ಠೂ ಠೂ ಯಾಕೆ?

7

ಠೂ ಠೂ ಯಾಕೆ?

Published:
Updated:
ಠೂ ಠೂ ಯಾಕೆ?

ಠೂ ಠೂ ಠೂ ಬೇಡಪ್ಪಾ!

ಈ ರೀತಿ ಪ್ರಾರಂಭವಾಗುವ ಹಳೆಯ ಕನ್ನಡ ಸಿನಿಮಾದ ಹಾಡು ನೆನಪಿದೆಯಾ? ಇದು ಮಕ್ಕಳನ್ನು ಕುರಿತು ಚಿತ್ರಿಸಿದ ಹಾಡು. ಹಾಗಾಗಿ ಈ ಠೂ ಬಿಡೋದೆಲ್ಲಾ ಮಕ್ಕಳಾಟ, ಅದಕ್ಕೂ ದೊಡ್ಡವರಿಗೂ ಏನು ಸಂಬಂಧ ಎಂದು ಮೂಗು ಮುರಿಯಬೇಡಿ. ದೊಡ್ಡವರೂ ಇದನ್ನು ಗಾಂಭೀರ್ಯದಿಂದ, ನಾಜೂಕಿನಿಂದ (ಅಂತ ಅಂದುಕೊಂಡು!) ಮಾಡುತ್ತಾರೆ.ಹಾಗೆ ನೋಡಿದರೆ ಮಕ್ಕಳು ಠೂ ಬಿಡುವುದು ಒಂದು ರೀತಿ ನಿರಪಾಯಕಾರಿ. ಅದರಲ್ಲಿ ಮುಗ್ಧತೆ ಇದೆ, ಭಾವನೆಗಳ ಸಹಜ ಅಭಿವ್ಯಕ್ತಿ ಇದೆ. ಠೂ ಬಿಟ್ಟ ಮಕ್ಕಳು ಮತ್ತೆ ಒಂದಾದಾಗ ಹಳೆಯ ಜಗಳದ ಯಾವುದೇ ಕುರುಹನ್ನೂ ಉಳಿಸಿಕೊಳ್ಳದೆ ಬೆರೆತುಬಿಡುತ್ತಾರೆ. ಆದರೆ ದೊಡ್ಡವರ ಸುಸಂಸ್ಕೃತ ಜಗತ್ತಿನ ಠೂ ಬಿಡುವುದರ ಹಿಂದೆ ಆಳವಾದ ದ್ವೇಷ, ಕೃತ್ರಿಮತೆ, ಒಳ ಹುನ್ನಾರಗಳೆಲ್ಲ ಅಡಗಿರುತ್ತವೆ. ಇದು ಇಬ್ಬರ ಸಂಬಂಧಗಳಿಗಷ್ಟೇ ಅಲ್ಲ, ಅವರ ಮಾನಸಿಕ ಸಮಾಧಾನಕ್ಕೂ ಮುಳುವಾಗಬಹುದು. ಜತೆಗೆ ನಿಧಾನವಾಗಿ ಸುತ್ತಲಿನವರನ್ನೆಲ್ಲಾ ಒಳಗೊಳ್ಳುತ್ತಾ ಎರಡು ಪಕ್ಷಗಳು ನಿರ್ಮಾಣಗೊಳ್ಳುತ್ತವೆ.ಹೆಚ್ಚಿನ ಬಾರಿ ನಾವು ಠೂ ಬಿಟ್ಟಾಗ ಅದನ್ನೇನು ಎಲ್ಲರೆದುರು ಪ್ರಕಟಿಸಿರುವುದಿಲ್ಲ. ಯಾವುದಾದರೂ ವ್ಯಕ್ತಿಯ ಬಗ್ಗೆ ಅತಿಯಾದ ದ್ವೇಷದ ಭಾವನೆಗಳು ಬಂದಾಗ ಅಥವಾ ದೊಡ್ಡ ಜಗಳವಾದಾಗ ಅವರ ಸಹವಾಸ ಮಾಡಬಾರದೆಂದು ನಮ್ಮಲ್ಲೇ ನಿರ್ಧರಿಸುತ್ತೇವೆ. ಹೆಚ್ಚೆಂದರೆ ನಮ್ಮ ಆತ್ಮೀಯರಲ್ಲಿ ಕೆಲವರಿಗೆ ಇದರ ಬಗೆಗೆ ತಿಳಿಸಿರಬಹುದು. ಅಂತಹ ವ್ಯಕ್ತಿಯು ಸಹೋದ್ಯೋಗಿ ಅಥವಾ ಬಂಧುವಾಗಿದ್ದು, ಆಗಾಗ ಬೆರೆಯಬೇಕಾದ ಸಂದರ್ಭಗಳು ಬರುತ್ತಿದ್ದರೆ, ಠೂ ಬಿಡುವುದರಿಂದ ನಾವು ಇರುಸುಮುರುಸಿನ ಪ್ರಸಂಗಗಳನ್ನು ಆಗಾಗ ಎದುರಿಸಬೇಕಾಗುತ್ತದೆ. ಪದೇಪದೇ ಎಲ್ಲರಿಗೂ ನಮ್ಮ ನಡವಳಿಕೆಯ ಬಗೆಗೆ ವಿವರಣೆ ನೀಡಬೇಕಾಗಬಹುದು. ಕೊನೆಗೆ ಯಾರದೋ ಮಧ್ಯಸ್ಥಿಕೆಯಿಂದಲೋ ಅಥವಾ ಇತರ ಅನಿವಾರ್ಯ ಕಾರಣಗಳಿಗಾಗಿಯೋ ಒಂದಾದಾಗ ಅದು ಕೂಡ ದೊಡ್ಡ ಸುದ್ದಿಯಾಗಬಹುದು. ಹೀಗೆ ಅನಪೇಕ್ಷಿತ ಕಾರಣಗಳಿಗಾಗಿ ನಾವು ಸುದ್ದಿಯ ಕೇಂದ್ರವಾಗಬೇಕೇ?ಹಾಗಿದ್ದರೆ ನಮಗೆ ಇಷ್ಟ ಇಲ್ಲದಿರುವವರ ಜೊತೆಗೂ ನಾವು ಒಡನಾಡುತ್ತಲೇ ಇರಬೇಕೇನು ಎನ್ನುವುದು ನಿಮ್ಮ ಪ್ರಶ್ನೆಯಲ್ಲವೇ? ಹಾಗೇನಿಲ್ಲ, ನಾವು ಇಷ್ಟಪಡದವರನ್ನೆಲ್ಲಾ ದ್ವೇಷಿಸಬೇಕೆಂದೇನೂ ಇಲ್ಲವಲ್ಲ. ಅವರ ಬಗೆಗೆ ಒಂದು ರೀತಿಯ ನಿರ್ಭಾವುಕತೆ ಬೆಳೆಸಿಕೊಂಡರೆ ಆಯಿತು. ಅಂದರೆ ಈ ಕಡೆ  +  ಅಲ್ಲ, ಆ ಕಡೆ -  ಅಲ್ಲದ ಬರೀ  0 ಅಲ್ಲಿರುವ ಸ್ಥಿತಿ. ಅನಿವಾರ್ಯವಾಗಿ ಬೆರೆಯಲೇಬೇಕಾದಾಗ, ಸಹಜ ಅನ್ನಿಸಿದರೆ ಒಂದು ಸಣ್ಣ ಮುಗುಳ್ನಗು, ಅದೂ ಬೇಡ ಎನಿಸಿದರೆ ಕೆಲಸಕ್ಕೆ ಸಂಬಂಧಿಸಿದಷ್ಟೇ ಮಾತು- ಇಷ್ಟಕ್ಕೇ ಅಂತಹ ಸಂಬಂಧಗಳನ್ನು ಸೀಮಿತಗೊಳಿಸೋಣ. ಇದನ್ನು ಅಪರಿಚಿತರೊಡನೆ ನಾವು ತೊಂದರೆಯಿಲ್ಲದೆ ಮಾಡುತ್ತೇವೆ. ಆದರೆ ಪರಿಚಯವಿದ್ದು, ಇಷ್ಟಪಡದವರೊಡನೆ ಮಾಡಲು ಸ್ವಲ್ಪ ಅಭ್ಯಾಸ ಮಾಡಿಕೊಳ್ಳಬೇಕಷ್ಟೇ.ಹೀಗೆ ಮಾಡುವುದರಿಂದ ಎರಡು ಅನುಕೂಲಗಳಿವೆ. ನಮ್ಮಳಗೇ ಅವರ ಬಗೆಗೆ ದ್ವೇಷ ಸಾಧಿಸಿ ನಮ್ಮ ಮಾನಸಿಕ ಸಮಾಧಾನ ಹಾಳು ಮಾಡಿಕೊಳ್ಳುವುದನ್ನು ತಪ್ಪಿಸಬಹುದು. ಎಂದಾದರೂ ಆ ವ್ಯಕ್ತಿಯ ಬಗೆಗೆ ನಮ್ಮ ಅನಿಸಿಕೆಗಳು ಬದಲಾದರೆ, ಯಾವುದೇ ಹಿಂಜರಿಕೆ ಅಥವಾ ಪಾಪಪ್ರಜ್ಞೆ ಇಲ್ಲದೆ ಅವರೊಡನೆ ಬೆರೆಯಬಹುದು.