ಶುಕ್ರವಾರ, ಮಾರ್ಚ್ 5, 2021
24 °C
ಏರುತ್ತಲೇ ಇದೆ ಇಡುಗಂಟು ಕಳೆದುಕೊಳ್ಳುವವರ ಪ್ರಮಾಣ

ಠೇವಣಿ ಹೋದರೂ ಕುಂದಿಲ್ಲ ಉತ್ಸಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಠೇವಣಿ ಹೋದರೂ ಕುಂದಿಲ್ಲ ಉತ್ಸಾಹ

ನವದೆಹಲಿ (ಪಿಟಿಐ): ಹಿಂದಿನ ಲೋಕಸಭಾ ಚುನಾವಣೆಗಳನ್ನು ಗಮನಿಸಿದರೆ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಿರುವ ಪ್ರಮಾಣ ಹೆಚ್ಚು­ತ್ತಲೇ ಇದೆ. ಆದರೆ ಇದರಿಂದಾಗಿ ಜನರು ಚುನಾ-­ವಣೆಗೆ ಸ್ಪರ್ಧಿಸುವುದೇನೂ ಕಡಿಮೆಯಾಗಿಲ್ಲ. ಚುನಾವಣಾ ಆಯೋಗದ ನಿಯಮದ ಪ್ರಕಾರ, ಚಲಾವಣೆಯಾದ ಸಿಂಧು ಮತಗಳಲ್ಲಿ ಆರನೇ ಒಂದು ಭಾಗದಷ್ಟು ಮತ ಪಡೆಯದ ಅಭ್ಯರ್ಥಿ­ಗಳಿಗೆ ಅವರ ಠೇವಣಿ ವಾಪಸ್‌ ದೊರೆಯುವುದಿಲ್ಲ. ಈ ಹಣ ಸರ್ಕಾರದ ಬೊಕ್ಕಸ ಸೇರುತ್ತದೆ.ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿ ಭದ್ರತಾ ಠೇವಣಿಯಾಗಿ ₨ 25 ಸಾವಿರ ಪಾವತಿಸ­ಬೇಕು. ಮೀಸಲು ಕ್ಷೇತ್ರಗಳಿಂದ ಸ್ಪರ್ಧಿಸುವ ಅಭ್ಯರ್ಥಿಗಳು ₨ 12,500 ಪಾವತಿಸಬೇಕು. 1951ರಲ್ಲಿ ನಡೆದ ಮೊದಲನೇ ಲೋಕಸಭೆ ಚುನಾವಣೆಯಲ್ಲಿ 1,874 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅವರಲ್ಲಿ 745 ಅಭ್ಯರ್ಥಿಗಳು ಅಂದರೆ, ಶೇ 40 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.ನಂತರದ ಪ್ರತಿಯೊಂದು ಚುನಾವಣೆ­ಯಲ್ಲಿಯೂ ಇಡುಗಂಟು ಕಳೆದುಕೊಳ್ಳುವ ಅಭ್ಯರ್ಥಿಗಳ ಪ್ರಮಾಣ ಏರುತ್ತಲೇ ಸಾಗಿದೆ. 11ನೇ ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು ಎಂಬ ಮಾಹಿತಿಯನ್ನು ಚುನಾವಣಾ ಆಯೋಗ ನೀಡುತ್ತದೆ. ಈ ಚುನಾವಣೆಯಲ್ಲಿ ಒಟ್ಟು 13,952 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ ಇಡುಗಂಟು ಕಳೆದುಕೊಂಡವರು 12,688 ಮಂದಿ. ಇದು ಅತ್ಯಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದ ಚುನಾವಣೆಯೂ ಹೌದು.2009ರಲ್ಲಿ 15ನೇ  ಲೋಕಸಭೆ ಚುನಾವಣೆ­ಯಲ್ಲಿ ಶೇ 85 ಅಭ್ಯರ್ಥಿಗಳಿಗೆ ಭದ್ರತಾ ಠೇವಣಿ ವಾಪಸ್‌ ದೊರೆಯಲಿಲ್ಲ. 1991ರ ಚುನಾವಣೆಯಲ್ಲಿ ಶೇ 96 ಅಭ್ಯರ್ಥಿಗಳು ಮತ್ತು 1991ರ ಚುನಾವಣೆಯಲ್ಲಿ ಶೇ 86 ಅಭ್ಯರ್ಥಿಗಳಿಗೆ ಠೇವಣಿ ನಷ್ಟವಾಗಿತ್ತು. ಹಾಗಾಗಿ ಶೇಕಡಾವಾರು ಪ್ರಮಾಣದಲ್ಲಿ 2009ರ ಚುನಾವಣೆಗೆ ಠೇವಣಿ ಕಳೆದುಕೊಳ್ಳುವಿಕೆಯಲ್ಲಿ ಮೂರನೇ ಸ್ಥಾನವಿದೆ. ಇಡುಗಂಟು ಕಳೆದುಕೊಳ್ಳಬೇಕಲ್ಲ ಎಂಬ ಭೀತಿ ಜನರು ಚುನಾವಣೆಗೆ ಸ್ಪರ್ಧಿಸುವುದಕ್ಕೆ ತೊಡಕಲ್ಲ ಎಂಬುದು ಈ ಮಾಹಿತಿಯಿಂದ ಸ್ಪಷ್ಟವಾಗುತ್ತದೆ.ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಠೇವಣಿ ಉಳಿಸಿಕೊಳ್ಳುವ ವಿಷಯದಲ್ಲಿ ಹೆಚ್ಚು ಅದೃಷ್ಟವಂತರು. ಮೊದಲನೇ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಒಟ್ಟು 1,217 ಅಭ್ಯರ್ಥಿಗಳಲ್ಲಿ 344 ಮಂದಿ (ಶೇ 28) ಠೇವಣಿ ಕಳೆದುಕೊಂಡಿದ್ದರು. 1957ರ ಎರಡನೇ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಪರಿಸ್ಥಿತಿ ಇನ್ನಷ್ಟು ಉತ್ತಮಗೊಂಡು 919ರಲ್ಲಿ 130 ಅಭ್ಯರ್ಥಿಗಳು ಮಾತ್ರ ಠೇವಣಿ ಕಳೆದುಕೊಂಡರು.1977ರ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ 1,060 ಅಭ್ಯರ್ಥಿಗಳಲ್ಲಿ ನೂರು ಮಂದಿಗೆ ಮಾತ್ರ ಇಡುಗಂಟು ನಷ್ಟವಾಯಿತು. ಆದರೆ 2009ರ ಚುನಾವಣೆ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಅಷ್ಟೊಂದು ಉತ್ತಮ­ವಾಗಿರಲಿಲ್ಲ. 1,623 ಅಭ್ಯರ್ಥಿಗಳಲ್ಲಿ ಸುಮಾರು ಅರ್ಧದಷ್ಟು ಅಂದರೆ 779 ಜನರು ಇಡುಗಂಟು ಕಳೆದುಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.