ಡಬಲ್‌ರೋಲ್ ಶರಣ್ಯ

7

ಡಬಲ್‌ರೋಲ್ ಶರಣ್ಯ

Published:
Updated:
ಡಬಲ್‌ರೋಲ್ ಶರಣ್ಯ

‘ನಿಜ ಬದುಕಿನಲ್ಲಿ ನಾವಿರುವಂತೆಯೇ ಪಾತ್ರಗಳು ಸಿಕ್ಕುವುದು ಅಪರೂಪ’ ಎನ್ನುತ್ತಾ ಮಾತು ಆರಂಭಿಸುವ ಶರಣ್ಯ ಅಂಥ ಅದೃಷ್ಟ ತಮ್ಮದಾಗಿರುವುದನ್ನು ಸಂತಸದಿಂದ ಹೇಳಿಕೊಳ್ಳುತ್ತಾರೆ.ಮೂಲತಃ ಗಾಯಕಿಯಾಗಿರುವ ಶರಣ್ಯ ಅವರಿಗೆ ನಟಿಸಿದ ಮೊದಲ ಧಾರಾವಾಹಿ ‘ಕಾರ್ತಿಕ ದೀಪ’ದಲ್ಲೂ ಗಾಯಕಿ ಪಾತ್ರ, ‘ಮಹಾನವಮಿ’ ಮತ್ತು ‘ಶಿರಡಿ ಶ್ರೀ ಸಾಯಿಬಾಬಾ’ದಲ್ಲೂ ಹಾಡುವ ಪಾತ್ರಗಳೇ ದೊರಕಿವೆ.ರಾಯಚೂರಿನ ಲಿಂಗಸಗೂರಿನವರಾದ ಶರಣ್ಯ ಧಾರಾವಾಹಿಯಲ್ಲಿ ನಟಿಸುವ ಸಲುವಾಗಿಯೇ ಬೆಂಗಳೂರು ಶೈಲಿ ಕನ್ನಡವನ್ನು ರೂಢಿಸಿಕೊಂಡಿದ್ದಾರೆ. ಡಿಪ್ಲೊಮಾ ಓದಿಕೊಂಡಿರುವ ಅವರು ಧಾರವಾಡದಲ್ಲಿ ಲಘು ಸಂಗೀತ ಕಲಿತು ಭಾವಗೀತೆ ಹಾಡುತ್ತಿದ್ದರು. ಸದ್ಯ ಗುರು ಫಯಾಸ್ ಖಾನ್ ಬಳಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ. ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದ ಶರಣ್ಯ ಅಜಯ್ ವಾರಿಯರ್ ಮತ್ತು ಬಿ.ಆರ್.ಛಾಯಾ ಅವರ ಸಿ.ಡಿಗಳಿಗೂ ಹಾಡಿದ್ದಾರೆ. ನಟನೆ ಮತ್ತು ಗಾಯನ ಎರಡರ ಮೇಲೂ ಸಮನಾದ ಪ್ರೀತಿ ಇದೆ ಎನ್ನುವ ಅವರು ‘ಆರಂಭದಿಂದಲೂ ಗಾಯನದಲ್ಲಿಯೇ ಆಸಕ್ತಿ ಇತ್ತು. ಪತಿಯ ಬೆಂಬಲ ದೊರೆತ ನಂತರ ನಟಿಯಾದೆ’ ಎನ್ನುತ್ತಾರೆ. ‘ಕಣ್ಣುಕಣ್ಣು ಕಲೆತಾಗ’ ಮತ್ತು ‘ನೀ ಇಲ್ಲದೆ’ ಸಿನಿಮಾಗಳಲ್ಲೂ ಹಾಡಿರುವ ಶರಣ್ಯ ಆಕಸ್ಮಿಕವಾಗಿ ನಟಿಯಾಗಲು ಸಿಕ್ಕ ಅವಕಾಶವನ್ನು ಒಪ್ಪಿಕೊಂಡವರು. ಮೊದಲು ‘ಕಾರ್ತಿಕ ದೀಪ’ ಧಾರಾವಾಹಿಯಲ್ಲಿ ಕ್ಯಾಮೆರಾ ಎದುರಿಸಿದ ಅವರು ನಿರ್ದೇಶಕ ಹಿರಿಯೂರು ರಾಘವೇಂದ್ರ ಅವರ ಸಹಕಾರವನ್ನು ಮರೆಯಲಾರೆ ಎನ್ನುತ್ತಾರೆ.‘ಇಂದಿಗೂ ನಟನೆಯನ್ನು ಸುಧಾರಿಸಿಕೊಳ್ಳುವ ಹಂತದಲ್ಲಿದ್ದೇನೆ. ನನ್ನ ತಪ್ಪುಗಳನ್ನು ಹುಡುಕಿ ವಿಮರ್ಶೆ ಮಾಡಿಕೊಳ್ಳುತ್ತೇನೆ. ಸಹಕಲಾವಿದರೊಂದಿಗೆ ಚರ್ಚಿಸಿ ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದು ಮುಕ್ತವಾಗಿ ಮಾತನಾಡುವ ಶರಣ್ಯ ‘ಯಾವುದೇ ತರಬೇತಿ ಇಲ್ಲದೆ ಬಂದ ತಮಗೆ ಆತ್ಮವಿಶ್ವಾಸವೇ ಎಲ್ಲಾ’ ಎನ್ನುತ್ತಾ ನಗುತ್ತಾರೆ.ನಟನೆ ಮತ್ತು ಗಾಯನ ಎರಡನ್ನೂ ನಿಭಾಯಿಸುತ್ತಿರುವ ಶರಣ್ಯ ‘ಮುಂದೆ ನಟನೆ ಬಿಟ್ಟರೂ ಹಾಡುವುದನ್ನು ಬಿಡುವುದಿಲ್ಲ. ನಟನೆ ನನ್ನನ್ನು ಆಕರ್ಷಿಸಿದೆ. ಅದು ಬಯಸದೇ ಬಂದ ಭಾಗ್ಯ’ ಎಂದು ನಗು ಬೀರುತ್ತಾರೆ.ನಟಿಯಾಗಿ ಆಂಟಿ, ಅಜ್ಜಿ, ಹುಚ್ಚಿ, ತುಂಟಿ, ಬಜಾರಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಲು ಇಷ್ಟ ಎಂದು ಹೇಳುವ ಶರಣ್ಯ ಅವರಿಗೆ ಸಿನಿಮಾಗಳಲ್ಲಿ ಒಳ್ಳೆಯ ಪಾತ್ರ ಸಿಕ್ಕರೆ ಓಕೆ. ಆದರೆ ಗ್ಲಾಮರ್ ಇಷ್ಟವಿಲ್ಲ.‘ನಟನೆ ನನಗೆ ವೃತ್ತಿಯಾಗಿ ಆದಾಯ ತರುತ್ತಿದೆ ಎನ್ನುವುದಿಲ್ಲ. ನಟನೆಯನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ’ ಎನ್ನುವ ಅವರಿಗೆ ನೃತ್ಯವೂ ಇಷ್ಟ. ಅಲ್ಲದೇ ರಂಗಭೂಮಿಯಲ್ಲೂ ನಟಿಸುವಾಸೆ.‘ಒಳ್ಳೆಯ ಪಾತ್ರಗಳನ್ನು ಮಾಡುವಾಸೆ ಜೊತೆಗೆ ಗಾಯಕಿಯಾಗಿ ನೆಲೆ ನಿಲ್ಲುವಾಸೆ’ ಎನ್ನುವ ಅವರು ಪ್ರಸ್ತುತ ಮಂಜುಳಾ ಗುರುರಾಜ್ ಅವರ ‘ಸೌಂಡ್ ಆಫ್ ಮ್ಯೂಸಿಕ್’ ತಂಡದಲ್ಲಿ ಗಾಯಕಿಯಾಗಿದ್ದಾರೆ. 

-ರೋಹಿಣಿ. ಎಚ್.ಎಸ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry