ಡಿ.ಇಡಿ ಕಾಲೇಜು ಕೇಳೋರೇ ಇಲ್ಲ!

7

ಡಿ.ಇಡಿ ಕಾಲೇಜು ಕೇಳೋರೇ ಇಲ್ಲ!

Published:
Updated:
ಡಿ.ಇಡಿ ಕಾಲೇಜು ಕೇಳೋರೇ ಇಲ್ಲ!

ರಾಮನಾಥಪುರ: ಪ್ರಶಿಕ್ಷಣಾರ್ಥಿಗಳ ಕೊರತೆಯಿಂದಾಗಿ ರಾಜ್ಯದ ನೂರಾರು ಶಿಕ್ಷಕರ ಶಿಕ್ಷಣ ತರಬೇತಿ ಸಂಸ್ಥೆ (ಡಿಇಡಿ ಕಾಲೇಜು)ಗಳು ಈ ವರ್ಷ ಬಾಗಿಲು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ.ಪ್ರತಿವರ್ಷ ಸಾವಿರಾರು ಶಿಕ್ಷಕರನ್ನು ರೂಪಿಸುತ್ತಿದ್ದ ಈ ಕೋರ್ಸ್‌ ಈಗ ಉದ್ಯೋಗದ ಭರವಸೆ ನೀಡಲಾಗದ ಹಂತ ತಲುಪಿದೆ. ರಾಜ್ಯದಲ್ಲಿ 30 ಸರ್ಕಾರಿ ಡಿ.ಇಡಿ ಕಾಲೇಜುಗಳು ಹಾಗೂ ಸುಮಾರು 400 ಖಾಸಗಿ ಡಿ.ಇಡಿ ಕಾಲೇಜುಗಳಿವೆ. ಸರ್ಕಾರಿ ಕಾಲೇಜುಗಳಲ್ಲಿ ತಲಾ 100 ಮಂದಿಗೆ ಪ್ರವೇಶಾವಕಾಶವಿರುತ್ತದೆ. ಖಾಸಗಿ ಕಾಲೇಜುಗಳಲ್ಲಿ 50 ರಿಂದ 75 ಸೀಟುಗಳು ಲಭ್ಯವಿರುತ್ತವೆ.ಸುಮಾರು ವರ್ಷ ಹಿಂದಿನವರೆಗೂ ಡಿ.ಇಡಿ ಕಾಲೇಜುಗಳಲ್ಲಿ ಪ್ರವೇಶಕ್ಕೆ ನೂಕುನುಗ್ಗಲು ಇರುತ್ತಿತ್ತು. ಸೀಟಿಗಾಗಿ ಶಿಫಾರಸು ಪತ್ರ, ರಾಜಕೀಯ ಒತ್ತಡ ಮಾಮೂಲಾಗಿತ್ತು. ಈ ಕಾಲೇಜು­ಗಳಿಂದ ಪ್ರತಿ ವರ್ಷ ಸುಮಾರು 25 ಸಾವಿರ ಶಿಕ್ಷಕರು ತರಬೇತಿ ಪಡೆಯುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದ್ದು ಡಿ.ಇಡಿ ಕೋರ್ಸ್‌ ಕೇಳುವವರೇ ಇಲ್ಲದಂತಾಗಿದೆ.ಈಗಾಗಲೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿ ವಿದರ್ಥಿಗಳು ತಮ್ಮ ಇಚ್ಛೆಗನುಸಾರ ಬೇರೆ ಬೇರೆ ಕೋರ್ಸ್‌, ಪದವಿ ತರಗತಿಗಳಿಗೆ ಪ್ರವೇಶ ಪಡೆದಾಗಿದೆ. ಡಿಇಡಿ ಕಾಲೇಜು­ಗಳು ಮಾತ್ರ ಇನ್ನೂ ಅಭ್ಯರ್ಥಿಗಳಿಗಾಗಿ ಕಾದು ಕುಳಿತಿವೆ. ಈಗ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವೂ ಮುಗಿದಿದೆ.