ಬುಧವಾರ, ನವೆಂಬರ್ 13, 2019
17 °C

`ಡಾ. ಮಾಲಕರಡ್ಡಿ ಕೇವಲ ಉತ್ಸವ ಮೂರ್ತಿ'

Published:
Updated:

ಯಾದಗಿರಿ: ಕ್ಷೇತ್ರದ ಶಾಸಕ ಡಾ. ಎ.ಬಿ. ಮಾಲಕರಡ್ಡಿ ಕೇವಲ ಉತ್ಸವ ಮೂರ್ತಿ. ಆಡಳಿತವನ್ನು ನಡೆಸುವವರೇ ಬೇರೆ ಎಂದು ಮಾಜಿ ಶಾಸಕ, ಕೆಜೆಪಿ ಅಭ್ಯರ್ಥಿ ಡಾ. ವೀರಬಸವಂತರಡ್ಡಿ ಲೇವಡಿ ಮಾಡಿದರು. ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾದಗಿರಿ ಮತಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಡಾ. ಮಾಲಕರಡ್ಡಿ ಅವರಿಗೆ ಜನ ಮತ ನೀಡಿದ್ದಾರೆ.

ಆದರೆ ಮತ ಪಡೆದವರು ಪಕ್ಕಕ್ಕೆ ಕುಳಿತುಕೊಳ್ಳುತ್ತಿದ್ದು, ಆಡಳಿತವನ್ನು ಗುಲ್ಬರ್ಗದಲ್ಲಿ ಕುಳಿತವರು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಲ್ಲೆಡೆ ಹೇಳಿಕೊಳ್ಳುತ್ತಿದ್ದಾರೆ. ಇದು ಮತದಾರರ ದಿಕ್ಕು ತಪ್ಪಿಸುವ ಪ್ರಯತ್ನ ಎಂದು ದೂರಿದ ಅವರು, ತಮ್ಮ ಆರೋಪಗಳೆಲ್ಲವೂ ಸುಳ್ಳು ಎಂದು ಡಾ. ಮಾಲಕರಡ್ಡಿ ಅವರು ನಗರದ ಗಾಂಧಿ ವೃತ್ತದಲ್ಲಿ ಹೇಳಿಕೆ ನೀಡಲಿ, ತಾವು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಸವಾಲು ಹಾಕಿದರು.

ಕಳೆದ 20 ವರ್ಷಗಳಿಂದ ಡಾ. ಮಾಲಕರಡ್ಡಿ ಅವರು ಸಮಸ್ಯೆಗಳನ್ನು ಗುಡ್ಡೆ ಹಾಕುತ್ತಲೇ ಹೊರಟಿದ್ದಾರೆ. ಅದೇ ಅವರ ಬಹುದೊಡ್ಡ ಸಾಧನೆ. ಪ್ರಮುಖವಾಗಿ ಕ್ಷೇತ್ರದಾದ್ಯಂತ ರಸ್ತೆಗಳು ಹದಗೆಟ್ಟು ಹೋಗಿವೆ. ಏತ ನೀರಾವರಿ ಯೋಜನೆಗಳು ಕಾರ್ಯಗತವಾಗಿಲ್ಲ. ನಗರ ಪ್ರದೇಶದಲ್ಲೂ ಸಮಸ್ಯೆಗಳು ತಾಂಡವವಾಡುತ್ತಿವೆ ಎಂದು ಆರೋಪಿಸಿದರು.ಜನರು ಶಾಸಕರಿಗೆ ಮತ ನೀಡಿದ್ದರೂ, ಕಾಂಗ್ರೆಸ್ ಕಾರ್ಯಕರ್ತರು, ಮತದಾರರು ಎಲ್ಲದಕ್ಕೂ ಗುಲ್ಬರ್ಗಕ್ಕೆ ಹೋಗಬೇಕಾಗಿದೆ. ಯಾವುದೇ ಕೆಲಸ ಆಗಬೇಕಾದರೂ ಅಧಿಕಾರಿಗಳೂ ಕಡತಗಳನ್ನು ಗುಲ್ಬರ್ಗಕ್ಕೆ ತೆಗೆದುಕೊಂಡು ಹೋಗುವ ಸ್ಥಿತಿ ಇದೆ. ಶಾಸಕರಾಗಿ ಡಾ. ಮಾಲಕರಡ್ಡಿ ಆಯ್ಕೆಯಾಗಿದ್ದರೂ, ಆಡಳಿತ ಕೇಂದ್ರ ಮಾತ್ರ ಗುಲ್ಬರ್ಗದಲ್ಲಿದೆ. ತಮ್ಮ ಬೀಗರು, ನೆಂಟರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಟೀಕಿಸಿದರು.ಡಾ. ಮಾಲಕರಡ್ಡಿ ಎಲ್ಲವನ್ನೂ ಹಗುರವಾಗಿ ತೆಗೆದುಕೊಳ್ಳುತ್ತಿದ್ದಾರೆ. 5 ವರ್ಷಕ್ಕೊಮ್ಮೆ ಜನರ ಬಳಿಗೆ ಬರುತ್ತಾರೆ. ಇಂತಹ ನಾಯಕರ ಸಾರಥ್ಯ ಕ್ಷೇತ್ರಕ್ಕೆ ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಮತಕ್ಷೇತ್ರವನ್ನು ಉಳಿಸಲು ಕೆಜೆಪಿಗೆ ಬೆಂಬಲ ನೀಡುವಂತೆ ಮನವಿ ಮಾಡಲಾಗುತ್ತಿದೆ ಎಂದರು. ಕಾಂಗ್ರೆಸ್‌ನಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಮತದಾರರು ಮನಗಂಡಿದ್ದಾರೆ.

ಇದರಿಂದಾಗಿ ಯಾದಗಿರಿ ಮತಕ್ಷೇತ್ರದಲ್ಲಿ ಬದಲಾವಣೆ ತರಲು ಜನರು ನಿರ್ಧರಿಸಿದ್ದು, ಕಾಂಗ್ರೆಸ್ ಮುಖಂಡರು ಕೆಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಲ್ಲಿಯೇ ಡಾ. ಮಾಲಕರಡ್ಡಿ ಅವರ ಬಗ್ಗೆ ಭ್ರಮನಿರಸನವಾಗಿದೆ. ಹೀಗಾಗಿ ಬಹಳಷ್ಟು ಜನರು ಕೆಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ ಎಂದರು. ಖಂಡಪ್ಪ ದಾಸನ್, ಸಿದ್ಧನಗೌಡ ಕಾಡಂನೋರ್, ಡಾ. ಶರಣರಡ್ಡಿ ಕೋಡ್ಲಾ, ಚಂದ್ರಶೇಖರಗೌಡ ಪಾಟೀಲ, ಮಲ್ಲಿಕಾರ್ಜುನ ಯಕ್ಷಂತಿ, ಚೆನ್ನಾರಡ್ಡಿ ಮುಂತಾದವರು ಹಾಜರಿದ್ದರು.

ಪ್ರತಿಕ್ರಿಯಿಸಿ (+)