ಸ್ನೇಹಿತರ ಜೊತೆ ಠೂ ಬಿಟ್ಟರೆ ಹೇಗಾದರೂ ಅವರನ್ನು ಭೇಟಿಯಾಗುವುದನ್ನು ತಪ್ಪಿಸಬಹುದು. ಆದರೆ ಬಂಧುಗಳಲ್ಲಿ, ಅದರಲ್ಲೂ ಹೆಚ್ಚಾಗಿ ಕುಟುಂಬದವರೊಡನೆ ಮಾತ್ರ ಯಾವುದೇ ಕಾರಣಕ್ಕೂ ಮಾತು ಬಿಡಬಾರದು. ದಿನನಿತ್ಯ ಎದುರಿಗಿದ್ದೂ ಮುಖ ತಿರುಗಿಸಿಕೊಂಡು ಓಡಾಡುವುದು ತೀರಾ ಕಿರಿಕಿರಿಯ ವಿಚಾರ. ಅದಕ್ಕಿಂತಲೂ ಮುಖ್ಯವಾಗಿ ಈ ಸಂಬಂಧಗಳನ್ನು ಪೂರ್ಣ ಧಿಕ್ಕರಿಸಿ ಬಿಡಲು ಸಾಧ್ಯವಿಲ್ಲ. ಅನಿವಾರ್ಯವಾಗಿ ಹೊಂದಿಕೊಳ್ಳಲೇ ಬೇಕಾದಾಗ ಸಂಬಂಧಗಳು ಸಹಜಗೊಳ್ಳಲು ಬಹಳ ಸಮಯ ಹಿಡಿಯುತ್ತದೆ.ಪತಿ- ಪತ್ನಿಯರ ಮಧ್ಯೆ ಆಗಾಗ ಜಗಳ ಆಗುತ್ತಿದ್ದರೆ ಪ್ರೀತಿ ನವೀಕರಣಗೊಳ್ಳುತ್ತದೆ ಎಂದು ದಾರಿ ತಪ್ಪಿಸುವವರಿದ್ದಾರೆ. ಕೆಲವೊಮ್ಮೆ ಜಗಳಗಳು ಅನಿವಾರ್ಯ ಬಿಡಿ. ಆದರೆ ಮೌನದಿಂದ ನೀಡುವ ಹಿಂಸೆ ಬಹಳ ಕ್ರೂರವಾದದ್ದು. ಸಂವಹನವೇ ಇಲ್ಲದ ಸ್ಥಿತಿಗಿಂತ ಋಣಾತ್ಮಕ ಸಂವಹನ, ಅಂದರೆ ಜಗಳ ಉತ್ತಮ!ಸರಿ ತಪ್ಪುಗಳು ಯಾರದ್ದೇ ಇರಲಿ, ಬೆಳೆದ ಮಕ್ಕಳೊಡನೆ ಸಂಬಂಧಗಳು ಸೌಹಾರ್ದಯುತ ಆಗಿಲ್ಲದಿದ್ದರೂ ಮಾತನಾಡುವ ಸೌಜನ್ಯ ಉಳಿಸಿಕೊಳ್ಳಲೇಬೇಕು. ಹಾಗೆ ಮಾಡದೆ ಮುಖ ಹರಿದುಕೊಂಡರೆ ಮುಂದೆಂದಾದರೂ ಬಾಂಧವ್ಯ ಸಹಜಗೊಳ್ಳಬಹುದಾದ ಸಾಧ್ಯತೆಗಳನ್ನು ನಾವೇ ತಳ್ಳಿಹಾಕಿದಂತೆ. ಯಾಕೆಂದರೆ ಮಾತುಕತೆಯೇ ಇಲ್ಲದ ಸ್ಥಿತಿಯಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು, ತಪ್ಪು ಕಲ್ಪನೆಗಳು ಹೆಚ್ಚಾಗುವುದು ಸಹಜ ಅಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry