ಶನಿವಾರ, ಜನವರಿ 18, 2020
19 °C

ಠಾಣೆ ಮೇಲ್ದರ್ಜೆಗೆ ಪ್ರಸ್ತಾವನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪೊಲೀಸ್ ಠಾಣೆಗಳ ಮೇಲ್ದರ್ಜೆಗೆ ಏರಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಬೂರಾಮ್ ತಿಳಿಸಿದರು.ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಭಾನುವಾರ ನಡೆದ ಪರಿಶಿಷ್ಟ ಜಾತಿ- ಪಂಗಡದ ಮಾಸಿಕ ಅಹವಾಲು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬಂಟ್ವಾಳ ಗ್ರಾಮಾಂತರ ಠಾಣೆ ಮೇಲ್ದರ್ಜೆಗೆ ಏರಿಸಿ ಇನ್‌ಸ್ಪೆಕ್ಟರ್ ನೇಮಿಸಬೇಕು. ಪುತ್ತೂರು ಠಾಣೆ ಮೇಲ್ದರ್ಜೆಗೆ ಏರಿಸಬೇಕು. ನೆಲ್ಯಾಡಿ, ಧರ್ಮಸ್ಥಳ ಹಾಗೂ ಫರಂಗಿ ಪೇಟೆ ಹೊರ ಠಾಣೆಯನ್ನು ಪಿಎಸ್‌ಐ ಠಾಣೆಗಳಾಗಿ ಮೇಲ್ದರ್ಜೆಗೆ ಏರಿಸಬೇಕು. ಮಾಣಿ ಹಾಗೂ ಇತರ ಎರಡು ಕಡೆ ಪೊಲೀಸ್ ಹೊರ ಠಾಣೆ ಆರಂಭಿಸಬೇಕು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ ಎಂದರು.92 ಸಿಬ್ಬಂದಿ ನೇಮಕ: ಕಳೆದ ವರ್ಷವೇ ಜಿಲ್ಲೆಗೆ 92 ಪೊಲೀಸರ ನೇಮಕವಾಗಿದೆ. ಕೆಲವು ಕಾರಣಗಳಿಂದ ಅವರ ನೇಮಕ ವಿಳಂಬವಾಗಿತ್ತು. ಈಗ ಕೆಲವು ಸಿಬ್ಬಂದಿ ಬಂದಿದ್ದಾರೆ. ಇನ್ನಷ್ಟು ಉಳಿದವರು ಶೀಘ್ರ ಸೇರಲಿದ್ದಾರೆ. ಬಳಿಕ ಅವರನ್ನು ಒಂದು ವರ್ಷದ ತರಬೇತಿಗೆ ಕಳುಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.ಭತ್ಯೆ ಪಡೆಯಿರಿ: ಕಳೆದ ವರ್ಷ ಜಿಲ್ಲೆಯಲ್ಲಿ 40 ದಲಿತ ದೌರ್ಜನ್ಯ ಹಾಗೂ ಜಾತಿನಿಂದನೆ ಪ್ರಕರಣಗಳು ದಾಖಲಾಗಿವೆ. ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾದಾಗ ದೂರುದಾರರು ಹಾಗೂ ಸಾಕ್ಷಿದಾರರಿಗೆ ಭತ್ಯೆ ನೀಡಲು ಕಾನೂನಿನಲ್ಲಿ ಅವಕಾಶ ಇದೆ. 1995ರಲ್ಲಿ ಜಾರಿಗೆ ಬಂದ ಕಾಯ್ದೆಯ ರೂಲ್ 11ರ ಅಡಿಯಲ್ಲಿ ಈ ಅವಕಾಶ  ಇದೆ. ಆದರೆ ಜಿಲ್ಲೆಯ ಯಾರೂ ಸಹ ಇದರ ಲಾಭ ಪಡೆದುಕೊಂಡಿಲ್ಲ. ದಲಿತ ಮುಖಂಡರು ಈ  ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು.ಠಾಣೆಗೆ ಹಾಗೂ ಕೋರ್ಟ್‌ಗೆ ಬಂದಾಗ ಭತ್ಯೆ ಪಡೆಯಬಹುದು. 60 ವರ್ಷಕ್ಕಿಂತ ಜಾಸ್ತಿ ಪ್ರಾಯದವರ ಜತೆಗೆ ಬಂದ ಒಬ್ಬರಿಗೆ ಭತ್ಯೆ ನೀಡಲಾಗುವುದು. ದಲಿತ ದೌರ್ಜನ್ಯ ಪ್ರಕರಣಗಳನ್ನು ಎಎಸ್‌ಪಿ ತನಿಖೆ ಮಾಡುತ್ತಾರೆ. ಅವರು ನೀಡಿದ ಪ್ರಮಾಣಪತ್ರದ ಆಧಾರದಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ಭತ್ಯೆ ಪಡೆಯಬಹುದು. ಇಂತಹ ಪ್ರಕರಣಗಳಲ್ಲಿ ದಲಿತೇತರರು ಸಾಕ್ಷಿ ನುಡಿದಾಗ ಅವರೂ ಪಡೆಯಲು ಅವಕಾಶ ಇದೆ ಎಂದು ಅವರು ಸ್ಪಷ್ಟಪಡಿಸಿದರು.

ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಬೇಕು ಎಂದು ಕಾನೂನು ಪ್ರಾಧಿಕಾರದ ಸದಸ್ಯ ಗೋಪಾಲ ಕಾಡುಮಠ ಆಗ್ರಹಿಸಿದರು.ಹಾಜರಿ ಕಡಿಮೆ: ಸಭೆಯಲ್ಲಿ ಬೆರಳೆಣಿಕೆಯ ಮಂದಿ ದಲಿತ ಮುಖಂಡರು ಇದ್ದರು. ಸಭೆ ಅರ್ಧ ಗಂಟೆಯೊಳಗೆ ಮುಕ್ತಾಯವಾಗಿತ್ತು. ಕಳೆದ ಕೆಲವು ತಿಂಗಳಿಂದ ಸಭೆಯಲ್ಲಿ 60ಕ್ಕೂ ಅಧಿಕ ಮಂದಿ ಭಾಗವಹಿಸುತ್ತಿದ್ದರು. ಆದರೆ ಭಾನುವಾರ ನಡೆದ ಸಭೆಯಲ್ಲಿ ಭಾಗವಹಿಸಿದವರ ಸಂಖ್ಯೆ 20ರಷ್ಟು ಮಂದಿ ಮಾತ್ರ.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾಕರ್, ಪುತ್ತೂರು ಎಎಸ್‌ಪಿ ಅನುಚೇತ್,      ಇನ್ಸ್‌ಪೆಕ್ಟರ್‌ಗಳು ಇದ್ದರು.

ಸದಾಶಿವ ಗೌಡ ಹತ್ಯೆ- ನಕ್ಸಲರ ಹತಾಶ ಕೃತ್ಯ: ಐಜಿಪಿ

ಮಂಗಳೂರು: ಕಬ್ಬಿನಾಲೆ ತೆಂಗುಮಾರು ಸಮೀಪ ಸದಾಶಿವ ಗೌಡ ಹತ್ಯೆ ನಕ್ಸಲರ ಹತಾಶೆಯ ಕೃತ್ಯ. ಸ್ಥಳೀಯ ಜನರನ್ನು ನಕ್ಸಲರು ಆಕರ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಅಭಿಪ್ರಾಯಪಟ್ಟರು. `ನಕ್ಸಲ್ ಸಿದ್ಧಾಂತ ಜನರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಈ ಘಟನೆಯನ್ನು ಪೊಲೀಸ್ ಇಲಾಖೆ ಅಪರಾಧ ದೃಷ್ಟಿಕೋನದಿಂದ ನೋಡುತ್ತಿದೆ. ಇಲ್ಲಿಯ ವ್ಯಕ್ತಿಯ ಬದುಕುವ ಹಕ್ಕು ಉಲ್ಲಂಘನೆಯಾಗಿದೆ ಎಂದು ಭಾನುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಅವರು ತಿಳಿಸಿದರು.ನಕ್ಸಲರಿಂದಲೇ ಸದಾಶಿವ ಗೌಡ ಹತ್ಯೆ ನಡೆದಿದೆ ಎಂಬುದನ್ನು ನಂಬಲು ಹಲವು ಕಾರಣಗಳಿವೆ. ತಮ್ಮ ಸಿದ್ಧಾಂತ ಒಪ್ಪದ ಸ್ಥಳೀಯರನ್ನು ಬೆದರಿಸಲು ನಕ್ಸಲರು ಈ ಕೃತ್ಯ ಎಸಗಿದ್ದಾರೆ. ಸದಾಶಿವ ಗೌಡ ಪೊಲೀಸ್ ಮಾಹಿತಿದಾರನಾಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

 

ಪಶ್ಚಿಮ ವಲಯ ವ್ಯಾಪ್ತಿಯ ಜನರು ಇತರ ಕಡೆಗಳಿಗಿಂತ ಹೆಚ್ಚು ಶಿಕ್ಷಿತರು. ಇಲ್ಲಿನ ಅಭಿವೃದ್ಧಿ ಚಟುವಟಿಕೆ ಯೋಜನೆಗಳು ವಿವಾದಕ್ಕೆ ಒಳಗಾಗುತ್ತಿರುವುದರಿಂದ ಅಲ್ಲಿಯೂ ಅವರ ಪಾತ್ರ ಮಹತ್ವದ್ದಾಗಿದೆ. ಈಗಿನ ಯೋಜನೆಗಳು ಅಭಿವೃದ್ಧಿ ಯೋಜನೆಗಳು ವರ್ಸಸ್ ಪರಿಸರ ಹಾಗೂ ಅಭಿವೃದ್ಧಿ ಯೋಜನೆಗಳು ವರ್ಸಸ್ ಜನರು ಎಂಬಂತೆ ಆಗಿದೆ. ಸಮಾಜದಲ್ಲಿ ವಿವಿಧ ಬಗೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಸಂಘರ್ಷ ನಡೆಯುವ ಸಾಧ್ಯತಾ ಸ್ಥಳಗಳನ್ನು ಗುರುತಿಸಿ ಹೆಚ್ಚಿನ ಎಚ್ಚರ ವಹಿಸಬೇಕಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.ಕಂದಾಯ ಇಲಾಖೆ ಅಭಿವೃದ್ದಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತದೆ. ಸ್ಥಳೀಯ ಜನರ ಮನೋಸ್ಥಿತಿ ಗಮನಿಸಿ ಈ ವಿಚಾರವನ್ನು ಸಂಬಂಧಿಸಿದ ಪ್ರಾಧಿಕಾರದ ಗಮನಕ್ಕೆ ತಂದು ಸಂಧಾನಕಾರನ ಹೊಣೆ ನಿರ್ವಹಿಸುತ್ತಿದೆ ಎಂದರು.

ಪ್ರತಿಕ್ರಿಯಿಸಿ (+)