ಡಾಂಬರು ಬದಲು ಮಣ್ಣು ತುಂಬಿದರು

6

ಡಾಂಬರು ಬದಲು ಮಣ್ಣು ತುಂಬಿದರು

Published:
Updated:

ಸುಳ್ಯ: ಅಂತರರಾಜ್ಯ ರಸ್ತೆಯಾದ ಸುಳ್ಯ-ಆಲೆಟ್ಟಿ-ಬಡ್ಡಡ್ಕ ರಸ್ತೆಯ ದುರಸ್ತಿ ಕಾರ್ಯಕ್ಕಾಗಿ ಮುಖ್ಯಮಂತ್ರಿ  ಗ್ರಾಮೀಣ ಅಭಿವೃದ್ಧಿ ನಿಧಿಯಿಂದ 25 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದರೂ, ಡಾಂಬರು ಬಳಸದೆ ಹೊಂಡಗಳನ್ನು ದೊಡ್ಡ ಜಲ್ಲಿ ಮತ್ತು ಮಣ್ಣು ತುಂಬಿ ಮುಚ್ಚಲಾಗಿದೆ.ಜಿಲ್ಲಾ ಪಂಚಾಯಿತಿ ಎಂಂಜಿನಿಯರಿಂಗ್ ವಿಭಾಗದ ಸಮ್ಮತಿಯೊಂದಿಗೆ ಈ ರೀತಿಯ ಕಾಟಾಚಾರದ ದುರಸ್ತಿ  ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹೊಂಡ ಗುಂಡಿ ತುಂಬಿ ಸಂಚಾರಕ್ಕೆ ದುಸ್ತರವಾದ ರಸ್ತೆಯ ಯಾತ್ರಿಕರ ಬವಣೆಗೆ ಪರಿಹಾರ ಎಂಬಂತೆ ಕೂರ್ನಡ್ಕದಿಂದ ಆಲೆಟ್ಟಿ ಸಮೀಪದ ಎಲಿಕ್ಕಳದವರೆಗೆ ರಸ್ತೆ ಅಭಿವೃದ್ಧಿ ಮಾಡಲು ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿಯಿಂದ ಶಾಸಕ ಎಸ್.ಅಂಗಾರ ಅವರ ಪ್ರಯತ್ನದಿಂದ 25 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರು.

 

ಕೂರ್ನಡ್ಕದಿಂದ ಬಡ್ಡಡ್ಕದವರೆಗೆ ಡಾಂಬರು ಬಳಸಿ ಅಲ್ಲಲ್ಲಿ ದುರಸ್ತಿ ಮಾಡಲಾಗಿದೆ. ಬಡ್ಡಡ್ಕದಿಂದ ಎಲಿಕ್ಕಳದವರೆಗೆ ಮಣ್ಣು ಮತ್ತು ಜಲ್ಲಿ ತುಂಬಲಾಗಿದೆ. ಹಾಕಿದ ಮಣ್ಣೆಲ್ಲ ಈಗಾಗಲೇ ದೂಳಾಗಿದ್ದು ಡಾಂಬರು ರಸ್ತೆ ಕಚ್ಚಾ ರಸ್ತೆಯಂತೆ ಧೂಳುಮಯವಾಗಿದೆ. ಜಲ್ಲಿ ಎದ್ದು ಬರತೊಡಗಿದೆ. ಇನ್ನು ಮಳೆಗಾದಲ್ಲಿ ಜಲ್ಲಿ ಎದ್ದು ರಸ್ತೆಯಲ್ಲಿ ಹರಡಿ ಸಂಚಾರ ನಡೆಸುವುದು ಹೇಗೆ ಎಂಬ ಚಿಂತೆ ಸಾರ್ವಜನಿಕರನ್ನು ಕಾಡಿದೆ.ಮಳೆಯ ಕಾರಣ ನೀಡಿ ಮಣ್ಣು ತುಂಬಿಸಿ ಈ ರೀತಿ ದುರಸ್ತಿ ಮಾಡಲಾಗಿದೆ ಎಂದು ಸಾರ್ವಜನಿಕರು ಕೇಳಿದಾಗ ಗುತ್ತಿಗೆದಾರರು ಮತ್ತು ಎಂಜಿನಿಯರ್ ಸಮಜಾಯಿಕೆ ನೀಡುತ್ತಾರೆ. ಕಳೆದ 15 ದಿನಗಳಿಂದ ಈ ಭಾಗದಲ್ಲಿ ಮಳೆ ಬಂದಿಲ್ಲ. ಸರಿಯಾಗಿ ಕೆಲಸ ಮಾಡುತ್ತಿದ್ದರೆ ಈಗಾಗಲೇ ಕಾಮಗಾರಿ ಮುಗಿಯುತ್ತಿತ್ತು. ಮಳೆಯ ನೆಪ ಹೇಳಿ ಡಾಂಬರು ಬದಲು ಮಣ್ಣು ತುಂಬಿ ಕೆಲಸ ನಿಲ್ಲಿಸಲಾಗಿದೆ. ದುರಸ್ತಿಗೆಂದು ತಂದ ಜಲ್ಲಿ ಅರ್ಧಂಬಂರ್ಧ ರಸ್ತೆ ಬದಿ ಬಿಟ್ಟು ಹೋಗಿದ್ದಾರೆ.     ಈ ವಿಷಯದ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್‌ಗಳನ್ನು ವಿಚಾರಿಸ್ದ್ದಿದು, ಈಗ ನಡೆಸಿರುವ ದುರಸ್ತಿಗೆ ಬಿಲ್ ಪಾವತಿ ಮಾಡುವುದಿಲ್ಲ. ಸಮರ್ಪಕ ದುರಸ್ತಿ ಮಾಡಿದ ಬಳಿಕವಷ್ಟೇ ಬಿಲ್ ಪಾವತಿ ಮಾಡಲಾಗುವುದು ಎನ್ನುತ್ತಾರೆ ಜಿ.ಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಮೇನಾಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry