ಡಿಎಂಡಿಕೆ ಸದಸ್ಯರಿಗೆ ಅರ್ಧಚಂದ್ರ

7

ಡಿಎಂಡಿಕೆ ಸದಸ್ಯರಿಗೆ ಅರ್ಧಚಂದ್ರ

Published:
Updated:

ಚೆನ್ನೈ (ಪಿಟಿಐ): ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಮತ್ತು ವಿರೋಧಪಕ್ಷದ ನಾಯಕ, ಡಿಎಂಡಿಕೆ ಮುಖಂಡ ವಿಜಯಕಾಂತ್ ನಡುವೆ ಬುಧವಾರ ತಮಿಳುನಾಡು ವಿಧಾನಸಭೆಯಲ್ಲಿ ತೀವ್ರ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ವಿಜಯಕಾಂತ್ ಸೇರಿದಂತೆ ಡಿಎಂಡಿಕೆಯ ಸದಸ್ಯರನ್ನು ಸದನದಿಂದ ಹೊರಹಾಕಿದ ಘಟನೆ ನಡೆಯಿತು.ಸರ್ಕಾರವು ಇತ್ತೀಚೆಗೆ ಬಸ್ ದರ ಮತ್ತು ಹಾಲಿನ ದರ ಏರಿಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಮತ್ತು ಡಿಎಂಡಿಕೆ ಪಕ್ಷಗಳ ನಡುವೆ ಉಂಟಾದ ಮಾತಿನ ಸಮರ ಕ್ರಮೇಣ ಜಯಲಲಿತಾ ಮತ್ತು ವಿಜಯಕಾಂತ್ ಅವರ ನಡುವಿನ ವಾಗ್ವಾದವಾಗಿ ಪರಿವರ್ತನೆ ಆಯಿತು.ಎರಡೂ ಪಕ್ಷಗಳ ಸದಸ್ಯರು ತಮ್ಮ ಆಸನದಿಂದ ಎದ್ದು ಪರಸ್ಪರ ಕೈ ಕೈ ಮಿಲಾಯಿಸಲು ಯತ್ನಿಸಿದಾಗ ಸದನದಲ್ಲಿ ಕೋಲಾಹಲ ಎದ್ದಿತು.ಆಡಳಿತ ಪಕ್ಷದ ಸದಸ್ಯರತ್ತ ಕೆಲವು ಕೀಳು ಮಟ್ಟದ ಸನ್ನೆಗಳನ್ನು ಪ್ರದರ್ಶಿಸಿದ ವಿಜಯಕಾಂತ್ ಅವರ ವರ್ತನೆಯನ್ನು ಟೀಕಿಸಿದ ಜಯಲಲಿತಾ, ಕಳೆದ ಚುನಾವಣೆಯಲ್ಲಿ ಡಿಎಂಡಿಕೆಯೊಂದಿಗೆ ತಮ್ಮ ಪಕ್ಷವು ಕೈಜೋಡಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದರು.ಸದನದಲ್ಲಿ ಪ್ರತಿಪಕ್ಷ ತೋರಿದ ವರ್ತನೆಯನ್ನು ಸ್ಪೀಕರ್ ಡಿ. ಜಯಕುಮಾರ್ ಅವರು ಹಕ್ಕು ಬಾಧ್ಯತಾ ಸಮಿತಿಯ ಪರಿಶೀಲನೆಗೆ ಒಪ್ಪಿಸಿದರು.`ವಿಜಯಕಾಂತ್ ಅವರ ವರ್ತನೆಯು ಹೇಸಿಗೆ ಹುಟ್ಟಿಸುವಂತಹದ್ದು. ಅರ್ಹತೆ ಇಲ್ಲದ ವ್ಯಕ್ತಿಗಳೆಲ್ಲ ಉನ್ನತ ಸ್ಥಾನಕ್ಕೆ ಏರಿದರೆ ಏನಾಗುತ್ತದೆ ಎಂಬುದನ್ನೂ ಇದು ತೋರಿಸುತ್ತದೆ~ ಎಂದು ಮುಖ್ಯಮಂತ್ರಿ ಜಯಲಲಿತಾ ಟೀಕಿಸಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆಯು ಡಿಎಂಡಿಕೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ತಮ್ಮ ಪಕ್ಷವು ಅವರೊಂದಿಗೆ ಮೈತ್ರಿ ಮಾಡಿ ಕೊಳ್ಳದಿದ್ದರೂ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿತ್ತು ಎಂದೂ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry