ಮಂಗಳವಾರ, ಜೂನ್ 15, 2021
27 °C

ಡಿಜಿಟಲ್ ಅರ್ಥವ್ಯವಸ್ಥೆ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಪಂಚದಾದ್ಯಂತ ಇರುವ ಅಂತರ್ಜಾಲ ಬಳಕೆದಾರರ ಸಂಖ್ಯೆಯು 2016ರ ಅಂತ್ಯದ ವೇಳೆಗೆ ಒಟ್ಟು ಜಾಗತಿಕ ಜನಸಂಖ್ಯೆಯ ಅರ್ಧದಷ್ಟು ಇರಲಿದೆ ಎಂದು ಸಂಶೋಧನಾ ಸಂಸ್ಥೆ ಗಾರ್ಟ್‌ನರ್ ಅಂದಾಜಿಸಿದೆ.

 

ಸಾಮಾಜಿಕ ಸಂವಹನ ತಾಣಗಳ ಜನಪ್ರಿಯತೆ ಮತ್ತು ಹೆಚ್ಚುತ್ತಿರುವ ಮೊಬೈಲ್ ಕಂಪ್ಯೂಟಿಂಗ್ ಬಳಕೆಯು ವೆಬ್ ಬಳಕೆದಾರರ ಸಂಖ್ಯೆ ಶರವೇಗದಲ್ಲಿ ಬೆಳೆಯುವಂತೆ ಮಾಡಿವೆ.ಅಂತರ್ಜಾಲ ಬಳಕೆದಾರರ ಸಂಖ್ಯೆ ಹೆಚ್ಚಿದಂತೆ  ಡಿಜಿಟಲ್ ಆರ್ಥಿಕತೆ (Digital Eco­no­my) ಕಲ್ಪನೆಯೂ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದೆ. ಇನ್ನು ನಾಲ್ಕೈದು ವರ್ಷಗಳಲ್ಲಿ ಬಳಕೆದಾರ ತನ್ನ ಪ್ರತಿಯೊಂದು ಅಗತ್ಯಗಳಿಗೂ ಅಂತರ್ಜಾಲವನ್ನೇ ಅವಲಂಬಿಸಬೇಕಾದ  ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುತ್ತಾರೆ ವೆಬ್ ಮಾರುಕಟ್ಟೆ ತಜ್ಞರು.ಜಾಗತಿಕ ವೆಬ್ ಬಳಕೆದಾರರ ಸಂಖ್ಯೆ 2010ರಲ್ಲಿ 1.9 ಶತಕೋಟಿಗಳಷ್ಟಿತ್ತು. ಈ ಸಂಖ್ಯೆ 2016ರ ವೇಳೆಗೆ 3 ಶತಕೋಟಿಗಳಿಗೆ ಏರಲಿದೆ. ಒಟ್ಟು ಜಾಗತಿಕ ಜನಸಂಖ್ಯೆಗೆ ಹೋಲಿಸಿದರೆ ಈ ಸಂಖ್ಯೆಯು ಶೇ 45ರಷ್ಟಿದೆ ಎನ್ನುತ್ತದೆ  `ಗಾರ್ಟ್‌ನರ್~.ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್ ಜನಪ್ರಿಯತೆ  ಮತ್ತು ಸಾಮಾಜಿಕ ಮಾಧ್ಯಮಗಳ ಪ್ರಗತಿಯು  ಇಂಟರ್‌ನಟ್ ಅರ್ಥವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಿದೆ.ಡಿಜಿಟಲ್ ಪ್ರಣಾಳಿಕೆ: ಇಂಟರ್‌ನೆಟ್ ಬಳಕೆದಾರರ ಹೆಚ್ಚಳದಿಂದ ಸೃಷ್ಟಿಯಾಗಿರುವ ಹೊಸ ಡಿಜಿಟಲ್ ಅರ್ಥವ್ಯವಸ್ಥೆಯನ್ನು ಗೆಲ್ಲುವುದು ಹೇಗೆ ಎನ್ನುವುದು ಈಗ ಕಂಪೆನಿಗಳು ಮತ್ತು ದೇಶಗಳ ಮುಂದಿರುವ ದೊಡ್ಡ ಸವಾಲು.