ಡಬ್ಬಾ ಸಾಂಗ್‌ ಮತ್ತು ‘ಡಾರ್ಲಿಂಗ್‌’

7

ಡಬ್ಬಾ ಸಾಂಗ್‌ ಮತ್ತು ‘ಡಾರ್ಲಿಂಗ್‌’

Published:
Updated:

‘ಪ್ರತಿ ಹಾಡಿನ ಮೇಲೂ ಒಂದೊಂದು ಪ್ರಯೋಗವಿದೆ’ ಎಂದರು ನಿರ್ದೇಶಕ ಸಂತು.

ಅವರ ಮಾತನ್ನು ನಿಜ ಎನ್ನುವಂತೆ ‘ಡಬ್ಬಾ ಸಾಂಗ್‌’ ಸದ್ದು ಮಾಡಿತು. ‘ನಾನು, ನೀನು, ಬದುಕು, ಪ್ರೀತಿ–ಪ್ರೇಮ ಎಲ್ಲವೂ ಡಬ್ಬಾ’ ಎಂದಿದ್ದಾರೆ ಸಂತು. ಹಾಗೆಂದು ಇದು ತತ್ವಜ್ಞಾನದ ಹಾಡಲ್ಲ, ಉಡಾಫೆಯ ಸಾಲುಗಳಂತೂ ಅಲ್ಲವೇ ಅಲ್ಲ. ಯುವಮನಸುಗಳಿಗೆ ಇಷ್ಟವಾಗುವಂತೆ ‘ಡಬ್ಬಾ’ ಪದಗಳನ್ನು ಪೋಣಿಸಿದ್ದಾರೆ ಅವರು. ಅದಕ್ಕೆ ಪೂರಕವಾಗಿ ಡಬ್ಬದೊಳಗೆ ಕಲ್ಲಿಟ್ಟು ಆಡಿಸಿದಂತೆ ಸದ್ದು ಮಾಡಿದ್ದಾರೆ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ.ಪ್ರೀತಿ ಪ್ರೇಮದ ಬಗ್ಗೆ ಹಾಡೊಂದು ಹಾಕೋಣ ಎಂದು ಮನಸು ಮಾಡಿದ ಸಂತು ಅವರಿಗೆ ಮರ ಸುತ್ತುವ ಹಾಡನ್ನೇ ಏಕೆ ಮಾಡಬೇಕು ಎನಿಸಿತು. ಹೊಸತನವಿರಲಿ ಎಂಬ ಕಾರಣಕ್ಕೇ ‘ಡಬ್ಬಾ ಸಾಂಗ್‌’ ಸಾಲುಗಳನ್ನು ಹೆಣೆದರು. ಮತ್ತೆರಡು ಸದ್ದಿನ ಹಾಡಿನ ನಡುವೆ ‘ಕೈ ಚಾಚು...’ ಎಂಬ ಮಧುರ ಗೀತೆಗೂ ಸಾಹಿತ್ಯ ಹೊಸೆದರು. ಹಾಡುಗಳು ಪ್ರೇಕ್ಷಕನ ಪಾಲಿನ ‘ಡಾರ್ಲಿಂಗ್‌’ ಅನಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ ಎಂಬ ಭರವಸೆ ಅವರದು. ಹಾಡುಗಳ ಮೇಕಿಂಗ್‌ನಲ್ಲಿನ ಅದ್ದೂರಿತನದಷ್ಟೇ ಅದ್ದೂರಿಯಾಗಿ ಆಡಿಯೊ ಸೀಡಿ ಬಿಡುಗಡೆ ಸಮಾರಂಭವನ್ನೂ ಸಂತು ಮತ್ತವರ ತಂಡ ಏರ್ಪಡಿಸಿತ್ತು.ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿರುವ ನಟ ಯೋಗೀಶ್‌ಗೆ ತಾವು ಚಿತ್ರದಲ್ಲಿ ಟ್ಯಾಟು ಹಾಕುವ ಕಲಾವಿದ ಎಂಬುದರ ಹೊರತಾಗಿ ಕಥೆಯೇ ಸರಿಯಾಗಿ ತಿಳಿದಿಲ್ಲವಂತೆ. ಯೋಗೀಶ್‌, ನಿರ್ದೇಶಕ ಸಂತು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಛಾಯಾಗ್ರಾಹಕ ಮಂಜುನಾಥ ನಾಯಕ್‌ ಜೊತೆಗೂಡಿ ಬಂಡವಾಳ ಹಾಕಿರುವ ‘ಡಾರ್ಲಿಂಗ್‌’ ಕೆಲವೇ ತಿಂಗಳುಗಳಲ್ಲಿ ಸಿದ್ಧಗೊಂಡಿರುವುದು ವಿಶೇಷ. ನಾವೇ ಹಣ ಹೂಡಿದ್ದರೂ ಖರ್ಚಿನ ವಿಷಯದಲ್ಲಿ ರಾಜಿ ಮಾಡಿಕೊಂಡಿಲ್ಲ ಎನ್ನುತ್ತಾರೆ ಸಂತು.ನಿರ್ದೇಶಕ ಸಂತು ಸಾಹಿತ್ಯವನ್ನು ಮೊದಲೇ ಹೊಸೆದು ತಂದು ಮುಂದಿರಿಸಿದ್ದ ಕಾರಣದಿಂದ ಬೇಗನೆ ಮಟ್ಟುಗಳನ್ನು ಹಾಕಲು ಸಾಧ್ಯವಾಯಿತು ಎಂದರು ಅರ್ಜುನ್‌ ಜನ್ಯ. ಹಾಡುಗಳೆಲ್ಲವೂ ಮೊದಲು ಮಕ್ಕಳಿಗೆ ಇಷ್ಟವಾಗಬೇಕು ಎನ್ನುವುದು ಅವರ ಉದ್ದೇಶ. ಅದಕ್ಕೆ ಪೂರಕವಾದ ಸಂಗೀತ ಹೆಣೆದಿರುವುದಾಗಿ ಅವರು ಹೇಳಿದರು.ನಮ್ಮದು ಪೋಸ್ಟ್‌ಮ್ಯಾನ್‌ಗಳ ಕೆಲಸ. ಚಿತ್ರತಂಡದವರು ನೀಡಿದ ಹಾಡನ್ನು ಜನರಿಗೆ ತಲುಪಿಸುವುದೇ ನಮ್ಮ ಕಾಯಕ ಎಂದು ಹೇಳಿದರು ಆನಂದ್‌ ಆಡಿಯೊದ ಶ್ಯಾಂ. ಜನವರಿ ಅಂತ್ಯದಲ್ಲಿ ‘ಡಾರ್ಲಿಂಗ್‌’ಅನ್ನು ಚಿತ್ರಮಂದಿರಗಳಿಗೆ ಕರೆತರುವ ಗುರಿ ಚಿತ್ರತಂಡದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry