ಡಬ್ಬಾ ಅಂಗಡಿಗಳ ತೆರವು: ಲಘು ಲಾಠಿಪ್ರಹಾರ

7

ಡಬ್ಬಾ ಅಂಗಡಿಗಳ ತೆರವು: ಲಘು ಲಾಠಿಪ್ರಹಾರ

Published:
Updated:

ಇಂಡಿ: ಪಟ್ಟಣದ ವಿಜಾಪುರ ರಸ್ತೆಯಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಡಬ್ಬಾ ಅಂಗಡಿಗಳನ್ನು  ತಾಲ್ಲೂಕು ಆಡಳಿತದ ವತಿಯಿಂದ ಬುಧವಾರ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು. ಬೆಳಿಗ್ಗೆಯಿಂದಲೇ ಪ್ರಾರಂಭವಾದ ಕಾರ್ಯಾಚರಣೆಯು ತಹಶೀಲ್ದಾರ ಡಾ. ಸಿದ್ದು ಹುಲ್ಲೊಳ್ಳಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಎಂ.ಎ.ಪಾಟೀಲ ಮತ್ತು ಪಿಎಸ್‌ಐ ಐ.ಆರ್.ಪಟ್ಟಣಶೆಟ್ಟಿ ನೇತೃತ್ವದಲ್ಲಿ ಬಸವೇಶ್ವರ ವೃತ್ತದಿಂದ ಹೆಸ್ಕಾಂ ಕಚೇರಿಯವರೆಗೆ ತೆರವು ಕಾರ್ಯಾಚರಣೆ ನಡೆಯಿತು.ರಸ್ತೆಯ ಎರಡೂ ಬದಿಗಳಲ್ಲಿ ತಲೆ ಎತ್ತಿದ್ದ ಡಬ್ಬಾ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ಉದ್ಯೋಗ ಮಾಡುತ್ತಿರುವವರಿಗೆ ತಮ್ಮ ಅಂಗಡಿಗಳನ್ನು ತೆರವು ಮಾಡಬೇಕು ಎಂದು ಕಳೆದ ಒಂದು ವಾರದ ಹಿಂದೆಯೇ ಅಧಿಕಾರಿಗಳು ಸೂಚಿಸಿದರೂ ಕೂಡಾ ಯಾವುದೇ ಡಬ್ಬಾ ಅಂಗಡಿ ಮಾಲೀಕರು ಖಾಲಿ ಮಾಡದಿರುವುದರಿಂದ ಇಂದಿನ ಕಾರ್ಯಾಚರಣೆ ಅನಿವಾರ್ಯವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.ಡಬ್ಬಾ ಅಂಗಡಿಗಳ ಮಾಲೀಕರು ತಮ್ಮ ಕುಟುಂಬವೇ ಈ ಅಂಗಡಿಗಳ ವ್ಯಾಪಾರದ ಮೇಲಿರುವುದರಿಂದ ಅವುಗಳನ್ನು ತೆರವು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಮೊದಲು ನಮಗೆ ವ್ಯಾಪಾರಿ ಮಳಿಗೆಗಳನ್ನು ಕಟ್ಟಿಸಿಕೊಟ್ಟು ನಂತರ ಡಬ್ಬಾ ಅಂಗಡಿಗಳನ್ನು ತೆರವು ಮಾಡಬೇಕು ಎಂದು ಸಾಕಷ್ಟು ಸಲ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಆದರೆ ಮಳಿಗೆಗಳನ್ನು ಕಟ್ಟಿಸಿಕೊಡದೇ ನಮ್ಮ  ಅಂಗಡಿಗಳನ್ನು ತೆರವು ಮಾಡಿರುವುದು ಅನ್ಯಾಯ ಎಂದು ಅವರು ದೂರಿದ್ದಾರೆ.ಕೆಲವರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ತೆರವುಗೊಳಿಸಿದರೆ ಇನ್ನು ಕೆಲವರ ಅಂಗಡಿಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು.ಲಘು ಲಾಠಿ ಪ್ರಹಾರ  

 ಸುಮಾರು 5 ಗಂಟೆಗೆ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸುತ್ತ ಪಟ್ಟಣದ ಡಾ, ಬಿ.ಆರ್.ಅಂಬೇಡ್ಕರರ ವೃತ್ತದ ಬಳಿ ಬಂದಾಗ ಅಲ್ಲಿ  ಕೆಲವರು ಡಬ್ಬಾ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದ ಜೆಸಿಬಿ ಯಂತ್ರದ ಮೇಲೆ ಕಲ್ಲು ತೂರಿದ್ದರಿಂದ  ಕೆಲ ಕಾಲ ಉದ್ರಿಕ್ತ ವಾತಾವರಣ  ನಿರ್ಮಾಣವಾಗಿತ್ತು.

 

ಸಾವಿರಾರು ಜನ ಜಮಾಯಿಸಿ ಗೊಂದಲವಾಯಿತು. ಆ ಗುಂಪನ್ನು ಚದುರಿಸಲು ಪೋಲಿಸರು ಲಘು ಲಾಠಿ ಪ್ರಹಾರ ನಡೆಸಿದರು. ಕೆಲಹೊತ್ತಿನ ನಂತರ ವಾತಾವರಣ ತಿಳಿಯಾಯಿತು. ನಂತರ ತೆರವು ಕಾರ್ಯಾಚರಣೆ ಮುಂದುವರೆಯಿತು. ಈ ಸಂಬಂಧವಾಗಿ ಯಾರನ್ನೂ ಬಂಧಿಸಿಲ್ಲ ಎಂದು ಪೋಲಿಸರು ತಿಳಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry