ಮಂಗಳವಾರ, ಏಪ್ರಿಲ್ 20, 2021
31 °C

ಡಿಎಂಕೆ ಗುಟ್ಟು: ಯುಪಿಎಗೆ ಇಕ್ಕಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳಿಗಾಲದ ಅಧಿವೇಶನದಲ್ಲಿ ಎಫ್‌ಡಿಐ ಬಿಸಿನವದೆಹಲಿ (ಪಿಟಿಐ): ಬಹು ಬ್ರಾಂಡ್ ಚಿಲ್ಲರೆ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡುವ ನಿರ್ಧಾರದಿಂದ ಈಗಾಗಲೇ `ದೀದಿ~ (ಮಮತಾ ಬ್ಯಾನರ್ಜಿ) ಬೆಂಬಲ ಕಳೆದುಕೊಂಡ ಕೇಂದ್ರದ ಯುಪಿಎ ಸರ್ಕಾರಕ್ಕೆ ಇನ್ನೊಂದು ಅಗ್ನಿ ಪರೀಕ್ಷೆ ಎದುರಾಗುವ ಲಕ್ಷಣಗಳು ಕಾಣುತ್ತಿವೆ.ವಿರೋಧ ಪಕ್ಷಗಳು ಇದೇ 22ರಿಂದ ಆರಂಭವಾಗಲಿರುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಎಫ್‌ಡಿಐ ವಿರುದ್ಧ ಮಂಡಿಸಬಹುದಾದ ನಿರ್ಣಯಗಳ ಬಗ್ಗೆ ತನ್ನ ನಿಲುವು ಏನು ಎಂಬುದನ್ನು ಯುಪಿಎ ಪ್ರಮುಖ ಅಂಗಪಕ್ಷ ಡಿಎಂಕೆ ಇನ್ನೂ ಸ್ಪಷ್ಟಪಡಿಸಿಲ್ಲ. ಇದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. `ತಮಿಳುನಾಡಿನ ಸಣ್ಣ ಹಾಗೂ ಮಧ್ಯಮ ವರ್ತಕರಲ್ಲಿ ಎಫ್‌ಡಿಐ ಬಗ್ಗೆ ಆತಂಕ ಇದೆ. ಇವರೆಲ್ಲ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ~ ಎಂದು ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.ಚೆನ್ನೈನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನಾನು ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಿಗೆ ಚಿತ್ರಕಥೆ ಬರೆದಿದ್ದೇನೆ. ಕುತೂಹಲ ಇದ್ದರೆ ಮಾತ್ರ ಸಿನಿಮಾ ಯಶಸ್ವಿಯಾಗುತ್ತದೆ~ ಎಂದು ನಿಗೂಢವಾಗಿ ಹೇಳಿದರು.ವಿವಾದಿತ ವಿಷಯದ ಬಗ್ಗೆ ಇತರ ರಾಜಕೀಯ ಪಕ್ಷಗಳು ನಿಲುವನ್ನು ತಿಳಿದುಕೊಳ್ಳಲು ರಹಸ್ಯ ಸಮಾಲೋಚನೆಗೂ ಡಿಎಂಕೆ ವೇದಿಕೆ ಸಿದ್ಧಪಡಿಸಿಕೊಂಡಿದೆ. ಎಫ್‌ಡಿಐ ವಿರುದ್ಧ ಸಂಸತ್‌ನಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಮಂಡಿಸಲಿರುವ ಅವಿಶ್ವಾಸ ನಿರ್ಣಯ ಹಾಗೂ ಮತಕ್ಕೆ ಹಾಕಲು ಅವಕಾಶ ನೀಡುವಂತೆ ಎಡಪಕ್ಷಗಳು ಮಂಡಿಸಲಿರುವ ನಿರ್ಣಯದ ಹಿನ್ನೆಲೆಯಲ್ಲಿ ಅದು ಈ ಪ್ರಯತ್ನಕ್ಕೆ ಮುಂದಾಗಿದೆ.ಬಿಜೆಪಿ ಕಸರತ್ತು: ಎಫ್‌ಡಿಐಗೆ ಅವಕಾಶ ನೀಡುವ ಕೇಂದ್ರದ ನಿರ್ಧಾರವನ್ನು ಅಧಿವೇಶನದಲ್ಲಿ ಒಗ್ಗಟ್ಟಿನಿಂದ ವಿರೋಧಿಸಲು ಬಿಜೆಪಿ ಅಖಾಡ ಸಜ್ಜುಗೊಳಿಸುತ್ತಿದೆ. ಈ ಸಂಬಂಧ ಎನ್‌ಡಿಎ ಮಿತ್ರಪಕ್ಷಗಳು ಹಾಗೂ ಇತರ ರಾಜಕೀಯ ಪಕ್ಷಗಳೊಂದಿಗೆ ಜಂಟಿ ಕಾರ್ಯತಂತ್ರ ಹೆಣೆಯುವ ಕಸರತ್ತು ಮಾಡುತ್ತಿದೆ.`ಎಫ್‌ಡಿಐ ವಿಷಯದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಅಧಿವೇಶನದಲ್ಲಿ ಖಂಡತುಂಡವಾಗಿ ವಿರೋಧಿಸಲಾಗುತ್ತದೆ. ಇದು ದೇಶದ ಹಿತಾಸಕ್ತಿಗೆ ವಿರುದ್ಧವಾದ ತೀರ್ಮಾನ~ ಎಂದು ಪಕ್ಷದ ವಕ್ತಾರ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.ಇದೇ 21ರಂದು ಎನ್‌ಡಿಎ ಮಿತ್ರಪಕ್ಷಗಳು ಜಂಟಿ ಕಾರ್ಯತಂತ್ರ ರೂಪಿಸಲು ಸಭೆ ಸೇರುವ ಸಾಧ್ಯತೆ ಕೂಡ ಇದೆ.

ಎಫ್‌ಡಿಐ ವಿಷಯದಲ್ಲಿ ಸರ್ಕಾರವನ್ನು ಮಣಿಸಲು ಉಭಯ ಸದನಗಳಲ್ಲಿ ಸಂಸದರ ಬೆಂಬಲ ಇರುವುದಾಗಿ ಬಿಜೆಪಿ ಹೇಳಿಕೊಳ್ಳುತ್ತಿದ್ದರೂ, ಎನ್‌ಡಿಎ ಈ ವಿಷಯವನ್ನು ಮತಕ್ಕೆ ಹಾಕಬೇಕೆಂದು ಪಟ್ಟು ಹಿಡಿಯುವ ಸಾಧ್ಯತೆ ಇಲ್ಲ.ನಿರ್ಣಯ ಮಂಡಿಸುವುದಕ್ಕೆ ಅಧ್ಯಕ್ಷರು ಹಾಗೂ ಸಭಾಪತಿ ಅವಕಾಶ ಮಾಡಿಕೊಡದಿದ್ದಲ್ಲಿ ವಿರೋಧ ಪಕ್ಷಗಳ ಲೆಕ್ಕಾಚಾರ ತಲೆಕೆಳಗಾದರೂ ಅಚ್ಚರಿ ಇಲ್ಲ. ಮತಕ್ಕೆ ಹಾಕದೇ ಚರ್ಚೆ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.ಚರ್ಚೆಗೆ ಕೋರಿ ನೋಟಿಸ್: `ಮತಕ್ಕೆ ಅವಕಾಶ ನೀಡುವ ನಿಯಮದ ಅಡಿಯಲ್ಲಿ ಎಫ್‌ಡಿಐ ಕುರಿತು ಸೂಕ್ತ ಚರ್ಚೆಗೆ ಕೋರಿ ಉಭಯ ಸದನಗಳಿಗೂ ನೋಟಿಸ್‌ಗಳನ್ನು ಸಲ್ಲಿಸಲಾಗಿದೆ~ ಎಂದು ಸಿಪಿಎಂ ಹೇಳಿದೆ.`ಬಹು ಬ್ರಾಂಡ್ ಚಿಲ್ಲರೆ ವಲಯದಲ್ಲಿ ಎಫ್‌ಡಿಐಗೆ ಅವಕಾಶ ನೀಡಲು ಸಂಸತ್ ನಿರ್ಧರಿಸಬೇಕಾಗುತ್ತದೆ. ಇದೊಂದು ಆಡಳಿತಾತ್ಮಕ ತೀರ್ಮಾನವೆಂದು ಸರ್ಕಾರ ನೆಪ ಹೇಳುವಂತಿಲ್ಲ~ ಎಂದು ಪಕ್ಷದ ಮುಖಂಡ ಸೀತಾರಾಮ್ ಯೆಚೂರಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.