ಡಿಕೆಶಿ ವಿರುದ್ಧ ಕೆಂಡ ಕಾರಿದ ತೇಜಸ್ವಿನಿ

7

ಡಿಕೆಶಿ ವಿರುದ್ಧ ಕೆಂಡ ಕಾರಿದ ತೇಜಸ್ವಿನಿ

Published:
Updated:
ಡಿಕೆಶಿ ವಿರುದ್ಧ ಕೆಂಡ ಕಾರಿದ ತೇಜಸ್ವಿನಿ

ಕನಕಪುರ: ಕ್ಷೇತ್ರದಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ಅವರ ದಬ್ಬಾಳಿಕೆ ಮತ್ತು ಸರ್ವಾಧಿಕಾರಿ ಧೋರಣೆಯನ್ನು ತೊಲಗಿಸಿ ಮೂಲ ಕಾಂಗ್ರೆಸ್ ಸಂಸ್ಕೃತಿಯನ್ನು ಪ್ರತಿಷ್ಠಾಪಿಸುವುದೇ ನನ್ನ ಮುಂದಿರುವ ಮುಖ್ಯ ಗುರಿ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಗುಡುಗಿದರು.

ತಾಲ್ಲೂಕಿನ ಪ್ರಸಿದ್ಧ ಕಬ್ಬಾಳಮ್ಮ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಜನ ಜಾನುವಾರು ಒದ್ದಾಡುವಂತಹ ಪರಿಸ್ಥಿತಿ ಇದೆ. ತಾಲ್ಲೂಕಿನಾದ್ಯಂತ ಭೀಕರ ಬರಗಾಲ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಶಿವಕುಮಾರ್ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದು ಅವರಿಗೆ ನಾಚಿಕೆಯಾಗಬೇಕು ಎಂದು ಕೆಂಡ ಕಾರಿದರು.

ಕಾಂಗ್ರೆಸ್‌ನ ಎಲ್ಲ ವರ್ಗದ ನಾಯಕರು ತಮ್ಮ ಹುಟ್ಟುಹಬ್ಬ, ವೈಯಕ್ತಿಕ ಸಭೆ ಸಮಾರಂಭಗಳಿಂದ ದೂರವಾಗಿದ್ದಾರೆ. ಬರಗಾಲ ಪೀಡಿತ ಪ್ರದೇಶಗಳಿಗೆ ಹೋಗಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಡಿಕೆಶಿ ತಮ್ಮ ಹುಟ್ಟುಹಬ್ಬದ ನೆಪದಲ್ಲಿ ಕನಕಪುರ ಪಟ್ಟಣದಾದ್ಯಂತ ಶುಭಾಶಯ ಕೋರುವ ಲಕ್ಷಾಂತರ ರೂಪಾಯಿಗಳ ವೆಚ್ಚದ ಫ್ಲೆಕ್ಸ್‌ಗಳನ್ನು ಹಾಕಿಸಿಕೊಂಡಿದ್ದಾರೆ. ಅವರ ಈ ವರ್ತನೆ ನಿಜಕ್ಕೂ ಹೇಸಿಗೆಯನ್ನು ಹುಟ್ಟಿಸುತ್ತದೆ. ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ ಇಲ್ಲಿನ ಚುನಾವಣಾಧಿಕಾರಿ ಏನು ಮಾಡುತ್ತಿದ್ದಾರೆ? ಇಲ್ಲಿ ಯಾವುದೇ ನೀತಿ ಸಂಹಿತೆ ಜಾರಿಯಲ್ಲಿ ಇಲ್ಲವೇ ಎಂದು ಅವರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಡಿ.ಕೆ.ಶಿವಕುಮಾರ್ ತಾಲ್ಲೂಕಿನ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೆ. ಸ್ಥಳೀಯ ಖನಿಜ ಸಂಪತ್ತನ್ನು ನಾಶ ಮಾಡುತ್ತಾ ಎಲ್ಲರನ್ನೂ ಹೆದರಿಸಿ, ಬೆದರಿಸಿ ಸರ್ವಾಧಿಕಾರಿ ಧೋರಣೆಯಿಂದ ವರ್ತಿಸುತ್ತಿದ್ದಾರೆ. ಕನಕಪುರ ಸುಸ್ಥಿತಿಯಲ್ಲಿ ಇಲ್ಲ. ಇಲ್ಲಿನ ಜನತೆಯಲ್ಲಿ ಆತಂಕ, ಭಯ ಮಡುಗಟ್ಟಿದೆ. ಅವರು ತಮ್ಮ ದುಡ್ಡಿನ ಬಲದಿಂದ ಎಲ್ಲರನ್ನೂ ಬಗ್ಗುಬಡಿಯಲು ಹೊರಟಿದ್ದಾರೆ. ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷವೇನೂ ಇವರ ಸ್ವಂತ ಆಸ್ತಿಯಲ್ಲ. ಕ್ಷೇತ್ರಕ್ಕೆ ಈಗಾಗಲೇ 25 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಯಾರು ಚುನಾವಣೆಗೆ ನಿಲ್ಲಬೇಕು ಎಂಬುದನ್ನು ಸ್ವತಃ ಸೋನಿಯಾ ಗಾಂಧಿಯವರೇ ಪ್ರಕಟಿಸುತ್ತಾರೆ ಎಂದರು.

ಪಕ್ಕದ ಕನಕಪುರದಲ್ಲಿ ಕಾಂಗ್ರೆಸ್ ಪಕ್ಷವು ಮೂಲ ಕಾಂಗ್ರೆಸ್ಸಿಗರ ಬಲದಿಂದ ಸಾಕಷ್ಟು ಸದೃಢವಾಗಿದೆ. ಶಿವಕುಮಾರ್ ಇಲ್ಲಿಯೇ ಚುನಾವಣೆಗೆ ನಿಲ್ಲುವ ಬದಲು ಬೇಕಾದರೆ  ರಾಮನಗರದಲ್ಲಿ ನಿಂತು ಗೆದ್ದುಬರಲಿ. ತಮ್ಮ ಪ್ರಭಾವ ಎಷ್ಟಿದೆ ಎಂಬುದನ್ನು ಪ್ರದರ್ಶಿಸಲಿ ಎಂದು ಅವರು ಸವಾಲು ಹಾಕಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಿರುವ ಶಿವಕುಮಾರ್‌ಗೂ ಕೂಡಾ ಮುಂದೊಂದು ದಿನ ಯಡಿಯೂರಪ್ಪನವರಿಗೆ ಆಗಿರುವ ಗತಿಯೇ ಬಂದೊದಗುತ್ತದೆ. ಇವರ ಎಲ್ಲಾ ಅನ್ಯಾಯ ಅಕ್ರಮಗಳಿಗೂ ಶೀಘ್ರದಲ್ಲಿಯೇ ಇತಿಶ್ರೀ ಹಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಶಿವಕುಮಾರ್ ಕ್ಷೇತ್ರದಲ್ಲಿನ ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡಲು ಹೊರಟಿದ್ದಾರೆ. ಆದರೆ ಇದು ಎಂದಿಗೂ ಸಾಧ್ಯವಿಲ್ಲ. ಅವರ ಸರ್ವಾಧಿಕಾರಿ ಧೋರಣೆಯನ್ನು ಕೊನೆಗಾಣಿಸಿ ಸೋನಿಯಾ ಗಾಂಧಿಯವರ ಆಶಯಗಳಿಗೆ ಅನುಗುಣವಾದ ಮೂಲ ಕಾಂಗ್ರೆಸ್ ಅನ್ನು ಕ್ಷೇತ್ರದಲ್ಲಿ ಮತ್ತೆ ಪ್ರವರ್ಧಮಾನಕ್ಕೆ ತಂದೇ ತರುತ್ತೇನೆ. ಮತದಾರರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ ಎಂದು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಡಿ.ಕೆ.ಶಿವಕುಮಾರ್ ಅವರಿಂದ ಕಡೆಗಣಿಸ್ಪಲ್ಟಟ್ಟಿರುವ ಹಲವಾರು ಸ್ಥಳೀಯ ನಾಯಕರು ತೇಜಸ್ವಿನಿ ಅವರ ಜೊತೆಯಲ್ಲಿದ್ದರು.

ಇದೇ ವೇಳೆ ಅವರು ತಾಲ್ಲೂಕಿನ ಸಾತನೂರು ಹೋಬಳಿಯ ತೋಟಳ್ಳಿ, ಸಾತನೂರು, ಅರೆಕಟ್ಟೆ ದೊಡ್ಡಿ ಸೇರಿದಂತೆ ಕೆಲವು ಗ್ರಾಮಗಳಿಗೆ ಭೇಟಿ ಮತದಾರರ ಕಷ್ಟ ಸುಖ ವಿಚಾರಿಸಿದರು.

`ತೇಜಸ್ವಿನಿ ಜೆಡಿಎಸ್-ಬಿಜೆಪಿ ಏಜೆಂಟ್~

ಕನಕಪುರ: ತೇಜಸ್ವಿನಿ ಕಾಂಗ್ರೆಸ್ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ.  ಅವರು ಜೆಡಿಎಸ್ ಮತ್ತು ಬಿಜೆಪಿಯವರ ಏಜೆಂಟರಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ತೇಜಸ್ವಿನಿ ರಮೇಶ್ ಅವರ ಹೇಳಿಕೆ ಕುರಿತಂತೆ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಅವರು, ತೇಜಸ್ವಿನಿ ಎಚ್.ಡಿ. ಕುಮಾರಸ್ವಾಮಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಅವರಿಂದ ನನಗ್ಯಾವುದೇ ನಷ್ಟವಿಲ್ಲವೆಂದು ಹೇಳಿದರು.  

ನಾನು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಅದರಂತೆಯೇ ಕೆಲಸ ಮಾಡುತ್ತಿದ್ದೇನೆ. ನಾನು ಏನೆಂಬುದನ್ನು ಈ ಕ್ಷೇತ್ರದ ಜನತೆ ನೋಡಿದ್ದಾರೆ. 25 ವರ್ಷಗಳಿಂದ ನನ್ನನ್ನು ಆಶೀರ್ವದಿಸಿರುವ ಈ ಕ್ಷೇತ್ರದ ಜನತೆಯ ಸಲಹೆ ಸಹಕಾರ ನನಗೆ ಮುಖ್ಯವೇ ಹೊರತು ಮೂರನೇ ವ್ಯಕ್ತಿ ಸಲಹೆ ಸಹಕಾರ ಬೇಕಿಲ್ಲ ಎಂದು ಅವರು ಹೇಳಿದರು. ತೇಜಸ್ವಿನಿ ಚುನಾವಣೆಯಲ್ಲಿ ಸೋತಮೇಲೆ ಇತ್ತಕಡೆ ಸುಳಿಯದೆ ಕಣ್ಮರೆಯಾಗಿದ್ದರು. ಈಗ ಇದ್ದಕ್ಕಿದ್ದಂತೆ ಕ್ಷೇತ್ರವನ್ನು ನೆನೆಸಿಕೊಂಡು ಕ್ಷೇತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಸಲಹೆ ಸಹಕಾರ ನನಗೆ ಬೇಕಿಲ್ಲ ಎಂದೂ ಶಿವಕುಮಾರ್ ಛೇಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry