ಡಂಪಿಂಗ್ ಯಾರ್ಡ್ ಆದ ಸುಳ್ಯ ಪ.ಪಂ ಆವರಣ

ಭಾನುವಾರ, ಜೂಲೈ 21, 2019
27 °C

ಡಂಪಿಂಗ್ ಯಾರ್ಡ್ ಆದ ಸುಳ್ಯ ಪ.ಪಂ ಆವರಣ

Published:
Updated:

ಸುಳ್ಯ: ಕಳೆದ 15 ವರ್ಷಗಳಿಂದ ಪಟ್ಟಣದ ಘನತ್ಯಾಜ್ಯ ಹಾಕಲು ಡಂಪಿಂಗ್ ಯಾರ್ಡ್ ನಿರ್ಮಾಣಕ್ಕೆ ಅಡ್ಡಿ ಎದುರಿಸುತ್ತಿದ್ದ ಇಲ್ಲಿನ ಪಟ್ಟಣ ಪಂಚಾಯಿತಿ ಈಗ ತನ್ನ ಕಚೇರಿ ಆವಣವನ್ನೇ ಡಂಪಿಂಗ್ ಯಾರ್ಡ್ ಆಗಿ ಪರಿವರ್ತಿಸಿದೆ!ಆಲೆಟ್ಟಿ ಗ್ರಾಮದ ಕಲ್ಚರ್ಪೆಯಲ್ಲಿ ಡಂಪಿಂಗ್ ಯಾರ್ಡ್ ಕಾಮಗಾರಿ ಮುಗಿದು ಕಸ ಹಾಕಲು ಆರಂಭಿಸುತ್ತಿದ್ದಂತೆ ಸಮಸ್ಯೆಗಳು ಎದುರಾಗಿವೆ. ಎರೆಹುಳ ಗೊಬ್ಬರ ಘಟಕ ನಿರ್ಮಾಣ, ಪ್ಲಾಸ್ಟಿಕ್ ಬೇರ್ಪಡಿಸಿ ಮರು ಬಳಕೆ ಮಾಡುವ ಘಟಕ, ಆವರಣ ಗೋಡೆ ನಿರ್ಮಾಣ, ತ್ಯಾಜ್ಯ ನೀರು ನದಿಗೆ ಸೇರದಂತೆ ಸಂಸ್ಕರಣ ಘಟಕ ಸೇರಿದಂತೆ ಆಧುನಿಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತದೆ ಎಂಬ ಸ್ಥಳೀಯರಿಗೆ ಭರವಸೆ ನೀಡಲಾಗಿತ್ತು. ಆದರೆ ಕೇವಲ ಆವರಣ ಗೋಡೆ ಕಾಮಗಾರಿ ಮಾತ್ರ ಮುಗಿದಿದೆ. ಕಸವನ್ನು ಸಂಸ್ಕರಣೆ ಮಾಡದೇ ರಾಶಿ ಹಾಕಲು ಆರಂಭಿಸಲಾಗಿತ್ತು. ಇದರಿಂದ ಸ್ಥಳಿಯರು ಹೋರಾಟಕ್ಕಿಳಿಯುವುದಾಗಿ ಎಚ್ಚರಿದ್ದರು.ಡಂಪಿಂಗ್ ಯಾರ್ಡ್‌ಗೆ ಹೋಗುವ ರಸೆ ದುರಸ್ತಿ ಮಾಡಿಲ್ಲ. ಮಳೆಗಾಲ ಆರಂಭವಾಗಿದ್ದರಿಂದ ರಸ್ತೆ ಕೆಸರುಮಯವಾಗಿದ್ದು, ವಾಹನ ಸಂಚಾರ ಸ್ಥಗಿತವಾಗಿದೆ. ಅನಿವಾರ್ಯವಾಗಿ ಕಸವನ್ನು ಪಂಚಾಯಿತಿ ಕಚೇರಿ ಆವರಣದಲ್ಲಿ ಗುಂಡಿ ತೋಡಿ ಹಾಕಲಾಗುತ್ತಿದೆ.ಶುಕ್ರವಾರ ನಡೆದ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಎಂ.ವೆಂಕಪ್ಪ ಗೌಡ, 50 ಲಕ್ಷ ಖರ್ಚು ಮಾಡಿದ್ದರೂ ಸರಿಯಾದ ರಸ್ತೆ ನಿರ್ಮಿಸಿಲ್ಲ. ಕಚೇರಿ ಆವರಣದಲ್ಲೇ ಪಟ್ಟಣದ ಕಸ ಹಾಕುವುದು ನಾಚಿಕೆಗೇಡು ಎಂದರು.ಸಭೆ ಮುಂದಕ್ಕೆ: ಸಭೆ ಆರಂಭವಾಗುತ್ತಿದ್ದಂತೆ ಪಟ್ಟಣದ ಮುಖ್ಯ ರಸ್ತೆ ಅಭಿವೃದ್ಧಿ ವಿಚಾರ ಎತ್ತಿದ ವೆಂಕಪ್ಪ ಗೌಡ, ಸಂಸದರು, ಶಾಸಕರು ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡುವುದಾಗಿಯೂ, ಮೇ 30ರ ಮುನ್ನ ಚರಂಡಿ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದರು. ಆದರೆ ಒಂದೇ ಒಂದು ಸಭೆ ನಡೆಸಿಲ್ಲ. ಈಗ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಸಂಚಾಕಾರ ಬಂದಿದೆೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ಸಂಧಾನ ನಡೆಸಿ ಕಲಾಪದಲ್ಲಿನ ಟೆಂಡರ್ ವಿಚಾರವನ್ನಷ್ಟೇ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳುವ, ಉಳಿಕೆ ವಿಷಯಗಳನ್ನು ರಸ್ತೆ ಕುರಿತ ಸಭೆ ಮುಗಿದ ಬಳಿಕ ಸಭೆಯಲ್ಲಿ ಚರ್ಚಿಸುವ ಎಂದರು. ಇದಕ್ಕೆ ಆರಂಭದಲ್ಲಿ ಪ್ರಕಾಶ್ ಹೆಗ್ಡೆ ಒಪ್ಪಿಗೆ ಸೂಚಿಸಲಿಲ್ಲ. ಸಭೆಯನ್ನು ಮುಂದೂಡಿರುವುದು ಜಿಲ್ಲಾಧಿಕಾರಿಗೂ ಗೊತ್ತಾಗಬೇಕು. ಆಗ ರಸ್ತೆ ವಿಚಾರಕ್ಕೆ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ ಎಂದು ವೆಂಕಪ್ಪ ಗೌಡ ಹೇಳಿದರು. ಈ ವಿಚಾರದಲ್ಲಿ ಆಡಳಿತ ಪಕ್ಷದ ನಿಲುವನ್ನು ಖಂಡಿಸಿ ಸಭಾತ್ಯಾಗ ನಡೆಸಲು ಕಾಂಗ್ರೆಸ್ ಸದಸ್ಯರು ಮುಂದಾದರು. ಆಗ ಎನ್.ಎ.ರಾಮಚಂದ್ರ ಸಮಾಧಾನಪಡಿಸಿದರು. ಬಳಿಕ ಸಭೆ ಮುಂದುವರಿಯಿತು.

ಮತ್ತೆ ಮೀನಿನ ವಾಸನೆ: ಮೀನು ಮಾರುಕಟ್ಟೆ ಏಲಂ ಕುರಿತು ಮತ್ತೆ ಚರ್ಚೆ ನಡೆಯಿತು. ಕಳೆದ ಬಾರಿ 18 ಲಕ್ಷಕ್ಕೆ ಏಲಂ ಆಗಿ ರೂ.12 ಲಕ್ಷ  ಆದಾಯ ಬಂದಿದೆ. ಆದರೆ ಈ ಬಾರಿ ಮೀನುಗಾರಿಕಾ ನಿಗಮಕ್ಕೆ ತಿಂಗಳಿಗೆ ಕೇವಲ ರೂ.2,600ಕ್ಕೆ ಮೂರು ಕೊಠಡಿಗಳನ್ನು ನೀಡಲಾಗಿದೆ. ಅದರ ಬಾಡಿಗೆ ಹೆಚ್ಚಿಸಬೇಕು. ಅಲ್ಲದೆ ಮೀನು ಮಾರುಕಟ್ಟೆಯನ್ನು 18 ಭಾಗ ಮಾಡಿ ಪ್ರತ್ಯೇಕ ಏಲಂ ಮಾಡಬೇಕು ಎಂದು ಕಳೆದ ಸಭೆಯಲ್ಲಿ ನಿರ್ಣಯ ಮಾಡಿದ್ದರೂ ಕೇವಲ ಒಂದು ಮಾರುಕಟ್ಟೆಗೆ ಮಾತ್ರ ಟೆಂಡರ್ ಕರೆದ ಕ್ರಮ ಸರಿಯಲ್ಲ ಎಂದು ವಿರೋಧ ಪಕ್ಷದ ಸದಸ್ಯರು ಏಲಂ ಅಂಗೀಕಾರ ಮಾಡದಂತೆ ತಡೆದರು. ದಾರಿದೀಪಗಳು ಸರಿಯಾಗಿ ಉರಿಯದೇ ಎರಡು ತಿಂಗಳಾಗಿವೆ. ಆದರೆ, ಗುತ್ತಿಗೆದಾರರು ಪ್ರತಿ ತಿಂಗಳು ಬಿಲ್ ಪಡೆಯುತ್ತಲೇ ಇದ್ದಾರೆ. ಅವರಿಗೆ ಬಿಲ್ ನೀಡಬಾರದು ಎಂದು ಕಳೆದ ಸಭೆಯಲ್ಲಿ ಸೂಚನೆ ನೀಡಿದ್ದರೂ ಈ ಬಾರಿ ಮತ್ತೆ ಬಿಲ್ ನೀಡಲಾಗಿ ಎಂದು ದಿನೇಶ್ ಅಂಬೆಕಲ್ಲು ಆಕ್ಷೇಸಿದರು.ಪಂಚಾಯಿತಿ ಅಧ್ಯಕ್ಷೆ ಸುಮತಿ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ರೋಹಿತಾಕ್ಷ ಸಭಾ ಕಲಾಪ ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry