ಡಬ್ಬಾ ಅಂಗಡಿ ತೆರವು: ಚರ್ಚೆಗೆ ಗ್ರಾಸ

7

ಡಬ್ಬಾ ಅಂಗಡಿ ತೆರವು: ಚರ್ಚೆಗೆ ಗ್ರಾಸ

Published:
Updated:

ಬೆಳಗಾವಿ: ವಿಶ್ವ ಕನ್ನಡ ಸಮ್ಮೇಳನ ನೆಪದಲ್ಲಿ ನಗರದಲ್ಲಿ ಆರಂಭಿಸಿರುವ ಡಬ್ಬಾ (ಕೋಕಾ) ಅಂಗಡಿಗಳ ತೆರವು ಕಾರ್ಯಾಚರಣೆ ಚರ್ಚೆಗೆ ಕಾರಣವಾಗಿದೆ. ಅಂಗಡಿಗಳ ತೆರವು ಪರ ಹಾಗೂ ವಿರೋಧ ವಾದಗಳು ಹುಟ್ಟಿಕೊಂಡಿವೆ.ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ನಗರ ಸುಂದರವಾಗಿ ಕಾಣಬೇಕು ಹಾಗೂ ಅಕ್ರಮವಾಗಿರುವ ಡಬ್ಬಾ ಅಂಗಡಿಗಳಿರಬಾರದು. ಇದರಿಂದ ಸಂಚಾರಕ್ಕೂ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಡಬ್ಬಾ ಅಂಗಡಿಗಳ ತೆರವು ಕಾರ್ಯಕ್ಕೆ ಮಹಾನಗರಪಾಲಿಕೆ ಮುಂದಾಗಿದೆ. ಇದು ಒಳ್ಳೆಯ ಕೆಲಸವೇ ಎಂಬುದರಲ್ಲಿ ಎರಡು ಮಾತಿಲ್ಲ.ಆದರೆ ಸಮ್ಮೇಳನ ಸಂದರ್ಭದಲ್ಲಿ ಮಾತ್ರ ನಗರ ಸುಂದರವಾಗಿ ಕಾಣಬೇಕೇ ? ಉಳಿದ ಸಂದರ್ಭದಲ್ಲಿ ಅದು ಹೇಗಿದ್ದರೂ ನಡೆಯುತ್ತದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.ನಗರದ ವಿವಿಧೆಡೆ ರಸ್ತೆ ಅತಿಕ್ರಮಣ ಮಾಡಿ ಅಕ್ರಮವಾಗಿ ಡಬ್ಬಾ ಅಂಗಡಿಗಳನ್ನು ಹಾಕಲಾಗಿದ್ದು, ಅವುಗಳನ್ನು ತೆರವುಗೊಳಿಸಲಾಗುತ್ತಿದೆ. ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಚರಣೆ ಆರಂಭಿಸಲಾಗಿದೆ ಎನ್ನುತ್ತಾರೆ ಪಾಲಿಕೆ ಆಯುಕ್ತ ಎಸ್.ಜಿ. ಪಾಟೀಲ.ರಸ್ತೆ ಅತಿಕ್ರಮಣ ಮಾಡಿ ಡಬ್ಬಾ ಅಂಗಡಿಗಳನ್ನು ಹಾಕಿಕೊಂಡು ದಶಕವೇ ಸಂದು ಹೋಗಿದೆ. ಇಷ್ಟು ವರ್ಷಗಳ ಕಾಲ ಪಾಲಿಕೆ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂಬುದು ಜನರ ಪ್ರಶ್ನೆ. ಡಬ್ಬಾ ಅಂಗಡಿಗಳ ತೆರವಿಗೆ ಅಂಗಡಿಗಳ ಮಾಲೀಕರೂ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಮ್ಮೇಳನ ನೆಪದಲ್ಲಿ ಕನ್ನಡಿಗರಾದ ನಮ್ಮನ್ನು ಬೀದಿ ಪಾಲು ಮಾಡಬಾರದು ಎಂದು ಆಗ್ರಹಿಸಿದ್ದಾರೆ. ನಿತ್ಯವೂ ವಿವಿಧ ಸಂಘಟನೆಗಳ ಹೆಸರಿನಲ್ಲಿ ಪ್ರತಿಭಟನೆ ಮುಂದುವರೆದಿವೆ.ಮಹಾನಗರಪಾಲಿಕೆ, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಹಲವರಿಗೆ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಬಾರದು ಎಂದು ಮನವಿ ನೀಡಿದ್ದಾರೆ. ಅವರ ಹೋರಾಟಕ್ಕೆ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷದ ಮುಖಂಡರು ಬೆಂಬಲ ನೀಡಿದ್ದಾರೆ. ಬಹುತೇಕ ಬಡವರು ಡಬ್ಬಾ ಅಂಗಡಿಗಳನ್ನು ನಡೆಸುತ್ತಿದ್ದೇವೆ. ಸಾಲ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ಅಂಗಡಿ ತೆರವುಗೊಳಿಸಿದರೆ ಕುಟುಂಬಗಳ ಆರ್ಥಿಕ ಮೂಲಕ ಬಂದ್ ಆಗುತ್ತದೆ. ಆದ್ದರಿಂದ ಕೂಡಲೇ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಪಾಲಿಕೆಯಿಂದ ಅನುಮತಿ ಪಡೆದುಕೊಂಡೇ ಡಬ್ಬಾ ಅಂಗಡಿಗಳನ್ನು ನಡೆಸಲಾಗುತ್ತಿದೆ. ಅದಕ್ಕಾಗಿ ತೆರಿಗೆಯನ್ನು ಪಾವತಿ ಮಾಡಲಾಗಿದೆ. ಆದ್ದರಿಂದ ನಮ್ಮನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸುತ್ತಿದ್ದಾರೆ.ಈ ಹಿಂದೆಯೂ ಕೆಲವು ಬಾರಿ ಪಾಲಿಕೆ ಅಧಿಕಾರಿಗಳು ಅನಧಿಕೃತ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಆದರೆ ನಂತರ ದಿನಗಳಲ್ಲಿ ಅವು ಮತ್ತೆ ಮೊದಲಿನ ಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡಿವೆ. ಆಗ ಪಾಲಿಕೆ ಅಧಿಕಾರಿಗಳು ಏನು ಮಾಡುತ್ತಿದ್ದರು. ತೆರವು-ಪ್ರತಿಷ್ಠಾಪನೆ ಪ್ರಕ್ರಿಯೆ ಕೆಲವು ಪಾಲಿಕೆ ಅಧಿಕಾರಿಗಳ ಆದಾಯದ ಮೂಲವಾಗಿದೆ ಎಂಬ ಆರೋಪವು ಕೇಳಿ ಬರುತ್ತಿದೆ.ಅಕ್ರಮ ತೆರವು ಕಾರ್ಯಾಚರಣೆ ಕೇವಲ ಡಬ್ಬಾ ಅಂಗಡಿಗಳಿಗೆ ಸೀಮಿತವಾಗಿರುತ್ತದೆಯೋ ಇನ್ನಿತರ ಅಕ್ರಮಗಳಿಗೂ ವಿಸ್ತರಣೆಯಾಗಿದೆಯೇ ಎಂಬುದು ಪ್ರಶ್ನಾರ್ಹವಾಗಿದೆ. ಒಟ್ಟಿನಲ್ಲಿ ನಗರದಲ್ಲಿ ಡಬ್ಬಾ ಅಂಗಡಿಗಳ ತೆರವಿಗೆ ಸಂಬಂಧಿಸಿದಂತೆ ದೊಡ್ಡ ಚರ್ಚೆಯೇ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry