ಡಬ್ಬಿಂಗ್: 9ಕ್ಕೆ ವಾಟಾಳ್ ಪ್ರತಿಭಟನೆ

7

ಡಬ್ಬಿಂಗ್: 9ಕ್ಕೆ ವಾಟಾಳ್ ಪ್ರತಿಭಟನೆ

Published:
Updated:

ಬೆಂಗಳೂರು: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಡಬ್ಬಿಂಗ್ ಸಿನಿಮಾ ಸಂಸ್ಕೃತಿಗೆ ಅವಕಾಶ ನೀಡಬಾರದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.

ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಬ್ಬಿಂಗ್ ಸಿನಿಮಾ ಸಂಸ್ಕೃತಿ ರಾಜ್ಯಕ್ಕೆ ಕಾಲಿಡದಂತೆ ಎಚ್ಚರಿಸಲು ಈ ತಿಂಗಳ 9ರಂದು ಗಾಂಧಿನಗರದ ಗುಬ್ಬಿ ವೀರಣ್ಣ ಚಿತ್ರಮಂದಿರದ ಮುಂಭಾಗ ಡಬ್ಬಿಂಗ್ ಭೂತವನ್ನು ಸುಡುವ ಮೂಲಕ ಸಾಂಕೇತಿಕವಾಗಿ ಹೋರಾಟ ನಡೆಸಲಾಗುವುದು ಎಂದರು.

ಡಬ್ಬಿಂಗ್ ಸಿನಿಮಾಗಳು `ಎಂಜಲು ಸಂಸ್ಕೃತಿ'ಯ ಬಳುವಳಿ. ಇವು ಕನ್ನಡ ಚಲನಚಿತ್ರ ರಂಗ ಹಾಗೂ ಕಲಾವಿದರ ಮೇಲೆ ಗಂಭೀರವಾದ ಪರಿಣಾಮ ಬೀರಲಿವೆ. 50 ವರ್ಷಗಳ ಹಿಂದೆಯೂ ವಾಟಾಳ್ ಪಕ್ಷ ಡಬ್ಬಿಂಗ್ ಸಂಸ್ಕೃತಿ ವಿರುದ್ಧ ತೀವ್ರವಾದ ಹೋರಾಟ ನಡೆಸಿತ್ತು.  ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಈ ವಿಚಾರದಲ್ಲಿ ದೃಢ ನಿಲುವು ತಳೆಯಬೇಕು ಎಂದು ಒತ್ತಾಯಿಸಿದರು.

ಬಹಳಷ್ಟು ಕನ್ನಡ ಸಿನಿಮಾಗಳು ಇಂದು ನೆಲಕಚ್ಚುತ್ತಿವೆ. ಬಂಡವಾಳ ಹಾಕಿದವರು ನಷ್ಟದಲ್ಲಿದ್ದಾರೆ. ಆದರೆ, ರಾಜ್ಯದ ಚಿತ್ರಮಂದಿರಗಳಲ್ಲಿ ಪರಭಾಷಾ ಚಿತ್ರಗಳು ರಾಜಾರೋಷವಾಗಿ ಪ್ರದರ್ಶನಗೊಳ್ಳುತ್ತಿವೆ. ಕನ್ನಡ ಸಿನಿಮಾಗಳ ಉಳಿವಿಗಾಗಿ ಪರಭಾಷಾ ಚಿತ್ರಗಳ ಪ್ರದರ್ಶನವನ್ನು ನಿಷೇಧಿಸುವ ಅಗತ್ಯವಿದೆ ಎಂದರು. ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕೆ ಪ್ರಾಧಾನ್ಯತೆ ನೀಡದ ಚಿತ್ರ ಮಂದಿರಗಳನ್ನು ರಾಷ್ಟ್ರೀಕರಣಗೊಳಿಸುವ ಅಗತ್ಯವಿದೆ ಎಂದು ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry