ಡಕಾಯಿತರ ಹಾವಳಿ, ರೋಸಿಹೋದ ಜನತೆ:ಗಡಿ ಗ್ರಾಮಗಳಲ್ಲಿ ಆತಂಕ

7

ಡಕಾಯಿತರ ಹಾವಳಿ, ರೋಸಿಹೋದ ಜನತೆ:ಗಡಿ ಗ್ರಾಮಗಳಲ್ಲಿ ಆತಂಕ

Published:
Updated:
ಡಕಾಯಿತರ ಹಾವಳಿ, ರೋಸಿಹೋದ ಜನತೆ:ಗಡಿ ಗ್ರಾಮಗಳಲ್ಲಿ ಆತಂಕ

ಚಿಂತಾಮಣಿ: ಡಕಾಯಿತರು, ಕಳ್ಳಕಾಕರ ಹಾವಳಿಯಿಂದ ಭಯಭೀತರಾಗಿದ್ದ ಚಿಂತಾಮಣಿ ತಾಲ್ಲೂಕಿನ ಗ್ರಾಮಸ್ಥರು ಮಂಗಳವಾರ ಹಾಡಹಗಲೇ ರೊಚ್ಚಿಗೆದ್ದು ಹತ್ತು ಮಂದಿಯನ್ನು ಅಮಾನುಷವಾಗಿ ಕೊಚ್ಚಿ ಹಾಕಿದ್ದು, ಇಡೀ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ. ಈ ಬರ್ಬರ ಹತ್ಯೆಯಿಂದ ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿಭಾಗದ ಹಳ್ಳಿಗಳಲ್ಲಿ ಆತಂಕ ಮತ್ತು ಭೀತಿಯ ವಾತಾವರಣ ಆವರಿಸಿದೆ.ಸೇಡು ತೀರಿಸಿಕೊಳ್ಳಲು ಆಂಧ್ರಪ್ರದೇಶದ ಕೆಲವರು ಯಾವುದೇ ಕ್ಷಣದಲ್ಲಿ ಮರುದಾಳಿ ಮಾಡಬಹುದು ಎಂಬ ವದಂತಿ ಹರಡಿದ್ದು ಆತಂಕಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಪೊಲೀಸರ ಕೈಗೆ ಸಿಕ್ಕು ಒದೆ ತಿನ್ನುವ, ಚಿತ್ರಹಿಂಸೆ ಅನುಭವಿಸುವ ಮತ್ತು ಶಿಕ್ಷೆಗೆ ಗುರಿಯಾಗುವ ಭೀತಿಯೂ ಗ್ರಾಮಸ್ಥರಲ್ಲಿ ಆವರಿಸಿದೆ.ಆರು ತಿಂಗಳಿಂದ ಎಡೆಬಿಡದೆ ನಡೆಯುತ್ತಿದ್ದ ಕಳ್ಳತನ ಮತ್ತು ಡಕಾಯಿತಿ ಪ್ರಕರಣಗಳಿಂದ ರೋಸಿ ಹೋಗಿದ್ದ ಚಿಂತಾಮಣಿ ತಾಲ್ಲೂಕಿನ ಬರ‌್ಲಹಳ್ಳಿ, ಯರ‌್ರಕೋಟೆ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಯಾರೇ ಅಪರಿಚಿತರು ಕಂಡರೂ ಸಂಶಯದಿಂದ ನೋಡುತ್ತಿದ್ದರು.ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೆಲ ದುಷ್ಕರ್ಮಿಗಳನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದರೂ ಅವರು ನಿರಾತಂಕವಾಗಿ ಬಿಡುಗಡೆಯಾಗುತ್ತಿದ್ದ ಕಾರಣ ಗ್ರಾಮಸ್ಥರಲ್ಲಿ ರೋಷ ಹೆಚ್ಚಿತ್ತು. `ಅಪರಾಧ ಕೃತ್ಯಗಳಲ್ಲಿ ತೊಡಗಿದವರನ್ನು ಯಾವುದೇ ಕಾರಣಕ್ಕೂ ಬಿಡಬಾರದು.ಅವರನ್ನು ಕೊಚ್ಚಿಹಾಕಬೇಕು~ ಎಂದು ಗ್ರಾಮಸ್ಥರು ತೀರ್ಮಾನಿಸಿದ್ದರು. ಅದರಂತೆಯೇ ಮಂಗಳವಾರ ಮಧ್ಯಾಹ್ನ ಗ್ರಾಮಸ್ಥರ ಆಕ್ರೋಶಕ್ಕೆ 10 ಮಂದಿ ಹತರಾದರು. ಚಿಂತಾಜನಕ ಸ್ಥಿತಿಯಲ್ಲಿರುವ ಮತ್ತೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಗ್ರಾಮಸ್ಥರ ಆಕ್ರೋಶ: ಬುಧವಾರ ಬೆಳಿಗ್ಗೆ ಬಾರ‌್ಲಹಳ್ಳಿ ಮತ್ತು ಯರ‌್ರಕೋಟೆ ಗ್ರಾಮಗಳಿಗೆ `ಪ್ರಜಾವಾಣಿ~ ಭೇಟಿ ನೀಡಿದಾಗ, ಗ್ರಾಮಸ್ಥರು ಇನ್ನೂ ಆತಂಕದಿಂದ ಹೊರಬಂದಿರಲಿಲ್ಲ. 

ಸುತ್ತಮುತ್ತಲ ಗ್ರಾಮಗಳ್ಲ್ಲಲೂ ಸ್ಮಶಾನಮೌನ ಆವರಿಸಿತ್ತು. ಗ್ರಾಮಸ್ಥರು ಮಾತನಾಡಲು ಹಿಂಜರಿಯುತ್ತಿದ್ದರು. ಆದರೆ ಕಳ್ಳರು, ಡಕಾಯಿತರ ಹಾವಳಿ ಬಗ್ಗೆ ಪ್ರಸ್ತಾಪಿಸಿದರೆ, ಅವರಲ್ಲಿದ್ದ ಸಿಟ್ಟು, ಸೆಡುವು ಮತ್ತು ಅಕ್ರೋಶ ಆಸ್ಫೋಟಗೊಳ್ಳುತ್ತಿತ್ತು.`ಕಳ್ಳರ ಹಾವಳಿಯಿಂದ ನಮಗೆ ಸಾಕುಸಾಕಾಗಿತ್ತು. ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದರೆ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ. ಕಲ್ಲು, ದೊಣ್ಣೆಗಳಿಂದ ಕೊಚ್ಚಿ ಹಾಕದೆ ಬೇರೆ ವಿಧಿಯೇ ಇರಲಿಲ್ಲ~ ಎಂದು ಕೆಲ ಗ್ರಾಮಸ್ಥರು ಹೇಳಿದರು.`ರಾತ್ರಿ ಹಗಲೆನ್ನದೆ ಬೈಕ್‌ಗಳಲ್ಲಿ ಕೆಲವರು ಬರುತ್ತಿದ್ದರು. ರಸ್ತೆಯಲ್ಲಿ ಒಂಟಿಯಾಗಿ ನಡೆದು ಹೋಗುತ್ತಿದ್ದ ಮಹಿಳೆಯರನ್ನು ಕಾಡುತ್ತಿದ್ದರು. ಚಿನ್ನಾಭರಣ ನೀಡದಿದ್ದಾಗ, ಲೈಂಗಿಕವಾಗಿ ಹಲ್ಲೆ ಮಾಡಲು ಮುಂದಾಗುತ್ತಿದ್ದರು. ತೋಟದ ಮನೆಗಳಿಗೂ ನುಗ್ಗಿ ಮನೆಯಲ್ಲಿದ್ದ ವಸ್ತುಗಳನ್ನು ದೋಚಿಕೊಂಡು ಹೋಗುತ್ತಿದ್ದರು. ಅವರನ್ನು ಹಿಡಿಯಲು ಮುಂದಾದರೆ ಮಚ್ಚು, ಲಾಂಗುಗಳಿಂದ ಬೆದರಿಸುತ್ತಿದ್ದರು~ ಎಂದು ಗ್ರಾಮಸ್ಥರು ದೂರಿದರು.ನಕಲಿ ಚಿನ್ನದ ವ್ಯಾಪಾರಿಗಳು: `ಆಂಧ್ರಪ್ರದೇಶ ಮತ್ತು ರಾಜ್ಯದ ಗಡಿಭಾಗದ ಗ್ರಾಮಗಳಲ್ಲಿ ಬಡವರು ಮತ್ತು ನಿರುದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಲ ದುಷ್ಕರ್ಮಿಗಳು ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಗಡಿಯನ್ನು ಪ್ರವೇಶಿಸಿ, ಇಲ್ಲಿನ ಗ್ರಾಮಸ್ಥರನ್ನು ಸುಲಿಗೆ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದರು.ನಕಲಿ ಚಿನ್ನವನ್ನು ಅಸಲಿ ಎಂದು ನಂಬಿಸಿ ಮಾರಾಟ ಮಾಡುವ ವ್ಯಾಪಾರಿಗಳ ವೇಷದಲ್ಲಿ ಬಂದರೆ, ಇನ್ನೂ ಕೆಲವರು ಡಕಾಯಿತಿಗಳನ್ನು ಮಾಡಿ ಪರಾರಿಯಾಗುತ್ತಿದ್ದರು. ಮಂಗಳವಾರ ಮಧ್ಯಾಹ್ನವೂ ಇದೇ ರೀತಿ ನಕಲಿ ಚಿನ್ನ ಮಾರಲು ಹನ್ನೊಂದು ಮಂದಿ ಬಂದಿದ್ದಾರೆ. ಡಕಾಯಿತರು ಎಂದು ಭಾವಿಸಿ ಗ್ರಾಮಸ್ಥರು ಅವರನ್ನು ಕೊಂದು ಹಾಕಿದ್ದಾರೆ~ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.ಹತ್ಯೆ : 73 ಮಂದಿ ಪೊಲೀಸ್ ವಶಕ್ಕೆ

ಚಿಂತಾಮಣಿ: ತಾಲ್ಲೂಕಿನ ಬಾರ‌್ಲಹಳ್ಳಿ ಮತ್ತು ಯರ‌್ರಕೋಟೆ ಗ್ರಾಮಗಳಲ್ಲಿ ಗ್ರಾಮಸ್ಥರಿಂದ  ಹತರಾದ ಎಲ್ಲ ಹತ್ತು ಜನರ ಗುರುತು ಪತ್ತೆಯಾಗಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಕಲೆ ಹಾಕಲು ಪೊಲೀಸರು ಮೃತರ ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.`ಮೃತರೆಲ್ಲ ಆಂಧ್ರ ಪ್ರದೇಶದವರು. ಮೃತರನ್ನು ಮಹಮ್ಮದಾಬಾದ್‌ನ ರಾಮಾಂಜಿ (35), ರಮೇಶ್ (38), ಆಂಜನೇಯಲು (35), ಪ್ರಕಾಶಂ ಜಿಲ್ಲೆ ಚಿರಾಳ ಗ್ರಾಮದ ಚಿನ್ನಾ (35), ಹರಿ (26), ಹಿಂದುಪುರದ ಭಾಸ್ಕರ್ (35), ಕದಿರಿಯ ಪೆದ್ದರೆಡ್ಡಿ (35), ಇಂದೋಳಪಲ್ಲಿಯ ನರಸಿಂಹ ರೆಡ್ಡಿ (36), ಕನಿಮಿರೆಡ್ಡಿಪಲ್ಲಿಯ ಸುಧಾಕರ ರೆಡ್ಡಿ (35), ಹನುಮಂತು (30) ಎಂದು ಗುರುತಿಸಲಾಗಿದೆ.ಇದೇ ತಂಡದಲ್ಲಿದ್ದ ಗಂಗಾಧರ್ ಎಂಬಾತ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾನೆ~ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಡಿ.ಪವಾರ್ `ಪ್ರಜಾವಾಣಿ~ಗೆ ಹೇಳಿದರು.

 

ಪೊಲೀಸ ವಶಕ್ಕೆ: `ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 73 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ತಂಡ ಗ್ರಾಮಗಳಲ್ಲಿ ಡಕಾಯಿತಿ ಮಾಡಲು ಬಂದಿದ್ದರೆ ಅಥವಾ ಬೇರೆ ಕಾರಣಕ್ಕೆ ಬಂದಿದ್ದರೆ ಎಂಬುದು ಖಚಿತವಾಗಿಲ್ಲ. ಮುದ್ದುಲಪಲ್ಲಿ ಬಳಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದು ಇದೇ ತಂಡವೇ? ಎಂಬ ಸಂಶಯ ನಿವಾರಣೆಯಾಗಿಲ್ಲ.ಪ್ರಾಥಮಿಕ ತನಿಖೆಯಲ್ಲಿ ಈ 11 ಮಂದಿ ನಕಲಿ ಚಿನ್ನದ ವ್ಯಾಪಾರಿಗಳು ಎಂದು ತಿಳಿದು ಬಂದಿದೆ. ನಕಲಿ ಚಿನ್ನವನ್ನು ಅಸಲಿ ಎಂದು ನಂಬಿಸಿ, ಅದನ್ನು ಮಾರಾಟ ಮಾಡುತ್ತಿದ್ದರು. ಇದನ್ನೇ ವೃತ್ತಿಯಾಗಿರಿಸಿಕೊಂಡಿದ್ದರು. ನಕಲಿ ಚಿನ್ನದ ವ್ಯಾಪಾರಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ತಾಲ್ಲೂಕಿನ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ~ ಎಂದು ತಿಳಿಸಿದರು.`ಮುಂಜಾಗ್ರತಾ ಕ್ರಮವಾಗಿ ಚಿಂತಾಮಣಿ ತಾಲ್ಲೂಕಿನಾದ್ಯಂತ ನಿಷೇಧಾಜ್ಞೆ ಹೇರಲಾಗಿದೆ. ಬಾರ‌್ಲಹಳ್ಳಿ, ಯರ‌್ರಕೋಟೆ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry