ಡಬ್ಬಿಂಗ್ ನಿಷೇಧ ಕಾನೂನುಬಾಹಿರ

7

ಡಬ್ಬಿಂಗ್ ನಿಷೇಧ ಕಾನೂನುಬಾಹಿರ

Published:
Updated:

ಬೆಂಗಳೂರು: `ಡಬ್ಬಿಂಗ್‌ನಿಂದ ಚಿತ್ರರಂಗದ ಕಾರ್ಮಿಕರ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ಕನ್ನಡ ಚಿತ್ರರಂಗದಲ್ಲಿರುವ ಪಾಳೇಗಾರ ಮನಸ್ಸುಗಳು ವಿನಾಕಾರಣ ಬಿಂಬಿಸುತ್ತಾ ಲಾಭ ಪಡೆಯುತ್ತಿವೆ~ ಎಂದು ಬನವಾಸಿ ಬಳಗದ ಅಧ್ಯಕ್ಷ ಜಿ.ಆನಂದ್ ದೂರಿದರು.ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ಡಬ್ಬಿಂಗ್ ಮತ್ತು ಪ್ರಜಾಪ್ರಭುತ್ವ~ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.`ಡಬ್ಬಿಂಗ್ ಯಾವ ಕಾರಣಕ್ಕಾಗಿ ಬೇಡ ಎಂಬ ಚರ್ಚೆಗೆ ತೆರೆದುಕೊಳ್ಳದಷ್ಟು ಪಾಳೇಗಾರಿಕೆ ಚಿತ್ರರಂಗದಲ್ಲಿ ಬೇರೂರಿದೆ. ಕನ್ನಡಿಗರು ಇತರೆ ಭಾಷೆಗಳ ಚಿತ್ರವನ್ನು ತಮ್ಮ ಮಾತೃ ನುಡಿಯಲ್ಲಿ ನೋಡಬಾರದು ಎಂದು ನಿಷೇಧ ಹೇರುವುದಕ್ಕೆ ಇವರು ಯಾರು? ಡಬ್ಬಿಂಗ್ ನಿಷೇಧವೆಂಬುದು ಕಾನೂನುಬಾಹಿರವಾಗಿದ್ದು, ವೀಕ್ಷಕರ ಆಯ್ಕೆಯ ಸ್ವಾತಂತ್ರ್ಯವನ್ನೇ ಕಸಿದುಕೊಂಡಂತಾಗುತ್ತದೆ~ ಎಂದು ಆಕ್ಷೇಪಿಸಿದರು.`ತಮಿಳು ಚಿತ್ರವನ್ನು ತಮಿಳಿನಲ್ಲಿಯೇ ನೋಡಿದರೆ ಕನ್ನಡ ಭಾಷೆ ಉಳಿಯುತ್ತದೆಯೇ?~ ಎಂದು ಪ್ರಶ್ನಿಸಿದ ಅವರು, `ಇತರೆ ಭಾಷೆಗಳಲ್ಲಿರುವ ಉತ್ತಮ ವಿಚಾರಗಳನ್ನು ಕನ್ನಡಕ್ಕೆ ಡಬ್ ಮಾಡುವ ಮೂಲಕ ಕನ್ನಡ ಭಾಷೆಗೂ ವ್ಯಾಪಕ ಪ್ರಚಾರ ದೊರೆಯುತ್ತದೆ ಮತ್ತು ಕನ್ನಡ ಪ್ರೇಕ್ಷಕರು ಅದನ್ನು ಸ್ವೀಕರಿಸುತ್ತಾರೆ~ ಎಂದು ಪ್ರತಿಪಾದಿಸಿದರು.`ಕಾರ್ಟೂನ್ ಮತ್ತು ಜಾಹೀರಾತುಗಳು ಡಬ್ಬಿಂಗ್ ಆಗುವುದಾದರೆ `ಸತ್ಯಮೇವ ಜಯತೆ~ಯಂತಹ ಅತ್ಯುತ್ತಮ ಕಾರ್ಯಕ್ರಮಗಳನ್ನು ಡಬ್ ಮಾಡಲು ಅವಕಾಶ ನೀಡಬಹುದಿತ್ತು. ಪ್ರಸ್ತುತ ದಿನಗಳಲ್ಲಿ ಕನ್ನಡದಲ್ಲಿ ಸಧಬಿರುಚಿಯ ಚಿತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಪ್ರೇಕ್ಷಕರು ಇತರೆ ಭಾಷೆಗಳ ಚಿತ್ರಗಳನ್ನು ಕನ್ನಡದಲ್ಲೇ ನೋಡಲು ಡಬ್ ಅವಕಾಶ ಮಾಡಿಕೊಡುತ್ತದೆ. ಈ ವಿರೋಧದಿಂದ ಕನ್ನಡಿಗರಿಗೆ ನಷ್ಟವಾಗುತ್ತದೆ~ ಎಂದು ಹೇಳಿದರು. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, `ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿರೋಧ ನೀತಿಯು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ವೈಯಕ್ತಿಕ ಸ್ವಾತಂತ್ರ್ಯಹರಣವಾಗುತ್ತದೆ. ಕನ್ನಡ ಸಿನಿಮಾಗಳಲ್ಲಿ ಕೇವಲ ಕತ್ತಿ ಗುರಾಣಿಗಳೇ ರಾರಾಜಿಸುತ್ತಿವೆ. ಇಂತಹ ಚಿತ್ರಗಳನ್ನು ನೆಚ್ಚಿಕೊಂಡು ಜನ ಸಿನಿಮಾ ಮಂದಿರಕ್ಕೆ ತೆರಳುತ್ತಾರೆಯೇ?~ ಎಂದು ಪ್ರಶ್ನಿಸಿದರು.ಪತ್ರಕರ್ತ ಎನ್.ಎ.ಎಂ.  ಇಸ್ಮಾಯಿಲ್, `ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದಿಂದ ಬದಲಾದ ಗ್ರಾಹಕರ ಗ್ರಹಿಕೆಗೆ ತಕ್ಕಂತೆ ಉತ್ತಮ ಮನರಂಜನೆ ನೀಡಬೇಕಾಗುತ್ತದೆ. ಇದಕ್ಕೆ ಡಬ್ಬಿಂಗ್ ಅವಕಾಶ ನೀಡುತ್ತದೆ.ಸರ್ಕಾರದಿಂದ 25 ಲಕ್ಷ ರೂಪಾಯಿ ಸಬ್ಸಿಡಿ ಪಡೆದು ರಿಮೇಕ್ ಚಿತ್ರವನ್ನೇ ಮಾಡುತ್ತಾರೆ. ಈ ಸಬ್ಸಿಡಿಯಲ್ಲಿ ಕಾರ್ಮಿಕರಿಗೆ ಯಾವುದೇ ನೆರವು ನೀಡುವುದಿಲ್ಲ. ಬದಲಿಗೆ ಡಬ್ಬಿಂಗ್ ವಿಚಾರ ಬಂದಾಗ ಮಾತ್ರ ಕಾರ್ಮಿಕರ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ಎಂದು ವಾದಿಸುತ್ತಾರೆ. ಈ ರೀತಿಯ ದ್ವಂದ್ವವನ್ನು ಚಿತ್ರರಂಗ ಕೈಬಿಡಬೇಕು~ ಎಂದು ಆಗ್ರಹಿಸಿದರು. ಸಮತಾ ಸೈನಿಕ ದಳದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry