ಸೋಮವಾರ, ನವೆಂಬರ್ 18, 2019
26 °C

ಡಿಜಿಟಲ್ ಗ್ರಂಥಾಲಯ ಸವಾಲಿಗೊಂದು ಜವಾಬು

Published:
Updated:

ದೇಶದಾದ್ಯಂತ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಮುದ್ರಣವಾಗುತ್ತಿರುವ ಗ್ರಂಥಗಳನ್ನೆಲ್ಲ ಗ್ರಂಥಾಲಯಕ್ಕೆ ಸೇರಿಸಬೇಕೇ? ಹಾಗೆ ಸೇರಿಸಲು ಸಾಧ್ಯವಾಗದಿದ್ದರೆ ಅವುಗಳನ್ನೆಲ್ಲ ಏನು ಮಾಡಬೇಕು? ಇಂತಹ ಪ್ರಶ್ನೆಗಳಿಗೆ ಈಗಿನ ನೂತನ ತಂತ್ರಜ್ಞಾನಗಳು ದಾರಿ ತೋರಿಸುತ್ತಿವೆ.ಮೈಕ್ರೋಫಿಲಂಗಳು ಹಾಗೂ ಇತರ ಮಾಧ್ಯಮಗಳ ಮೂಲಕ ಮುದ್ರಿತ ಗ್ರಂಥಗಳ ಸಂಗ್ರಹ ಕಾರ್ಯ ಈಗಾಗಲೇ ಆರಂಭವಾಗಿದೆ. ಈಗ ಈ ವಿಧಾನವನ್ನು ದಾಟಿ `ಡಿಜಿಟಲ್ ವಿಧಾನ'ದ ಗ್ರಂಥಾಲಯಗಳನ್ನು ಸ್ಥಾಪಿಸುವ ಸುಲಭ ಮಾರ್ಗ ಆವಿಷ್ಕಾರವಾಗಿದ್ದು ಇದೊಂದು ವರದಾನವಾಗಿದೆ. ಈ ಪದ್ಧತಿಯನ್ನು ಅಳವಡಿಸಿಕೊಂಡರೆ ನೂರಾರು ವರ್ಷಗಳಿಂದ ಸಾಂಪ್ರದಾಯಿಕ ರೀತಿಯಲ್ಲಿ ಓದುತ್ತಾ ಬಂದಿರುವ ನಮ್ಮ ಓದುಗರು ಬದಲಾಗುತ್ತಾರೆಯೇ ಎಂಬ ಸಂಶಯ ಸಹಜವಾಗಿಯೇ ಮೂಡುತ್ತದೆ.ಕಂಪ್ಯೂಟರ್ ಬಳಕೆ ಈ ಶತಮಾನದ ಕ್ರಾಂತಿಕಾರಿ ಬದಲಾವಣೆ. ಒಂದು ಕಾಲದಲ್ಲಿ ಅಕ್ಷರ ಜ್ಞಾನ ಇಲ್ಲದವರು ಅಜ್ಞಾನಿಗಳು ಎನ್ನುವ ಕಾಲವಿತ್ತು. ಆದರೆ ಅದೀಗ ಗಣಕ ಯಂತ್ರದ ಬಳಕೆ ಮಾಡದವರು ಅಜ್ಞಾನಿಗಳು ಎಂದು ಬದಲಾಗಿದೆ. ಇದಕ್ಕೆ ಪೂರಕವಾಗಿ ಅನೇಕ ತಂತ್ರಾಂಶಗಳು ಆವಿಷ್ಕಾರಗೊಂಡಿವೆ.ಇತ್ತೀಚೆಗೆ ಜಗತ್ತಿನ ಪ್ರಸಿದ್ಧ ನಿಯತಕಾಲಿಕ `ಟೈಮ್ಸ' ಇನ್ನು ಮುಂದೆ ಮುದ್ರಿತ ರೂಪದಲ್ಲಿ ಪ್ರಕಟವಾಗುವುದನ್ನು ನಿಲ್ಲಿಸಿ ಡಿಜಿಟಲ್ ರೂಪದಲ್ಲೇ  ಪ್ರಕಟವಾಗುತ್ತದೆ ಎನ್ನುವ ಸುದ್ದಿಯು ಮಾಧ್ಯಮಗಳಲ್ಲಿ ಪ್ರಕಟವಾಗಿದೆ.ಡಿಜಿಟಲ್ ಗ್ರಂಥಾಲಯ ಎಂದರೇನು?

ಡಿಜಿಟಲ್ ಗ್ರಂಥಾಲಯಗಳೆಂದರೆ ಜಗತ್ತಿನ ಎಲ್ಲ ವಿಷಯಗಳನ್ನೂ ತಂತ್ರಜ್ಞಾನದ ಮೂಲಕ ಮತ್ತೆ ಮತ್ತೆ ಪಡೆಯುವ ಜ್ಞಾನದ ನಿರಂತರ ಪ್ರವಾಹ ಎನ್ನಬಹುದು. ಇದು ಸಹಸ್ರಾರು ಓದುಗರು ಒಂದೇ ವಿಷಯವನ್ನು ಏಕಕಾಲದಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ಬೇಕಾದರೂ ಪಡೆಯುವ ಒಂದು ಅದ್ಭುತ ಕ್ರಿಯೆ.ಇಂತಹದ್ದೊಂದು ತಂತ್ರಜ್ಞಾನದ ಯೋಚನೆ ಮಾಡಿದವರು ವಿಜ್ಞಾನಿ ಹಾಗೂ ವಿದ್ವಾಂಸ ವ್ಯಾನೆವರ್ ಬುಷ್. 1945ರಲ್ಲಿ ಅವರು ಇದನ್ನು ತಂತ್ರಜ್ಞಾನ ಎನ್ನದೆ ಒಂದು ಪ್ರಯೋಗಾತ್ಮಕ ಕ್ರಿಯೆಯಾಗಿ ಬಳಸಲು ಪ್ರಯತ್ನಿಸಿದ್ದು ಕಂಡುಬರುತ್ತದೆ. ಬಳಿಕ `ಡಿಜಿಟಲ್ ಗ್ರಂಥಾಲಯ' ಎಂಬ ಶಬ್ದವನ್ನು 1988ರಿಂದ ಇತರರು ಬಳಸಲು ಪ್ರಾರಂಭಿಸಿದರು. ಖ್ಯಾತ ವೈಜ್ಞಾನಿಕ ಸಂಸ್ಥೆಗಳಾದ ಎನ್.ಎಸ್.ಎಫ್., ಡಿಎಆರ್‌ಪಿಎ ಹಾಗೂ ನಾಸಾಗಳಲ್ಲಿ 1994ರಲ್ಲಿ ಈ ವ್ಯವಸ್ಥೆಗೆ ಚಾಲನೆ ನೀಡಲಾಯಿತು.ಡಿಜಿಟಲ್ ಗ್ರಂಥಾಲಯ ಬಳಕೆಗಾಗಿ ಅನೇಕ ಸಂಶೋಧಕರು ಮತ್ತು ಬಳಕೆದಾರರು ಈಇ ಣ್ಟಜ ಎಂಬ ವೆಬ್ ತಾಣವನ್ನು ರಚಿಸಿಕೊಂಡು ಇಂತಹದ್ದೊಂದು ಬಳಕೆಯ ವಿಧಾನ, ಅವುಗಳ ಸಂರಕ್ಷಣೆ ಮತ್ತು ಸಾರ್ವಜನಿಕ ಓದುಗರಿಗೆ ಅದು ಲಭ್ಯವಾಗುವಂತಹ ವಿಧಾನಗಳನ್ನು ಸಿದ್ಧಪಡಿಸುವ ಮೂಲಕ  `ಡಿಜಿಟಲ್ ಯುಗ' ಆರಂಭವಾಯಿತು. ಅಮೆರಿಕದಲ್ಲಿ ಡಿಜಿಟಲ್ ಹಾಗೂ ಸಾಂಪ್ರದಾಯಿಕ ಎರಡನ್ನೂ ಒಳಗೊಂಡ ಹೈಬ್ರಿಡ್ ಮಾದರಿಯ ಗ್ರಂಥಾಲಯಗಳನ್ನು ನಾವು ಕಾಣುತ್ತೇವೆ. ಇದರಿಂದ ಪುಸ್ತಕ ಪ್ರೇಮಿಗಳ ಸಾಂಪ್ರದಾಯಿಕ ಓದುಗ ಪ್ರಜ್ಞೆಗೆ ನೋವುಂಟು ಮಾಡದೆ, ಆಧುನಿಕ ಓದುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಓದುಗರಿಗೆ ಡಿಜಿಟಲ್ ಗ್ರಂಥಾಲಯ ಸೇವೆಯನ್ನು ಒದಗಿಸಲಾಗುತ್ತಿದೆ. ಪ್ರಕಟಣಾ ಸಂಸ್ಥೆಗಳೇನೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಇ- ಪುಸ್ತಕಗಳ ಲಕ್ಷಾಂತರ ಮಾಲಿಕೆಗಳು ಪ್ರಕಟವಾಗಿ ಡಿಜಿಟಲ್ ಗ್ರಂಥಾಲಯಗಳಿಗೆ ಸೇರ್ಪಡೆಯಾಗುತ್ತಿವೆ.ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಖ್ಯಾತ ಮಾಹಿತಿ ತಂತ್ರಜ್ಞರಾದ ಪೀಟರ್ ರೋಮನ್ ಮತ್ತು ಹಾಲ್‌ವೇರಿಯನ್ ಅವರ ಪ್ರಕಾರ, ಪ್ರಸ್ತುತ ವಿಶ್ವದಲ್ಲಿ ಒಂದು ವರ್ಷಕ್ಕೆ ಪ್ರಕಟವಾಗುತ್ತಿರುವ ಎಲ್ಲ ಪುಸ್ತಕಗಳು, ಫಿಲಂಗಳು, ಮ್ಯಾಗ್ನೆಟಿಕ್ ಟೇಪುಗಳು, ಆಪ್ಟಿಕಲ್ ತಂತ್ರಜ್ಞಾನದಲ್ಲಿ ಬರುವ ಎಲ್ಲ ವಿಷಯಗಳನ್ನೂ 1.5 ಶತಕೋಟಿ ಮೆಗಾಬೈಟ್‌ನಲ್ಲಿ ಸಂಗ್ರಹಿಸಬಹುದು. ಇದರಿಂದ ಜಗತ್ತಿನ ಯಾವುದೇ ವ್ಯಕ್ತಿ ತನಗೆ ಬೇಕಾದ ವಿಷಯಗಳನ್ನು ಈ ಮಾಧ್ಯಮದಿಂದ ಸುಲಭವಾಗಿ ಪಡೆದುಕೊಳ್ಳಬಹುದು.ವಿಶ್ವದಾದ್ಯಂತ ಸಾಂಪ್ರದಾಯಿಕ ಗ್ರಂಥಾಲಯಗಳು ಸ್ಥಳಾವಕಾಶದ ಸಮಸ್ಯೆಯನ್ನು ಎದುರಿಸುತ್ತಿವೆ. ಅವುಗಳಿಗೆ, ಪ್ರತಿ ವರ್ಷ ಪ್ರಕಟವಾಗುವ ಲಕ್ಷಾಂತರ ಪುಸ್ತಕಗಳು, ನಿಯತಕಾಲಿಕಗಳ ರೂಪದ ಕಾಗದಗಳ ಸಂಗ್ರಹಣೆಯೇ ದೊಡ್ಡ ಸವಾಲಾಗಿದೆ. ಹಿಂದುಳಿದ ದೇಶಗಳಂತೂ ಸಂಪನ್ಮೂಲ ಕೊರತೆಯಿಂದಾಗಿ ಡಿಜಿಟಲ್ ಗ್ರಂಥಾಲಯಗಳ ಮೊರೆ ಹೋಗುತ್ತಿವೆ.ಇತ್ತೀಚಿನ ದಶಕಗಳಲ್ಲಿ ಓದುಗರು ಸಾಂಪ್ರದಾಯಿಕ ಗ್ರಂಥಾಲಯಗಳಿಂದ ದೂರ ಹೋಗುತ್ತಿದ್ದಾರೆ.  ಇದಕ್ಕೆ ಪ್ರಯಾಣ, ಕಾರ್ಯ ಒತ್ತಡ, ಕೆಲಸ ಮಾಡುವ ಅಥವಾ ವಾಸಿಸುವ ಪ್ರದೇಶಗಳಿಂದ ಗ್ರಂಥಾಲಯಗಳು ದೂರ ಇರುವಂತಹ ಸವಾಲುಗಳಿಂದ ಓದುಗರನ್ನು ಕಳೆದುಕೊಳ್ಳುತ್ತಿದ್ದೇವೆ. ಡಿಜಿಟಲ್ ಗ್ರಂಥಾಲಯಗಳಿಂದ ಕುಳಿತ ಸ್ಥಳದಲ್ಲೇ  ಓದುಗರನ್ನು ಪ್ರಚಲಿತ ಜ್ಞಾನದೆಡೆಗೆ ಮರು ಸೇರ್ಪಡೆ ಮಾಡಬಹುದು.ಈ ವ್ಯವಸ್ಥೆಯನ್ನು ಈಗಿರುವ ಸಾಂಪ್ರದಾಯಿಕ ಗ್ರಂಥಾಲಯಗಳಲ್ಲಿ ಇರುವ ಸ್ಥಳಾವಕಾಶದಲ್ಲೇ ಆನ್‌ಲೈನ್ ಮೂಲಕ ಮಾಡುವುದರಿಂದ ತನ್ನಲ್ಲಿರುವ ಎಲ್ಲ ಅಮೂಲ್ಯ ಕೃತಿಗಳು ಹಾಗೂ ಹೊಸ ವಿಷಯಗಳನ್ನು ನಿರಂತರವಾಗಿ ಗ್ರಾಹಕರಿಗೆ ವಿನಿಮಯ ಮಾಡಬಹುದು.ಇದರಿಂದ ಸ್ಥಳಾಭಾವ, ಹೆಚ್ಚಿನ ಸಿಬ್ಬಂದಿ, ಸಮಯದ ಉಳಿತಾಯ ಆಗುವುದರಲ್ಲಿ ಸಂಶಯವಿಲ್ಲ.ಡಿಜಿಟಲ್ ಸಂಗ್ರಹಕ್ಕೆ ಮುದ್ರಿತ ಮಾಧ್ಯಮಗಳಲ್ಲಿ ಇರುವಂತೆ ಹಕ್ಕುಸ್ವಾಮ್ಯ ಶಾಸನ ರಚನೆಯಾಗಿಲ್ಲ. 1923ಕ್ಕಿಂತ ಮೊದಲು ಪ್ರಕಟವಾದ ಪುಸ್ತಕಗಳನ್ನು ಡಿಜಿಟಲ್ ಗ್ರಂಥಾಲಯಗಳ ವ್ಯಾಪ್ತಿಗೆ ತರಲು ಯಾವುದೇ ಕಾನೂನಿನ ತೊಡಕಿಲ್ಲ. 2010ರಿಂದ ಈಚೆಗೆ ಪ್ರಕಟವಾದ ಶೇ 5ರಷ್ಟು ಪುಸ್ತಕಗಳು ಡಿಜಿಟಲ್ ಆವೃತ್ತಿಯಲ್ಲಿ ಸಿಗುತ್ತವೆ. ಒಟ್ಟಿನಲ್ಲಿ ಜಗತ್ತಿನ ಒಟ್ಟು ಪುಸ್ತಕಗಳ ಸಂಗ್ರಹದಲ್ಲಿ ಒಂದು ಅಂದಾಜಿನ ಪ್ರಕಾರ ಶೇ 23ರಷ್ಟು ಗ್ರಂಥಗಳು ಡಿಜಿಟಲ್ ವ್ಯವಸ್ಥೆಗೆ ಒಳಪಟ್ಟಿವೆ. ಈ ಅಂಕಿ ಸಂಖ್ಯೆ ಒಂದು ರೀತಿಯ ಹಿನ್ನಡೆ ಎನಿಸಿದರೂ, ಈ ಪ್ರಕ್ರಿಯೆ ಮುಂದೆ ಪ್ರಗತಿ ಸಾಧಿಸುತ್ತದೆ ಎಂಬ ಭರವಸೆಯನ್ನು ತಂತ್ರಜ್ಞಾನ ಹಾಗೂ ಪ್ರಕಟಣಾ ಪ್ರಪಂಚ ಒದಗಿಸುತ್ತದೆ.ಡಿಜಿಟಲ್ ವ್ಯವಸ್ಥೆಗೆ ಲೇಖಕರು ಹಾಗೂ ಪ್ರಕಾಶಕರ ಹಕ್ಕುಸ್ವಾಮ್ಯ ಕಾಯ್ದೆಯ ವ್ಯಾಪ್ತಿಯಿಂದ ವಿನಾಯಿತಿ ನೀಡುವ ಆಲೋಚನೆಯೂ ಇದೆ. ಆದರೆ ಇದಕ್ಕೆ ಲೇಖಕರು ಹಾಗೂ ಪ್ರಕಾಶಕರ ಪ್ರತಿರೋಧ ಇದೆ.ಬದಲಾದ ಓದುವ ಪ್ರಕ್ರಿಯೆಗೆ ತಕ್ಕಂತೆ ಬದಲಾಗುತ್ತಿರುವ ತಂತ್ರಜ್ಞಾನವನ್ನು ವಿಶೇಷವಾಗಿ ನಮ್ಮ ಸಾರ್ವಜನಿಕ ಗ್ರಂಥಾಲಯಗಳು  ಆರೋಗ್ಯಪೂರ್ಣ ಮನಸ್ಸಿನಿಂದ ಸ್ವೀಕರಿಸಿ ಅಳವಡಿಸಿಕೊಳ್ಳಬೇಕು. ಸರ್ಕಾರ ಹಾಗೂ ಗ್ರಂಥಾಲಯಗಳ ಸಿಬ್ಬಂದಿ ಈ ಬದಲಾವಣೆಗೆ ತಕ್ಕಂತೆ ತಮ್ಮ ಗ್ರಂಥಾಲಯಗಳ ಕಿಟಕಿ ಬಾಗಿಲು ತೆರೆದು, ದೂರ ಸರಿಯುತ್ತಿರುವ ಓದುಗರನ್ನು ಒಳ ಸೆಳೆಯಬೇಕಾದ ಕಾಲ ಈಗ ಬಂದಿದೆ. ಇಲ್ಲದಿದ್ದರೆ ಈಗಿನ ಪರಿಸ್ಥಿತಿಯಲ್ಲಿ ಸಾಂಪ್ರದಾಯಿಕ ಗ್ರಂಥಾಲಯಗಳು ಮಹತ್ವ ಕಳೆದುಕೊಳ್ಳುತ್ತವೆ.ಡಿಜಿಟಲ್ ಗ್ರಂಥಾಲಯಗಳಿಗೆ ಯಾವುದೇ ಪ್ರಾದೇಶಿಕ ಮಿತಿ ಇಲ್ಲ. ಎಲ್ಲಿಯವರೆಗೆ ಅಂತರ್ಜಾಲದ ವ್ಯಾಪ್ತಿ ಇರುವುದೋ ಅಲ್ಲಿಯವರೆಗೂ ಈ ಸೇವೆ ಸಿಗುತ್ತದೆ.24 ಗಂಟೆಗಳೂ ಸೌಲಭ್ಯ ಪಡೆಯಬಹುದು.ಯಾವುದೇ ಸಂಸ್ಥೆ ಅಥವಾ ಗ್ರಾಹಕ ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹೊರತುಪಡಿಸಿ, ಏಕಕಾಲದಲ್ಲಿ ಒಂದೇ ವಿಷಯವನ್ನು ಅಂತರ್ಜಾಲದಿಂದ ಪಡೆಯಬಹುದು.ಸಾಂಪ್ರದಾಯಿಕ ಗ್ರಂಥಾಲಯಗಳಿಗೆ ಸ್ಥಳಾವಕಾಶದ್ದೇ ಬಹುದೊಡ್ಡ ಸವಾಲು. ಇದಕ್ಕೆ ಉತ್ತರ ಡಿಜಿಟಲ್ ಗ್ರಂಥಾಲಯ. ಕಡಿಮೆ ಸ್ಥಳ, ಅಪಾರ ಮಾಹಿತಿ ಸಂಗ್ರಹ.ಚಿತ್ರಗಳು, ಅಪರೂಪದ ದಾಖಲೆಗಳನ್ನು ಸಂಗ್ರಹಿಸಿ ಮೆರುಗು ನೀಡುವ ಅದ್ಭುತ ತಂತ್ರಜ್ಞಾನ ಲಭ್ಯವಿದೆ.(ಲೇಖಕರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕರು)

ಪ್ರತಿಕ್ರಿಯಿಸಿ (+)