ಆನ್ ಲೈನ್ ಮೂಲಕ ಕೇವಲ ಒಂದು ಸಾವಿರ ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿಯೂ ಹಲವರು ಶಿಕ್ಷಕ­ರಾಗುವ ತಿರ್ಮಾನವನ್ನು ಎರಡನೇ ಅಥವಾ ಮೂರನೇ ಆಯ್ಕೆಯಾಗಿ ಕಾಯ್ದಿರಿಸಿಕೊಂಡು ಅರ್ಜಿ ಸಲ್ಲಿಸಿದ್ದಾರೆ. ಇಂಥವರ ಪೈಕಿ ಹಲವರು ಸಿಇಟಿ ಪರೀಕ್ಷೆ ಬರೆದು ವೃತ್ತಿ ಆಧಾರಿತ ತಾಂತ್ರಿಕ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡಾಗಿದೆ.ಈ ಹಿನ್ನೆಲೆಯ್ಲಲಿ ಸಂದಾಯವಾಗಿ­ರುವ ಒಂದು ಸಾವಿರ ಅರ್ಜಿಗಳ ಪೈಕಿ 500 ರಿಂದ 800 ಮಂದಿ ಮಾತ್ರ ಡಿಇಡಿ ಶಿಕ್ಷಣ ಆಯ್ಕೆ­ಮಾಡಿ­ಕೊಳ್ಳಬಹುದು ಎಂದು ಅಂದಾಜಿ­ಸಲಾಗಿದೆ.ಈ ಲೆಕ್ಕಾಚಾರದ ಪ್ರಕಾರ ಸರ್ಕಾರಿ ಕಾಲೇಜುಗಳೂ ಸೇರಿದಂತೆ ನೂರಾರು ಖಾಸಗಿ ಡಿ.ಇಡಿ ಕಾಲೇಜುಗಳು ಮುಚ್ಚು­ವುದು ಬಹುತೇಕ ಖಚಿತ ಎಂಬಂತಾಗಿದೆ.ಇಂಗ್ಲಿಷ್ ಮಾಧ್ಯಮದ ಅನಿ­ವಾರ್ಯತೆ, ಹಳ್ಳಿ ಹಳ್ಳಿಗಳಲ್ಲೂ ತಲೆ ಎತ್ತಿರುವ ಖಾಸಗಿ ಕಾನ್ವೆಂಟ್‌ಗಳಿಂದ ಶಿಕ್ಷಕರಾಗಲು ಪದವೀಧರರಾಗುವುದು ಅನಿವಾರ್ಯ ಎಂಬಂತಾಗಿದೆ. ಬದಲಾದ ಸರ್ಕಾರಿ ನಿಯಮಗಳು ಹಾಗೂ ಇತರ ಕಾರಣಗಳಿಂದಾಗಿ ಶಿಕ್ಷಕರ ಶಿಕ್ಷಣ ತರಬೇತಿ ಪಡೆದರೂ ಉದ್ಯೋಗ ಖಾತರಿ ಇಲ್ಲ. ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆಯೂ ಕ್ಷೀಣಿಸಿ ಸರ್ಕಾರಿ ಶಾಲೆಗಳೂ ಮುಚ್ಚುವ ಹಂತಕ್ಕೆ ಬಂದಿವೆ.ಖಾಸಗಿ ಶಾಲೆಗಳಲ್ಲೂ ಶಿಕ್ಷಕರ ತರಬೇತಿ ಪಡೆದವರನ್ನೇ ನೇಮಕ ಮಾಡಬೇಕು ಎನ್ನುವ ಸರ್ಕಾರದ ಆದೇಶವಿದ್ದರೂ, ಹೆಚ್ಚಿನ ಸಂಸ್ಥೆಗಳು ಇದನ್ನು ಪಾಲಿಸುತ್ತಿಲ್ಲ. ಬಿ.ಎ, ಬಿ.ಎಸ್ಸಿ ಪದವೀಧರರನ್ನೇ ಪ್ರಾಥಮಿಕ ಹಂತದ ಶಿಕ್ಷಕರನ್ನಾಗಿ ನೇಮಿಸಿಕೊಳ್ಳುವುದರಿಂದ ಅಲ್ಲಿಯೂ ತರಬೇತಿ ಪಡೆದವರಿಗೆ ಅವಕಾಶ ಸಿಗುತ್ತಿಲ್ಲ.ಒಂದೊಮ್ಮೆ ನರ್ಸರಿ ಹಂತಕ್ಕೆ ಶಿಕ್ಷಕರಾದರೂ ಎರಡು ಸಾವಿರ ರೂಪಾಯಿಗಿಂತ ಹೆಚ್ಚಿನ ಸಂಬಳ ದೊರೆಯುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಶಿಕ್ಷಕರ ತರಬೇತಿ ಹೊಂದಲು ಯುವ ಸಮುದಾಯ ಮುಂದಾಗುತ್ತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry