ ಚಾಲಕ ಸಂಪಂಗಿ ಮತ್ತು ತುಳಸಿ ದಂಪತಿಯ ಎರಡನೆ ಮಗ. ಸಂಜೆ ಐದು ಗಂಟೆ ಸುಮಾರಿಗೆ ಆತ, ಅಣ್ಣ ಕಿರಣ್‌ಕುಮಾರ್ ಜತೆ ಮನೆ ಮುಂದೆ ಆಟವಾಡುತ್ತಿದ್ದ. ಈ ವೇಳೆ ಗೊಬ್ಬರ ತುಂಬಿಕೊಂಡು ಹೋಗಲು ವಿಟ್ಟಸಂದ್ರಕ್ಕೆ ಬಂದಿದ್ದ ಟ್ರಾಕ್ಟರ್ ಮಗುವಿನ ಮೇಲೆ ಹರಿದಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಸಂಬಂಧ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಸಂಪಂಗಿ, `ವಿಟ್ಟಸಂದ್ರದಲ್ಲಿರುವ ಹೊಲದಲ್ಲಿ ಮನೆ ಕಟ್ಟಿಸಿಕೊಂಡು ನಾಲ್ಕು ವರ್ಷಗಳಿಂದ ವಾಸ ಮಾಡುತ್ತಿದ್ದೇವೆ.

ಆದರೆ, ಗುರುವಾರ ನಮ್ಮ ಪಾಲಿಗೆ ಕರಾಳ ದಿನವಾಯಿತು. ಆಟವಾಡುತ್ತಿದ್ದ ಮಗ ಕಣ್ಣೆದುರೇ ಟ್ರ್ಯಾಕ್ಟರ್‌ನ ಮುಂದಿನ ಚಕ್ರಕ್ಕೆ ಸಿಲುಕಿ ಬಲಿಯಾದ. ಪತ್ನಿಯನ್ನು ನಿಯಂತ್ರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಚಾಲಕ ಶ್ರೀಧರ್‌ನ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ನಡೆದಿದೆ. ಆತನನ್ನು ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು' ಎಂದು ಆಗ್ರಹಿಸಿದರು.ಚಾಲಕ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾನೆ. ವಾಹನವನ್ನು ವಶಕ್ಕೆ ಪಡೆದು ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಎಲೆಕ್ಟ್ರಾನಿಕ್‌ಸಿಟಿ ಸಂಚಾರ ಠಾಣೆ ಪೊಲೀಸರು ತಿಳಿಸಿದರು. ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)