ಮಂಗಳವಾರ, ಮೇ 24, 2022
30 °C

ಟ್ರ್ಯಾಕ್ ಮೇಲೆ ನೀರಿಲ್ಲ; ಇಲಾಖೆ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: `ನಗರದಲ್ಲಿ ಇರುವ ಜಿಲ್ಲಾ ಕ್ರೀಡಾಂಗಣ ಉತ್ತಮವಾಗಿದ್ದು, ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ~ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ರಾಮೇಗೌಡ ತಿಳಿಸಿದ್ದಾರೆ.ಕ್ರೀಡಾಂಗಣ ಒಟ್ಟು 7.20 ಎಕರೆ ನಿವೇಶನ ಹೊಂದಿದ್ದು, ಇಲ್ಲಿ 400 ಮೀಟರ್ ಟ್ರ್ಯಾಕ್ ನಿರ್ಮಿಸಲಾಗಿದೆ. ಅಲ್ಲದೆ ಕಾಲ್ಚೆಂಡು ಕ್ರೀಡಾಂಗಣ ಕೂಡ ನಿರ್ಮಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.`ಮಣ್ಣಿನಿಂದ ಕೂಡಿರುವ ಆಟೋಟ ಟ್ರ್ಯಾಕ್‌ಗೆ ಶಾಶ್ವತವಾಗಿ ಮಾರ್ಕಿಂಗ್ ವ್ಯವಸ್ಥೆ ಮಾಡಲು ಆಗುವುದಿಲ್ಲ. ಎತ್ತರ ಜಿಗಿತಕ್ಕೆ ಬೆಡ್‌ಗಳನ್ನು ಖರೀದಿಸಲಾಗಿದೆ. ಉದ್ದ ಜಿಗಿತದ ಅಂಕಣ ನಿರ್ಮಿಸಲು ನಕ್ಷೆ ಮತ್ತು ಅಂದಾಜು ಪಟ್ಟಿ ನೀಡಲು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗಕ್ಕೆ ಕೋರಲಾಗಿದೆ~ ಎಂದು ಅವರು ತಿಳಿಸಿದ್ದಾರೆ.`ಕ್ರೀಡಾಂಗಣದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಾಲ್ಚೆಂಡು ಅಂಕಣಕ್ಕೆ ಶಾಶ್ವತವಾಗಿ ಮಾರ್ಕಿಂಗ್ ಮಾಡಲು ಆಗುವುದಿಲ್ಲ. ಪಂದ್ಯಾವಳಿ ಸಮಯದಲ್ಲಿ ಮಾತ್ರ ಅದನ್ನು ಮಾಡಿಕೊಳ್ಳಬೇಕಾಗುತ್ತದೆ. ಗುಂಡು ಎಸೆತ, ಜಾವಲಿನ್ ಎಸೆತ, ಡಿಸ್ಕಸ್ ಎಸೆತಗಳ ಅಂಕಣಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲು ನಿವೇಶನದ ಕೊರತೆ ಇದ್ದು, ಪಂದ್ಯಾವಳಿ ಸಮಯದಲ್ಲಿ ಮಾತ್ರ ಗುರುತು ಮಾಡಲಾಗುತ್ತದೆ~ ಎಂದಿದ್ದಾರೆ.`ಕ್ರೀಡಾಂಗಣದಲ್ಲಿ ಶಾಶ್ವತ ಶೌಚಾಲಯದ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕ್ರೀಡಾಕೂಟದ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಬಟ್ಟೆ ಬದಲಾಯಿಸಿಕೊಳ್ಳಲು ತಾತ್ಕಾಲಿಕವಾಗಿ ಕಚೇರಿಯ ಒಂದು ಕೊಠಡಿಯನ್ನು ನೀಡಲಾಗುತ್ತಿದೆ~ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

`ಸಾಕ್ಷ್ಯಾ~ ಚಿತ್ರಗಳು

ಜಿಲ್ಲಾ ಕ್ರೀಡಾಂಗಣದಲ್ಲಿ ಮೂಲ ಸೌಕರ್ಯ ಕೊರತೆ ಕುರಿತು ಕಳೆದ 22ರಂದು `ಪ್ರಜಾವಾಣಿ~ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಅದಕ್ಕೆ ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟೀಕರಣ ನೀಡಿರುವ ಅವರು, `ಕ್ರೀಡಾಂಗಣದಲ್ಲಿ ಮಳೆ ನೀರು ನಿಂತಿರುವ ಬಗ್ಗೆ ಛಾಯಾಚಿತ್ರ ಪ್ರಕಟಿಸಲಾಗಿದೆ. ಆದರೆ, ಈ ಛಾಯಾಚಿತ್ರದಲ್ಲಿರುವ ನೀರು ಟ್ರ್ಯಾಕ್‌ನಲ್ಲಿ ನಿಂತಿರುವ ನೀರಲ್ಲ~ ಎಂದು ಹೇಳಿಕೆ ನೀಡಿದ್ದಾರೆ.ಟ್ರ್ಯಾಕ್ ಮೇಲೆ ನೀರು ನಿಂತಿಲ್ಲದ ಕಾರಣ ಕ್ರೀಡಾಪಟುಗಳಿಗೆ ತೊಂದರೆಯಾಗಿಲ್ಲ ಎಂಬ ರೀತಿಯಲ್ಲಿ ಅವರು ವಿವರಣೆ ನೀಡಿದ್ದಾರೆ. ಆದರೆ ಕಳೆದ 20, 21ರಂದು ಸುರಿದ ಮಳೆಯಿಂದ ಕ್ರೀಡಾಂಗಣ ನೀರಿನಲ್ಲಿ ತೊಯ್ದಿತ್ತು. ಕ್ರೀಡಾಂಗಣದ ಟ್ರ್ಯಾಕ್‌ಗಳಲ್ಲಿ ನೀರು ನಿಂತಿತ್ತು. ಆ ಸಂದರ್ಭದಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೆ ಇದು ತೊಂದರೆ ನೀಡಿತ್ತು. ಆಗ ಟ್ರ್ಯಾಕ್ ಮೇಲೆ ನೀರು ನಿಂತಿದ್ದ ಚಿತ್ರಗಳನ್ನು ಈಗ ಪ್ರಕಟಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.