ಈ ಬೆಳವಣಿಗೆಯಿಂದ ಮುಂದಿನ ಐದು ವರ್ಷಗಳಲ್ಲಿ ವಾಣಿಜ್ಯ ವಹಿವಾಟು ಆಮೂಲಾಗ್ರವಾಗಿ ಬದಲಾಗಲಿದೆ ಎನ್ನುತ್ತದೆ ಜಾಗತಿಕ ವಾಣಿಜ್ಯ ಸಲಹಾ ಸಂಸ್ಥೆ `ಬಾಸ್ಟ್‌ನ್ ಕನ್ಸಲ್ಟಿಂಗ್ ಗ್ರೂಪ್~ (ಬಿಸಿಜಿ) ಸಮೀಕ್ಷೆ ವರದಿ.ಈ ಹಿನ್ನೆಲೆಯಲ್ಲಿ ಕಂಪೆನಿಗಳು ಮತ್ತು ದೇಶಗಳು `ಡಿಜಿಟಲ್ ಆಯವ್ಯಯ ಪತ್ರ (digital balance sheet) ಸಿದ್ಧಪಡಿಸಲು ತಯಾರಾಗುವಂತೆ ಸಲಹೆ ಮಾಡಿದೆ. ನೀತಿ ನಿರೂಪಕರು ಮತ್ತು ಕಂಪೆನಿಗಳ ಕಾರ್ಯನಿರ್ವಾಹಕರು  ಆನ್‌ಲೈನ್ ಅರ್ಥವ್ಯವಸ್ಥೆಯ ಲಾಭ  ಪಡೆದುಕೊಳ್ಳಲು ರೂಪುರೇಷೆ ಸಿದ್ಧಪಡಿಲು ಇದು ಸಕಾಲ ಎಂದಿದೆ.`ಯಾವುದೇ ದೇಶವಾಗಲಿ, ಯಾವುದೇ ಕಂಪೆನಿಯಾಗಲಿ ಇಂಟರ್‌ನೆಟ್ ಬೆಳವಣಿಗೆ ನಿರ್ಲಕ್ಷಿಸಲು ಸಾಧ್ಯವಿಲ್ಲ. ಪ್ರತಿಯೊಂದು ವಾಣಿಜ್ಯ ಅಗತ್ಯತೆಗಳೂ ಆನ್‌ಲೈನ್‌ಗೆ ವರ್ಗಾವಣೆಗೊಳ್ಳುತ್ತಿರುವ ಕಾಲವಿದು ಎನ್ನುತ್ತರೆ `ಬಿಸಿಜಿ~ ಪಾಲುದಾರಿಕೆ ಸಂಸ್ಥೆಯೊಂದರ ಮುಖ್ಯಸ್ಥ ಡೇವಿಡ್ ಡೀನ್.ಸ್ಮಾರ್ಟ್‌ಫೋನ್ ಮತ್ತು ಇಂಟರ್‌ನೆಟ್ ಬಳಕೆಯ ಮುನ್ನುಗ್ಗುವಿಕೆಯು (penetr­ation)  ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಳಿದ ದೇಶಗಳಿಗಿಂತಲೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ `ಬಿಸಿಜಿ~ ಅಂಕಿಅಂಶಗಳು ಈ ದೇಶಗಳು ಮತ್ತು ಕಂಪೆನಿಗಳ ಪಾಲಿಗೆ ಮಹತ್ವದ್ದು ಎನ್ನುತ್ತಾರೆ  ವೆಬ್ ಮಾರುಕಟ್ಟೆ ವಿಶ್ಲೇಷಕ ಜಾರ್ಜ್ ಹಿಲ್ಡ್‌ಬ್ರಂಟ್. `ಜಿ-20~ ದೇಶಗಳ ಒಟ್ಟು ಇಂಟರ್‌ನೆಟ್ ಬಳಕೆದಾರರಲ್ಲಿ ಶೇ 70ರಷ್ಟು ಜನರು ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳನ್ನು ಪ್ರತಿನಿಧಿಸುತ್ತಾರೆ. 2010ನೇ ಸಾಲಿಗೆ ಹೋಲಿಸಿದರೆ ಈ ಸಂಖ್ಯೆಯು ಇನ್ನು ಐದು ವರ್ಷಗಳಲ್ಲಿ ಶೇ 56ರಷ್ಟು ಹೆಚ್ಚಲಿದೆ.

 

ಸದ್ಯ 800 ದಶಲಕ್ಷ ಇಂಟರ್‌ನೆಟ್ ಬಳಕೆದಾರರನ್ನು  ಚೀನಾ ಹೊಂದಿದೆ. ಫ್ರಾನ್ಸ್, ಜರ್ಮನಿ, ಭಾರತ, ಜಪಾನ್, ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳ ವೆಬ್ ಬಳಕೆದಾರರ ಸಂಖ್ಯೆಯೂ ಈ ಸಂಖ್ಯೆಗೆ ಸಮೀಪದಲ್ಲೇ ಇದೆ.ಅನೇಕ ದೇಶಗಳ ಅಂತರ್ಜಾಲ ಬಳಕೆದಾರರಲ್ಲಿ ಶೇ 90ರಷ್ಟು ಜನ ಸಾಮಾಜಿಕ ಸಂವಹನ ತಾಣಗಳನ್ನು ಬಳಸುತ್ತಿದ್ದಾರೆ ಎನ್ನುತ್ತದೆ `ಬಿಸಿಜಿ~ ವರದಿ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇಂಟರ್‌ನೆಟ್ ಮಾರುಕಟ್ಟೆ ಬಳಸಿಕೊಳ್ಳುವುದಕ್ಕಿಂತಲೂ ಪರಿಣಾಮಕಾರಿಯಾಗಿ ಈ ದೇಶಗಳಲ್ಲಿ ವೆಬ್ ಮಾರುಕಟ್ಟೆ ವಿಸ್ತರಣೆಯಾಗಿದೆ.ಆನ್‌ಲೈನ್ ದತ್ತಾಂಶ ಸೃಷ್ಟಿ ಮತ್ತು ಹಂಚಿಕೆಯಲ್ಲಿ ಹೊಸ ಸಾಧ್ಯತೆಗಳನ್ನು ಈ ದೇಶಗಳು ಬಹು ಬೇಗ ಕಂಡುಕೊಂಡಿವೆ ಎನ್ನುತ್ತಾರೆ ಜಾರ್ಜ್. `ಜಿ-20~ ದೇಶಗಳಲ್ಲಿ ವಾರ್ಷಿಕ ಸುಮಾರು 1.3 ಸಹಸ್ರ ಕೋಟಿಗಳಷ್ಟು ಸರಕು  ಆನ್‌ಲೈನ್ ಮೂಲಕವೇ ಗ್ರಾಹಕರ ಮನೆ ಬಾಗಿಲನ್ನು ತಲುಪುತ್ತಿದೆ.ಈ  ದೇಶಗಳ ಆರ್ಥಿಕ ವೃದ್ಧಿ ದರಕ್ಕೆ (ಜಿಡಿಪಿ) ಇಂಟರ್‌ನೆಟ್‌ನ ಕೊಡುಗೆ ಶೇ 2.7ರಷ್ಟಿದೆ. ಡಿಜಿಟಲ್ ಅರ್ಥವ್ಯವಸ್ಥೆಯ ಹೊಸ್ತಿಲಲ್ಲಿ ನಿಂತಿರುವ ದೇಶಗಳು ಭವಿಷ್ಯದ ಪ್ರಗತಿಯ ನೀಲಿನಕ್ಷೆ ಸಿದ್ಧಪಡಿಲು ಇದು ಸಕಾಲ ಎನ್ನುತ್ತಾರೆ ಅವರು.3ನೇ ಸ್ಥಾನದಲ್ಲಿ ಭಾರತ

ಪ್ರಪಂಚದಲ್ಲಿಯೇ ಅತಿ ಹೆಚ್ಚು ಇಂಟರ್‌ನೆಟ್ ಬಳಕೆದಾರರನ್ನು ಹೊಂದಿರುವ ಮೂರನೆಯ ದೇಶ ಭಾರತ. 2011 ಡಿಸೆಂಬರ್ ಅಂತ್ಯದವರೆಗಿನ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 121 ದಶಲಕ್ಷ ಇಂಟರ್‌ನೆಟ್ ಬಳಕೆದಾರರಿದ್ದಾರೆ. ಇವರಲ್ಲಿ ಶೇ 59ರಷ್ಟು ಜನ ಮೊಬೈಲ್ ಮೂಲಕವೇ ಇಂಟರ್‌ನೆಟ್ ಬಳಸುತ್ತಿದ್ದಾರೆ ಎನ್ನುವುದು ವಿಶೇಷ. ದೇಶದಲ್ಲಿ ಸದ್ಯ 169 ಇಂಟರ್‌ನೆಟ್ ಸೇವಾ ಪೂರೈಕೆ ಕಂಪೆನಿಗಳು (ಐಎಸ್‌ಪಿ) ಕಾರ್ಯನಿರ್ವಹಿಸುತ್ತಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.