ಭಾನುವಾರ, ಅಕ್ಟೋಬರ್ 20, 2019
21 °C

ಠಾಣಾಧಿಕಾರಿ ಜತೆ ಮಾಲೀಕರ ವಾಗ್ವಾದ

Published:
Updated:

ಕುಷ್ಟಗಿ: ಗ್ರಾನೈಟ್ ನುಣುಪು ಘಟಕದಲ್ಲಿ ಹೆಚ್ಚುವರಿ ಯಂತ್ರ ಅಳವಡಿಸುವುದರಿಂದ ಸಾಕಷ್ಟು ಪರಿಸರ ಮತ್ತು ಶಬ್ದ ಮಾಲಿನ್ಯವಾಗುತ್ತದೆ ಎಂದು ಆಕ್ಷೇಪಿಸಿದ್ದಕ್ಕೆ ಇಲ್ಲಿಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಗ್ರಾನೈಟ್ ನುಣುಪು ಘಟಕಗಳ ಮಾಲೀಕರು ಪಕ್ಕದ ಅಗ್ನಿಶಾಮಕ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದ ಘಟನೆ ಬುಧವಾರ ನಡೆದಿದೆ.ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾನೈಟ್ ಕಂಪೆನಿ ಮಾಲೀಕ ಸುಖದೇವ ಬಿರ್ಲಾ ಮತ್ತು ಸಂಘದ ಅಧ್ಯಕ್ಷ ರಾಮ್ ಅವತಾರ ಇತರೆ ಗ್ರಾನೈಟ್ ಕಂಪೆನಿಗಳ ಮಾಲೀರು ಪಕ್ಕದ ಅಗ್ನಿಶಾಮಕ ಠಾಣೆಗೆ ಹೋಗಿ ಅಲ್ಲಿನ ಇನ್ಸ್‌ಪೆಕ್ಟರ್ ಪುಟ್ಟಸ್ವಾಮಿ ಮತ್ತು ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದರಿಂದ ಅಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಈಗಾಗಲೇ ಒಂದು ಗ್ರಾನೈಟ್ ನುಣುಪು ಘಟಕ ನಡೆಸುತ್ತಿರುವ ಸುಖದೇವ ಬಿರ್ಲಾ ಎಂಬುವವರು ಅದೇ ನಿವೇಶನದಲ್ಲಿ ಮತ್ತೊಂದು ಕಲ್ಲು ಕೊರೆಯುವ ಬೃಹತ್ ಯಂತ್ರ ಅಳವಡಿಸಲು ಮುಂದಾಗಿದ್ದಾರೆ. ಒಂದು ಯಂತ್ರ ಕಾರ್ಯಾರಂಭ ಮಾಡಿದ್ದರಿಂದಲೇ ಸುತ್ತಲಿನ ಪ್ರದೇಶದಲ್ಲಿ ಧೂಳು ಆವರಿಸುತ್ತಿದೆ, ಮನೆ ಒಳಗಿನ ಪಾತ್ರೆಗಳು, ಆಹಾರ ಸಾಮಗ್ರಿಗಳು ಧೂಳುಮಯವಾಗುತ್ತಿವೆ. ಯಂತ್ರ ಹಗಲು ರಾತ್ರಿ ನಿರಂತರ ಚಾಲೂ ಇರುವುದರಿಂದ ಶಬ್ದ ಮಾಲಿನ್ಯದಿಂದ ಅಲ್ಲಿ ವಾಸಿಸುವವರಿಗೆ ನೆಮ್ಮದಿ ಇಲ್ಲದಂತಾಗಿದೆ.ಹೀಗಿರುವಾಗ ಮತ್ತೊಂದು ಯಂತ್ರವೂ ಕೆಲಸ ಆರಂಭಿಸಿದರೆ ಪರಿಸ್ಥಿತಿ ಅಯೋಮಯವಾಗುತ್ತದೆ ಎಂಬುದು ಅಗ್ನಿಶಾಮಕ ನಿವಾಸಿಗಳು ಮತ್ತು ಸುತ್ತಲಿನ ಜನರ ಅಳಲು.ಎರಡನೇ ಯಂತ್ರ ಸ್ಥಾಪಿಸಲು ಈ ಹಿಂದೆ ಪ್ರಯತ್ನಿಸಿದಾಗಲೂ ಮಾತಿನ ಚಕಮಕಿ ನಡೆದು ಕೆಲಸ ಸ್ಥಗತಿಗೊಳಿಸಲಾಗಿತ್ತು.ಆದರೆ ಇಂದು ಮತ್ತೆ ಮಾಲೀಕರು ಯಂತ್ರ ಅಳವಡಿಸಲು ಮುಂದಾದಾಗ ಅಗ್ನಿಶಾಮಕ ಠಾಣೆ ಅಧಿಕಾರಿ ಪುಟ್ಟಸ್ವಾಮಿ ಸಮಸ್ಯೆ ವಿವರಿಸಿದ್ದನ್ನು ಮಾಲೀಕರು ತೀವ್ರವಾಗಿ ಆಕ್ಷೇಪಿಸಿದ್ದಾರೆ.ನಂತರ ಅಗ್ನಿಶಾಮಕ ಠಾಣೆಗೆ ಬಂದ ಮಾಲೀಕರು, ಎರಡು ಯಂತ್ರಗಳನ್ನು ಅಳವಡಿಸಲು ಸಂಬಂಧಿಸಿದ ಇಲಾಖೆಯಿಂದ ಪರವಾನಿಗೆ ಪಡೆದಿದ್ದೇವೆ, ಲಕ್ಷಗಟ್ಟಲೇ ವಿದ್ಯುತ್ ಶುಲ್ಕ ಪಾವತಿಸುತ್ತೇವೆ. ಅಧಿಕಾರಿಗಳೇ ನಮ್ಮನ್ನು ಮಾತನಾಡಿಸುವುದಿಲ್ಲ ಅಂಥದ್ದರಲ್ಲಿ ಅದನ್ನು ಪ್ರಶ್ನಿಸಲು ನೀವು ಯಾರು ಎಂದು ಪ್ರಶ್ನಿಸಿದ್ದಾರೆ.

 

ಅಲ್ಲದೇ ನಾವು ಮನಸ್ಸು ಮಾಡಿದರೆ ನಿಮ್ಮ ಠಾಣೆ, ವಸತಿಗೃಹಗಳನ್ನೇ ಎತ್ತಂಗಡಿಯಾಗುತ್ತವೆ ಎಂದೆ ಬೆದರಿಕೆಯೊಡ್ಡಿದರು. ಅದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಧಾಷಟ್ಯೆತನ ಪ್ರದರ್ಶಿಸಿದ ಗ್ರಾನೈಟ್ ಮಾಲೀಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ದೂರು: ಗ್ರಾನೈಟ್ ಕಂಪೆನಿ ಮಾಲೀಕರು ಕೈಗಾರಿಕೆ ಪರವಾನಿಗೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರವಾನಿಗೆ ಉಲ್ಲಂಘಿ ಸುತ್ತಿದ್ದಾರೆ, ಒಂದು ಯಂತ್ರದ ಪರವಾನಿಗೆ ಪಡೆದು ಎರಡು ಯಂತ್ರಗಳನ್ನು ಅಳವಡಿಸುತ್ತಿದ್ದಾರೆ.

 

ಈ ಪ್ರದೇಶದಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಯಾರೊಬ್ಬ ಅಧಿಕಾರಿಯೂ ಇದರತ್ತ ಗಮನಹರಿಸುವುದಿಲ್ಲ. ಅಲ್ಲದೇ ಎಷ್ಟೋ ಅವಘಡಗಳು ನಡೆದರೂ ಒಂದು ಪ್ರಕರಣವೂ ಹೊರಬರುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು

Post Comments (+)