ಟ್ವೆಂಟಿ-20 ರ‌್ಯಾಂಕಿಂಗ್: ಇಂಗ್ಲೆಂಡ್‌ಗೆ ಅಗ್ರಸ್ಥಾನ

7

ಟ್ವೆಂಟಿ-20 ರ‌್ಯಾಂಕಿಂಗ್: ಇಂಗ್ಲೆಂಡ್‌ಗೆ ಅಗ್ರಸ್ಥಾನ

Published:
Updated:

ದುಬೈ (ಪಿಟಿಐ): ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಇದೇ ಮೊದಲ ಬಾರಿಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ರ‌್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಕಳೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್‌ಗೆ ಅಗ್ರಸ್ಥಾನ ಲಭಿಸಿದೆ. ಭಾರತಕ್ಕೆ ಪಟ್ಟಿಯಲ್ಲಿ ಐದನೇ ಸ್ಥಾನ ದೊರೆತಿದೆ.ಇಂಗ್ಲೆಂಡ್‌ನ ಎಯೊನ್ ಮಾರ್ಗನ್ ಮತ್ತು ಶ್ರೀಲಂಕಾದ ಸ್ಪಿನ್ನರ್ ಅಜಂತಾ ಮೆಂಡಿಸ್ ಕ್ರಮವಾಗಿ ಬ್ಯಾಟ್ಸ್‌ಮನ್ ಹಾಗೂ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯದ ಶೇನ್ ವ್ಯಾಟ್ಸನ್ ನಂ.1 ಆಲ್‌ರೌಂಡರ್ ಎನಿಸಿಕೊಂಡಿದ್ದಾರೆ.ಇಂಗ್ಲೆಂಡ್ ಒಟ್ಟು 127 ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಶ್ರೀಲಂಕಾ (126), ನ್ಯೂಜಿಲೆಂಡ್ (117) ಮತ್ತು ದಕ್ಷಿಣ ಆಫ್ರಿಕಾ (113) ಕ್ರಮವಾಗಿ ಎರಡರಿಂದ ನಾಲ್ಕರವರೆಗಿನ ಸ್ಥಾನ ಪಡೆದುಕೊಂಡಿವೆ. ಭಾರತದ ಬಳಿ 112 ಪಾಯಿಂಟ್‌ಗಳಿವೆ. 2009ರ ವಿಶ್ವಕಪ್ ಜಯಿಸಿದ್ದ ಪಾಕಿಸ್ತಾನಕ್ಕೆ ಏಳನೇ ರ‌್ಯಾಂಕ್ ಲಭಿಸಿದೆ. ವೆಸ್ಟ್‌ಇಂಡೀಸ್ ಬಳಿಕದ ಸ್ಥಾನದಲ್ಲಿದೆ.ಬಾಂಗ್ಲಾದೇಶ ಹಾಗೂ ಐಸಿಸಿಯ ಅಸೋಸಿಯೇಟ್ ಸದಸ್ಯ ರಾಷ್ಟ್ರಗಳಾದ ಕೆನಡಾ, ಐರ್ಲೆಂಡ್, ಕೀನ್ಯಾ, ಹಾಲೆಂಡ್ ಮತ್ತು ಸ್ಕಾಟ್ಲೆಂಡ್‌ಗೆ ರ‌್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಲಭಿಸಿಲ್ಲ. ಹೆಚ್ಚಿನ ಸಂಖ್ಯೆಯ ಟ್ವೆಂಟಿ-20 ಪಂದ್ಯಗಳನ್ನು (2009ರ ಆಗಸ್ಟ್ ಬಳಿಕ ಕನಿಷ್ಠ 9 ಪಂದ್ಯಗಳನ್ನು ಆಡಬೇಕು) ಆಡಿದ ಬಳಿಕವಷ್ಟೇ ಈ ದೇಶಗಳು ರ‌್ಯಾಂಕಿಂಗ್ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿವೆ.2009ರ ಆಗಸ್ಟ್ ಬಳಿಕ ಇಂಗ್ಲೆಂಡ್ ಒಟ್ಟು 20 ಪಂದ್ಯಗಳನ್ನಾಡಿದೆ. ಇದರಲ್ಲಿ 12 ಪಂದ್ಯಗಳಲ್ಲಿ ಜಯ ಪಡೆದಿದ್ದು, ಆರು ಸೋಲು ಅನುಭವಿಸಿದೆ. ಎರಡು ಪಂದ್ಯಗಳು ರದ್ದುಗೊಂಡಿದ್ದವು. ಈ ಅವಧಿಯಲ್ಲಿ ಪಾಕಿಸ್ತಾನ (24) ಅತ್ಯಧಿಕ ಪಂದ್ಯಗಳನ್ನು ಆಡಿದೆ. ಆದರೆ ಶೇ 50 ಕ್ಕೂ ಅಧಿಕ ಪಂದ್ಯಗಳಲ್ಲಿ ಸೋಲು ಎದುರಾಗಿದೆ.ಬ್ರೆಂಡನ್ ಮೆಕ್ಲಮ್ ಮತ್ತು ಕೆವಿನ್ ಪೀಟರ್‌ಸನ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮಾರ್ಗನ್ ಬಳಿಕ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮೊದಲ 10 ರಲ್ಲಿ ಏಳು ಸ್ಪಿನ್ನರ್‌ಗಳು ಸ್ಥಾನ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry