ಸೋಮವಾರ, ಜನವರಿ 20, 2020
18 °C
ಪಂಚರಂಗಿ

ಡಿಂಪಲ್‌ ಸುಂದರಿಯ ಸಿಂಪಲ್ ಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವಾಟ್‌ ದ ಫಿಶ್‌’ ಸಿನಿಮಾದಲ್ಲಿ 60 ವರ್ಷ ದಾಟಿದ ಮಹಿಳೆಯ ಪಾತ್ರ ನಿರ್ವಹಿಸಿರುವ ಡಿಂಪಲ್‌ ಕಪಾಡಿಯಾ ಅವರಿಗೆ ಪಾತ್ರ ತುಂಬಾ ಖುಷಿ ನೀಡಿದೆಯಂತೆ. ಹಾಸ್ಯಭರಿತ ಸ್ಕ್ರಿಪ್ಟ್‌ ಕೇಳುತ್ತಿದ್ದಂತೆ ಅವರು ಅಭಿನಯಿಸಲು ಒಪ್ಪಿಕೊಂಡರಂತೆ. ‘ಈ ಚಿತ್ರದಲ್ಲಿ ನಾನು ಅಭಿನಯಿಸಿದ ಪಾತ್ರ ತುಂಬಾ ಚೆನ್ನಾಗಿದೆ. ಸರಿಯಾದ ಆಯ್ಕೆ ನನ್ನದು ಎಂಬ ವಿಶ್ವಾಸವೂ ಇದೆ.

ಈ ವಯಸ್ಸಿನಲ್ಲಿ ನನಗೆ ಸಿನಿಮಾದಲ್ಲಿ ಅಭಿನಯಿಸಬೇಕಾದ ಅನಿವಾರ್ಯವೇನೂ ಇರಲಿಲ್ಲ. ಆದರೂ ಉತ್ತಮ ಪಾತ್ರ ಸಿಕ್ಕಿದ್ದರಿಂದ ಒಪ್ಪಿಕೊಂಡೆ’ ಎಂದು ಅವರು ಹೇಳಿಕೊಂಡಿದ್ದಾರೆ. ‘ನಾನು ದಿನಪೂರ್ತಿ ಬ್ಯುಸಿ ಆಗಿರುತ್ತೇನೆ. ಆದರೆ ಸಿನಿಮಾಗಳಿಗಾಗಿ ಸಮಯ ನೀಡಬೇಕು ಎಂದರೆ ಪಾತ್ರ ವಿಶೇಷವಾಗಿರಬೇಕು ಹಾಗೂ ಹಾಸ್ಯಮಯ ಸನ್ನಿವೇಶಗಳನ್ನು  ಹೊಂದಿರಬೇಕು.

ಅಂದಹಾಗೆ, ಕಳೆದ ಹತ್ತು ವರ್ಷಗಳಲ್ಲಿ ನಾನು ಮಾಡಿದ ಸಿನಿಮಾ ಆರರಿಂದ ಏಳು ಇರಬಹುದಷ್ಟೆ. ಅವುಗಳನ್ನು ಲೆಕ್ಕ ಹಾಕುವ ಗೋಜಿಗೂ ನಾನು ಹೋಗುವುದಿಲ್ಲ’ ಎಂದಿದ್ದಾರೆ. ಅನೇಕ ಅಭಿಮಾನಿಗಳು ಸಿನಿ ತೆರೆಯ ಮೇಲೆ ನೀವು ಕಾಣುತ್ತಲೇ ಇಲ್ಲ. ನಿಮ್ಮ ಅಭಿನಯವನ್ನು ಮಿಸ್‌ ಮಾಡಿಕೊಳ್ಳುತ್ತೇವೆ ಎಂದೆಲ್ಲ ಹೇಳುತ್ತಾರಂತೆ. ಆದರೆ ಅವರು ನಿತ್ಯ ಬದುಕಿನಲ್ಲೇ ತುಂಬಾ ಬ್ಯುಸಿ.

‘ಅನೇಕರು ನೀವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಿ ಎನ್ನುತ್ತಾರೆ. ಆಗ ಖುಷಿ ಆಗುತ್ತದೆ. ಆದರೆ ನನಗೆ ಸಿನಿಮಾ ಬಿಟ್ಟು ಸ್ವಂತ ಬದುಕಿದೆ. ಅಲ್ಲಿನ ಏಳು–ಬೀಳುಗಳಿಗೆ ಸ್ಪಂದಿಸಿ ಸರಿದೂಗಿಸಿಕೊಂಡು ಹೋಗುವ ಜವಾಬ್ದಾರಿ ಇದೆ’ ಎಂದು ಅಭಿಮಾನಿಗಳ ಆಸಕ್ತಿಗೆ ಸಮಾಧಾನದ ನೀರೆರೆಯುತ್ತಾರೆ. ಕಳೆದ ಆರು ವರ್ಷಗಳಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಬದುಕಿನ ಕಥನವನ್ನು ಪುಸ್ತಕ ರೂಪಕ್ಕೆ ಇಳಿಸಲು ಮಾತ್ರ ಡಿಂಪಲ್‌ ಸಿದ್ಧರಿಲ್ಲವಂತೆ.

ಎಲ್ಲರಿಗೂ ಅವರವರ ಬದುಕು ವಿಶೇಷವೆನಿಸುತ್ತದೆ ಹಾಗೂ ವಿಭಿನ್ನವಾಗಿರುತ್ತದೆ. ಏಳು–ಬೀಳು ಇದ್ದಾಗ ಮಾತ್ರ ಅದು ಬದುಕು ಎಂದೆನಿಸಿಕೊಳ್ಳುತ್ತದೆ. ‘15ನೇ ವಯಸ್ಸಿಗೆ ಮದುವೆಯಾದೆ. 18ನೇ ವರ್ಷಕ್ಕೆ ಅಮ್ಮನಾದೆ. ಅನೇಕ ಹೆಣ್ಣುಮಕ್ಕಳು ಬೇಗ ಮದುವೆಯಾಗಿ ಅಮ್ಮಂದಿರಾಗುತ್ತಾರೆ. ನಾನೂ ಆದೆ. ಆದರೆ ನನ್ನ ಬದುಕನ್ನು ಬದಲಾಯಿಸಿದ್ದು ಸೂಪರ್‌ಸ್ಟಾರ್‌ ರಾಜೇಶ್‌ ಖನ್ನಾ ಅವರನ್ನು ಮದುವೆಯಾದ ಸಂದರ್ಭ’ ಎಂದು ನೆನಪನ್ನು ಅವರು ಹಂಚಿಕೊಳ್ಳುತ್ತಾರೆ. 

ಪ್ರತಿಕ್ರಿಯಿಸಿ (+)