ಡಿಕೆಶಿ ವಿರುದ್ಧ ದಾಖಲೆ ಬಿಡುಗಡೆ

7
ಅಕ್ರಮ ಅದಿರು ಸಾಗಣೆ ಮತ್ತು ಭೂ ಕಬಳಿಕೆ ಆರೋಪ

ಡಿಕೆಶಿ ವಿರುದ್ಧ ದಾಖಲೆ ಬಿಡುಗಡೆ

Published:
Updated:
ಡಿಕೆಶಿ ವಿರುದ್ಧ ದಾಖಲೆ ಬಿಡುಗಡೆ

ಹುಬ್ಬಳ್ಳಿ: ‘ಅದಿರು ಅಕ್ರಮ ಸಾಗಣೆಗೆ ಸಂಬಂಧಿಸಿ­ದಂತೆ ಸುಪ್ರೀಂ ಕೋರ್ಟಿನ ಹಸಿರು ಪೀಠದಲ್ಲಿರುವ ಹಾಗೂ ಭೂ­ಕಬಳಿಕೆಗೆ ಸಂಬಂಧಿಸಿದಂತೆ ಬೆಂಗ­ಳೂರು ಲೋಕಾ­ಯುಕ್ತ ಕೋರ್ಟ್‌­ನಲ್ಲಿ ಬಾಕಿ ಇರುವ ಪ್ರಕರಣಗಳ ವಿಚಾರಣೆ ಪೂರ್ಣ­ವಾಗು­ವವರೆಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಸಂಪುಟದಿಂದ ಹೊರಗಿಡಬೇಕು’ ಎಂದು ಧಾರವಾಡ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಸೋಮವಾರ ಇಲ್ಲಿ ಆಗ್ರಹಿಸಿ, ಕೆಲವು ಪೂರಕ ದಾಖಲೆಗಳನ್ನು ಬಿಡುಗಡೆ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಅವರು ಬಿಡು­ಗಡೆ ಮಾಡಿದ ಈ ದಾಖಲೆಗಳು, ‘ಆಗಿನ ಮುಖ್ಯಮಂತ್ರಿಗಳಾದ ಎಸ್‌.ಎಂ. ಕೃಷ್ಣ ರಕ್ಷಣೆಯಲ್ಲಿ ಮತ್ತು ಧರ್ಮಸಿಂಗ್‌ ಅವಧಿಯಲ್ಲಿ ಶಿವಕುಮಾರ್‌ ಅಧಿಕಾರ ದುರುಪಯೋಗ ಪಡಿಸಿಕೊಂಡು ಮೈಸೂರು ಮಿನರಲ್‌ ಲಿಮಿಟೆಡ್‌ (ಎಂಎಂಎಲ್‌) ನಿಂದ 10.80 ಲಕ್ಷ ಟನ್‌ ಅದಿರನ್ನು ಎಂಟು ಅದಿರು ಕಂಪೆನಿ­ಗಳ ಹೆಸರಿನಲ್ಲಿ ಕಡಿಮೆ ದರದಲ್ಲಿ ಖರೀದಿಸಿ, ಅಕ್ರಮವಾಗಿ ಸಾಗಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದ್ದಾಗಿವೆ.ಸ್ವತಂತ್ರ ತನಿಖೆಗೆ ಒತ್ತಾಯ: ‘ಕೃಷ್ಣ ಅವಧಿಯಲ್ಲಿ ಆರಂಭಗೊಂಡ ಶಿವ­ಕುಮಾರ್‌ ಅವರ ಅಕ್ರಮ ವ್ಯವ­ಹಾರವು ಧರ್ಮಸಿಂಗ್‌ ಮತ್ತು ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ­ಯಾಗಿದ್ದ ಅವಧಿಯಲ್ಲೂ ಮುಂದುವರಿ­ದಿತ್ತು ಎಂಬುದು ಈ ದಾಖಲೆಗಳಿಂದ ಮೇಲ್ನೋಟಕ್ಕೆ ಸಾಬೀತಾಗಿದೆ. ಅವರ ವಿರುದ್ಧದ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. ಆರೋಪಗಳ ಕುರಿತು ಪ್ರಾಮಾಣಿಕ, ನಿಷ್ಠಾವಂತ ನ್ಯಾಯಾ­ಧೀಶ­­ರಿಂದ ಸ್ವತಂತ್ರ ತನಿಖೆಗೆ ಒಳಪಡಿಸ­ಬೇಕು. ಅಲ್ಲಿಯವರೆಗೆ ಅವರನ್ನು ಸಂಪುಟದಿಂದ ಹೊರಗಿಡಬೇಕು’ ಎಂದೂ ಒತ್ತಾಯಿ­ಸಿದರು.‘ಅಕ್ರಮ ಗಣಿಗಾರಿಕೆಗೆ ಸಂಬಂಧಿ­ಸಿದಂತೆ ಸಮಾಜ ಪರಿವರ್ತನಾ ಸಮು­ದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾ­ಸಕ್ತಿ ಮೊಕದ್ದಮೆಯನ್ವಯ ಸುಪ್ರೀಂ ಕೋರ್ಟ್‌ ಆದೇಶದಂತೆ ಕೇಂದ್ರ ಉನ್ನ­ತಾ­ಧಿಕಾರ ಸಮಿತಿ (ಸಿಇಸಿ) ವರದಿ ಸಲ್ಲಿಸಬೇಕಿತ್ತು. ಆದರೆ ಇನ್ನೂ ಸಿಇಸಿ ವರದಿ ಸಲ್ಲಿಸಿಲ್ಲ. ಈ ವಿಷಯವನ್ನು ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದಾಗ, ಮರು ಪರಿಶೀಲನಾ ಅರ್ಜಿ ಸಲ್ಲಿಸು­ವಂತೆ ಸೂಚಿಸಿತ್ತು.2013ರ ಸೆಪ್ಟೆಂಬರ್‌­ನಲ್ಲಿ ಸಲ್ಲಿಸಲಾದ ಈ ಅರ್ಜಿಯ ವಿಚಾರಣೆ ಬಾಕಿ ಇದೆ. ಶಿವಕುಮಾರ್‌ ಅವರು ಎಂಎಂಎಲ್‌­ನಿಂದ ಕಡಿಮೆ ದರದಲ್ಲಿ ಅದಿರು ಖರೀದಿಸಿ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟು ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿ­ಯೊಂದಿಗೆ ಸಲ್ಲಿಸಲಾಗಿದೆ’ ಎಂದರು.‘2005ರಲ್ಲಿ ಧರ್ಮಸಿಂಗ್‌ ಅವರಿಗೆ ಪತ್ರ ಬರೆದಿದ್ದ ಶಿವಕುಮಾರ್‌, ಸಹೋ­ದರ ಡಿ.ಕೆ. ಸುರೇಶ್‌ಕುಮಾರ್‌ (ಹಾಲಿ ಸಂಸದ) ಪಾಲುದಾರನಾಗಿದ್ದ ವಿಕ್ಟರಿ ಎಕ್ಸ್‌ಪೋರ್ಟ್‌ ಸಹಿತ ಎಂಟು ಕಂಪೆನಿ­ಗಳಿಗೆ ಎಂಎಂಎಲ್‌ನಿಂದ ಅದಿರು ಪೂರೈಸುವಂತೆ ಮನವಿ ಮಾಡಿದ್ದರು. ಎಂಎಂಎಲ್‌ನಿಂದ 2003ರವರೆಗೆ ಈ ಕಂಪೆನಿಗಳು 10.80 ಲಕ್ಷ ಮೆಟ್ರಿಕ್‌ ಟನ್‌ ಅದಿರನ್ನು ಅತಿ ಕಡಿಮೆ ದರದಲ್ಲಿ ಖರೀದಿಸಿವೆ. ಸಚಿವರಾಗಿದ್ದ ವಿ. ಮುನಿಯಪ್ಪ ಮತ್ತು ಪಿ.ಜಿ.ಆರ್‌. ಸಿಂಧ್ಯಾ ಹಾಗೂ ಎಂಎಂಎಲ್‌ನ ಉನ್ನತ ಅಧಿಕಾರಿಗಳೂ ಈ ಅಕ್ರಮ ಅದಿರು ಸಾಗಣೆಗೆ ಕೈಜೋಡಿಸಿದ್ದಾರೆ’ ಎಂದು ಆರೋಪಿಸಿದರು.ಭೂ ಕಬಳಿಕೆ: ಶಿವಕುಮಾರ್‌ ಅವರು ನಗರಾ­ಭಿವೃದ್ಧಿ ಸಚಿವರಾಗಿದ್ದಾಗ ಬೆಂಗಳೂರಿನ ಕೆ.ಆರ್‌,ಪುರ ಬಳಿಯ ಬೆನ್ನಿಗಾನಹಳ್ಳಿ­ಯಲ್ಲಿ ಬಿ.ಕೆ. ಶ್ರೀನಿವಾಸ ಎಂಬುವವರ ಹೆಸರಿನಲ್ಲಿದ್ದ 4.20 ಎಕರೆಯನ್ನು 1986 ಡಿಸೆಂಬರ್‌ 18ರಂದು ಸರ್ಕಾರ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತ್ತು. ರಾಜ್ಯ ಭೂಕಂದಾಯ ಕಾಯ್ದೆ ಉಲ್ಲಂಘಿಸಿ ಈ ಜಾಗ ಖರೀದಿ ಒಪ್ಪಂದ ಮಾಡಿಕೊಂಡು 2003 ಡಿಸೆಂಬರ್‌ 18ರಂದು ಶಿವಕುಮಾರ್‌ ಖರೀದಿ­ಸಿದ್ದರು.‘ಕೈಗಾರಿಕೆಗೆ ಮೀಸಲಿಟ್ಟಿದ್ದ ಈ ಜಾಗವನ್ನು ಖರೀದಿಸಿದ ಎರಡೇ ತಿಂಗಳ ಒಳಗೆ  (2004 ಫೆಬ್ರುವರಿ 17) ವಿಶೇಷ ಜಿಲ್ಲಾಧಿಕಾರಿ ಮೂಲಕ ಬಡಾವಣೆ ರಚನೆಗೆ ಶಿವಕುಮಾರ್‌ ಭೂಮಿ ಪರಿವರ್ತನೆ ಮಾಡಿಸಿಕೊಂಡಿ­ದ್ದರು.2004ರಲ್ಲಿ ಬಿ.ಕೆ. ಶ್ರೀನಿವಾಸ ನಿಧನ­ರಾಗಿದ್ದರೂ ಅವರ ಹೆಸರಿನಲ್ಲೇ ಇದ್ದ ಈ ಜಾಗವನ್ನು 2010ರಲ್ಲಿ ಬಿ.ಎಸ್‌. ಯಡಿಯೂರಪ್ಪ ಮುಖ್ಯ­ಮಂತ್ರಿ­­ಯಾಗಿ­ದ್ದಾಗ ಡಿನೋಟಿಫೈ ಮಾಡಲಾಗಿತ್ತು. ಈ ಪ್ರಕರಣ ಲೋಕಾ­ಯುಕ್ತ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ’ ಎಂದು ಹಿರೇಮಠ ಹೇಳಿದರು.ಇನ್ನಷ್ಟು ಸುದ್ದಿ:

ಹಿರೇಮಠಗೆ ಸಿದ್ದರಾಮಯ್ಯ ಸವಾಲು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry