ಮಂಗಳವಾರ, ಮೇ 18, 2021
28 °C

ಡಿಜಿಪಿಯಾಗಿ ಶಂಕರ ಬಿದರಿ ನೇಮಕ: ನಿಯಮ ಉಲ್ಲಂಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪೊಲೀಸ್ ಮಹಾನಿರ್ದೇಶಕರ ಹುದ್ದೆಯಿಂದ ನೀಲಂ ಅಚ್ಯುತ ರಾವ್ ನಿವೃತ್ತರಾದ ನಂತರ, ಶಂಕರ್ ಬಿದರಿ ಅವರನ್ನು ನೇಮಿಸುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ತನ್ನ ನಿರ್ದೇಶನ ಉಲ್ಲಂಘಿಸಿದೆ ಎಂದು ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.ಡಿಜಿಪಿ ಹುದ್ದೆಯಲ್ಲಿ ಎರಡು ವರ್ಷಗಳ ಅವಧಿ ಪೂರೈಸಲು ನೀಲಂ ಅಚ್ಯುತ ರಾವ್ ಅವರಿಗೆ ಅವಕಾಶ ನೀಡದ ರಾಜ್ಯ ಸರ್ಕಾರ, `ಪ್ರಕಾಶ್ ಸಿಂಗ್/ ಕೇಂದ್ರ ಸರ್ಕಾರ~ದ ನಡುವಿನ ಪ್ರಕರಣದಲ್ಲಿ 2006ರಲ್ಲಿ ಪೊಲೀಸ್ ಸುಧಾರಣೆ ಕುರಿತು ತಾನು ನೀಡಿದ್ದ ನಿರ್ದೇಶನವನ್ನು ಗಾಳಿಗೆ ತೂರಿದೆ ಎಂದು ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ.

 ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್, ಯಾವುದೇ ರಾಜ್ಯದ ಪೊಲೀಸ್ ಮುಖ್ಯಸ್ಥರಿಗೆ ಕನಿಷ್ಠ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂದು ಸೂಚಿಸಿತ್ತು.ರಾಜ್ಯ ಡಿಜಿಪಿ ಹುದ್ದೆಯ ಸುತ್ತ ಎದ್ದ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಶಂಕರ್ ಬಿದರಿ ಹಾಗೂ ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಗುರುವಾರ ನ್ಯಾಯಮೂರ್ತಿ ಅಫ್ತಾಬ್ ಆಲಂ ಹಾಗೂ ಸಿ.ಕೆ. ಪ್ರಸಾದ್ ಅವರನ್ನೊಳಗೊಂಡ ಪೀಠ ರಾಜ್ಯ ಸರ್ಕಾರದ ನಡವಳಿಕೆಯ ಕುರಿತು ಅತೃಪ್ತಿ ವ್ಯಕ್ತಪಡಿಸಿತು.ಬಿದರಿ ಅವರಿಗೆ ಅನುಕೂಲವಾಗುವಂತೆ ಮಧ್ಯಂತರ ಆದೇಶ ನೀಡಲು ನಿರಾಕರಿಸಿದ ನ್ಯಾಯಪೀಠ, ಆಗಿನ ಡಿಜಿಪಿ ನೀಲಂ ಅಚ್ಯುತ ರಾವ್ ಅವರಿಗೆ ಎರಡು ವರ್ಷದ ಅವಧಿ ಪೂರೈಸಲು ಏಕೆ ಅವಕಾಶ ನೀಡಲಿಲ್ಲ ಎಂದು ಪ್ರಶ್ನಿಸಿತು. ಈ ಸಂಬಂಧ ಏಪ್ರಿಲ್ 18ರಂದು ಉತ್ತರ ನೀಡುವಂತೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು.`ನಾವು ಮುಂದಕ್ಕೆ ಹೋಗುವ ಮುನ್ನ, ಕರ್ನಾಟಕ ಸರ್ಕಾರ ಹಾಗೂ ಶಂಕರ ಬಿದರಿ ನಮಗೆ ಸಮಾಧಾನಕರ ಉತ್ತರ ನೀಡಬೇಕು. ಹೇಗೆ ಮತ್ತು ಯಾವ ಸನ್ನಿವೇಶದಡಿ ರಾಜ್ಯ ಸರ್ಕಾರ ಡಿಜಿಪಿ ನೇಮಕಕ್ಕೆ ಸಮಿತಿ ನೇಮಿಸುವಂತೆ `ಯುಪಿಎಸ್‌ಸಿ~ಯ ಮನವೊಲಿಸಿತು. ಈ ನ್ಯಾಯಾಲಯದ ನಿರ್ದೇಶವನ್ನು ಉಲ್ಲಂಘಿಸಿ 2011ರ ನವೆಂಬರ್ 30ರಂದು ಹೊಸ ಡಿಜಿಪಿ ನೇಮಿಸಲಾಯಿತು~ ಎಂಬುದರ ಕುರಿತೂ ಅವರು ವಿವರಣೆ ನೀಡಬೇಕು ಎಂದು ಕೋರ್ಟ್ ಹೇಳಿತು.`ನೀವು ಈ ನ್ಯಾಯಾಲಯಕ್ಕೆ ಹೇಗೆ ಅವಿಧೇಯತೆ ತೋರುತ್ತೀರಿ. ರಾಜ್ಯ ಸರ್ಕಾರದ ನಡವಳಿಕೆ ಇಲ್ಲಿ ನ್ಯಾಯಸಮ್ಮತವಾಗಿಲ್ಲ. ನೀವು (ರಾಜ್ಯ ಸರ್ಕಾರ) ರಾವ್ ಅವರಿಗೆ ಎರಡು ವರ್ಷಗಳ ಕಾಲ ಹುದ್ದೆಯಲ್ಲಿ ಮುಂದುವರಿಯಲು ಏಕೆ ಅವಕಾಶ ನೀಡಲಿಲ್ಲ? ಈ ಮನುಷ್ಯನನ್ನು (ಬಿದರಿ) ತರಲು ನಿಮ್ಮಲ್ಲಿ ತರಾತುರಿ ಇದ್ದಂತಿದೆ~ ಎಂದೂ ನ್ಯಾಯಪೀಠ ವಾಗ್ದಾಳಿ ನಡೆಸಿತು.ನ್ಯಾಯಮೂರ್ತಿಗಳ ಕಟು ಮಾತಿನಿಂದಾಗಿ, ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ರಾಜು ರಾಮಚಂದ್ರನ್‌ಗೆ ಸರಿಯಾಗಿ ತಮ್ಮ ವಾದ ಮಂಡಿಸಲು ಸಾಧ್ಯವಾಗಲಿಲ್ಲ. ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ತಾವು ಸುಪ್ರೀಂಕೋರ್ಟ್‌ಗೆ ನೆರವು ನೀಡಿದ್ದರಿಂದ ಇನ್ನು ಮುಂದೆ ರಾಜ್ಯ ಸರ್ಕಾರದ ಪರವಾಗಿ ಹಾಜರಾಗುವುದಿಲ್ಲ ಎಂದು ಅವರು ಹೇಳಿದರು.ಬಿದರಿ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಹಾಗೂ ಮಾಜಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದರು. ಈ ತೀರ್ಪು ನೀಡುವಾಗ ಹೈಕೋರ್ಟ್, ಬಿದರಿ ವಿರುದ್ಧದ ದೌರ್ಜನ್ಯ ಆರೋಪಗಳ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ದಾಖಲಿಸಿರುವ ಅಂಶಗಳನ್ನು ನಿರ್ಲಕ್ಷಿಸಿದೆ ಎಂದು ತಿಳಿಸಿದರು. ಈ ಪ್ರಕರಣದಲ್ಲಿ ಮಾನವ ಹಕ್ಕು ಆಯೋಗ ವಿವಾದಕ್ಕೆ ತೆರೆ ಎಳೆದಿತ್ತು.1999ರ ಸಮಯದಲ್ಲಿ ಶಂಕರ್ ಬಿದರಿ ಕಾಡುಗಳ್ಳ ವೀರಪ್ಪನ್ ವಿರುದ್ಧದ ವಿಶೇಷ ಕಾರ್ಯಪಡೆ ಮುಖ್ಯಸ್ಥರಾಗಿದ್ದಾಗ ಕರ್ನಾಟಕ ಹಾಗೂ ತಮಿಳುನಾಡು ಗಡಿಯ 48 ಗ್ರಾಮಗಳಲ್ಲಿ ದೌರ್ಜನ್ಯ ಎಸಗಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ನ್ಯಾಯಮೂರ್ತಿ ಎ.ಜೆ. ಸದಾಶಿವ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿತ್ತು.ಹೈಕೋರ್ಟ್ ತೀರ್ಪು ನೀಡುವ ಸಂದರ್ಭದಲ್ಲಿ ಉಲ್ಲೇಖಿಸಿರುವ ಸದಾಶಿವ ಆಯೋಗದ ವರದಿಯನ್ನು ಸಹ ತಮ್ಮ ಅರ್ಜಿದಾರರಿಗೆ ನೀಡಲಾಗಿಲ್ಲ ಎಂದು ಗೋಪಾಲ್ ಸುಬ್ರಮಣಿಯಂ ಹೇಳಿದರು.ಹಿನ್ನೆಲೆ: ರಾಜ್ಯ ಪೊಲೀಸ್ ಮಹಾನಿರ್ದೇಶಕ ಸ್ಥಾನದಿಂದ ಶಂಕರ ಬಿದರಿ ಅವರನ್ನು ಕೂಡಲೇ ಕೆಳಕ್ಕಿಳಿಸಿ, ಆ ಸ್ಥಾನಕ್ಕೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿಯಾಗಿದ್ದ ಎ.ಆರ್. ಇನ್ಫಂಟ್ ಅವರನ್ನು ನೇಮಕ ಮಾಡುವಂತೆ ಹೈಕೋರ್ಟ್ ಮಾರ್ಚ್ 30ರಂದು ತೀರ್ಪು ನೀಡಿತ್ತು.ತಮ್ಮ ಸೇವಾ ಹಿರಿತನ ಕಡೆಗಣಿಸಿ ಬಿದರಿ ಅವರನ್ನು ನೇಮಿಸಲಾಗಿದೆ ಎಂದು ಇನ್ಫಂಟ್ ಕೇಂದ್ರ ಆಡಳಿತ ನ್ಯಾಯಮಂಡಳಿಗೆ (ಸಿಎಟಿ) ಅರ್ಜಿ ಸಲ್ಲಿಸಿದ್ದರು. `ಸಿಎಟಿ~ ಇನ್ಫಂಟ್ ಅರ್ಜಿ ಪುರಸ್ಕರಿಸಿದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಹಾಗೂ ಬಿದರಿ `ಸಿಎಟಿ~ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಸಹ `ಸಿಎಟಿ~ ತೀರ್ಪು ಎತ್ತಿಹಿಡಿದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.