ಭಾನುವಾರ, ಮೇ 29, 2022
21 °C

ಡಾ. ಕಂಬಾರರಿಗೆ ತವರಿನ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ನಂತರ ಮೊದಲ ಬಾರಿಗೆ ತವರು ಜಿಲ್ಲೆಗೆ ಆಗಮಿಸಿದ ಡಾ. ಚಂದ್ರಶೇಖರ ಕಂಬಾರ ಅವರನ್ನು ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಬರ ಮಾಡಿಕೊಳ್ಳಲಾಯಿತು.ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಎಸ್. ಚೌಗಲಾ ಅವರು ಪ್ರವಾಸಿ ಮಂದಿರಕ್ಕೆ ಆಗಮಿಸಿದ ಕಂಬಾರ ಅವರನ್ನು ಹೂಗುಚ್ಛ ನೀಡಿ ಬರ ಮಾಡಿಕೊಂಡರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಗಜಂಪಿ, ಸಾಹಿತಿಗಳಾದ ಚಂದ್ರಕಾಂತ ಪೋಕಳೆ, ಸರಜೂ ಕಾಟ್ಕರ್, ಡಿ.ಎಸ್. ಚೌಗಲೆ, ಸುಭಾಷ ಏಣಗಿ, ರಾಮಕೃಷ್ಣ ಮರಾಠೆ, ಬಿ.ಎಸ್. ಗವಿಮಠ, ಕನ್ನಡ ಹೋರಾಟಗಾರ ಅಶೋಕ ಚಂದರಗಿ, ಟಿ.ಟಿ. ಮುರುಕಟ್ನಾಳ ಮತ್ತಿತರರು ಹಾರ ಹಾಕಿ ಸನ್ಮಾನಿಸಿದರು.ನಂತರ ಹುಟ್ಟೂರಾದ ಘೋಡಗೇರಿಗೆ ತೆರಳಿದ ಅವರನ್ನು ಸ್ನೇಹಿತರು, ಗ್ರಾಮಸ್ಥರು ಬರಮಾಡಿಕೊಂಡರು. ಅವರು ತಾವು ಕಲಿತ ಶಾಲೆ, ಮನೆಗೆ ಭೇಟಿ ನೀಡಿದರು. ನಂತರ ಸ್ನೇಹಿತರೊಂದಿಗೆ ಅನುಭವಗಳನ್ನು ಹಂಚಿಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಮಾಧ್ಯಮದಲ್ಲಿಯೇ 1 ರಿಂದ 10ನೆಯ ತರಗತಿಯವರೆಗೆ ಶಿಕ್ಷಣ ನೀಡಬೇಕು.ಇದಕ್ಕಾಗಿ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು. ಎರಡು ರೀತಿಯ ಶಿಕ್ಷಣ ನೀಡುವ ಮೂಲಕ ಎರಡು ಸಮಾಜ ಸೃಷ್ಟಿ ಮಾಡುತ್ತಿದ್ದೇವೆ. ಇದು ಬಹಳ ದೊಡ್ಡ ತಪ್ಪು. ಇದಕ್ಕೆ ಕೊನೆ ಹಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಆಂಗ್ಲ ಮಾಧ್ಯಮಕ್ಕೆ ಕಳುಹಿಸುವ ಮೂಲಕ ಮಕ್ಕಳನ್ನು ಹುಟ್ಟಿದ ನೆಲಕ್ಕೆ ಪರಕೀಯರನ್ನಾಗಿಸುತ್ತಿದ್ದೇವೆ.ಹಾಗಾದರೆ ಅವರಲ್ಲಿ ನೆಲ, ಭಾಷೆಯ ಬಗೆಗೆ ಅಭಿಮಾನ ಹೇಗೆ ಹುಟ್ಟುತ್ತದೆ. ಕನ್ನಡದ ಮೂಲಕ ಇಂಗ್ಲಿಷ್ ಕಲಿತರೆ ಇನ್ನೂ ಚೆನ್ನಾಗಿ ಕಲಿಯಬಲ್ಲರು. ಆದ್ದರಿಂದ ಕನ್ನಡ ಮಾಧ್ಯಮವಾಗಬೇಕು~ ಎಂದು ಅವರು ಹೇಳಿದರು.`ರಾಜ್ಯದ ಗಡಿ ಭಾಗಗಳಲ್ಲಿ ಸರ್ಕಾರದ ಶಾಲೆಗಳ ಸ್ಥಿತಿ ಚೆನ್ನಾಗಿಲ್ಲ. ಚರ್ಚೆ ಮಾಡಿದಾಗ ಸುಧಾರಣೆ ಮಾಡುವುದಾಗಿ ಅಧಿಕಾರದಲ್ಲಿದ್ದವರು ಒಪ್ಪುತ್ತಾರೆ. ಆದರೆ ನಂತರ ಅದನ್ನು ಜಾರಿಗೊಳಿಸುವುದಿಲ್ಲ. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ಸರಿಯಲ್ಲ. ಕೂಡಲೇ ಸರ್ಕಾರ ಇತ್ತ ಗಮನ ಹರಿಸಬೇಕು~ ಎಂದು ಅವರು ಆಗ್ರಹಿಸಿದರು.`ನಾವು ಎಂದಿಗೂ ಸಾಹಿತ್ಯದ ಜತೆಗೆ ರಾಜಕೀಯವನ್ನು ಬೆರೆಯುಸುವುದಿಲ್ಲ. ಆದರೆ ಎಂಇಎಸ್‌ನವರು ಸಾಹಿತ್ಯವನ್ನು ರಾಜಕೀಯದೊಂದಿಗೆ ಬೆರೆಸುತ್ತಾರೆ. ಹೀಗಾಗಿ ಅವರಿಗೆ ಎಲ್ಲವೂ ಡೊಂಕಾಗಿ ಕಾಣಿಸುತ್ತದೆ~ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.