ಡಾ.ಸುವಿಧಾ ರಂಗರಾಜನ್ ಚಿನ್ನದ ಹುಡುಗಿ

7
ಎಸ್‌ಡಿಎಂ ಡೆಂಟಲ್ ಕಾಲೇಜು ಪದವಿ ಪ್ರದಾನ ಸಮಾರಂಭ

ಡಾ.ಸುವಿಧಾ ರಂಗರಾಜನ್ ಚಿನ್ನದ ಹುಡುಗಿ

Published:
Updated:

ಧಾರವಾಡ: ದಂತವೈದ್ಯಕೀಯ ಕೋರ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿದ ಡಾ.ಸುವಿಧಾ ರಂಗರಾಜನ್ ಎಸ್‌ಡಿಎಂ ದಂತವೈದ್ಯಕೀಯ ಕಾಲೇಜಿನ ಚಿನ್ನದ ಹುಡುಗಿಯಾಗಿ ಹೊರಹೊಮ್ಮುವ ಮೂಲಕ ಚಿನ್ನದ ನಗೆ ಬೀರಿದರು.ಇಲ್ಲಿನ ಡಾ.ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಬುಧವಾರ ನಡೆದ ವರ್ಣರಂಜಿತ, ಹೃದಯಸ್ಪರ್ಶಿ ಸಮಾರಂಭದಲ್ಲಿ, ಐದು ವರ್ಷಗಳ ಡೆಂಟಲ್ ಕೋರ್ಸ್‌ನಲ್ಲಿ ಅತ್ಯಂತ ಅಧಿಕ ಅಂಕ ಗಳಿಸಿದ ಸುವಿಧಾಗೆ ಎಸ್‌ಡಿಎಂ ಸೊಸೈಟಿ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕೊಡಮಾಡುವ `ಅಧ್ಯಕ್ಷರ ಚಿನ್ನದ ಪದಕ'ವೂ ಕೊರಳಿಗೇರಿತು.ಅಲ್ಲದೇ, ಪ್ರೋಸ್ಟೊಡೆಂಟಿಕ್ಸ್, ಓರಲ್ ಸರ್ಜರಿ, ಕಮ್ಯುನಿಟಿ ಡೆಂಟಿಸ್ಟ್ರಿ, ಡಾ.ಶ್ರೀಲಕ್ಷ್ಮಿ ಕೊಠಾರಿ ಚಿನ್ನದ ಪದಕ, ಡಾ.ಮಹಾಂತೇಶ ಸರದೇಸಾಯಿ ಸ್ಮಾರಕ ನಗದು ಬಹುಮಾನಗಳು ದೊರೆತವು. ಆ ನಂತರದ ಸರದಿ ಪೂಜಾ ಮೆಹ್ತಾ ಅವರದು. ಪೆಡೊಡೆಂಟಿಕ್ಸ್, ಅರ್ಥೊಡೆಂಟಿಕ್ಸ್, ಓರಲ್ ಪೆಥಾಲಜಿ ವಿಭಾಗದಲ್ಲಿ ಉತ್ತಮ ಅಂಕಗಳಿಸಿದ ಡಾ.ಪೂಜಾ ಸ್ನಾತಕ ವಿಭಾಗದಲ್ಲಿ ಡಾ.ವಿ.ಪಿ.ಜಯದೆ ನಗದು ಬಹುಮಾನಕ್ಕೆ ಭಾಜನರಾದರು.ಡಾ.ಥೆಮುದೊ ಬೆವರ‌್ಲಿ ಅವರೂ ಓರಲ್ ಮೆಡಿಸಿನ್ ಅಂಡ್ ರೇಡಿಯೊಲಜಿ, ಪೆರಿಯೊಡೆಂಟಿಕ್ಸ್ ಹಾಗೂ ಕನ್ಸರ್ವೇಟಿವ್ ಡೆಂಟಿಸ್ಟ್ರಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದರು.ಚಿನ್ನದ ಬಹುಮಾನ ಪಡೆದ ಬಳಿಕ ತಮ್ಮ ಖುಷಿ ಹಂಚಿಕೊಂಡ ಡಾ.ಸುವಿಧಾ, `ಈ ಕಾಲೇಜಿನಲ್ಲಿ ಐದು ವರ್ಷಗಳವರೆಗಿನ ಓದು ಹೊಸ ಅನುಭವವನ್ನು ನೀಡಿದೆ. ದಂತವೈದ್ಯೆ ಆಗಬೇಕು ಎನ್ನುವ ನನ್ನ ಕನಸು ಇದೀಗ ವಾಸ್ತವವಾಗಿದೆ. ಇದಕ್ಕೆ ಕಾರಣರಾದ ಪೋಷಕರು, ಕಾಲೇಜಿನ ಸಿಬ್ಬಂದಿ ಹಾಗೂ ಸ್ನೇಹಿತರನ್ನು ಮರೆಯಲಾರೆ' ಎಂದರು.ಪ್ರಮಾಣಪತ್ರಗಳನ್ನು ವಿತರಿಸಿದ ಕರ್ನಾಟಕ ವಿ.ವಿ. ಕುಲಪತಿ ಡಾ.ಎಚ್.ಬಿ.ವಾಲೀಕಾರ, `ದೇಶದಲ್ಲಿ 45 ಕೇಂದ್ರೀಯ ವಿಶ್ವವಿದ್ಯಾಲಯಗಳು ಹಾಗೂ ನೂರಕ್ಕೂ ಅಧಿಕ ವಿಶ್ವವಿದ್ಯಾಲಯಗಳು ಇದ್ದರೂ ಜಗತ್ತಿನ 200 ಅತ್ಯುತ್ತಮ ವಿ.ವಿ.ಗಳ ಪಟ್ಟಿಯಲ್ಲಿ ಒಂದು ಸ್ಥಾನವೂ ದೊರಕಲಿಲ್ಲ. 18 ಇಂಡಿಯನ್ ಇನ್‌ಸ್ಟಿಟ್ಯೂಟ್ ಟೆಕ್ನಾಲಜಿ (ಐಐಟಿ) ಪೈಕಿ ಕೇವಲ ಒಂದು ಮಾತ್ರ 156ನೇ ಸ್ಥಾನ ಪಡೆದಿದೆ. ಶಿಕ್ಷಣದಲ್ಲಿನ ಈ ಪರಿಯ ಅಧಃಪತನಕ್ಕೆ ಹಣಕಾಸಿನ ತೊಂದರೆ ಕಾರಣವಲ್ಲ. ಬದಲಾಗಿ, ಶಿಕ್ಷಣದೆಡೆಗಿನ ಬದ್ಧತೆಯ ಕೊರತೆ' ಎಂದು ವಿಷಾದಿಸಿದರು.ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, `ನಾವು ಮಾಡುವ ಕೆಲಸದಿಂದಲೇ ಇತರರನ್ನು ತೃಪ್ತಿಪಡಿಸಬೇಕೇ ಹೊರತು ನಮ್ಮ ಮಾತಿನಿಂದ ತೃಪ್ತಿಪಡಿಸುವುದು ಆಗಬಾರದು ಎಂಬ ತತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ. ಶಿಕ್ಷಣದೆಡೆಗಿನ ಬದ್ಧತೆಯ ಕೊರತೆಯನ್ನು ನಮ್ಮ ಸಂಸ್ಥೆ ಗಂಭೀರವಾಗಿ ಪರಿಗಣಿಸಲಿದೆ' ಎಂದರು.ತಮ್ಮ ಮಗ/ ಮಗಳು ಪದಕ ಪಡೆಯುವುದನ್ನು ವೀಕ್ಷಿಸಲು ವಿದ್ಯಾರ್ಥಿಗಳ ಪೋಷಕರು ಮಲೇಶಿಯಾ, ಗುಜರಾತ್‌ನ ಅಹಮದಾಬಾದ್ ಸೇರಿದಂತೆ ವಿವಿಧ ರಾಷ್ಟ್ರ ಹಾಗೂ ರಾಜ್ಯಗಳಿಂದ ಬಂದಿದ್ದರು.ಎಸ್‌ಡಿಎಂ ಶಿಕ್ಷಣ ಸೊಸೈಟಿಯ ಸುರೇಂದ್ರ, ಕಾರ್ಯದರ್ಶಿ ಜಿನೇಂದ್ರ ಪ್ರಸಾದ, ಎಸ್‌ಡಿಎಂ ಡೆಂಟಲ್ ಕಾಲೇಜಿನ ಪ್ರಾಚಾರ್ಯ ಡಾ.ಶ್ರೀನಾಥ ಠಾಕೂರ್ ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು ವೇದಿಕೆಯ ಮೇಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry